Site icon Vistara News

ರಾಜ ಮಾರ್ಗ ಅಂಕಣ | ಭೀಮಸೇನ್‌ ಜೋಷಿ ಜನ್ಮಶತಮಾನೋತ್ಸವ, ಮರೆಯದಿರೋಣ ಆ ಮಹಾ ಉತ್ಸವ

Pandit Bheemasen joshi

2022 ಪಂಡಿತ್ ಭೀಮಸೇನ್‌ ಜೋಷಿಜಿಯವರ ಜನ್ಮ ಶತಮಾನೋತ್ಸವ ವರ್ಷ. ಇನ್ನೇನು ಎರಡು ತಿಂಗಳಲ್ಲಿ ಆ ವರ್ಷವೇ ಮುಗಿದುಹೋಗುತ್ತದೆ. ಈ ಸಂಭ್ರಮವನ್ನು ನಮ್ಮ ನಾಡು ಬಹಳ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಬೇಕಾಗಿತ್ತು. ಅವರ ಕರ್ಮಭೂಮಿಯಾದ ಪೂನಾದಲ್ಲಿ ಅದನ್ನು ತುಂಬಾ ಅರ್ಥಪೂರ್ಣವಾಗಿ ಆಚರಣೆ ಮಾಡಿದ ಪತ್ರಿಕಾ ವರದಿಗಳನ್ನು ನಾನು ಓದಿದ್ದೇನೆ.

ಆದರೆ ಅವರ ಜನ್ಮಭೂಮಿ ಆದ ಕರ್ನಾಟಕದಲ್ಲಿ, ಅದರಲ್ಲಿಯೂ ಅವರು ತುಂಬಾ ಪ್ರೀತಿ ಮಾಡಿದ ಗದಗ ಜಿಲ್ಲೆಯಲ್ಲಿ ಒಂದು ದೊಡ್ಡ ಮಟ್ಟದ ಸಂಗೀತ ಮಹೋತ್ಸವ ಅಥವಾ ಸಮ್ಮೇಳನವು ವೇದಿಕೆ ಏರಬೇಕಿತ್ತು! ಆದರೆ ಆಗಿಲ್ಲ ಅನ್ನುವುದು ವಿಷಾದ. ಬಹಳ ದೊಡ್ಡ ಕನ್ನಡ ಸಾಹಿತ್ಯ ಸಮ್ಮೇಳನ ಸದ್ಯದಲ್ಲಿಯೇ ಹಾವೇರಿಯಲ್ಲಿ ಆಗುತ್ತಿರುವ ಕಾರಣ ಅಲ್ಲಿ ಪಂಡಿತ್‌ ಜೀಯವರನ್ನು ಸ್ಮರಿಸುವ ಒಂದಾದರೂ ಕಾರ್ಯಕ್ರಮ ಆಗಲಿ ಎನ್ನುವುದು ಆಶಯ. ಭಾರತೀಯ ಸಂಗೀತಕ್ಕೆ ಅವರಷ್ಟು ದೊಡ್ಡ ಕೊಡುಗೆಗಳನ್ನು ಕೊಟ್ಟ ಇನ್ನೊಬ್ಬ ಕಲಾವಿದ ಇಲ್ಲ ಎನ್ನುವುದು ಖಂಡಿತವಾಗಿಯೂ ಸತ್ಯ.

ಗದಗದಿಂದ ಸಂಗೀತ ಅರಸಿ ಹೊರಟ ಹುಡುಗ!
ಗದಗದ ಒಂದು ಸಣ್ಣ ಹಳ್ಳಿಯಿಂದ ಸಂಗೀತದ ಗುರುವನ್ನು ಹುಡುಕಿಕೊಂಡು ಮುಂಬೈ ಬಸ್ಸನ್ನು ಏರಿದ ಹುಡುಗನ ಕಿಸೆಯಲ್ಲಿ ಹತ್ತು ರೂಪಾಯಿ ಕೂಡ ಇರಲಿಲ್ಲ. ಅವರ ತಂದೆ ಒಬ್ಬರು ಶಿಕ್ಷಕರು. ಇನ್ನು ಮೇಷ್ಟ್ರ ಮಗ ಕಲಿಕೆಯಲ್ಲಿ ಹಿಂದೆ ಬಿದ್ದು ಅಪ್ಪನಿಗೆ ಅಪಮಾನ ಆಗುವುದು ಬೇಡ ಎಂದು ಆತ ಮನೆಯಲ್ಲಿ ಹೇಳದೆ ಮುಂಬೈಗೆ ಹೊರಟಿದ್ದ. ಅಲ್ಲಿ ಹೋಟೆಲುಗಳಲ್ಲಿ ಕೆಲಸ ಮಾಡುತ್ತ ಇದ್ದರೂ ಗುರುವಿನ ಅನ್ವೇಷಣೆ ನಿಲ್ಲಲೇ ಇಲ್ಲ. ಕೊನೆಗೆ ಯಾರೋ ಧಾರವಾಡದ ಕುಂದಗೋಳದ ಸವಾಯಿ ಗಂಧರ್ವರ ವಿಳಾಸ ಕೊಟ್ಟರು.

ಗುರುವಿನ ಗುಲಾಮನಾದ ಭೀಮಸೇನ!
ಕುಂದಗೋಳಕ್ಕೆ ಬಂದು ಸವಾಯಿ ಗಂಧರ್ವರ ಶಿಷ್ಯತ್ವವನ್ನು ಸ್ವೀಕಾರ ಮಾಡಿ ಗುರುವಿನ ಸೇವೆ ಮಾಡುತ್ತ ಗುರುಕುಲ ಪದ್ಧತಿಯಲ್ಲಿ ಸಂಗೀತ ಕಲಿತವರು ಭೀಮಸೇನ ಜೋಷಿ. ಸವಾಯಿ ಗಂಧರ್ವರು ಶುದ್ಧ ಅಂತಃಕರಣದ ಗುರುಗಳು. ಶಿಲೆಯಾಗಿದ್ದ ಶಿಷ್ಯನನ್ನು ಅದ್ಭುತ ಸಂಗೀತದ ಶಿಲ್ಪವಾಗಿ ಕಡೆದು ನಿಲ್ಲಿಸಿದವರು ಅವರೇ. ಗುರು ಶಿಷ್ಯರ ಸಂಬಂಧವೂ ತುಂಬಾ ಮಧುರ ಆಗಿತ್ತು. ಆಗ ದಿನಕ್ಕೆ 16 ಗಂಟೆ ಸಂಗೀತ ಅಭ್ಯಾಸವನ್ನು ಮಾಡುತ್ತಿದ್ದರು ಜೋಷಿಯವರು. ತನ್ನ ಶಿಷ್ಯ ಮುಂದೆ ಕಿರಾಣಾ ಘರಾಣೆಯ ಸಮರ್ಥ ಉತ್ತರಾಧಿಕಾರಿ ಆಗುತ್ತಾನೆ ಎಂದು ಗುರುಗಳಿಗೆ ನಿಚ್ಚಳವಾಗಿ ಗೊತ್ತಿತ್ತು!

ಇಡೀ ದೇಶದಲ್ಲಿ ಹರಡಿತು ಸಂತವಾಣಿಯ ಕೀರ್ತಿ!
ಭೀಮಸೇನ್ ಜೋಷಿಯವರ ಸಂಗೀತ ಸಾಧನೆಯ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಹಿಂದುಸ್ತಾನಿ ಸಂಗೀತವನ್ನು ಆಳವಾಗಿ ಅಭ್ಯಾಸ ಮಾಡಿ ಅದನ್ನು ದಾಸರ ಕೀರ್ತನೆಗಳು, ಮರಾಠಿ ಅಭಂಗಗಳಿಗೆ ಅಳವಡಿಸಿ ಗೆದ್ದವರು ಅವರು. ಪ್ರತ್ಯಕ್ಷವಾಗಿ ಎದುರು ಕೂತು ಅವರ ಹತ್ತಾರು ಕಚೇರಿಗಳನ್ನು ನೋಡುತ್ತಾ ರೋಮಾಂಚನ ಪಟ್ಟವನು ನಾನು. ನೆಲದ ಮೇಲೆ ಪದ್ಮಾಸನ ಹಾಕಿಕೊಂಡು ನೆಟ್ಟಗೆ ಕೂತು ಅವರು ನಾಭಿಯ ಆಳದಿಂದ ಹಾಡಲು ತೊಡಗಿದರೆ ತಮ್ಮನ್ನೇ ಮರೆತು ಹಾಡುತ್ತಿದ್ದರು. ಒಬ್ಬ ಹಾಡುಗಾರನ ಆಂಗಿಕ ಮತ್ತು ಮುಖದ ಭಾವನೆಗಳು ಹೇಗಿರಬೇಕು ಅನ್ನುವುದಕ್ಕೆ ಅತ್ಯುತ್ತಮ ಮಾದರಿ ಎಂದರೆ ಅದು ಜೋಷಿಜಿಯವರು! ಅವರ ಕಂಠ ಒಂದಷ್ಟು ಗಡಸು ಎನ್ನಿಸಿದರೂ ಮಾಧುರ್ಯಕ್ಕೆ ಕೊರತೆ ಇರಲಿಲ್ಲ. ಸಾಹಿತ್ಯಕ್ಕೆ ಒಂದಿಷ್ಟೂ ಅಪಚಾರ ಆಗದ ಹಾಗೆ ಹಾಡುವುದು ಅವರ ಆದ್ಯತೆ. ಮರಾಠಿ ಅಭಂಗಗಳು ಅವರ ಧ್ವನಿಯಲ್ಲಿ ಅದ್ಭುತವಾಗಿ ಹುಟ್ಟು ಪಡೆಯುತ್ತಿದ್ದವು. ಎಷ್ಟು ಬೇಕೋ ಅಷ್ಟೇ ಆಲಾಪಗಳು ಸೇರಿದರೆ ಸಂಗೀತ ಸರಸ್ವತಿ ಅವರ ವೇದಿಕೆಯಲ್ಲಿ ಪ್ರತ್ಯಕ್ಷ ಆದ ಭಾವ ನಮಗಾಗುತ್ತಿತ್ತು. ಅವರ ಹಾಡುಗಳ ಕ್ಯಾಸೆಟ್, ಸಿಡಿಗಳ ಮಾರಾಟವು ಆಗಿನ ಕಾಲಕ್ಕೆ ರೆಕಾರ್ಡ್.

ಆಗ ಅವರ ಪ್ರಭಾವ ಎಷ್ಟಿತ್ತೆಂದರೆ ಪ್ರತೀ ಊರಲ್ಲಿಯೂ ಜೋಷಿಜಿಯವರನ್ನು ಅನುಕರಣೆ ಮಾಡಿ ಹಾಡುವ ನೂರಾರು ಯುವಕರು ಇದ್ದರು. ಇಂದು ನಾನು ಅವರ ಸಂಗೀತ ಶಕ್ತಿಯ ಬಗ್ಗೆ ಹೆಚ್ಚು ಬರೆಯುವುದಕ್ಕಿಂತ ಅವರ ನಿಜ ಜೀವನದ ಕೆಲವು ಉದಾಹರಣೆಗಳನ್ನು ಮಾತ್ರ ಬರೆಯುತ್ತೇನೆ.

ಘಟನೆ ೧- ಕುಂದಗೋಳದ ಗಂಧರ್ವ ಸಂಗೀತ ಮಹೋತ್ಸವ
ಭೀಮಸೇನ್ ಜೋಷಿಜಿಯವರು ತಮ್ಮ ಗುರುಗಳಾದ ಸವಾಯಿ ಗಂಧರ್ವರನ್ನು ಎಂದಿಗೂ ಮರೆಯಲಿಲ್ಲ. ಅವರ ಊರಾದ ಕುಂದಗೋಳದಲ್ಲಿ ಗುರುಗಳ ಸ್ಮರಣೆಯ ಸಂಗೀತ ಮಹೋತ್ಸವ ಅವರು ಆರಂಭ ಮಾಡುತ್ತಾರೆ. ತಮ್ಮ ಕೊನೆಯ ದಿನಗಳವರೆಗೆ ಅವರು ಒಂದು ವರ್ಷ ಕೂಡ ತಪ್ಪಿಸದೆ ಬಂದು ಹಾಡುತ್ತಿದ್ದ ಕಾರ್ಯಕ್ರಮ ಅದು. ದೇಶದ ದೊಡ್ಡ ದೊಡ್ಡ ಸಂಗೀತದ ದಿಗ್ಗಜರನ್ನು ಅವರು ಆ ಕಾರ್ಯಕ್ರಮಕ್ಕೆ ಕರೆಸಿ ಅಲ್ಲಿ ಹಾಡಿಸಿದರು. ಅವರೂ ಹಾಡುತ್ತಿದ್ದರು. ಇಡೀ ಊರಿಗೆ ಊರೇ ಸಂಗೀತದಲ್ಲಿ ಮುಳುಗಿ ಏಳುತ್ತಿತ್ತು ಮತ್ತು ಇಡೀ ಸಂಗೀತ ಮಹೋತ್ಸವದ ಖರ್ಚು ಅವರೇ ಭರಿಸುತ್ತ ಇದ್ದರು ಎಂದು ಅವರ ಶಿಷ್ಯರು ನನಗೆ ಹೇಳಿದ್ದಾರೆ.

ಘಟನೆ 2- ಶಂಕರ್‌ ಮನೆಗೇ ಬಂದ ಭಾಗ್ಯದ ಲಕ್ಷ್ಮಿ ಬಾರಮ್ಮ
ಶಂಕರನಾಗ್ ಅವರು ನಿರ್ದೇಶನ ಮಾಡಿದ ‘ನೋಡಿ ಸ್ವಾಮಿ ನಾವಿರೋದು ಹೀಗೆ’ ಸಿನೆಮಾದಲ್ಲಿ ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡನ್ನು ಹಾಡಲು ಅವರು ಸ್ಟುಡಿಯೋಕ್ಕೆ ಬಂದಿದ್ದರು. ರೆಕಾರ್ಡಿಂಗ್ ಆಗುವಾಗ ಶಂಕರನಾಗ್ ಅವರ ಕಣ್ಣಲ್ಲಿ ನೀರು ಸುರಿಯುವುದನ್ನು ಜೋಷಿಜಿ ಸೂಕ್ಷ್ಮವಾಗಿ ಗಮನಿಸಿ ಕಾರಣ ಕೇಳಿದರು. ಆಗ ಶಂಕರನಾಗ್ “ನನ್ನ ತಾಯಿ ನಿಮ್ಮ ದೊಡ್ಡ ಅಭಿಮಾನಿ. ನಿಮ್ಮ ಹಾಡುಗಳನ್ನು ಮೈಮರೆತು ಕೇಳುತ್ತಾರೆ. ಇಂದು ಅವರ ಆರೋಗ್ಯ ಕ್ಷೀಣಿಸಿ ಮನೆಯಲ್ಲಿ ಮಲಗಿದ್ದಾರೆ. ಇಲ್ಲಾಂದ್ರೆ ಅವರು ಇವತ್ತು ಖಂಡಿತ ನಿಮ್ಮನ್ನು ಭೇಟಿ ಆಗಲು ಬರ್ತಾ ಇದ್ದರು” ಎಂದರು.

ಆಗ ಒಂದು ಕ್ಷಣ ಕೂಡ ಯೋಚನೆ ಮಾಡದೆ ಜೋಷಿಜಿ “ಶಂಕರಾ, ಈಗಲೇ ನಿಮ್ಮ ಮನೆಗೆ ಹೊರಡೋಣ” ಎಂದು ಕಾರಲ್ಲಿ ಕೂತರು. ಶಂಕರನಾಗ್ ಮನೆಗೆ ಬಂದು ತಾಯಿಯ ಮಂಚದ ಪಕ್ಕದಲ್ಲಿ ಕೂತು ಅವರು ಇಷ್ಟ ಪಡುವ ಅಷ್ಟೂ ಹಾಡುಗಳನ್ನು ಹಾಡಿ ಹಿಂದೆ ಹೋದರು! ಶಂಕರನಾಗ್ ಈ ಘಟನೆಯನ್ನು ತುಂಬಾ ಕಡೆ ಉಲ್ಲೇಖ ಮಾಡಿದ್ದಾರೆ!

ಜೋಷಿ ಅವರ ಪ್ರೀತಿಯ ಕಾರು

ಘಟನೆ ೩- ಚಂಬಲ್ ಕಣಿವೆಯ ಡಕಾಯಿತರು
ಜೋಷಿಯವರಿಗೆ ವೇಗವಾಗಿ ಕಾರ್ ಓಡಿಸುವುದು ತುಂಬಾ ಇಷ್ಟವಾದ ಹವ್ಯಾಸ. ದೂರ ದೂರಕ್ಕೆ ಅವರು ಕಾರು ಡ್ರೈವ್ ಮಾಡಿಕೊಂಡು ಹೋಗುವವರು. ಒಮ್ಮೆ ಉತ್ತರ ಭಾರತದ ಯಾವುದೋ ಒಂದು ಊರಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಕ್ಕೆ ಅವರು ತಮ್ಮ ಕಾರು ಡ್ರೈವ್ ಮಾಡಿಕೊಂಡೇ ಹೊರಟರು. ಅವರ ಜೊತೆ ಅವರ ಸಹ ಕಲಾವಿದರು ಇದ್ದರು. ಮಧ್ಯಪ್ರದೇಶ ರಾಜ್ಯವನ್ನು ದಾಟಿ ಹೋಗುತ್ತಿರುವಾಗ ಚಂಬಲ್ ಕಣಿವೆ ಬಂದಿತು. ದಟ್ಟವಾದ ಅರಣ್ಯದ ಮಧ್ಯೆ ಅವರ ಕಾರನ್ನು ಡಕಾಯಿತರು ಅಡ್ಡಗಟ್ಟಿದರು. ಬಂದೂಕು ತೋರಿಸಿ ಎಲ್ಲವನ್ನೂ ಸೆಳೆಯಲು ನೋಡಿದರು. ಅಷ್ಟು ಹೊತ್ತಿಗೆ ಡಕಾಯಿತರ ನಾಯಕನಿಗೆ ಡ್ರೈವಿಂಗ್ ಸೀಟಲ್ಲಿ ಕೂತಿದ್ದ ಜೋಷಿಜಿಯವರು ಕಂಡರು. ಆತ ಹಿಂದೆ ಮುಂದೆ ನೋಡದೆ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದನು.
ಅವನು ಹಿಂದೆ ಜೋಷಿಜಿಯವರ ಹಾಡುಗಳ ಬಹಳ ದೊಡ್ಡ ಅಭಿಮಾನಿ ಆಗಿದ್ದನಂತೆ! ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಪಾದಪೂಜೆ ಮಾಡಿ, ಕಾಣಿಕೆ ಕೊಟ್ಟು ಸನ್ಮಾನಿಸಿ ಅವರನ್ನು ಮುಂದೆ ಕಳುಹಿಸಿಕೊಟ್ಟನಂತೆ!

ಘಟನೆ ೪- ಅವರ ಕಾಲು ಇವರು, ಇವರ ಕಾಲು ಅವರು ಹಿಡಿದರು!

ದೂರದರ್ಶನಕ್ಕಾಗಿ ‘ಮಿಲೇ ಸುರ್ ಮೇರಾ ತುಮ್ಹಾರ’ ಹಾಡಿನ ರೆಕಾರ್ಡಿಂಗಿಗಾಗಿ ಲತಾ ಮಂಗೇಷ್ಕರ್ ಮತ್ತು ಭೀಮಸೇನ್ ಜೋಷಿ ಅವರು ಒಂದು ಸ್ಟುಡಿಯೋಕ್ಕೆ ಬಂದಿದ್ದರು. ಹಾಡು ರೆಕಾರ್ಡಿಂಗ್ ಆರಂಭ ಆಗುವಾಗ ಲತಾಜಿಯವರು ಜೋಷಿಜಿಯವರ ಪಾದ ಮುಟ್ಟಿ ಆಶೀರ್ವಾದ ತೆಗೆದುಕೊಂಡರು. ಜೋಷಿಜೀಯವರಿಗೆ ಅದು ಭಾರಿ ಮುಜುಗರ ಆಯಿತು. ಅವರ ಮನಸ್ಸಿನಲ್ಲಿ ಲತಾ ಭಾರೀ ದೊಡ್ಡ ಕಲಾವಿದೆ ಎಂದು ಇತ್ತು.
“ದೀದಿ, ನೀವು ನನ್ನನ್ನು ನಿಮ್ಮ ಋಣದಲ್ಲಿ ಹಾಕುತ್ತ ಇದ್ದೀರಿ. ಇದು ಸರಿ ಅಲ್ಲ!” ಎಂದು ಅವರ ಕಾಲು ಹಿಡಿದರು.
ಲತಾಜಿ ಮತ್ತೆ ಜೋಷಿಯವರ ಕಾಲಿಗೆ ಬಿದ್ದರು. ಜೋಷಿಜಿ ಅದನ್ನು ಮುಂದುವರಿಸಿದರು. ಇಡೀ ಸ್ಟುಡಿಯೋ ಒಳಗಿದ್ದ ಎಲ್ಲ ಕಲಾವಿದರು ಈ ದೃಶ್ಯ ನೋಡುತ್ತ ಬೆಕ್ಕಸ ಬೆರಗಾದರು.

ಘಟನೆ ೫- ಭೀಮಸೇನ್ ಜೋಶಿ ಆಗೋದು ಹೇಗೆ?
ಒಬ್ಬ ವಿದೇಶಿ ಕಲಾವಿದ ಅವರ ಹಲವು ಸಂಗೀತ ಕಚೇರಿಗೆ ಯಾವಾಗಲೂ ಬರುತ್ತಿದ್ದ. ಕಚೇರಿ ಆದ ನಂತರ ಅವರ ಬಳಿ ಬಂದು “ಗುರೂಜಿ. ನಾನು ನಿಮ್ಮ ಸಂಗೀತ ಪ್ರತಿಭೆಯಿಂದ ಪ್ರಭಾವಿತ ಆಗಿದ್ದೇನೆ. ನಾನು ನಿಮ್ಮ ಹಾಗೆ ಹಾಡಬೇಕು. ನಾನೇನು ಮಾಡಬೇಕು ಹೇಳಿ” ಎಂದು ದುಂಬಾಲು ಬೀಳುತ್ತಿದ್ದ.
ಜೋಷಿಯವರಿಗೆ ಒಮ್ಮೆ ಭಾರಿ ಸಿಟ್ಟು ಬಂತು. ಅವರು ಒಂದೇ ವಾಕ್ಯದಲ್ಲಿ ಹೀಗೆ ಹೇಳಿದರು – “ಹುಡುಗ. ತುಂಬಾ ಸುಲಭ ಇದೆ. ನೀನೂ ದಿನಕ್ಕೆ 16 ಗಂಟೆ ಅಭ್ಯಾಸ ಮಾಡು. ಆರುವತ್ತು ವರ್ಷ ಹಾಡು. ಆಗ ನೀನೂ ನನ್ನ ಹಾಗೆ ಹಾಡುತ್ತೀಯಾ!”

ಘಟನೆ ೬- ಜೋಷಿಜಿ ಯಾಕೆ ಹೊಸ ರಾಗವನ್ನು ಕಲಿಯೋದಿಲ್ಲ!
ಒಮ್ಮೆ ಒಬ್ಬ ಅಧಿಕಪ್ರಸಂಗಿ ಪತ್ರಕರ್ತ ಅವರನ್ನು ಸಂದರ್ಶನ ಮಾಡುತ್ತ, “ಜೋಷಿಜಿ. ನೀವು ಇಷ್ಟು ವರ್ಷಗಳಲ್ಲಿ ಅದೇ ಆರು ರಾಗಗಳನ್ನು ಮಾತ್ರ ನಿಮ್ಮ ಕಚೇರಿಯಲ್ಲಿ ಹಾಡುತ್ತೀರಿ. ಅದೇ ಭೀಮ್ ಪಲಾಸ್, ಅದೇ ಆಭೋಗಿ, ಅದೇ ಭೂಪ್, ಅದೇ ಭೈರವ್, ಅದೇ ಚಾಂದ್, ಅದೇ ಮಾಲಕಂಸ್. ನೀವ್ಯಾಕೆ ಹೊಸ ರಾಗವನ್ನು ಹಾಡುವುದಿಲ್ಲ?” ಎಂದು ಕೇಳಿದ್ದ.

ಅದಕ್ಕೆ ಜೋಷಿಜಿ ಕೊಟ್ಟ ಉತ್ತರ ಮಾರ್ಮಿಕವಾಗಿಯೇ ಇತ್ತು.
ʻʻನೋಡಪ್ಪಾ, ನಾನು ಆರುವತ್ತು ವರ್ಷಗಳಿಂದ ಹಾಡುತ್ತ ಬಂದರೂ ನನಗೆ ಆ ಆರು ರಾಗಗಳಲ್ಲಿ ಪ್ರೌಢಿಮೆಯೇ ಬಂದಿಲ್ಲ. ನಾನಿನ್ನು ಹೊಸ ರಾಗವನ್ನು ಕಲಿಯುವುದು ಯಾವಾಗ?ʼʼ
ಭಾರತೀಯ ಸಂಗೀತದ ದಂತಕಥೆ ಆದ ಭೀಮಸೇನ್ ಜೋಷಿ ಅವರ ಶ್ರೇಷ್ಠವಾದ ಕೊಡುಗೆಯನ್ನು ನಾಡು ಮರೆಯಬಾರದು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಆನಂದ ಮಹೀಂದ್ರಾ ಎಂಬ ಸ್ಫೂರ್ತಿಯ ಸೆಲೆ, Best supporting HERO!

Exit mobile version