Site icon Vistara News

ರಾಜ ಮಾರ್ಗ ಅಂಕಣ |ಬಾಲಿವುಡ್ ಚಾಚಾ ಅಚ್ಯುತ್ ಪೋತದಾರ್ ಚಿತ್ರರಂಗ ಪ್ರವೇಶ ಮಾಡಿದ್ದೇ 46ನೇ ವಯಸ್ಸಲ್ಲಿ!

achyuth pothadar

1980ರ ನಂತರದ ಯಾವ ಹಿಂದಿ ಮತ್ತು ಮರಾಠಿ ಸಿನೆಮಾಗಳನ್ನು ನೋಡಿದರೂ ಈ ಮುಖವು ನಿಮ್ಮನ್ನು ತಟ್ಟನೆ ಸೆಳೆದು ಬಿಡುತ್ತದೆ! ಪ್ರತಿಯೊಂದು ಹಿಂದಿ, ಮರಾಠಿ ಧಾರಾವಾಹಿಗಳಲ್ಲಿ ಕೂಡ ಈ ಹಿರಿಯ ನಟ ಇದ್ದೇ ಇರುತ್ತಾರೆ! ವಿವಿಧ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಯಾವ ಕಾರ್ಪೊರೇಟ್ ಜಾಹೀರಾತು ಇಣುಕಿ ನೋಡಿದರೂ ಈ ಚಾಚಾ ನಗುಮುಖವು ನಮ್ಮ ಗಮನ ಸೆಳೆಯುತ್ತದೆ. ಇಡೀ ಸಿನೆಮಾರಂಗ ಅವರನ್ನು ‘ಅಚ್ಯುತ್ ಚಾಚಾ’ ಎಂದು ಕರೆಯುತ್ತದೆ.

ಅವರೇ ಅಚ್ಯುತ್ ಪೋತದಾರ್. ಅವರ ವಯಸ್ಸು ನಿನ್ನೆಗೆ 88 ತುಂಬಿತು. ನಟಿಸುವ ಹಸಿವು ಇನ್ನೂ ಇಂಗಿಲ್ಲ. ದೇವರು ಆರೋಗ್ಯ ಕೊಟ್ಟರೆ ಇನ್ನೂ ಹತ್ತು ವರ್ಷಗಳ ಕಾಲ ಅಭಿನಯ ಮಾಡಬೇಕು ಎನ್ನುತ್ತಾರೆ ಅವರು. ಅವರ ಚೈತನ್ಯ, ಜೀವನೋತ್ಸಾಹ ಮತ್ತು ಕಲಾಪ್ರೇಮ ನಮಗೆಲ್ಲ ಮಾದರಿ ಆಗುವಂತಹದ್ದೆ! ಅವರ ಹಿನ್ನೆಲೆ ತಿಳಿದರೆ ನೀವು ಖಂಡಿತ ಬೆರಗಾಗುತ್ತೀರಿ!

ಅಚ್ಯುತ್ ಚಾಚಾ ಹುಟ್ಟಿದ್ದು ಮಧ್ಯಪ್ರದೇಶದ ಜಬಲಪುರದಲ್ಲಿ. ಶಾಲಾ, ಕಾಲೇಜು ದಿನಗಳಲ್ಲಿ ಎಂದಿಗೂ ಅಭಿನಯ ಮಾಡಿದವರೇ ಅಲ್ಲ. ನಾಚಿಕೆ, ಸಂಕೋಚ ಜಾಸ್ತಿ ಇತ್ತು. ಅದರ ಜೊತೆಗೆ ಓದುವ ಒತ್ತಡವೂ ಇತ್ತು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅವರು ಪಡೆದದ್ದು ಪ್ರಥಮ ರಾಂಕಿನೊಂದಿಗೆ! ನಂತರ ರೇವಾ ವಿವಿಯಲ್ಲಿ ಉಪನ್ಯಾಸಕರಾಗಿ ಒಂದೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ಮುಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ತವಕ ಹೆಚ್ಚಾಗಿ ಅವರು ಸೇರಿದ್ದು ಭಾರತೀಯ ಭೂ ಸೇನೆಯನ್ನು! ಕ್ಯಾಪ್ಟನ್ ಆಗಿ ನಿವೃತ್ತಿ ಆಗುವಾಗ ವಯಸ್ಸು 34.

ಮುಂದೆ ‘ಇಂಡಿಯನ್ ಆಯಿಲ್ ಕಂಪೆನಿಯಲ್ಲಿ’ ಹಿರಿಯ ಅಧಿಕಾರಿ ಆಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಆಗ ನಿಧಾನಕ್ಕೆ ಶಕ್ತಿಶಾಲಿಯಾದ ಮರಾಠಿ ರಂಗಭೂಮಿಯಲ್ಲಿ ಅವರಿಗೆ ಆಸಕ್ತಿ ಉಂಟಾಯಿತು. ಒಂದು ದಶಕದ ಅವಧಿಯಲ್ಲಿ ಅವರು ಅಭಿನಯಿಸಿದ್ದು ಒಟ್ಟು 26 ಮರಾಠಿ ಮತ್ತು ಹಿಂದಿ ನಾಟಕಗಳಲ್ಲಿ. ಅದು ಕೂಡ ಎಲ್ಲಾ ರೀತಿಯ ಪಾತ್ರಗಳು! ಹಲವು ಪ್ರಶಸ್ತಿಗಳು ಬಂದವು. ಜನ ಗುರುತಿಸಿದರು.

ಅದರ ಮುಂದಿನ ಭಾಗವಾಗಿ ಸಿನೆಮಾರಂಗವು ಕೈಬೀಸಿ ಕರೆಯಿತು. ಮೊದಲ ಸಿನೆಮಾದಲ್ಲಿ ಅಭಿನಯಿಸುವಾಗ ಅವರಿಗೆ 46 ವರ್ಷ ದಾಟಿತ್ತು! ತನ್ನ ವಯಸ್ಸಿಗೆ ಪೂರಕವಾದ ಪೋಷಕ ಪಾತ್ರಗಳಲ್ಲಿ ಅವರು 1980ರಿಂದ ನಿರಂತರವಾಗಿ ಅಭಿನಯಿಸಿದರು.

1992ರಲ್ಲಿ ಇಂಡಿಯನ್ ಆಯಿಲ್ ಕಂಪೆನಿಯಿಂದ ನಿವೃತ್ತಿ ಪಡೆದ ನಂತರ ಅವರು ಸಿನೆಮಾ, ಧಾರಾವಾಹಿ, ನಾಟಕ, ಜಾಹೀರಾತು ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. ನಿಜವಾಗಿ ಹೇಳಬೇಕೆಂದರೆ ಅವರ ಅಭಿನಯವನ್ನು ಜನರು ಬೆಳ್ಳಿ ತೆರೆಯ ಮೇಲೆ ಗುರುತಿಸಿದ್ದೇ ಅವರಿಗೆ 60 ವರ್ಷ ತುಂಬಿದ ಆದನಂತರ!

ಅವರು ಈವರೆಗೆ 125ಕ್ಕಿಂತ ಅಧಿಕ ಹಿಂದೀ ಮತ್ತು ಮರಾಠಿ ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ದಬಾಂಗ್ 2, ಥ್ರೀ ಇಡಿಯಟ್, ದಾಗ್, ಅಗ್ನಿ ಸಾಕ್ಷಿ, ಕರ್ಜ್, ಪರಿಣಿತಾ, ಭೂತನಾಥ, ಮೊದಲಾದ ಹಿಂದೀ ಸಿನೆಮಾ ನೋಡಿದವರಿಗೆ ಅಚ್ಯುತ್ ಚಾಚಾ ಮರೆತು ಹೋಗಲು ಸಾಧ್ಯವೇ ಇಲ್ಲ. ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಕೂಡ ದೊರೆತಿದೆ.

ಇನ್ನು ಹಿಂದೀ ಮತ್ತು ಮರಾಠಿ ಧಾರಾವಾಹಿಗಳನ್ನು ನೋಡುತ್ತಾ ಬರುವ ವೀಕ್ಷಕರಿಗೆ ಅಚ್ಯುತ್ ಚಾಚಾ ಖಂಡಿತ ನೆನಪಿರುತ್ತಾರೆ. ಯೆ ದುನಿಯಾ ಗಜಬ್ ಕಿ, ಆಂದೊಲನ್, ಭಾರತ್ ಏಕ್ ಖೋಜ್, ವಕ್ತ್ ಕೀ ದುನಿಯಾ, ಶುಭ ಮಂಗಲ ಸಾವಧಾನ್, ಅಮಿತಾ ಕೀ ಅಮಿತ್ ಮೊದಲಾದ 95 ಧಾರಾವಾಹಿಗಳಲ್ಲಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಣೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಧಾರಾವಾಹಿಯಲ್ಲಿ ಅವರು ಮಾಡಿದ ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಅವರ ಪಾತ್ರ ಮರೆಯಲು ಸಾಧ್ಯವೇ ಇಲ್ಲ! ಅವರ ಕಲಾ ಪ್ರತಿಭೆಗೆ ಝೀ ವಾಹಿನಿಯ ಲೈಫ್ ಟೈಮ್ ಪ್ರಶಸ್ತಿ ಕೂಡ ಅವರಿಗೆ ದೊರೆತಿದೆ. ಅವರು ಐವತ್ತಕ್ಕೂ ಹೆಚ್ಚಿನ ಜಾಹೀರಾತುಗಳಲ್ಲಿ ಕೂಡ ಅಭಿನಯಿಸಿದ್ದಾರೆ.

88ರ ಇಳಿಹರೆಯದಲ್ಲಿ ಕೂಡ ಸಿನೆಮಾ, ನಾಟಕ, ಧಾರಾವಾಹಿ ಎಂದು ಓಡಾಡಿಕೊಂಡು ಇರುವ ಚೈತನ್ಯದ ಚಿಲುಮೆ ಅಚ್ಯುತ್ ಚಾಚಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳೋಣ ಅಲ್ಲವೇ?

ಇದನ್ನೂ ಓದಿ| ರಾಜ ಮಾರ್ಗ | ನಮ್ಮ ಬಾಲ್ಯಕ್ಕೆ ಕಲ್ಪನೆಗಳ ರೆಕ್ಕೆ ಕಟ್ಟಿ ಎಲ್ಲೆಲ್ಲೋ ಹಾರಾಡಿಸಿದ ಬಣ್ಣ ಬಣ್ಣದ ಚಂದಮಾಮ!

Exit mobile version