ಮಂಗಳೂರು: ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದಾಗಿ (Rain News) ಹೊಳೆ- ಹಳ್ಳಗಳು ತುಂಬಿಕೊಂಡಿದ್ದು, ಜಲಪಾತಗಳು (falls) ಭೋರ್ಗರೆಯುತ್ತಿವೆ. ಆದರೆ ಅಪಾಯವೂ ಇರುವುದರಿಂದಾಗಿ, ಜಲಪಾತಗಳತ್ತ ತೆರಳದಂತೆ ಪ್ರವಾಸಿಗರಿಗೆ ನಿರ್ಬಂಧ (No Entry) ವಿಧಿಸಲಾಗಿದೆ. ಬೆಟ್ಟಗುಡ್ಡಗಳಿಗೆ ಟ್ರೆಕ್ಕಿಂಗ್ (Trekking) ಹೋಗುವವರಿಗೂ ಮುಂದಿನ ಸೂಚನೆ ಸಿಗುವವರೆಗೂ ಮುಂದುವರಿಯದಂತೆ ಸೂಚಿಸಲಾಗಿದೆ.
ಈ ನಾಲ್ಕು ಜಿಲ್ಲೆಗಳಲ್ಲಿ ಹಲವು ಪ್ರವಾಸಿ ಸ್ಥಳಗಳಿಗೆ (tourist places) ಭೇಟಿ ನೀಡಲು ಅರಣ್ಯ ಇಲಾಖೆ (Forest Department) ನಿರ್ಬಂಧ ವಿಧಿಸಿದೆ. ವನ್ಯಜೀವಿ (Wildlife) ವಲಯದ ವ್ಯಾಪ್ತಿಗೆ ಬರುವ ಕಾಡುಗಳು, ಬೆಟ್ಟಗಳು- ಜಲಪಾತಗಳ ಪ್ರವೇಶ ನಿರ್ಬಂಧಿಸಲಾಗಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ನರಸಿಂಹಗಡ (ಗಡಾಯಿಕಲ್ಲು) ಬೆಟ್ಟ, ಅರಿಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಲುಮನೆ, ವನಕಬ್ಬಿ, ಬಂಡಾಜೆ ಜಲಪಾತಗಳತ್ತ ತೆರಳದಂತೆ ನಿರ್ಬಂಧಿಸಲು ಬೆಳ್ತಂಗಡಿ ಆರ್‌ಎಫ್‌ಓಗೆ ಕುದುರೆಮುಖ ಸಿಎಫ್ ಆದೇಶ ನೀಡಿದ್ದಾರೆ.
ಯಲ್ಲಾಪುರ ಫಾಲ್ಸ್‌ಗಳಿಗೆ ನಿರ್ಬಂಧ
ಕಾರವಾರ: ಯಲ್ಲಾಪುರ ತಾಲೂಕಿನಾದ್ಯಂತ ಅಬ್ಬರದ ಮಳೆ ಹಿನ್ನೆಲೆಯಲ್ಲಿ ಧಾರಾಕಾರ ಮಳೆಗೆ ಜಲಪಾತ ಮೈದುಂಬಿ ಧುಮುಕುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಲವು ಜಲಪಾತಗಳಿಗೆ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದೆ. ಯಲ್ಲಾಪುರದ ಸಾತೊಡ್ಡಿ ಜಲಪಾತ ಇದರಲ್ಲಿ ಮುಖ್ಯವಾಗಿದ್ದು, ಮಳೆಗಾಲದಲ್ಲಿ ವಿವಿಧೆಡೆಗಳಿಂದ ಜಲಪಾತ ವೀಕ್ಷಣೆಗೆ ಇಲ್ಲಿ ಪ್ರವಾಸಿಗರು ಬರುತ್ತಾರೆ. ಜಲಪಾತ ಅಪಾಯಕಾರಿ ಮಟ್ಟದಲ್ಲಿ ತುಂಬಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಪ್ಪಿಸಲು ಸ್ಥಳೀಯ ಆಡಳಿತ ಕ್ರಮ ಕೈಗೊಂಡಿದೆ.
ಗಂಗಾವಳಿ ನದಿ ನೀರಿನ ಪ್ರಮಾಣ ಹೆಚ್ಚಳದಿಂದ ತಾಲೂಕಿನ ಹಲವು ಫಾಲ್ಸ್‌ಗಳಿಗೆ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹಾಕಲಾಗಿದೆ. ಯಲ್ಲಾಪುರದ ಶಿರಲೆ ಫಾಲ್ಸ್, ಕಾನೂರು ಫಾಲ್ಸ್, ಕುಳಿ ಮಾಗೋಡು ಜಲಪಾತಗಳಲ್ಲಿ ಅರಣ್ಯ ಇಲಾಖೆ, ಸ್ಥಳೀಯ ಗ್ರಾಮ ಅರಣ್ಯ ಸಮಿತಿಯಿಂದ ಪ್ರವೇಶ ನಿಷೇಧ ಮಾಡಲಾಗಿದೆ. ತಾಲೂಕಿನ ಪಣಸಗುಳಿ ಸೇತುವೆ ಮುಳುಗಡೆ ಹಾಗೂ ಗಂಗಾವಳಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನಲೆ ಸಂಚಾರ ನಿರ್ಬಂಧಿಸಲಾಗಿದೆ.
ಶೃಂಗೇರಿಯಲ್ಲಿ ತುಂಬಿಕೊಂಡ ತುಂಗೆ
ಚಿಕ್ಕಮಗಳೂರು: ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಶೃಂಗೇರಿಯ ಕೆರೆಕಟ್ಟೆ ಘಟ್ಟಪ್ರದೇಶದಲ್ಲಿ ಭಾರೀ ಮಳೆಯಾಗಿ ತುಂಗಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಂದಿದೆ. ತುಂಗಾ ನದಿ ಅಪಾಯದ ಅಂಚಿನಲ್ಲಿ ಹರಿಯುತ್ತಿದೆ. ಶೃಂಗೇರಿ ಶಾರದಾಂಬಾ ದೇವಾಲಯದ ದಡದವರೆಗೆ ತುಂಗೆಯ ನೀರು ಬಂದಿದೆ. ತುಂಗಾ ನದಿ ಇಕ್ಕೆಲಗಳ ತೋಟಗಳು ಜಲಾವೃತವಾಗಿವೆ.
ಶಾಲೆಗಳಿಗೆ ರಜೆ
ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ನೀಡಿ ಬೆಳ್ತಂಗಡಿ ಹಾಗೂ ಬಂಟ್ವಾಳ ತಹಶೀಲ್ದಾರ್ ಆದೇಶ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ಶಿಕ್ಷಣ ವಲಯ ವ್ಯಾಪ್ತಿಯಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ರಜೆ ನೀಡಲಾಗಿದೆ. ಭೌಗೋಳಿಕವಾಗಿ ತಗ್ಗು ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ನೀಡಲಾಗಿದೆ ಎಂದು ಉಡುಪಿ ಡಿಸಿ ಡಾ. ವಿದ್ಯಾ ಕುಮಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Rain News: ಚಿಕ್ಕಮಗಳೂರು, ಕೊಡಗಿನಲ್ಲಿ ಮಳೆ ಅಬ್ಬರ; ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಜನ ಪರದಾಟ