Site icon Vistara News

Raja Marga Column : ಅಯೋಧ್ಯೆ ಹೋರಾಟದ ಕಣ್ಮಣಿ ಅಡ್ವಾಣಿ; ಅವರ ಕನ್ನಡ ಪ್ರೀತಿಯೂ ಅನನ್ಯ

Advani Rathayathra1

ರಾಮಜನ್ಮಭೂಮಿಯ ಹೋರಾಟದಲ್ಲಿ (Rama Janmabhumi Movement) ಮರೆಯಲಾಗದ ಒಂದು ಹೆಸರು ಅದು ಭಾರತದ ಮಾಜಿ ಉಪಪ್ರಧಾನಿ ಲಾಲ್‌ ಕೃಷ್ಣ ಅಡ್ವಾಣಿ (LK Advani). ಭಾರತೀಯರು ಅವರನ್ನು ಎರಡನೇ ಉಕ್ಕಿನ ಮನುಷ್ಯ ಎಂದೇ ಕರೆದರು. ಗುಜರಾತಿನ ಸೋಮನಾಥದಿಂದ ಉತ್ತರಪ್ರದೇಶದ ರಾಮ ಜನ್ಮಭೂಮಿ ಅಯೋಧ್ಯೆಯವರೆಗೆ ಅವರು ಕ್ರಮಿಸಿದ ಹತ್ತುಸಾವಿರ ಕಿಲೋಮೀಟರ್ ಉದ್ದದ ರಥಯಾತ್ರೆಯು (Ayodhya Rathayatre) ಉಂಟುಮಾಡಿದ ಹಿಂದೂ ಜಾಗೃತಿಯನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ಆತ್ಮಚರಿತ್ರೆಯ ಪುಸ್ತಕ ‘ನನ್ನ ದೇಶ ನನ್ನ ಜೀವನ -Nanna desha Nanna Jeevana) ‘ (ಕನ್ನಡ ಅನುವಾದ ವಿಶ್ವೇಶ್ವರ ಭಟ್)ದಲ್ಲಿ ಅವರು ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಬರೆದ ಮಾತುಗಳು ನನಗೆ ತುಂಬಾ ಸ್ಫೂರ್ತಿ ನೀಡಿವೆ. ಕನ್ನಡವನ್ನು ಪ್ರೀತಿಸುವವರು (Love towards Kannada) ಈ ಸಾಲುಗಳನ್ನು ಖಂಡಿತವಾಗಿ ಓದಬೇಕು.

ಕನ್ನಡ ಓದಲು ಬರೆಯಲು ಜೈಲಿನಲ್ಲಿ ಕಲಿತೆ

1975ರ ತುರ್ತು ಪರಿಸ್ಥಿತಿಯ ಕಾಲದಲ್ಲಿ ನಾನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ 19 ತಿಂಗಳು ಇದ್ದೆ. ಆಗ ನನ್ನ ಹಲವು ಕನ್ನಡದ ಸ್ನೇಹಿತರ ಪರಿಚಯ ಆಯಿತು. ಅವರು ನನಗೆ ಕನ್ನಡವನ್ನು ಓದಲು ಮತ್ತು ಬರೆಯಲು ಕಲಿಸಿದರು. ಆಗ ಕನ್ನಡದ ಪತ್ರಿಕೆಗಳನ್ನು ಓದುವಷ್ಟು ನಾನು ಕನ್ನಡವನ್ನು ಕಲಿತೆ. ಆಗ ಮೂವರು ಕನ್ನಡದ ಪತ್ರಕರ್ತರು ನನ್ನ ಮೇಲೆ ದಟ್ಟ ಪ್ರಭಾವ ಬೀರಿದರು. ಒಬ್ಬರು ಎಂ.ವಿ. ಕಾಮತ್ ಅವರು. ಅವರು ಉಡುಪಿ ಜಿಲ್ಲೆಯಿಂದ ಬಂದವರು. ಇನ್ನೊಬ್ಬರು ಬೆಸುನಾ ಮಲ್ಯ ಅವರು. (ಅವರು ಕಾರ್ಕಳದವರು. ವಿಕ್ರಮ ಪತ್ರಿಕೆಯ ಸಂಪಾದಕರಾಗಿದ್ದರು). ಇನ್ನೊಬ್ಬರು ಎಚ್‌.ವೈ ಶಾರದಾ ಪ್ರಸಾದ್ ಅವರು. ಅವರು ಮೂವರು ಪ್ರಧಾನಿಗಳಿಗೆ ಮಾಧ್ಯಮ ಸಲಹೆಗಾರ ಆಗಿದ್ದವರು.

ಕಾರಂತ, ಭೀಮಸೇನ ಜೋಶಿ, ಗಂಗೂಬಾಯಿ….

ಶಿವರಾಮ ಕಾರಂತರು ತುರ್ತುಪರಿಸ್ಥಿತಿಯನ್ನು ವಿರೋಧಿಸಿ ನಿಂತವರು. ಅವರು ಮಾಡಿದ ಪರಿಸರ ಹೋರಾಟ ನನಗೆ ಸ್ಫೂರ್ತಿ ನೀಡಿದೆ. ಕನ್ನಡದ ಸಾಹಿತಿಗಳು ಅತೀ ಹೆಚ್ಚು ಜ್ಞಾನಪೀಠ ಪಡೆದಿದ್ದಾರೆ ಎಂದು ನನಗೆ ತಿಳಿದು ಅಭಿಮಾನ ಮೂಡಿಬಂತು. ಖ್ಯಾತ ವ್ಯಂಗ್ಯಚಿತ್ರಕಾರ ಆರ್ ಕೆ ಲಕ್ಷಣ್ ಅವರು ನನ್ನ ಅತ್ಯಂತ ಆತ್ಮೀಯರು. ಅವರೂ ಕನ್ನಡಿಗರು. ಗದಗದಿಂದ ಮೂಡಿಬಂದ ಭೀಮಸೇನ್ ಜೋಶಿ, ಧಾರವಾಡದ ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್ ಇವರೆಲ್ಲರ ಸಂಗೀತ ಕಛೇರಿ ನಾನು ಹಲವು ಬಾರಿ ಕೇಳಿದ್ದೇನೆ. ಅವರು ಸರಸ್ವತಿಯ ನಿಜವಾದ ಆರಾಧಕರು. ಬಿ.ವಿ ಕಾರಂತ ನಿರ್ದೇಶನದ ಹಲವು ನಾಟಕ ನಾನು ನೋಡಿದ್ದೇನೆ. ಅವರ ಪ್ರಯೋಗಗಳು ವಿಶ್ವಮಟ್ಟದ ಕೀರ್ತಿ ಪಡೆದವುಗಳು. ಕನ್ನಡ ಸಿನಿಮಾಗಳ ಧ್ರುವ ತಾರೆ ಡಾಕ್ಟರ್ ರಾಜಕುಮಾರ್ ಅವರ ಹಲವು ಸಿನಿಮಾ ನೋಡಿದ್ದೇನೆ. ಅಂತಹ ನಟ ಭಾರತೀಯ ಸಿನಿಮಾ ರಂಗದಲ್ಲಿಯೇ ಅಪರೂಪ ಎಂದು ನಾನು ಖಚಿತವಾಗಿ ಹೇಳಬಲ್ಲೆ.

ವಿಶ್ವೇಶ್ವರಯ್ಯ ಅನನ್ಯ ಮಾದರಿ.

21ನೆ ಶತಮಾನದಲ್ಲಿ ಭಾರತವನ್ನು ಕಡೆದು ನಿಲ್ಲಿಸಲು ನಮಗೆ ಹಲವಾರು ವಿಶ್ವೇಶ್ವರಯ್ಯನವರ ಅಗತ್ಯ ಇದೆ. ಇಸ್ರೋದ ರೂವಾರಿಗಳಾದ ಡಾಕ್ಟರ್ ಯು.ಆರ್ ರಾವ್ ಮತ್ತು ಕಸ್ತೂರಿರಂಗನ್ ಅವರ ಕೊಡುಗೆಗಳಿಗೆ ನನಗೆ ಅಭಿಮಾನವಿದೆ. ಆರ್ಯಭಟ ಉಪಗ್ರಹವನ್ನು ಹಾರಿಸಿದ್ದು ಮಾತ್ರವಲ್ಲ ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಕರ್ನಾಟಕ ಎಂದರೆ ಮಠ ಮಾನ್ಯಗಳ ಮತ್ತು ಶಿವಶರಣರ ನಾಡು

ಕರ್ನಾಟಕ ಎಂದರೆ 3000ಕ್ಕಿಂತ ಅಧಿಕ ಮಠ ಮಾನ್ಯಗಳ ನಾಡು. ಬಸವಾದಿ ಶಿವಶರಣರ ವಚನಗಳಿಂದ ಈ ನಾಡು ಪುನೀತವಾಗಿದೆ. ಹನ್ನೆರಡನೇ ಶತಮಾನದ ಈ ಕ್ರಾಂತಿ ಪುರುಷರು ಹರಡಿದ ಸಾಮಾಜಿಕ ಜಾಗೃತಿಯ ಬಗ್ಗೆ ನನಗೆ ಅಚ್ಚರಿ ಮತ್ತು ಅಭಿಮಾನ ಇವೆ. ಇಲ್ಲಿನ ಮಠಾಧಿಪತಿಗಳು ಸಾಧನೆ ಮಾಡಿದ ತಪಸ್ಸು ಅದು ಅದ್ಭುತವೇ ಆಗಿದೆ. ನಾನು ಶತಾಯುಷಿ ಡಾಕ್ಟರ್ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಬಾಲಗಂಗಾಧರ ನಾಥ ಸ್ವಾಮೀಜಿ, ಉಡುಪಿಯ ಪೇಜಾವರ ಸ್ವಾಮೀಜಿ, ಸುತ್ತೂರು ಸ್ವಾಮೀಜಿ, ಶೃಂಗೇರಿ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದೇನೆ. ಅವರು ನಡೆಸುತ್ತಿರುವ ಅನ್ನ, ಆರೋಗ್ಯ ಮತ್ತು ಅಕ್ಷರ ಸೇವೆಗಳ ಬಗ್ಗೆ ಕಣ್ಣಾರೆ ಕಂಡಿದ್ದೇನೆ. ಗೋ ರಕ್ಷಣೆಗೆ ರಾಷ್ಟ್ರಮಟ್ಟದ ಆಂದೋಲನ ನಡೆಸುತ್ತಿರುವ ರಾಮಚಂದ್ರಾಪುರ ಸ್ವಾಮೀಜಿಗಳ ಮಠಕ್ಕೆ ಭೇಟಿ ನೀಡಿ ರೋಮಾಂಚನ ಪಟ್ಟಿದ್ದೇನೆ. ರವಿಶಂಕರ್ ಗುರೂಜಿ ಅವರ ಸೇವೆಯೂ ಅದ್ಭುತವೇ ಆಗಿದೆ.

2020ರಲ್ಲಿ ಅಡ್ವಾಣಿ ಅವರು ಬೆಂಗಳೂರು ಜೈಲಿಗೆ ಮರು ಭೇಟಿ ನೀಡಿದಾಗ. ರಾಮಕೃಷ್ಣ ಹೆಗ್ಡೆ ಜತೆಗಿದ್ದರು.

ಅನ್ನ ದಾಸೋಹಕ್ಕೆ ಕರ್ನಾಟಕ ಮಾದರಿ

ಕರ್ನಾಟಕದ ಎಲ್ಲ ಪ್ರಮುಖ ದೇವಸ್ಥಾನ, ಮಠಗಳು ನಡೆಸುತ್ತಿರುವ ಅನ್ನ ದಾಸೋಹ ಕಾರ್ಯಕ್ರಮಗಳು ಹಸಿದವರ ಹಸಿವು ಇಂಗಿಸುತ್ತಿದೆ. ಕರ್ನಾಟಕ ಸರಕಾರ ನಡೆಸುತ್ತಿರುವ ಅಕ್ಷರ ದಾಸೋಹದ ಗುಣಮಟ್ಟವೂ ಅದ್ಭುತವೇ ಆಗಿದೆ. ಇಸ್ಕಾನ್ ಸಂಸ್ಥೆಯು ನಡೆಸುತ್ತಿರುವ ಅಕ್ಷಯ ಪಾತ್ರ ಯೋಜನೆಯಲ್ಲಿ ಪ್ರತೀ ದಿನವೂ ಹತ್ತು ಲಕ್ಷ ಶಾಲಾ ವಿದ್ಯಾರ್ಥಿಗಳು ಉಣ್ಣುವುದು ಜಾಗತಿಕ ದಾಖಲೆಯೇ ಸರಿ. ಮಾಜಿ ಸಂಸದ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ನಡೆಸುತ್ತಿರುವ ಅದಮ್ಯ ಚೇತನ ಸಂಸ್ಥೆಯ ಸೇವಾ ಕಾರ್ಯಗಳು ಇಡೀ ದೇಶಕ್ಕೆ ಮಾದರಿ ಆಗಿವೆ. ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಅವರನ್ನು ನಾನು ಹಲವು ಬಾರಿ ಭೇಟಿ ಮಾಡಿ ಮಾತಾಡಿದ್ದೇನೆ. ಪ್ರತೀ ಬಾರಿಯೂ ರೋಮಾಂಚನ ಪಟ್ಟಿದ್ದೇನೆ.

ಜಸ್ಟೀಸ್ ಕೆ ಎಸ್ ಹೆಗ್ಡೆ ಅವರನ್ನು ಮರೆಯಲು ಸಾಧ್ಯವೇ ಇಲ್ಲ

ಕರ್ನಾಟಕದ ನನ್ನ ಇನ್ನೊಂದು ಹಿರಿಯ ಕೊಂಡಿ ಇರುವುದು ಜಸ್ಟೀಸ್ ಕೆ.ಎಸ್ ಹೆಗ್ಡೆಯವರದ್ದು. ತುರ್ತು ಪರಿಸ್ಥಿತಿಯ ವಿರುದ್ಧ ಅವರು ತೀರ್ಪು ನೀಡಿ ಅಧಿಕಾರ ಕಳೆದುಕೊಂಡವರು. ಮುಂದೆ ಅವರು ಲೋಕಸಭೆಯ ಸ್ಪೀಕರ್ ಕೂಡ ಆದರು. ಕರ್ನಾಟಕದವರೇ ಬಿಹಾರ್ ಮತ್ತು ಜಾರ್ಖಂಡ್ ರಾಜ್ಯಪಾಲರಾಗಿ ಮಿಂಚಿದ ಜಸ್ಟೀಸ್ ರಾಮಾ ಜೋಯಿಸ್ ಅವರು ನನ್ನ ಮತ್ತು ವಾಜಪೇಯಿ ಅವರ ಪರವಾಗಿ ಕೋರ್ಟಿನಲ್ಲಿ ವಾದ ಮಂಡಿಸಿದರು. ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಆದ ಜಸ್ಟೀಸ್ ವೆಂಕಟಾಚಲಯ್ಯ ಮತ್ತು ಹಿರಿಯ ನ್ಯಾಯವಾದಿ ಜಸ್ಟೀಸ್ ವಿ.ಎಸ್ ಮಳಿಮಠ ಅವರು ಭ್ರಷ್ಟಾಚಾರದ ನೆರಳು ಕೂಡ ಇಲ್ಲದ ನ್ಯಾಯದಾನಕ್ಕೆ ಹೆಸರಾದವರು.

ಕರ್ನಾಟಕದ ರಾಜಕಾರಣಿಗಳ ಪರಂಪರೆ

ನಾನು ಸೆರೆಮನೆಯಲ್ಲಿ ಇದ್ದಾಗ ಭೇಟಿ ಮಾಡಿದ ರಾಮಕೃಷ್ಣ ಹೆಗಡೆ, ದೇವೇಗೌಡ, ನಿಜಲಿಂಗಪ್ಪ, ಎಸ್ಆರ್ ಬೊಮ್ಮಾಯಿ ಆಗ ನಮ್ಮ ವಿರೋಧಿ ಪಕ್ಷದಲ್ಲಿ ಇದ್ದರೂ ಪ್ರಜಾಪ್ರಭುತ್ವದ ಪ್ರತಿಪಾದಕರೇ ಆಗಿದ್ದಾರೆ. ಹಾಗೆಯೇ ನಮ್ಮದೇ ಪಕ್ಷದ ಯಡಿಯೂರಪ್ಪ ಅವರು ಶಕ್ತಿಶಾಲಿ ರೈತನಾಯಕರು. ಹಾಗೆಯೇ ಸೆರೆಮನೆಯಲ್ಲಿ ನನ್ನ ಜೊತೆ ಇದ್ದ ಡಾಕ್ಟರ್ ವಿ.ಎಸ್ ಆಚಾರ್ಯ, ಜಾರ್ಜ್ ಫೆರ್ನಾಂಡಿಸ್, ಈಶ್ವರಪ್ಪ, ಶಂಕರ ಮೂರ್ತಿ ಇವರೆಲ್ಲರೂ ನನ್ನ ಕನ್ನಡದ ಅಧ್ಯಯನಕ್ಕೆ ನೆರವಾಗಿದ್ದಾರೆ.

ಭರತ ವಾಕ್ಯ

ಅಡ್ವಾಣಿ ಅವರು ಕನ್ನಡದ ಬಗ್ಗೆ ಬರೆದ ಆಷ್ಟೂ ಸಾಲುಗಳು ಪ್ರತಿಯೊಬ್ಬ ಕನ್ನಡಿಗನ ಅಭಿಮಾನಕ್ಕೆ ಪೂರಕವಾಗಿವೆ.

Exit mobile version