Site icon Vistara News

Rain News: ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಳೆ ಆರ್ಭಟ; ಕೆರೆಯಂತಾದ ರಸ್ತೆಗಳು!

Rain News

ವಿಜಯನಗರ/ಕೊಪ್ಪಳ: ರಾಜ್ಯದ ವಿಜಯನಗರ, ಕೊಪ್ಪಳ ಜಿಲ್ಲೆಯ ಹಲವೆಡೆ ಬುಧವಾರ ಮಳೆ (Rain News) ಆರ್ಭಟಿಸಿದ್ದು, ಭಾರಿ ಪ್ರಮಾಣದ ನೀರು ನಿಂತಿದ್ದರಿಂದ ರಸ್ತೆಗಳು ಕೆರೆಗಳಂತೆ ಬದಲಾಗಿದ್ದವು. ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆ ಸೇರಿ ಸುತ್ತಮುತ್ತಲಿನ ಹಂಪಿ, ಕಮಲಾಪುರ, ಚಿತ್ತವಾಡಗಿ, ಶಾನಭಾಗ ಸರ್ಕಲ್ ಸೇರಿ ಹಲವು ಕಡೆ ನಿರಂತರ ಮಳೆ ಸುರಿದಿದ್ದರಿಂದ ಬೈಕ್ ಸವಾರರು ಹೈರಾಣಾದರು. ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಕೂಡ್ಲಿಗಿ ತಾಲೂಕಿನಲ್ಲಿ ಹಳ್ಳದಂತಾದ ರಸ್ತೆಗಳು

ವಿಜಯನಗರ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದ್ದು, ಕೂಡ್ಲಿಗಿ ತಾಲೂಕಿನ ಕೆಲವು ಗ್ರಾಮಗಳ ರಸ್ತೆಗಳು ಕಡೆ ಹಳ್ಳದಂತಾಗಿ ಬದಲಾಗಿದ್ದವು. ಕೂಡ್ಲಿಗಿ ತಾಲೂಕಿನ ಮಹಾದೇವಪುರ ಗ್ರಾಮದಲ್ಲಿ ಹಳ್ಳದಂತೆ ಮಳೆ ನೀರು ಹರಿಯಿತು. ಇದರಿಂದ ದೊಡ್ಡ ಪ್ರಮಾಣದಲ್ಲಿ ಗ್ರಾಮದೊಳಕ್ಕೆ ನೀರು ನುಗಿದ್ದರಿಂದ ಜನ ಪರದಾಡುವಂತಾಗಿದೆ. ಇನ್ನು ಹೊಸಪೇಟೆಯ ರಾಣಿಪೇಟೆಯಲ್ಲಿ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಹೊಸಪೇಟೆಯಲ್ಲಿ ಭಾರಿ ಮಳೆ: ಮಳೆಯಿಂದಾಗಿ ಹೊಸಪೇಟೆಯ ಕೆಲವು ರಸ್ತೆಗಳು ಕೆರೆಯಂತಾಗಿದ್ದವು. ಕಾಲೇಜು ರಸ್ತೆ, ನೂರು ಹಾಸಿಗೆ ಆಸ್ಪತ್ರೆ ರಸ್ತೆ ಸೇರಿದಂತೆ ಕೆಲವು ಕಡೆ ಹಳ್ಳದಂತೆ ಮಳೆ ನೀರು ಹರಿಯಿತು. ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಬೈಕ್‌ಗಳು ಅರ್ಧಕ್ಕರ್ಧ ಮುಳುಗಿದವು. ಮಳೆ ನೀರು ರಸ್ತೆ ಮೇಲೆಯೇ ನಿಂತಿದ್ದರಿಂದ ವಾಹನ ಸವಾರರು ಹೈರಾಣಾದರು.

ಕೊಪ್ಪಳ ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕಳೆದ ಎರಡು ದಿನಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಬಿಟ್ಟುಬಿಡದೆ ಮಳೆ ಸುರಿಯುತ್ತಿದ್ದು, ಭರ್ಜರಿ ಮಳೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೊಪ್ಪಳ ನಗರದಲ್ಲಿ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ. ಜಿಲ್ಲೆಯಾದ್ಯಂತ ನಿರಂತರ ಮಳೆಗೆ ರಸ್ತೆಗಳು ಹಳ್ಳಗಳಾಗಿ ಪರಿವರ್ತನೆಯಾಗಿವೆ. ತಗ್ಗು ಪ್ರದೇಶದ ಮನೆಗಳಿಗೆ ಮಳೆ ಹಾಗೂ ಚರಂಡಿ ನೀರು ನುಗ್ಗುತ್ತಿರುವುದರಿಂದ ಜನರಿಗೆ ತೊಂದರೆಯಾಗಿದೆ.

ಇದನ್ನೂ ಓದಿ | Karnataka Weather : ಕರಾವಳಿ ಸೇರಿ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಮಳೆ ಜತೆಗೆ ರಭಸವಾಗಿ ಬೀಸಲಿದೆ ಗಾಳಿ

ಜಿಲ್ಲೆಯ ಕಿನ್ನಾಳದಲ್ಲಿ ರಾಜಕಾಲುವೆ ತುಂಬಿ ಹರಿದಿದ್ದರಿಂದ ರಸ್ತೆ ತುಂಬೆಲ್ಲಾ ನೀರು ಆವರಿಸಿತ್ತು. ಇದರಿಂದ ಮಂಗಳೂರು, ಕಿನ್ನಾಳ ಗ್ರಾಮಗಳಿಗೆ ತೆರಳಲು ಜನರ ಪರದಾಡಿದರು. ಪ್ರಗತಿ ನಗರ, ಕಲ್ಯಾಣ ನಗರಗಳಿಗೆ ತೆರಳಲೂ ಸಹ ಜನರ ಪರದಾಡುವಂತಾಯಿತು.

Exit mobile version