Raja Marga Column: 2024ರ ಜನವರಿ 25ರಂದು ಬಿಡುಗಡೆಯಾದ ಹಿಂದಿ ಸಿನಿಮಾ ‘ಫೈಟರ್’ (Fighter Movie) ಭಾರತವನ್ನು ಪ್ರೀತಿಸುವ ಪ್ರತಿಯೊಬ್ಬನೂ ನೋಡಬೇಕಾದ ಚಿತ್ರ. ನಾನು ಈ ಸಿನಿಮಾದ ವಿಮರ್ಶೆ ಮಾಡಲು ಹೊರಡುವುದಿಲ್ಲ. ಆದರೆ ಅದರ ಆಶಯ, ದೃಶ್ಯವೈಭವ, ತಾಂತ್ರಿಕತೆ, ಕಲಾವಿದರ ಅಭಿನಯ ಎಲ್ಲವೂ ಅದ್ಭುತವೇ ಆಗಿವೆ ಎಂದು ಮಾತ್ರ ಹೇಳಬಲ್ಲೆ.
Raja Marga Column: ಸಿದ್ಧಾರ್ಥ್ ಆನಂದ್ ರೂಪಿಸಿದ ಸಿನಿಮಾ ಇದು
250 ಕೋಟಿ ಮಹಾ ಬಜೆಟ್ಟಿನಲ್ಲಿ ಯುವ ನಿರ್ದೇಶಕ ಸಿದ್ಧಾರ್ಥ್ ಆನಂದ್ (Siddharth Anand) ಅವರು ರೂಪಿಸಿದ ಸಿನಿಮಾ ಇದು. ಚಿತ್ರೀಕರಣಕ್ಕೆ ಸಿನಿಮಾ ತಂಡ ಎರಡು ವರ್ಷ ಬಳಸಿಕೊಂಡಿದೆ. ಈ ಇಡೀ ಸಿನಿಮಾದಲ್ಲಿ ಶೋಕೇಸ್ ಆಗಿರುವುದು ಭಾರತೀಯ ವಾಯುಸೇನೆಯ (Indian airforce) ಮೈ ನವಿರೇಳಿಸುವ ಸಾಹಸಗಳ ಕಥೆ. ಅಲ್ಲಿ ತೀವ್ರವಾದ ಭಾವುಕತೆ ಇದೆ. ಕರುಳು ಹಿಂಡುವ ದೃಶ್ಯಗಳು ಇವೆ. ಸೈನಿಕರ ಕುಟುಂಬಗಳ ನೋವಿನ ಕಥೆ ಇದೆ. ಅಂತರವಾಹಿನಿ ಆದ ಪ್ರೇಮಕತೆ ಇದೆ. ಪಾಕಿಸ್ತಾನದ ಭಯೋತ್ಪಾದಕ ಸಂಸ್ಥೆಗಳು ನಡೆಸುವ ಕ್ರೌರ್ಯಗಳು ಇವೆ. ಎಲ್ಲಕ್ಕಿಂತ ಹೆಚ್ಚಾಗಿ ಹೆಜ್ಜೆ ಹೆಜ್ಜೆಗೂ ಭಾರತೀಯ ಸೈನಿಕರ ತ್ಯಾಗ, ಬಲಿದಾನಗಳ ಹೂರಣ ಇದೆ.
ಹಿಂದೆ ಬಂದ ಈ ರೀತಿಯ ಸೈನಿಕರ ಸಿನಿಮಾಗಳಿಗಿಂತ ಭಿನ್ನವಾದ, ಹೆಚ್ಚು ತಾಂತ್ರಿಕತೆ ಇರುವ ಮತ್ತು ಪವರ್ಫುಲ್ ಕಥೆ ಹೊಂದಿರುವ ಹಿಂದೀ ಸಿನಿಮಾ ಇದು. ಭಾರತೀಯ ಸಿನಿಮಾಗಳು ಹಾಲಿವುಡ್ ಮೇಕಿಂಗ್ ಸಿನಿಮಾಗಳನ್ನು ಮೀರಿಸುತ್ತಿತುವುದು ಕೂಡ ನಮಗೆ ಹೆಮ್ಮೆಯ ಸಂಗತಿ.
ವಾಯುಸೇನೆಯ ನಾಲ್ವರು ಡ್ರಾಗನ್ ಹೀರೋಗಳು
2019ರ ಪುಲ್ವಾಮಾ ದಾಳಿ, ಅದರ ನಂತರ ನಡೆದ ಬಾಲಾಕೋಟ್ ವಾಯುನೆಲೆಯ ಅಟ್ಯಾಕ್ ಇವುಗಳಿಂದ ಈ ಸಿನಿಮಾ ತೆರೆದುಕೊಳ್ಳುತ್ತದೆ. ಕುತಂತ್ರಿ ಪಾಕಿಸ್ಥಾನಕ್ಕೆ ಬುದ್ಧಿ ಕಲಿಸಲು ಭಾರತೀಯ ಸೇನೆಯು ರೂಪಿಸಿದ ನಾಲ್ಕು ಮಂದಿಯ ಡ್ರಾಗನ್ ಪಡೆ ಹೇಗೆ ಸೇಡು ತೀರಿಸಿಕೊಳ್ಳುತ್ತದೆ ಎಂಬುದೇ ಸಿನಿಮಾದ ರೋಮಾಂಚಕ ಕಥೆ. ಸಂಶೇರ್ ಪಟಾನೀಯಾ(ಪ್ಯಾಟೀ), ಮಿನಾಲ್ ಠಾಕೂರ್ (ಮಿನ್ನಿ), ಬಶೀರ್ (ಬಾಷ್), ಸರ್ತಾಜ್ ಸಿಂಘ್ (ತಾಜ್) ಈ ನಾಲ್ಕು ಸ್ಕ್ವಾಡ್ರನ್ ಲೀಡರ್ ರ‍್ಯಾಂಕ್ ಪಡೆದ ಈ ತಂಡವನ್ನು ರಚನೆ ಮಾಡಿದ ಸೇನಾ ಮುಖ್ಯಸ್ಥರು ಅವರಿಗೆ ಅತ್ಯಾಧುನಿಕ ಯುದ್ಧವಿಮಾನಗಳನ್ನು ಹಾರಿಸುವ ತರಬೇತಿ ಕೊಡುತ್ತಾರೆ. ಅದರಲ್ಲಿ ಇಬ್ಬರು ಯುದ್ಧಕೈದಿಗಳಾಗಿ ಪಾಕಿಸ್ತಾನದಲ್ಲಿ ಪಡುವ ಬವಣೆ, ಅವರನ್ನು ಹಿಂದೆ ತರಲು ಸೇನಾ ಮುಖ್ಯಸ್ಥರು ಪಡುವ ದಿಟ್ಟ ಹೋರಾಟ, ರೋಮಾಂಚಕಾರಿ ಆದ ಜಾಗ್ವಾರ್ ಮೊದಲಾದ ಯುದ್ಧ ವಿಮಾನಗಳ ಹಾರಾಟಗಳು ಇಲ್ಲಿ ರೋಮಾಂಚನ ಹುಟ್ಟಿಸುತ್ತವೆ.
ಸೈನಿಕರ ದಿನಚರಿ ಹೇಗೆ ಇರುತ್ತದೆ ? ಅವರು ಯಾವ ರೀತಿ ಯೋಚನೆ ಮಾಡುತ್ತಾರೆ? ಅವರ ಕುಟುಂಬಗಳ ಸಪೋರ್ಟ್ ಹೇಗೆ ಪಡೆಯುತ್ತಾರೆ? ಸೇನಾ ಅಧಿಕಾರಿಗಳು ಹೇಗೆ ಶಿಸ್ತು ರೂಪಿಸುತ್ತಾರೆ? ಇಂತಹ ಅದ್ಭುತ ಸಂಗತಿಗಳು ಈ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿವೆ. ಯುದ್ಧ ಕೈದಿಗಳನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಮತ್ತು ಅಲ್ಲಿನ ಸೇನೆಗಳು ಎಷ್ಟು ಕ್ರೂರವಾಗಿ ನಡೆಸಿಕೊಳ್ಳುತ್ತವೆ? ಮೊದಲಾದ ಸಂಗತಿಗಳ ಹಸಿ ಹಸಿ ದೃಶ್ಯಗಳ ಚಿತ್ರಣ ಈ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿವೆ. ಆಕಾಶದಲ್ಲಿ ಅತ್ಯಾಧುನಿಕ ಯುದ್ಧ ವಿಮಾನಗಳು ಸೌಂಡ್ ಮಾಡುತ್ತ ಹಾರುವುದನ್ನು ನೋಡುವಾಗ ರೋಮಾಂಚನ ಆಗುತ್ತದೆ. ಭಾರತದ ಸೈನಿಕರು ತನ್ನ ದೇಶಕ್ಕಾಗಿ ಯಾವ ರೀತಿಯ ಬಲಿದಾನಕ್ಕೆ ತವಕಿಸುತ್ತಾರೆ? ಜೈ ಹಿಂದ್ ಎಂಬ ಮಂತ್ರವು ಯಾವ ರೀತಿಯಲ್ಲಿ ಅವರ ರಕ್ತವನ್ನು ಬಿಸಿ ಮಾಡುತ್ತದೆ? ಮೊದಲಾದ ಘಟನೆಗಳನ್ನು ಈ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಪ್ರೇಕ್ಷಕರ ಮುಂದೆ ಇಡಲಾಗಿದೆ. ಸಿನೆಮಾದ ದ್ವಿತೀಯ ಭಾಗದಲ್ಲಿ ಬರುವ ವಂದೇ ಮಾತರಮ್ ಗೀತೆಯು ಉಂಟುಮಾಡುವ ಭಾವ ತೀವ್ರತೆಯನ್ನು ಥಿಯೇಟರ್ ಒಳಗೆ ಕೂತು ಅನುಭವಿಸಬೇಕು.
ಹೆಣ್ಣು ಮಕ್ಕಳು ಸೇನೆಗೆ ಸೇರುವುದೇ ಅಪರಾಧ ಎಂದು ಯೋಚನೆ ಮಾಡುವ ಅಪ್ಪ ಸಿನಿಮಾದ ಕೊನೆಯಲ್ಲಿ ಹೇಗೆ ಬದಲಾದರು? ಮಗಳ ಸಾಹಸದ ಕಥೆಗಳಿಂದ ಅವರು ಹೇಗೆ ಪ್ರಭಾವಿತರಾದರು? ಅಪ್ಪ, ಅಮ್ಮ ಮತ್ತು ಮಗಳ ಆ ಭಾವನಾತ್ಮಕ ದೃಶ್ಯವು ನಮಗೆ ಖಂಡಿತವಾಗಿ ಕಣ್ಣೀರು ತರಿಸುತ್ತದೆ. ಸಿದ್ಧಾರ್ಥ್ ಆನಂದ್ ಎಂಬ ಸಿನಿಮಾ ಮಾಂತ್ರಿಕ ಈ ಸಿನಿಮಾವನ್ನು ಲೆಜೆಂಡ್ ಮಾಡಿ ಬಿಟ್ಟಿದ್ದಾರೆ.
ಇದನ್ನೂ ಓದಿ: Raja Marga Column : ಮಾರ್ಕ್ಸ್ ಒಂದೇ ಮಾನದಂಡ ಅಲ್ಲ, ಮಕ್ಕಳಿಗೆ ಬೇಕು ಈ ನಾಲ್ಕು Qಗಳು!
ANIL KAPOOR GOATpic.twitter.com/EVl8S5bx5H https://t.co/RG5610mneL
— 𝙋𝙞𝙮𝙪𝙨𝙝 | 𝑭𝙄𝑮𝙃𝑻𝙀𝑹 ✈️ (@piyushizhere14) January 27, 2024
ಅಭಿನಯದಲ್ಲಿ ಎಲ್ಲರಿಗೂ ಪೂರ್ಣ ಅಂಕಗಳು
ಪ್ಯಾಟಿಯಾಗಿ ಹೃತಿಕ್ ರೋಷನ್ (Hritik Roshan) ಅವರ ಅಭಿನಯ ಮತ್ತು ಸ್ಕ್ರೀನ್ ಅಪಿಯರೆನ್ಸ್ ಎರಡೂ ಇಲ್ಲಿ ಅದ್ಭುತವಾಗಿದೆ. ಮಿನಾಲ್ ಆಗಿ ದೀಪಿಕಾ ಪಡುಕೋಣೆ (Deepika Padukone) ಇಲ್ಲಿ ತನ್ನ ಹಿಂದಿನ ಸಿನಿಮಾಗಳನ್ನು ಮೀರಿ ಅಭಿನಯ ಮಾಡಿದ್ದಾರೆ. ಇದುವರೆಗೆ ಆಕೆಯನ್ನು ಗ್ಲಾಮರ್ ಗೊಂಬೆಯಾಗಿ ನೋಡಿದ ಪ್ರೇಕ್ಷಕರಿಗೆ ಇಲ್ಲಿ ತಾನೆಷ್ಟು ಪ್ರಬುದ್ಧವಾದ ನಟಿ ಎನ್ನುವುದನ್ನು ಆಕೆ ಸಾಬೀತು ಪಡಿಸಿದ್ದಾರೆ. ಸೇನಾ ಮುಖ್ಯಸ್ಥರಾಗಿ ಅನಿಲ್ ಕಪೂರ್ ಇಲ್ಲಿ ಅಚ್ಚರಿಯ ಮೂಟೆಗಳನ್ನು ಹೊತ್ತು ತಂದಿದ್ದಾರೆ. ತನ್ನ ಮೊದಲ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿರುವ ವಿಲನ್ ರಿಶಬ್ ಶಾನಿ ಹೆಚ್ಚು ಇಂಪ್ರೆಸ್ ಮಾಡಿದ್ದಾರೆ. ಉಳಿದಂತೆ ಕರನ್ ಸಿಂಘ್, ಅಕ್ಷಯ್ ಒಬೆರಾಯ್ ಮೊದಲಾದ ನಟರು ಇಡೀ ಸಿನಿಮಾದ ಉದ್ದಕ್ಕೂ ಮಿಂಚಿದ್ದಾರೆ. ಕ್ಲಾಸಿಕ್ ಆದ ಸಂಭಾಷಣೆ ಇಡೀ ಸಿನೆಮಾದ ಹೈ ಲೈಟ್. ಜಮ್ಮು ಕಾಶ್ಮೀರದ ಸುಂದರವಾದ ಹೊರಾಂಗಣ ಕಣ್ಣಿಗೆ ಕಟ್ಟುತ್ತದೆ. ಹಾಡುಗಳು ತುಂಬಾ ಚೆನ್ನಾಗಿವೆ. ರೋಮನ್ ಚಿಬ್ ಎಂಬ ಮಾಜಿ ಸೇನಾಧಿಕಾರಿ ಬರೆದ ಕಥೆ ಇದು. ಅದರಿಂದಾಗಿ ಇಡೀ ಸಿನಿಮಾ ಪರಿಪೂರ್ಣತೆಗೆ ಹತ್ತಿರ ಇದೆ. ಕತೆಯಲ್ಲಿ ಫ್ಲೋ ಇದೆ. ಎಲ್ಲಿಯೂ ಫ್ಯಾಂಟಸಿ ಇಲ್ಲ. ಹೃತಿಕ್ ರೋಷನ್ ಮತ್ತು ದೀಪಿಕಾ ಕೆಮಿಸ್ಟ್ರಿ ಇಲ್ಲಿ ಅದ್ಭುತವಾಗಿ ವರ್ಕ್ ಆಗಿದೆ.
ಭಾರತವನ್ನು ಪ್ರೀತಿಸುವ ಮಂದಿ, ಸೇನೆಯ ಸಾಹಸಗಳನ್ನು ಇಷ್ಟಪಡುವವರು, ತೀವ್ರ ಭಾವುಕವಾದ ಸನ್ನಿವೇಶಗಳನ್ನು ಇಷ್ಟ ಪಡುವವರು ಈ ಸಿನಿಮಾ ನೋಡದಿದ್ದರೆ ಅದು ಮಹಾ ಪಾಪ. ಇಂತಹ ದೇಶಪ್ರೇಮದ ಮೆಗ್ನಮಾಪಸ್ ಸಿನಿಮಾ ನೀಡಿದ ಸಿದ್ಧಾರ್ಥ್ ಆನಂದ್ ಎಂಬ ನಿರ್ದೇಶಕನನ್ನು ಖಂಡಿತವಾಗಿ ನಾವು ಅಭಿನಂದಿಸಬೇಕು.