Site icon Vistara News

Rain News: ಮಳೆಯ ಅಬ್ಬರಕ್ಕೆ ಧಡಾರ್‌ ಎಂದು ನೆಲಕಚ್ಚಿದ ಕೊಟ್ಟಿಗೆಹಾರ ಬಸ್‌ ನಿಲ್ದಾಣ!

rain news kottigehara bus stand collapse

ಚಿಕ್ಕಮಗಳೂರು: ಮಲೆನಾಡಿನಲ್ಲಿ (Western Ghats) ಧಾರಾಕಾರ ಮಳೆ (Rain News) ಹಾವಳಿ ಎಬ್ಬಿಸುತ್ತಿದೆ. ನಿನ್ನೆ ಸುರಿದ ಭಾರಿ ಮಳೆಗೆ ಮೂಡಿಗೆರೆ (Mudigere) ತಾಲೂಕಿನ ಕೊಟ್ಟಿಗೆಹಾರ ಬಸ್ ನಿಲ್ದಾಣ (Kottigehara Bus Stand) ಧರೆಗುರುಳಿದೆ. ನೋಡ ನೋಡುತ್ತಿದ್ದಂತೆ ಇಡೀ ಬಸ್ ನಿಲ್ದಾಣವೇ (bus stand collapse) ಧ್ವಂಸವಾಗಿದೆ.

ಕೊಟ್ಟಿಗೆಹಾರದ ಬಸ್ ನಿಲ್ದಾಣದಲ್ಲಿ ಭಾರಿ ಅವಘಡ ಸಂಭವಿಸಿದ್ದು, ಬಸ್ ನಿಲ್ದಾಣದ ಸುತ್ತಮುತ್ತ ಗೋಡೆಗಳು ನಾಶವಾಗಿವೆ. ಭಾರಿ ಮಳೆ ಹಿನ್ನಲೆ ಕೊಟ್ಟಿಗೆಹಾರದಲ್ಲಿ ವಿದ್ಯುತ್ ಸಂಪರ್ಕವೂ ಸ್ಥಗಿತವಾಗಿದ್ದು, ಕತ್ತಲೆಯಲ್ಲಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದರು. ಗೋಡೆಗಳು ಬಿದ್ದ ಶಬ್ದಕ್ಕೆ ಸ್ಥಳೀಯರು ಬೆಚ್ಚಿಬಿದ್ದರು.

ಶೃಂಗೇರಿಯಲ್ಲಿ ಮುಳುಗಡೆ

ಭಾರಿ ಮಳೆಯಿಂದಾಗಿ ತುಂಗಾ ನದಿ ಅಪಾಯದ ಮಟ್ಟ ಮೀರಿದ್ದು, ಶೃಂಗೇರಿ ಪಟ್ಟಣದ ಗಾಂಧಿ ಮೈದಾನಕ್ಕೆ ನೀರು ನುಗ್ಗಿದೆ. ನದಿ ತಟದಲ್ಲಿದ್ದ ಅಂಗಡಿ ಮುಂಗಟ್ಟು, ಪಾರ್ಕಿಂಗ್ ಜಾಗ ಮುಳುಗಡೆಯಾಗಿವೆ. ಪಟ್ಟಣದ ಯಾತ್ರಿ ನಿವಾಸದ ವರೆಗೂ ನದಿಯ ನೀರು ನುಗ್ಗಿದೆ. ನದಿ ಪಕ್ಕದ ಪ್ಯಾರಲಲ್ ರಸ್ತೆಯೂ ಸಂಪೂರ್ಣ ಮುಳುಗಡೆಯಾಗಿದ್ದು, ಶೃಂಗೇರಿಯಲ್ಲಿ ನದಿ ಪಾತ್ರದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಶಾಲೆಗಳಿಗೆ ರಜೆ

ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಹಿನ್ನೆಲೆಯಲ್ಲಿ ಮಲೆನಾಡಿನ ಆರು ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ನೀಡಿದ್ದಾರೆ.

ಶಿವಮೊಗ್ಗದಲ್ಲಿ ರೆಡ್‌ ಅಲರ್ಟ್‌

ಶಿವಮೊಗ್ಗ: ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ರಜೆ ಘೋಷಣೆ ಮಾಡಿದ್ದಾರೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದ್ದು, ಶಿವಮೊಗ್ಗ ಜಿಲ್ಲಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಉತ್ತರ ಕನ್ನಡದಲ್ಲಿ ವೃದ್ಧೆ ರಕ್ಷಣೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ ಅಬ್ಬರದ ಪರಿಣಾಮ, ಜಲಾವೃತಗೊಂಡ ಮನೆಯಲ್ಲಿದ್ದ ರೋಗಿಯನ್ನು ಹೊರತರಲು ಗ್ರಾಮಸ್ಥರು ಹರಸಾಹಸ ಪಡಬೇಕಾಯಿತು. ಕಾರವಾರ ತಾಲೂಕಿ‌ನ ಚೆಂಡಿಯಾ ಗ್ರಾಮದಲ್ಲಿ ಹೆಚ್ಚಿದ ನೀರಿನ ಪ್ರಮಾಣದಿಂದಾಗಿ ಮನೆಗೆ ನೀರು ನುಗ್ಗಿತ್ತು.

ಅಸ್ತಮಾ ರೋಗದಿಂದ ಬಳಲುತ್ತಿದ್ದ ಸ್ವಾತಿ ರತ್ನಾಕರ ನಾಯ್ಕ (67) ಹಾಗೂ ಅವರ ಪತಿ ನೀರು ನುಗ್ಗಿದ ಮನೆಯಲ್ಲೇ ಉಳಿದಿದ್ದರು. ದಂಪತಿಗಳನ್ನು ತಾಲೂಕಾಡಳಿತ ಹಾಗೂ ಸ್ಥಳೀಯರು ಮನವೊಲಿಸಿ ಮನೆಯಿಂದ ಹೊರತಂದರು. ನಾಲ್ಕು ಅಡಿ ನೀರಿನಲ್ಲೇ ರೋಗಿಯನ್ನ ಹೊತ್ತು ತಂದು ಅಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆ ಗೆ ರವಾನಿಸಿದರು.

ತುರ್ತು ಕಾರ್ಯಾಚರಣೆ ಕೇಂದ್ರ

ಕಾರವಾರ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಜುಲೈ 18ರ ವರೆಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಈ ಅವಧಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಸಮಸ್ಯೆಯಾಗದಂತೆ ಜಿಲ್ಲೆಯ ಸಾರ್ವಜನಿಕರ ರಕ್ಷಣೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 24×7 ಕಾರ್ಯ ನಿರ್ವಹಿಸುವ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ (Uttara Kannada News) ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿನ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆದಿರುವ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಪೊಲೀಸ್, ಅಗ್ನಿಶಾಮಕ, ಹೆಸ್ಕಾಂ, ಅರಣ್ಯ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಸಾರ್ವಜನಿಕರು ಮಳೆಯಿಂದಾಗಿ ಯಾವುದೇ ಅಪಾಯವಾದಲ್ಲಿ ಕೂಡಲೇ ಉಚಿತ ಸಹಾಯವಾಣಿ ಸಂಖ್ಯೆ 1077 ಗೆ ಅಥವಾ ಮೊ.ಸಂ. ಸಂಖ್ಯೆ. 9483511015 ಕರೆ, ವಾಟ್ಸಾಪ್ ಮೂಲಕ ಮಾಹಿತಿ ನೀಡಿದಲ್ಲಿ ತಕ್ಷಣ ನೆರವಿಗೆ ಧಾವಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆಯಿಂದಾಗಿ, 2 ಮನೆಗಳು ಸಂಪೂರ್ಣ ನಾಶ, 2 ಮನೆಗಳಿಗೆ ತೀವ್ರ ಹಾನಿ ಮತ್ತು 18 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದಲ್ಲಿ 2, ಕುಮಟಾದಲ್ಲಿ 1 ಹಾಗೂ ಹೊನ್ನಾವರದಲ್ಲಿ 2 ಸೇರಿದಂತೆ ಒಟ್ಟು 5 ಕಾಳಜಿ ಕೇಂದ್ರಗಳನ್ನು ತೆರೆದಿದ್ದು ಒಟ್ಟು 93 ಜನರಿಗೆ ಆಶ್ರಯ ಒದಗಿಸಿ ಅಗತ್ಯ ಉಟೋಪಚಾರ ಮತ್ತು ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದರು.

ತಗ್ಗು ಪ್ರದೇಶಗಳಲ್ಲಿ ಮತ್ತು ಗುಡ್ಡ ಕುಸಿಯಬಹುದಾದ ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರು, ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂ ಪ್ರೇರಿತರಾಗಿ ಕಾಳಜಿ ಕೇಂದ್ರಗಳಿಗೆ ಬಂದು ಆಶ್ರಯ ಪಡೆಯುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: KSRTC Package Tour: ಜೋಗ ಜಲಪಾತ ವೀಕ್ಷಣೆಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್‌ ಟೂರ್‌!

Exit mobile version