Raja Marga Column: ಮೊದಲಾಗಿ ಹೇಳಿಬಿಡುತ್ತೇನೆ ತುಳುನಾಡಿನ ದೈವಗಳ ಬಗ್ಗೆ ನನ್ನ ಅಧ್ಯಯನವು (Study about Daivas) ಏನೇನೂ ಸಾಲದು. ಆದರೆ ನಾನು ಓದಿದ ಬನ್ನಂಜೆ ಬಾಬು ಅಮೀನ್ (Bannanje Babu Ameen), ಲಕ್ಷ್ಮಿ ಜಿ. ಪ್ರಸಾದ್ ಮೊದಲಾದ ವಿದ್ವಾಂಸರ ಪುಸ್ತಕಗಳ ಮೂಲಕ ನಾನು ಪಡೆದುಕೊಂಡ ಹೆಚ್ಚು ಕುತೂಹಲ ಮತ್ತು ಅಲ್ಪ ಜ್ಞಾನದ ಹಿನ್ನೆಲೆಯಲ್ಲಿ ಈ ಲೇಖನವನ್ನು ಬರೆಯುತ್ತಿದ್ದೇನೆ.
ದೈವಾರಾಧನೆ (Daivaradhane), ಅದರ ಹೆಸರೇ ಸೂಚಿಸುವಂತೆ ತುಳುನಾಡಿನ ಆದಿಮ ಆರಾಧನಾ ಕಲೆ (Worshipping art). ಜಾನಪದ ಕಲೆ (Folk Art) ಎಂದರೂ ತಪ್ಪಿಲ್ಲ. ಆದರೆ ಅದು ಅತ್ಯಂತ ವಿಶಿಷ್ಟವಾದದ್ದು. ವಿದ್ವಾಂಸರು ಈಗಾಗಲೇ ಸಾವಿರಾರು ದೈವಗಳ ಪಟ್ಟಿ ತಯಾರಿಸಿದ್ದಾರೆ. ಒಂದು ದೈವದ ಆರಾಧನೆಯು ಇನ್ನೊಂದರಿಂದ ಸಂಪೂರ್ಣವಾಗಿ ಭಿನ್ನವಾಗಿದೆ. ಈ ದೈವಗಳ ಬಗ್ಗೆ ನಮಗೆ ಇಂದು ಜ್ಞಾನವು ದೊರೆತಿರುವುದು ಆಯಾ ದೈವಗಳ ಪಾಡ್ದನ ಎಂಬ ಮೌಖಿಕ ಸಾಹಿತ್ಯದ ಮೂಲಕ. ಬನ್ನಂಜೆ ಬಾಬು ಅಮೀನ್ ಅವರು ಮಾಡಿದ ಕ್ಷೇತ್ರ ಕಾರ್ಯಗಳು, ದೈವ ನರ್ತಕರ ಸಂದರ್ಶನಗಳು, ಮಧ್ಯಸ್ಥರ ಮಾತುಕತೆಗಳ ಮೂಲಕ ನಮಗೆ ಅಪಾರ ಜ್ಞಾನವನ್ನು ಇಂದು ಒದಗಿಸಿಕೊಟ್ಟಿದ್ದಾರೆ. ಲಕ್ಷ್ಮಿ ಜಿ ಪ್ರಸಾದ್ (Lakshmi G Prasad) ಅವರು ಕೂಡ ಈ ದಿಸೆಯಲ್ಲಿ ಐತಿಹಾಸಿಕ ಕಾರ್ಯ ಮಾಡಿದ್ದಾರೆ.
ದೈವ ನರ್ತಕ ಎಂಬ ಪರಂಪರೆಯ ಕೊಂಡಿಗಳು!
ದೈವ ನರ್ತಕರು ಸಮಾಜದ ಅತ್ಯಂತ ಕೆಳವರ್ಗದಿಂದ ಬಂದವರು. ಪರವರು, ಪಂಬದವರು ಮತ್ತು ನಲಿಕೆಯವರು ಮೊದಲಾದ ಸಮುದಾಯದವರು ದೈವನರ್ತಕರಾಗಿ ಆಯಾ ದೈವಗಳ ಕಾರಣಿಕವನ್ನು ಲೋಕದ ಮುಖಕ್ಕೆ ತೋರುತ್ತಾರೆ. ತುಳುನಾಡಿನ ಜನರು ದೈವಗಳನ್ನು ನಂಬಿದಷ್ಟು ಬೇರೆ ಯಾರನ್ನೂ ನಂಬುವುದಿಲ್ಲ. ತುಳು ನಾಡಿನ ಜನರು ಇಂದಿಗೂ ತಮ್ಮ ಗದ್ದೆ, ತೋಟ, ಬೆಳೆ, ಉದ್ಯೋಗ, ಸಂಪತ್ತು, ಗೋ ಸಂಪತ್ತು, ಸಂಸಾರ ಮೊದಲಾದವುಗಳ ರಕ್ಷಣೆಯನ್ನು ದೈವಗಳೇ ಮಾಡುತ್ತವೆ ಎಂದು ಬಲವಾಗಿ ನಂಬುತ್ತಾರೆ. ಈ ನಂಬಿಕೆಯು ಸತ್ಯವಾಗುವ ಸಾವಿರಾರು ಘಟನೆಗಳು ತುಳುನಾಡಿನಲ್ಲಿ ನಡೆದಿವೆ. ಈಗಲೂ ನಡೆಯುತ್ತಿವೆ. ಇನ್ನೂ ವಿಸ್ತಾರವಾಗಿ ಹೇಳಬೇಕೆಂದರೆ ತುಳುನಾಡಿನ ಜನರು ದೈವಗಳನ್ನು ತಮ್ಮ ಕುಟುಂಬದ ಭಾಗವಾಗಿಯೇ ಸ್ವೀಕಾರ ಮಾಡಿದ್ದಾರೆ! ದೈವದ ನುಡಿಯನ್ನು ಮೀರಿ ಹೋಗುವ ಧೈರ್ಯವನ್ನು ಅಲ್ಲಿ ಯಾರೂ ತೋರುವುದಿಲ್ಲ!
ಈ ಆಧುನಿಕ ಕಾಲದಲ್ಲಿ ಕೂಡ ದೈವ ಭಕ್ತಿ, ದೈವಾರಾಧನೆ ಒಂದಿಷ್ಟೂ ತನ್ನ ಪ್ರಾಮುಖ್ಯತೆ ಕಳೆದುಕೊಂಡಿಲ್ಲ. ವಿಜ್ಞಾನ ಮತ್ತು ಮನೋವಿಜ್ಞಾನ ಎರಡು ಕೂಡ ದೈವಗಳ ಆವೇಶವನ್ನು, ನುಡಿಯನ್ನು ಮತ್ತು ಅದು ನೀಡುವ ಸಾಂತ್ವನವನ್ನು ಬಹುಮಟ್ಟಿಗೆ ಒಪ್ಪುತ್ತವೆ ಎಂಬಲ್ಲಿಗೆ ದೈವಾರಾಧನೆಯು ಆಧುನಿಕ ಸ್ಪರ್ಶವನ್ನು ಪಡೆಯಿತು ಎನ್ನಬಹುದು!
Raja Marga Column : ದೈವಾರಾಧನೆಯ ಕಾಂತಾರ ಎಫೆಕ್ಟ್!
ದೈವಾರಾಧನೆಯ ಮತ್ತು ದೈವ ನರ್ತಕರ ಬದುಕಿನ ಮೇಲೆ ಹಿಂದೆ ಕೂಡ ತುಂಬಾ ಕನ್ನಡ, ತುಳು ಸಿನೆಮಾಗಳು ಬಂದಿವೆ! ಆದರೆ ಕಾಂತಾರ ಕಟ್ಟಿಕೊಟ್ಟ ಪ್ರಭಾವಳಿ ಇದೆಯಲ್ಲ ಅದು ಅದ್ಭುತ! ಕಾಂತಾರ ಸಿನೆಮಾ ಗೆಲ್ಲಲು ಅನೇಕ ಕಾರಣಗಳು ಇದ್ದರೂ ಅದು ಕಟ್ಟಿಕೊಟ್ಟ ದೈವಗಳ ಲೋಕ, ದೈವ ನರ್ತಕರ ಬದುಕಿನ ಅನೂಹ್ಯ ಪುಟಗಳು ಇವೆಯಲ್ಲ ಅದು ನಿಜಕ್ಕೂ ವಿಸ್ಮಯವೇ! ಅದರಿಂದ ಕಾಂತಾರ ಸೂಪರ್ ಹಿಟ್ ಆಯಿತು. ಎಲ್ಲ ಕಡೆಯಿಂದಲೂ ಶ್ಲಾಘನೆ ಪಡೆಯಿತು.
Raja Marga Column : ಕಾಂತಾರ ನಂತರದ ಇಫೆಕ್ಟ್!
ಕಾಂತಾರ ಸಿನಿಮಾದಿಂದ ದೈವಗಳಿಗೆ ಸ್ಟಾರ್ ಮೌಲ್ಯ ಬಂತು ಎಂದು ಕೆಲವರು ಹೇಳಿದರು! ಅದನ್ನು ನಾನು ಒಪ್ಪುವುದಿಲ್ಲ. ತೆಂಗಿನ ಸೋಗೆಯ ಚಪ್ಪರದಲ್ಲಿ, ದೈವದ ಕಳದಲ್ಲಿ ಮೂಡಿಬರುವ ದೈವಗಳು ಜನರ ನಂಬಿಕೆಗಳಲ್ಲಿ ಮತ್ತು ಭಾವನೆಗಳಲ್ಲಿ ಈಗಾಗಲೇ ಸ್ಥಾಪಿತ ಆಗಿವೆ. ಅವುಗಳನ್ನು ಮತ್ತೆ ವಿಜೃಂಭಿಸಲು ಒಂದು ಸಿನೆಮಾ ಬೇಕಾಯಿತು ಅಂದರೆ ಅದು ಖಂಡಿತ ಸರಿಯಲ್ಲ!
ಆದರೆ ಕಾಂತಾರ ಸಿನೆಮಾದ ಪರಿಣಾಮವಾಗಿ ದೈವಾರಾಧನೆಯ ಅನುಕರಣೆಗಳು ಶಾಲೆಗಳ ಛದ್ಮವೇಷದ ವೇದಿಕೆಗಳಲ್ಲಿ, ವಾರ್ಷಿಕೋತ್ಸವದ ವೇದಿಕೆಗಳಲ್ಲಿ ಈಗಾಗಲೇ ಆವಿರ್ಭವ ಆಗಲು ತೊಡಗಿವೆ! ಅಂತಹ ವಿಡಿಯೊಗಳು ಕೂಡ ವೈರಲ್ ಆಗಿವೆ! ಇವುಗಳ ಹಿಂದೆ ಅಧ್ಯಯನದ ಕೊರತೆ ಇದೆ. ಮಾರ್ಗದರ್ಶನದ ಕೊರತೆ ಇದೆ. ಇದು ಸರಿಯಲ್ಲ.
ತುಂಬಾ ಯುವಜನರು ದೈವಗಳ ರೀಲ್ಸ್ ಇತ್ಯಾದಿ ಮಾಡಿ ನಂತರ ತಪ್ಪು ಒಪ್ಪಿಕೊಂಡಿದ್ದಾರೆ. ದೈವಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎರ‍್ರಾಬಿರ‍್ರಿ ಹರಿದಾಡುತ್ತಿವೆ! ಮುಂದೆ ಮೆರವಣಿಗೆಯ ಟ್ಯಾಬ್ಲೊಗಳಲ್ಲಿ, ಬೀದಿ ನಾಟಕಗಳಲ್ಲಿ, ಕಾಲೇಜಿನ ಸ್ಕಿಟ್‌ಗಳಲ್ಲಿ, ಶೋಭಾಯಾತ್ರೆಯ ನಡೆಗಳಲ್ಲಿ, ಉತ್ಪನ್ನಗಳ ಮಾರುಕಟ್ಟೆಯ ಜಾಹೀರಾತುಗಳಲ್ಲಿ ಕಂಡು ಬರುವ ಅಪಾಯ ಇದೆ. ಇದನ್ನು ತಕ್ಷಣ ತಡೆಗಟ್ಟುವ ಅಗತ್ಯ ಇದೆ! ಹಲವು ಚಿಂತಕರು ಈ ಬಗ್ಗೆ ಈಗಾಗಲೇ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಕಾಂತಾರ 2ನಲ್ಲಿ ದೈವಾರಾಧನೆ ಪ್ರದರ್ಶಿಸಿದರೆ ಉಗ್ರ ಹೋರಾಟ: ರಿಷಬ್‌ಗೆ ವಾರ್ನಿಂಗ್!
ಹಿಂದೆ ದೊಂದಿ ಬೆಳಕಿನಲ್ಲಿ ಮಾತ್ರ ನಡೆಯುತ್ತಿದ್ದ ಯಕ್ಷಗಾನದ ಆಖ್ಯಾನಗಳು, ವೇಷಗಳು ಈಗಲೇ ಬೀದಿಗೆ ಬಂದಾಗಿರುವ ದುರಂತ ಕಣ್ಣ ಮುಂದೆ ಇದೆ! ಯೋಗರಾಜ್ ಭಟ್ಟರಂತವರು ‘ಗಾಳಿ ಪಟ’ ಮೊದಲಾದ ಸಿನೆಮಾಗಳಲ್ಲಿ ರೊಮ್ಯಾಂಟಿಕ್ ಹಾಡುಗಳ ಹಿನ್ನೆಲೆಯಲ್ಲಿ ಡಜನ್ ಡಜನ್ ಯಕ್ಷಗಾನದ ಕಿರೀಟ ವೇಷಗಳನ್ನು ಕುಣಿಸಿ ಯಕ್ಷಗಾನದ ಕಲೆಗೆ ಅಪಮಾನ ಮಾಡಿದ್ದರೂ ಯಾವ ಯಕ್ಷಗಾನದ ಅಭಿಮಾನಿಗಳು ಪ್ರತಿಭಟನೆ ಮಾಡಲಿಲ್ಲ! ಫೆವಿಕಾಲ್ ಕಂಪೆನಿಯು ಯಕ್ಷಗಾನದ ವೇಷಗಳನ್ನು ಕುಣಿಸಿ ಜಾಹೀರಾತು ಮಾಡಿದರೂ ಯಾರೂ ಧ್ವನಿ ಎತ್ತಲಿಲ್ಲ! ಇದರ ಪರಿಣಾಮವಾಗಿ ಯಕ್ಷಗಾನದ ವೇಷಗಳು ಇಂದು ಆಲ್ಮೋಸ್ಟ್ ಬೀದಿಗೆ ಬಂದಿವೆ. ಇದರ ವಿರುದ್ಧವಾಗಿ ದೊಡ್ಡ ಮಟ್ಟದ ಅಭಿಯಾನ ನಡೆಯಬೇಕಾಗಿದೆ!
ಇದೀಗ ದೈವಗಳನ್ನು ಬೀದಿಗೆ ತರುವ ಪರಿಕ್ರಮ ಆರಂಭ ಆಗಿದೆ. ಅದನ್ನು ಈಗಲೇ ತಡೆಯಬೇಕು ಅಲ್ಲವೇ?
ಇದನ್ನೂ ಓದಿ : Raja Marga Column : ಈ ಹತ್ತು ʻಟೀʼ ನಿಮ್ಮಲ್ಲಿದ್ದರೆ ನೀವು ಗೆಲ್ಲೋದು ಗ್ಯಾರಂʻಟೀʼ!
Beauty of Tulunad #VikramBAcharya pic.twitter.com/vepWyas1Do
— Vikram B Acharya (@vikrambacharya) July 23, 2021