Site icon Vistara News

Rain News: ಅಬ್ಬರಿಸುತ್ತಿರುವ ಮುಂಗಾರು: 3 ಜಿಲ್ಲೆಗೆ ರೆಡ್‌ ಅಲರ್ಟ್‌, ಇನ್ನೂ ನಾಲ್ಕು ದಿನ ಜೋರು ಮಳೆ

rain news bhagamandala

ಬೆಂಗಳೂರು: ರಾಜ್ಯದಲ್ಲಿ ಮುಂಗಾರು (Monsoon) ಅಬ್ಬರಿಸುತ್ತಿದೆ. ಕರಾವಳಿ (Coast), ಮಲೆನಾಡಿನಲ್ಲಿ (Wester Gaht) ಮಳೆಯ ಆರ್ಭಟ (Rain News) ಜೋರಾಗಿದೆ. ಒಳನಾಡು, ಬಯಲುಸೀಮೆ ಹಾಗೂ ರಾಜಧಾನಿಯಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಕರಾವಳಿ, ಮಲೆನಾಡಿನಲ್ಲಿ ನದಿಗಳು ತುಂಬಿ ಹರಿಯುತ್ತಿದೆ; ಜಲಪಾತಗಳು ಧುಮ್ಮಿಕ್ಕುತ್ತಿವೆ. ಹಲವೆಡೆ ಧರೆ ಕುಸಿದು ಮನೆಗಳು ನೆಲಕಚ್ಚಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಅನಾಹುತಗಳಿಂದ ಎರಡೇ ದಿನಗಳಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಉಳ್ಳಾಲ ತಾಲೂಕಿನ ಕುತ್ತಾರುವಿನ ಮದನಿನಗರದಲ್ಲಿ ಮನೆ ಕುಸಿದು ನಾಲ್ವರು ಮೃತಪಟ್ಟಿದ್ದರೆ, ಮಂಗಳೂರು ನಗರದ ರೋಸಾರಿಯೊ ಶಾಲೆ ಹಿಂಭಾಗದಲ್ಲಿ ಮಳೆಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದಾರೆ. ಗುರುವಾರ ಸಂಜೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ಮಳೆ ನೀರಿನಲ್ಲಿ ವಿದ್ಯುತ್ ಪ್ರವಹಿಸಿ 20 ವರ್ಷದ ಯುವತಿ ಪ್ರತೀಕ್ಷಾ ಶೆಟ್ಟಿ ಅಸುನೀಗಿದ್ದಾರೆ.

ದಕ್ಷಿಣ ಕನ್ನಡ, ಚಿಕ್ಕಮಗಳೂರಿನಲ್ಲಿ ಶಾಲೆಗಳಿಗೆ ರಜೆ

ಭಾರಿ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರಿನ ಶಾಲೆಗಳಿಗೆ ಇಂದೂ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಶುಕ್ರವಾರ ಕೂಡಾ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ. ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ನೀಡಿ ತಹಶೀಲ್ದಾರ್ ಪರಮಾನಂದ ಆದೇಶ ಹೊರಡಿಸಿದ್ದಾರೆ. ಪಿಯುಸಿ ಹಾಗೂ ಪದವಿ ಕಾಲೇಜುಗಳು ಎಂದಿನಂತೆ ನಡೆಯಲಿವೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನದಲ್ಲಿ ಭಾರಿ ಮಳೆಗೆ ಮಣ್ಣು ಶಕ್ತಿ ಕಳೆದುಕೊಂಡಿದ್ದು, ಮನೆಯ ಆವರಣದಲ್ಲಿದ್ದ ಬಾವಿ ಕಣ್ಣೆದುರಿಗೇ ಕುಸಿದುಹೋಗಿದೆ. ಬಾವಿ ಕುಸಿಯುವ ದೃಶ್ಯ ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಬಳಿ ಭದ್ರಾ ನದಿ ಮೈತುಂಬಿದೆ. ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಗೆ 4-5 ಅಡಿಯಷ್ಟೇ ಬಾಕಿ ಇದೆ. ಕಾಸರಗೋಡಿನ ಇತಿಹಾಸ ಪ್ರಸಿದ್ಧ ಮಧೂರು ದೇಗುಲ ಜಲಾವೃತಗೊಂಡಿದೆ

ಮೈದುಂಬಿದ ಜೋಗ ಜಲಪಾತ

ಶಿವಮೊಗ್ಗ ಸುತ್ತಮುತ್ತಲೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿಶ್ವವಿಖ್ಯಾತ ಜೋಗ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ. ತೀರ್ಥಹಳ್ಳಿ ಭಾಗದಲ್ಲಿ ವರ್ಷಧಾರೆಯಿಂದಾಗಿ ಆಗುಂಬೆ ಘಾಟ್‌ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಆಗುಂಬೆಯಲ್ಲಿ ಭೂಕುಸಿತ ಭೀತಿ ಇರುವುದರಿಂದ ಸೆಪ್ಟೆಂಬರ್ 15ರವರೆಗೆ ವಾಹನ ಸಂಚಾರ ಬಂದ್‌ ಮಾಡಲಾಗಿದೆ.

ಘಟ್ಟ ಪ್ರದೇಶದಲ್ಲಿನ ಮಳೆಗೆ ಕುಮಾಧಾರಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಕುಕ್ಕೆ ಸುಬ್ರಹ್ಮಣ್ಯ ಬಳಿ ಸ್ನಾನಘಟ್ಟ, ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆ ಆಗಿದೆ. ನೇತ್ರಾವತಿ ನದಿ ಕೂಡಾ ಮೈದುಂಬಿ ಹರಿಯುತ್ತಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಪವಿತ್ರ ಸ್ನಾನಘಟ್ಟ ಮುಳುಗಿ, ಮುಖ್ಯ ದ್ವಾರದವೆರಗೂ ನೀರು ತಲುಪಿದೆ. ಭಕ್ತರು ಪುಣ್ಯ ಸ್ನಾನ ಹಾಗೂ ಪಿಂಡ ಪ್ರದಾನ ಮಾಡಲು ಸಾಧ್ಯವಾಗುತ್ತಿಲ್ಲ. ಕೊಡಗಿನ ಕೊಯ್ನಾಡಿನಲ್ಲಿ ಶಾಲಾ ಕಟ್ಟಡ ಮೇಲೆ ಗುಡ್ಡ ಕುಸಿದು ಶಾಲಾ ಕೊಠಡಿಯ ಗೋಡೆ, ಕಿಟಕಿ ಜಖಂ ಆಗಿವೆ. ಶಾಲೆಗೆ ರಜೆ ಇದ್ದುದ್ದರಿಂದ ಅನಾಹುತ ತಪ್ಪಿದೆ. ಕಳೆದ ಮಳೆಗಾಲದಲ್ಲೂ ಶಾಲೆಯ ಮೇಲೆ ಗುಡ್ಡ ಕುಸಿದು ಹಾನಿಯಾಗಿತ್ತು.

ಅರಬ್ಬಿ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಕಡಲ ಕೊರೆತ ಆರಂಭವಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯವುದನ್ನು ನಿಲ್ಲಿಸಿದ್ದಾರೆ. ಕಾರವಾರದ ದೇವಬಾಗ್ ಕಡಲತೀರದಲ್ಲಿ ಕಡಲಕೊರೆತ ಹೆಚ್ಚಾಗಿದ್ದು, ರೆಸಾರ್ಟ್‌ಗೆ ಹಾನಿಯಾಗಿದೆ. ರಾಜ್ಯದಲ್ಲಿ ಇನ್ನೂ 4 ದಿನ ಮಳೆ ಮುಂದುವರೆಯಲಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್‌ ಘೋಷಿಸಲಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ
ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Agumbe Ghat: ಭಾರಿ ಮಳೆ; ಸೆ.15ರವರೆಗೆ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ!

Exit mobile version