Site icon Vistara News

Rajya Sabha Election: ಕಾಂಗ್ರೆಸ್‌ಗೆ ಮೈತ್ರಿ ಅಭ್ಯರ್ಥಿ ಗುನ್ನ; ಕುಪೇಂದ್ರೆ ರೆಡ್ಡಿ ಸ್ಪರ್ಧೆ ಹಿಂದಿದೆ ಮಾಸ್ಟರ್‌ ಪ್ಲ್ಯಾನ್!

Rajya Sabha election Congress challenged by alliance candidate Political calculations begin

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ (Rajya Sabha Election) ಐದನೇ ಅಭ್ಯರ್ಥಿಯಾಗಿ, ಜೆಡಿಎಸ್ ಬಿಜೆಪಿ ಮೈತ್ರಿ (JDS- BJP) ಮೂಲಕ ಕುಪೇಂದ್ರ ರೆಡ್ಡಿ (D Kupendra Reddy) ಅಖಾಡಕ್ಕೆ ಇಳಿದಿದ್ದಾರೆ. ಗುರುವಾರ ನಾಮಪತ್ರ (Nomination) ಸಲ್ಲಿಸಲಿದ್ದಾರೆ. ಈ ಸ್ಪರ್ಧೆ ಮೂಲಕ ರಾಜ್ಯಸಭಾ ಕಣ ರಣರೋಚಕವಾಗಿದೆ. ಸೋಲು – ಗೆಲುವಿನ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ. ಕುಪೇಂದ್ರ ರೆಡ್ಡಿ ಅವರಿಗೆ ಗೆಲ್ಲುವುದಕ್ಕೆ 45 ಮತಗಳು ಬೇಕಿದೆ. ಆದರೆ, ಮೈತ್ರಿ ಪಕ್ಷಗಳ ಉಳಿಕೆ ಮತ 40 ಇರುವುದರಿಂದ ಬಾಕಿ 5 ಮತಗಳನ್ನು ಎಲ್ಲಿಂದ ತರುತ್ತಾರೆ ಎಂಬುದೇ ಈಗಿನ ಸವಾಲು ಹಾಗೂ ಕುತೂಹಲವಾಗಿದೆ.

ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕೆ ಇಳಿಸುವ ಮೂಲಕ ಕಾಂಗ್ರೆಸ್‌ಗೆ ಟೆನ್ಶನ್‌ ಕೊಡಲು ಬಿಜೆಪಿ ಮತ್ತು ಜೆಡಿಎಸ್‌ ಮುಂದಾಗಿದೆ. ಈ ಮೂಲಕ ರಾಜಕೀಯ ದಾಳವನ್ನು ಉರುಳಿಸಿದೆ. ಇಷ್ಟು ಸಮಯ ತಮ್ಮ ಮೂರು ಅಭ್ಯರ್ಥಿಗಳ ಗೆಲುವು ಸುಲಭ ಎಂದು ಅರಿತಿದ್ದ ಕಾಂಗ್ರೆಸ್‌ಗೆ ಈಗ ಹೊಸ ತಲೆನೋವು ಸೃಷ್ಟಿಯಾದಂತೆ ಆಗಿದೆ.

ಮೈತ್ರಿ ಪಕ್ಷಗಳ ಲೆಕ್ಕಾಚಾರಕ್ಕೆ ಈಗ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ತಲೆಬಿಸಿ ತಂದೊಡ್ಡಿದೆ. ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 45 ಮತಗಳ ಅವಶ್ಯಕತೆ ಇದೆ. ಕಾಂಗ್ರೆಸ್ ಮೂರನೇ ಅಭ್ಯರ್ಥಿ ಗೆಲ್ಲುವುದಕ್ಕೆ ಒಂದು ಮತ ಕಡಿಮೆ ಆಗುತ್ತದೆ. ದರ್ಶನ್ ಪುಟ್ಟಣ್ಣಯ್ಯ ಮತ ಹಾಕಿದರೆ ಮೂರನೇ ಅಭ್ಯರ್ಥಿ ಗೆಲುವು ಖಚಿತವಾಗಲಿದೆ. ಆದರೆ, ಹೈಕಮಾಂಡ್ ಸೂಚನೆಯಂತೆ ಕಾಂಗ್ರೆಸ್ ಮೊದಲ ಅಭ್ಯರ್ಥಿಗೆ 47 ಮತಗಳನ್ನು ಹಾಕಿಸಿದರೆ, ಮೂರನೇ ಅಭ್ಯರ್ಥಿಗೆ ಮೂರು ಮತಗಳ ಕೊರತೆ ಎದುರಾಗುತ್ತದೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಕ್ಷೇತರ ಶಾಸಕ ಜನಾರ್ದನ ರೆಡ್ಡಿ ಮತ್ತು ಗೌರಿಬಿದನೂರು ಶಾಸಕ ಕೆ.ಎಚ್.‌ ಪುಟ್ಟಸ್ವಾಮಿ ಗೌಡ ಅವರನ್ನು ಸಂಪರ್ಕ ಮಾಡುವ ಸಾಧ್ಯತೆ ಇದೆ.

ಏನಿದೆ ಲೆಕ್ಕಾಚಾರ? ಸಿಗಲಿದೆಯಾ ಮ್ಯಾಜಿಕ್‌ ನಂಬರ್?

ಬಿಜೆಪಿ ಮತ್ತು ಜೆಡಿಎಸ್ ಮತ ಸೇರಿದರೆ 85 (66+19) ಆಗಲಿದೆ. ಬಿಜೆಪಿ ಅಭ್ಯರ್ಥಿಗೆ 45 ಮತ ಹಾಕಿದರೆ, ಜೆಡಿಎಸ್ ಕುಪೇಂದ್ರ ರೆಡ್ಡಿಗೆ 40 ಮತ ಫಿಕ್ಸ್ ಆಗಲಿದೆ. ಒಂದು ವೇಳೆ ಜನಾರ್ದನ ರೆಡ್ಡಿ, ಪುಟ್ಟಸ್ವಾಮಿ ಗೌಡ, ದರ್ಶನ ಪುಟ್ಟಣ್ಣಯ್ಯ ಅವರ ಮತಗಳನ್ನು ಸೆಳೆದರೆ ಇನ್ನೂ ಎರಡು ಮತಗಳ ಕೊರತೆ ಎದುರಾಗುತ್ತದೆ. ಹೀಗಾಗಿ ಕಾಂಗ್ರೆಸ್‌ನ ಎರಡು ಶಾಸಕರ ಮತ ಗಳಿಸುವಲ್ಲಿ ಕುಪೇಂದ್ರ ರೆಡ್ಡಿ ಯಶಸ್ವಿಯಾದರೆ ಗೆಲುವು ಸುಲಭವಾಗುತ್ತದೆ. ಹೀಗಾಗಿ ಅಚ್ಚರಿ ರೂಪದಲ್ಲಿ ಕುಪೇಂದ್ರ ರೆಡ್ಡಿ ಗೆದ್ದು ಬೀಗಲೂಬಹುದಾಗಿದೆ.

ಗಾಲಿ ಜನಾರ್ದನ ರೆಡ್ಡಿ ಜತೆ ಈಗಾಗಲೇ ಜೆಡಿಎಸ್‌ ನಾಯಕರು ಮಾತುಕತೆ ನಡೆಸಿದ್ದಾರೆ. ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಗೂ ಕುಪೇಂದ್ರ ರೆಡ್ಡಿ ಮಾತುಕತೆ ನಡೆಸಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ, ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿಗೌಡ ಅವರ ಜತೆಗೂ ಮಾತುಕತೆ ಮುಂದಾಗಲಾಗುತ್ತಿದೆ ಎಂದು ತಿಳಿದು ಬಂದಿದೆ.

ಜೆಡಿಎಸ್ ಶಾಸಕ ಶರಣ್ ಗೌಡ ಕುಂದಕೂರ್ ಅವರು ಮೈತ್ರಿಯನ್ನು ಈಗಾಗಲೇ ವಿರೋಧಿಸಿದ್ದರಿಂದ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಪರ ಮತದಾನ ಮಾಡುವುದು ಅನುಮಾನ ಎನ್ನಲಾಗಿದೆ. ಇತ್ತ ಬಿಜೆಪಿಯಲ್ಲಿಯೂ ಎರಡು ಮತಗಳ ಟೆನ್ಶನ್‌ ಇದ್ದೇ ಇದೆ. ಮಾಜಿ ಸಚಿವರು, ಹಾಲಿ ಶಾಸಕರಾದ ಎಸ್‌.ಟಿ. ಸೋಮಶೇಖರ್ ಹಾಗೂ ಶಿವಾರಾಂ ಹೆಬ್ಬಾರ್‌ ಅವರ ಬಗ್ಗೆ ಭಯ ಇದೆ. ಆದರೆ, ಚುನಾವಣೆ ಆಗಿ ಇನ್ನೂ ಎಂಟು ತಿಂಗಳು ಮಾತ್ರವೇ ಆಗಿರುವುದರಿಂದ ಅವರು ಅಡ್ಡ ಮತದಾನ ಮಾಡುವುದು ಅನುಮಾನ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ನಡೆ ತೀವ್ರ ಕುತೂಹಲವನ್ನು ಪಡೆದುಕೊಂಡಿದೆ.

ಎಚ್‌ಡಿಕೆ ಕಚೇರಿಯಲ್ಲಿ ಸಭೆ

ಈ ಸಂಬಂಧ ವಿಧಾನಸೌಧದಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಕುಪೇಂದ್ರ ರೆಡ್ಡಿ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ. ಸಭೆಗೆ ಶಾಸಕ ಸತೀಶ್ ರೆಡ್ಡಿ ಆಗಮಿಸಿದ್ದು, ಎಚ್.ಡಿ. ಕುಮಾರಸ್ವಾಮಿ, ಕುಪೇಂದ್ರ ರೆಡ್ಡಿ, ಜಿ.ಟಿ ದೇವೇಗೌಡ ಸೇರಿ ಹಲವು ಶಾಸಕರು ಭಾಗಿಯಾಗಿದ್ದಾರೆ. ಕಾಂಗ್ರೆಸ್‌ನ ಯಾವ ಶಾಸಕರಿಗೆ ಗಾಳ ಹಾಕಬೇಕು ಎಂಬ ಕುರಿತು ಇಲ್ಲಿ ಚರ್ಚೆಯನ್ನು ನಡೆಸಲಾಗಿದೆ.

ಇದನ್ನೂ ಓದಿ: Yuva Nidhi Scheme: ಯುವ ನಿಧಿ ಹಣ ಬೇಕಿದ್ದರೆ ಪ್ರತಿ ತಿಂಗಳು ಸೆಲ್ಫ್‌ ಡಿಕ್ಲರೇಷನ್‌ ಕಡ್ಡಾಯ!

ಅಡ್ಡಗೋಡೆ ಮೇಲೆ ದೀಪ ಇಟ್ಟ ಎಚ್‌ಡಿಕೆ

ಈ ಬಗ್ಗೆ ಮಾಧ್ಯಮದವರಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನವಾಗಿದೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರ ಎಲ್ಲರ ಸಲಹೆ ಮೇರೆಗೆ ಬಿಜೆಪಿ, ಜೆಡಿಎಸ್‌ನ ಎನ್‌ಡಿಎ ಅಭ್ಯರ್ಥಿ ಆಗಿ ಕುಪೇಂದ್ರ ರೆಡ್ಡಿ ಅವರನ್ನು ಚುನಾವಣಾ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಈಗ ಇರುವ ಸಂಖ್ಯೆ ಎಲ್ಲರಿಗೂ ಗೊತ್ತಿದೆ. ಚುನಾವಣೆಯಲ್ಲಿ ಏನು ನಿರ್ಧಾರ ಆಗಲಿದೆ ನೋಡೋಣ. ಬಿಜೆಪಿಗೆ ಒಬ್ಬ ಅಭ್ಯರ್ಥಿ ಮತ ಬೇಕಿದೆ. ಅವರಲ್ಲಿ ಹೆಚ್ಚಿನ ಮತ ಇದೆ. ನಮ್ಮಲ್ಲಿಯೂ ಮತ ನಷ್ಟ ಆಗಬಾರದು ಅಂತ ಹೊಂದಾಣಿಕೆಯಲ್ಲಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದೇವೆ‌. ಏನಾಗಲಿದೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದರು.

Exit mobile version