Site icon Vistara News

ರಾಜ ಮಾರ್ಗ ಅಂಕಣ | ನಿಮ್ಮೊಳಗೇ ಇದ್ದಾನೆ ಒಬ್ಬ ಗೆಳೆಯ: ಅವನ ಮಾತು ಕೇಳಿದರೆ ನಿಮಗೆ ಎಂದೂ ಸೋಲೇ ಇಲ್ಲ!

ನಿಮ್ಮ ಅಂತರಂಗವೇ ನಿಮ್ಮ ಗೆಳೆಯ

ಪ್ರತಿದಿನವೂ ನಿಮ್ಮ ಅಂತರಂಗದ ಧ್ವನಿಗೆ ಕಿವಿಕೊಡದಿದ್ದರೆ ನೀವು ನಿಮ್ಮ ಬೆಸ್ಟ್ ಫ್ರೆಂಡನ್ನು ಮಿಸ್ ಮಾಡುತ್ತೀರಿ ಎಂದಿದ್ದರು ಸ್ವಾಮಿ ವಿವೇಕಾನಂದರು! ಈ ಮಾತು ನೂರಕ್ಕೆ ನೂರರಷ್ಟು ನಿಜ. ಹೊರಮುಖ ಚಿಂತನೆಗಳು ನಿಮ್ಮನ್ನು ಬಹಿರ್ಮುಖಿ ಮಾಡಿ ನಿಮ್ಮ ವ್ಯಕ್ತಿತ್ವಕ್ಕೊಂದು ಹೊಳಪು ನೀಡುತ್ತವೆ! ಆದರೆ ಒಳಮುಖ ಚಿಂತನೆಗಳ ಶಕ್ತಿಯೇ ಅದ್ಭುತ! ನಾವು ಬೆಳೆಯಬೇಕು ಅಂತಾದರೆ ನಮ್ಮ ಈ ಒಳಮುಖ ಚಿಂತನೆಗಳು ಪ್ರಖರವಾಗಲೇ ಬೇಕು!

ಆತ್ಮಸಾಕ್ಷಿಯು ನಮ್ಮ ಅದ್ಭುತ ಗೆಳೆಯ. ಅದು ನಮ್ಮನ್ನು ಎಂದಿಗೂ ಅಡ್ಡದಾರಿಗೆ ಕರೆದುಕೊಂಡು ಹೋಗುವುದಿಲ್ಲ. ನಮ್ಮಿಂದ ತಪ್ಪುಗಳನ್ನು ಮಾಡಿಸುವುದಿಲ್ಲ. ಎಂತಹ ದುರ್ಭರ ಸನ್ನಿವೇಶದಲ್ಲಿ ಕೂಡ ಅದು ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಅದು ನಮ್ಮಲ್ಲಿ ಆತ್ಮಜಾಗೃತಿಯನ್ನು ಮೂಡಿಸುವ ಪ್ರಬಲವಾದ ಆಯುಧವೇ ಆಗಿದೆ. ಅದರಿಂದಾಗಿ ನಮಗೆ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ನಾವು ನೂರಕ್ಕೆ ನೂರರಷ್ಟು ಪಾಸಿಟಿವ್ ವ್ಯಕ್ತಿ ಆಗುತ್ತೇವೆ.

ಒಳಮುಖ ಚಿಂತನೆಯ ಕೆಲವು ನಿದರ್ಶನಗಳು!
೧) ನಿಮ್ಮ ಜೀವನದಲ್ಲಿ ಯಾವುದೇ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವ ಮೊದಲು ಒಂದು ಕ್ಷಣ ಕಣ್ಮುಚ್ಚಿ ನಿಮ್ಮ ಆ ನಿರ್ಧಾರದ ಪರಿಣಾಮ (Consequences) ಗಳ ಬಗ್ಗೆ ಯೋಚನೆ ಮಾಡಿ ಮತ್ತು ಒಂದು ಗಟ್ಟಿ ನಿರ್ಧಾರಕ್ಕೆ ಬನ್ನಿ. ನೀವು ಸೋತರೆ ಮತ್ತೆ ಹೇಳಿ!

೨) ಯಾವುದೇ ಮಿಷನ್ ಆರಂಭ ಮಾಡುವಾಗ ಮತ್ತೆ ಅಂತರಂಗದ ಗೆಳೆಯನ ಮಾತು ಕೇಳಿ. ಅಲ್ಲಿ ಕೂಡ ನಿಮ್ಮ ಸಾಮರ್ಥ್ಯ, ನಿಮ್ಮ ಪರಿಮಿತಿಗಳು, ನಿಮ್ಮ ಒಳಗಿನ ಸಂಪನ್ಮೂಲಗಳು, ನಿಮ್ಮ ಹಿಂದಿನ ಅನುಭವಗಳು ಇವುಗಳ ಬೆಳಕಿನಲ್ಲಿ ಯೋಚನೆ ಮಾಡಿ ಮತ್ತು ಮಿಷನ್ ಆರಂಭ ಮಾಡಿ. ನೀವು ಸೋತರೆ ಮತ್ತೆ ಹೇಳಿ!

೩) ಯಾವುದೇ ವ್ಯಕ್ತಿಯನ್ನು ನಿಮ್ಮ ಭಾವನಾ ವಲಯದ ಒಳಗೆ ಎಳೆದುಕೊಳ್ಳುವ ಮೊದಲು ಹಲವು ಬಾರಿ ಯೋಚನೆ ಮಾಡಿ. ಯಾವುದೇ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಲು ತುಂಬಾ ಸಮಯ ಬೇಕು. ನೀವು ಒಡ್ಡಿದ ಎಲ್ಲ ಪರೀಕ್ಷೆಗಳಲ್ಲಿ ಅವನು/ ಅವಳು ಉತ್ತೀರ್ಣ ಆದನು/ ಆದಳು ಅಂತಾದರೆ ಮಾತ್ರ ಅವರಿಗೆ ನಿಮ್ಮ ಭಾವನಾ ವಲಯದ ಬಾಗಿಲು ತೆರೆಯಿರಿ. ಆಗ ನೀವು ಮೋಸ ಹೋಗಲು ಸಾಧ್ಯವೇ ಇಲ್ಲ!

೪) ಜೀವನದ ಯಾವುದೇ ಹಂತದಲ್ಲಿ ನಿಮಗೆ ಸತತವಾದ ಸೋಲುಗಳು ಬರಲು ಆರಂಭವಾದರೆ ತಾಳ್ಮೆಯನ್ನು ಕೆಡಬೇಡಿ. ತಪ್ಪುಹೆಜ್ಜೆಗಳನ್ನು ದಯವಿಟ್ಟು ಇಡಬೇಡಿ. ಆಗ ನೀವು ಕುಳಿತು ಅಂತರಂಗದ ಯೋಚನೆ ಮಾಡಬೇಕು ಏನೆಂದರೆ ನಾನೆಲ್ಲಿ ತಪ್ಪಿದೆ? ನನ್ನ ಪ್ಲ್ಯಾನಿಂಗ್‌ನಲ್ಲಿ ಏನು ದೋಷ ಇತ್ತು? ನನ್ನ ಹೆಜ್ಜೆ ಎಲ್ಲಿ ಎಡವಿತು? ನಾನು ಯಾರನ್ನು ಅತಿಯಾಗಿ ನಂಬಿ ತಪ್ಪು ಮಾಡಿದೆ?.. ಇತ್ಯಾದಿ ಯೋಚನೆ ಮಾಡಿ ನಿಮ್ಮ ತಪ್ಪು ಸರಿಪಡಿಸಿಕೊಂಡರೆ ನೀವು ಮುಂದೆ ಸೋಲುವುದಿಲ್ಲ!

೫) ನಿಮ್ಮ ಮೇಲೆ ಹಲವಾರು ಜನರು ನೆಗೆಟಿವ್ ಕಾಮೆಂಟ್ಸ್ ಮಾಡುವುದು ನಿಮ್ಮ ಗಮನಕ್ಕೆ ಬಂದರೆ ಅವುಗಳನ್ನು ನಿರ್ಲಕ್ಷ್ಯ ಮಾಡಿ ಮುಂದೆ ಹೋಗಬೇಡಿ. ಅವುಗಳನ್ನು ಒಮ್ಮೆ ಕಿವಿಕೊಟ್ಟು ಕೇಳಿ. ಹಲವರ ಅಭಿಪ್ರಾಯಗಳನ್ನು ಕೇಳಿ. ಅವರು ಹೇಳಿದ್ದರಲ್ಲಿ ನಿಜಾಂಶ ಇದ್ದರೆ ನಿಮ್ಮ ತಪ್ಪುಗಳನ್ನು ಮೊದಲು ಶರ್ತವಿಲ್ಲದೆ ಒಪ್ಪಿಕೊಳ್ಳಿ. ನಂತರ ನಿಮ್ಮ ವರ್ತನೆಗಳನ್ನು ತಿದ್ದಿಕೊಳ್ಳಿ. ಅದರ ಜೊತೆಗೆ ನೀವು ಬದಲಾಗಿರುವುದನ್ನು ನಿಮ್ಮ ಟೀಕಿಸುವ ಜನರ ಮನಕ್ಕೆ ಉಪಾಯವಾಗಿ ದಾಟಿಸಿ.

ಜನರ ಕಾಮೆಂಟನಲ್ಲಿ ಏನೂ ಹುರುಳಿಲ್ಲ ಎಂದು ನಿಮ್ಮ ಅಂತರಂಗದ ಗೆಳೆಯನಿಗೆ ಅನ್ನಿಸಿದರೆ ಅವುಗಳನ್ನು ನಿರ್ಲಕ್ಷ್ಯ ಮಾಡಿ ಸೀದಾ ಮುಂದೆ ಹೋಗಿ!

೬) ಯಾರದ್ದೇ ಸಂಬಂಧಗಳನ್ನು ಕಳಚಿಕೊಳ್ಳುವ ಮೊದಲು ಕೂಡ ನೂರು ಬಾರಿ ಯೋಚನೆ ಮಾಡಿ. ನೀವು ಯಾವ ಕಾರಣಕ್ಕೆ ಅವರ ಸಂಬಂಧವನ್ನು ಕಳಚಿಕೊಳ್ಳಲು ಹೊರಟಿದ್ದೀರಿ ಅನ್ನುವುದನ್ನು ನಿಮಗೆ ನೀವೇ ಮೊದಲು ಕನ್ವಿನ್ಸ್ ಮಾಡಿ. ನಂತರ ಯಾರ ಜೊತೆ ಸಂಬಂಧವನ್ನು ಕಳಚಿಕೊಳ್ಳಲು ಹೊರಟಿದ್ದೀರಿ ಅವರಿಗೆ ಅವರ ತಪ್ಪುಗಳನ್ನು ಹೇಳಿ ತಿದ್ದಿಕೊಳ್ಳಲು ಒಂದೆರಡು ಅವಕಾಶ ಕೊಡಿ. ಮತ್ತೆ ತಿದ್ದಿಕೊಳ್ಳಲು ಅವರು ರೆಡಿ ಇಲ್ಲ ಅಂತಾದರೆ ನಿಮ್ಮ ಮುಂದೆ ಅವರನ್ನು ಕೂರಿಸಿ ಅವರ ಕಣ್ಣಲ್ಲಿ ಕಟ್ಟಿಟ್ಟು ವಿದಾಯದ ನಿರ್ಧಾರ ಪ್ರಕಟಿಸಿ ಹೊರಟುಬಿಡಿ. ಆಗಲೂ ನೀವು ಫೇಕ್ ಆಗುವುದಿಲ್ಲ!

೭) ಯಾರಿಗಾದರೂ ಏನಾದರೂ ಹೊಣೆಗಾರಿಕೆ ಕೊಡುವ ಮೊದಲು ಹಲವು ಬಾರಿ ಯೋಚನೆ ಮಾಡಿ! ಅವರು ನನ್ನ ಸಂಬಂಧಿಕ, ಇವರು ನನ್ನ ಜಾತಿಯವರು ಎಂದೆಲ್ಲ ನೀವು ಯೋಚನೆ ಮಾಡುವುದಕ್ಕಿಂತ ಅವನು ನೀವು ನೀಡುವ ಟಾಸ್ಕನ್ನು ಎಷ್ಟು ಯಶಸ್ವೀ ಆಗಿ ಪೂರ್ತಿ ಮಾಡ್ತಾನೆ ಎಂಬ ಯೋಚನೆ ಮಾಡಿ ಹೊಣೆಗಾರಿಕೆ ನೀಡಿದರೆ ಹೆಚ್ಚು ಶ್ರೇಯಸ್ಸು ಖಾತರಿ.

೮) ನಿಮ್ಮ ಒಳಮುಖ ಚಿಂತನೆಗೆ ಅತ್ಯಂತ ಪ್ರಶಸ್ತವಾದ ಹೊತ್ತು ಎಂದರೆ ರಾತ್ರಿ ನೀವು ನಿದ್ದೆಗೆ ಜಾರುವ ಹೊತ್ತು! ದಿಂಬಿಗೆ ತಲೆ ಇಟ್ಟ ಕೂಡಲೇ ಯಾರಿಗೂ ನಿದ್ದೆ ಬರುವುದಿಲ್ಲ. ಕನಿಷ್ಠ 10-15 ನಿಮಿಷ ನಿಮಗೆ ಖಂಡಿತವಾಗಿ ದೊರೆಯುತ್ತದೆ. ಆಗ ಇಡೀ ದಿನದ ಎಲ್ಲ ಘಟನೆಗಳನ್ನು ಅದೇ ಕ್ರಮದಲ್ಲಿ ನೆನಪಿಸಿಕೊಳ್ಳಿ. ಆ ದಿನದ ಅವಧಿಯಲ್ಲಿ ನೀವು ಎಷ್ಟು ಮಂದಿಗೆ ಸಂತೋಷವನ್ನು ಹಂಚಿದ್ದೀರಿ ಎಂದು ಪಟ್ಟಿಮಾಡಿ. ಅವರ ಹೆಸರುಗಳನ್ನು ನಿಮ್ಮ ಡೈರಿ ಪುಸ್ತಕದಲ್ಲಿ ಬರೆಯಿರಿ!

ಆ ದಿನದ ಅವಧಿಯಲ್ಲಿ ನೀವು ಯಾರಿಗೆಲ್ಲ ನೋವು ಕೊಟ್ಟಿದ್ದೀರಿ ಎಂದು ಲೆಕ್ಕಮಾಡಿ ಅವರ ಇನ್ ಬಾಕ್ಸಲ್ಲಿ ಸಾರಿ ಕಣೋ ಅಥವಾ ಸಾರಿ ಕಣೆ ಎಂದು ಮೆಸೇಜ್ ಹಾಕಿ ಚಂದವಾಗಿ ಮಲಗಿ!

ನೀವು ಆ ದಿನದ ಅವಧಿಯಲ್ಲಿ ಯಾವುದಾದರೂ ಒಳ್ಳೆಯ ಕೆಲಸ ಮಾಡಿದ್ದರೆ ನಿಮಗೆ ನೀವೇ ಶಾಭಾಶ್ ಹೇಳಿ ಕಣ್ಣು ಮುಚ್ಚಿ!
ಆ ದಿನ ನೀವು ಯಾವುದಾದರೂ ಕೆಲಸ ಅಪೂರ್ಣ ಇಟ್ಟಿದ್ದರೆ ಅದನ್ನು ಮರುದಿನದ ಪ್ಲಾನಿಂಗ್‌ನಲ್ಲಿ ಸೇರಿಸಿ ನಿಮಗೆ ನೀವೇ ಗುಡ್ ನೈಟ್ ಹೇಳಿ!
ಈ ರೀತಿಯ ಅಭ್ಯಾಸಗಳನ್ನು ರೂಢಿಸಿಕೊಂಡವರು ಜೀವನದಲ್ಲಿ ಸೋಲಲು ಸಾಧ್ಯವೇ ಇಲ್ಲ!
ಏನಂತೀರಿ?

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಆವತ್ತು ಕಪಿಲ್‌ ದೇವ್‌ ಮೈಯಲ್ಲಿ ಆವೇಶ ಬಂದಿತ್ತು, ಥೇಟ್‌ ಕಾಂತಾರದ ರಿಷಬ್‌ ಶೆಟ್ಟಿ ಸ್ಟೈಲಲ್ಲಿ!

Exit mobile version