ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ವಿಧಾನಸಭೆಯಲ್ಲಿ (Vidhan Sabha) ಮಂಗಳವಾರ ನಡೆ ರಾಜ್ಯಸಭೆ ಚುನಾವಣೆ (Rajya Sabha Election Result 2024) ಮತದಾನದ ಸಂದರ್ಭ ದೊಡ್ಡದೊಂದು ಪ್ರಹಸನವೇ ನಡೆದಿದ್ದು, ಆಡಳಿತ ಪಕ್ಷ ಕಾಂಗ್ರೆಸ್ (Congress) ಬಹುಮತ ಹೊಂದಿದ್ದರೂ ಬಿಜೆಪಿ (BJP) ಅಭ್ಯರ್ಥಿ ಗೆದ್ದಿದ್ದಾರೆ. 9 ಕಾಂಗ್ರೆಸ್ ಶಾಸಕರು ಅಡ್ಡ ಮತ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇಲ್ಲಿ ಒಂದು ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರು ಬಿಜೆಪಿಯ ಅಭ್ಯರ್ಥಿ ಹರ್ಷ್ ಮಹಾಜನ್ ಅವರನ್ನು ಎದುರಿಸಿದ್ದರು. ಹರ್ಷ ಮಹಾಜನ್ ಗೆದ್ದಿದ್ದಾರೆ. ಒಂಬತ್ತು ಕಾಂಗ್ರೆಸ್ ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎನ್ನಲಾಗಿದೆ. ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಅಪಹರಿಸಿದ್ದಾರೆ ಎಂದು ಸಿಎಂ ಸುಖು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಸರ್ಕಾರ ವಿಧಾನಸಭೆಯಲ್ಲಿ ಬಹುಮತವನ್ನು ಕಳೆದುಕೊಂಡಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಸಿಂಘ್ವಿಗೆ ಮತ ಹಾಕುವಂತೆ ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿತ್ತು. ಆಡಳಿತಾರೂಢ ಪಕ್ಷವು ತಮ್ಮ ಸದಸ್ಯರ ಮೇಲೆ ಒತ್ತಡ ಹೇರಲು ವಿಪ್ ಜಾರಿ ಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು. ಶಾಸಕರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದಾರೆ ಮತ್ತು ಅದರ ಪ್ರಕಾರ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ ಎಂದು ಸಮರ್ಥಿಸಿಕೊಂಡಿತ್ತು. ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕಾಂಗ್ರೆಸ್ ನೀಡಿರುವ ಮೂರು ಸಾಲಿನ ವಿಪ್ ಬಗ್ಗೆ ಗಮನ ಸೆಳೆದಿರುವ ಬಿಜೆಪಿ ಅಭ್ಯರ್ಥಿ ಮಹಾಜನ್, ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಕಳುಹಿಸಿದ್ದಾರೆ.
ಇಂತಹ ವಿಪ್ ಅನೈತಿಕ ಮಾತ್ರವಲ್ಲ, ರಾಜ್ಯಸಭೆಗೆ ಚುನಾವಣೆ ನಡೆಸುವುದರ ವಿರುದ್ಧವೂ ಆಗಿದೆ. ಇದು ಶಾಸಕರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಮಹಾಜನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಗೆದ್ದಿದ್ದು ಹೇಗೆ?
68 ಶಾಸಕರ ಪೈಕಿ 40 ಶಾಸಕರು ಮತ್ತು ಮೂವರು ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಕಾಂಗ್ರೆಸ್ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತವನ್ನು ಹೊಂದಿದೆ. 25 ಶಾಸಕರನ್ನು ಹೊಂದಿರುವ ಬಿಜೆಪಿ ನಂಬರ್ ಗೇಮ್‌ನಲ್ಲಿ ಹಿಂದಿದೆ. ಆದರೆ ಸಿಂಘ್ವಿ ವಿರುದ್ಧ ಮಹಾಜನ್ ಅವರನ್ನು ಕಣಕ್ಕಿಳಿಸಿತು.
6 ಕಾಂಗ್ರೆಸ್ ಶಾಸಕರು ಮತ್ತು 3 ಸ್ವತಂತ್ರ ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ಸಿಎಂ ಸುಖು ಹೇಳಿದ್ದಾರೆ. “ಒಂಬತ್ತು ಅಡ್ಡ-ಮತದಾನಗಳು ನಡೆದಿವೆ. ಅವರಲ್ಲಿ ಮೂವರು ಸ್ವತಂತ್ರ ಶಾಸಕರು. ಆದರೆ ಆರು ಇತರ ಶಾಸಕರು ತಮ್ಮ ಪ್ರಾಮಾಣಿಕತೆಯನ್ನು ಮಾರಿಕೊಂಡಿದ್ದಾರೆ. ಅಭಿಷೇಕ್ ಸಿಂಘ್ವಿ ವಿರುದ್ಧ ಮತ ಚಲಾಯಿಸಿದ್ದಾರೆ” ಎಂದಿದ್ದಾರೆ.
ಇಬ್ಬರೂ ಅಭ್ಯರ್ಥಿಗಳು ತಲಾ 34 ಮತಗಳನ್ನು ಪಡೆದರು. ಹೀಗಾಗಿ ಫಲಿತಾಂಶವನ್ನು ಲಾಟರಿ ಎತ್ತುವುದರ ಮೂಲಕ ನಿರ್ಧರಿಸಲಾಯಿತು.
ಮತ ಚಲಾಯಿಸಿದ ಬಳಿಕ ಸುಖು, ಶಾಸಕರು ಪಕ್ಷದ ಸಿದ್ಧಾಂತದಂತೆ ಮತ ಚಲಾಯಿಸಿದ್ದಾರೆ ಎಂದರು. “ರಾಜ್ಯ ವಿಧಾನಸಭೆಯಲ್ಲಿ ನಮ್ಮ 40 ಶಾಸಕರಿದ್ದಾರೆ. ಬಿಜೆಪಿ ನಮ್ಮ ಶಾಸಕರನ್ನು ಖರೀದಿಸದಿದ್ದರೆ ನಾವು ಎಲ್ಲಾ ಮತಗಳನ್ನು ಪಡೆಯುತ್ತೇವೆ” ಎಂದು ಅವರು ಹೇಳಿದ್ದರು. ನಂತರ, ತಮ್ಮ ಪಕ್ಷದ ಆರು ಶಾಸಕರು ಅಜ್ಞಾತರಾಗಿ ಹೋಗಿದ್ದಾರೆ. ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಅಪಹರಿಸಿದ್ದಾರೆ ಎಂದು ಸುಖು ಆರೋಪಿಸಿದ್ದಾರೆ.
ಕಾಂಗ್ರೆಸ್ ಶಾಸಕ ಬಬ್ಲೂ ಅವರನ್ನು ಕರೆತರಲು ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಕಳುಹಿಸಲಾಗಿದೆ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಅವರ ಮತವನ್ನು ಎಣಿಕೆ ಮಾಡಬಾರದು ಎಂದು ಪ್ರತಿಪಕ್ಷದ ನಾಯಕ ಜೈ ರಾಮ್ ಠಾಕೂರ್ ಪ್ರತಿಪಾದಿಸಿದರು. ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಜೈ ರಾಮ್ ಠಾಕೂರ್ ಹೇಳಿಕೊಂಡಿದ್ದು, ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಈ ನಡುವೆ, ಹಿಮಾಚಲ ಪ್ರದೇಶದ ಕೆಲವು ಕಾಂಗ್ರೆಸ್ ಶಾಸಕರು ಮತ್ತು ಸ್ವತಂತ್ರ ಶಾಸಕರು ಹರಿಯಾಣದ ಪಂಚಕುಲ ಸೆಕ್ಟರ್ 1ನಲ್ಲಿರುವ PWD ವಿಶ್ರಾಂತಿ ಗೃಹವನ್ನು ತಲುಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ, ರಾಜ್ಯದಲ್ಲಿ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯವನ್ನು ತರಬಹುದು ಎಂಬ ಊಹಾಪೋಹ ಶುರುವಾಗಿದೆ.
ಈ ನಡುವೆ, ಉತ್ತರ ಪ್ರದೇಶದಲ್ಲಿ 10, ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ ನಡೆದ ರಾಜ್ಯಸಭೆ ಚುನಾವಣೆ ಫಲಿತಾಂಶ (Rajya Sabha Election Result 2024) ಪ್ರಕಟಿಸಲಾಗಿದೆ. ಉತ್ತರ ಪ್ರದೇಶದಲ್ಲಿ 10ರಲ್ಲಿ 8 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಉಳಿದೆರಡು ಸಮಾಜವಾದಿ ಪಕ್ಷದ ಪಾಲಾಯಿತು. ಕರ್ನಾಟಕದಲ್ಲಿ, ಕಾಂಗ್ರೆಸ್ ಮಂಗಳವಾರ ರಾಜ್ಯಸಭೆಯಲ್ಲಿ ಸ್ಪರ್ಧಿಸಿದ ಎಲ್ಲಾ ಮೂರು ಸ್ಥಾನಗಳನ್ನು ಗೆದ್ದುಕೊಂಡಿತು. ಭಾರತೀಯ ಜನತಾ ಪಕ್ಷವು ಒಂದು ಸ್ಥಾನವನ್ನು ಪಡೆದುಕೊಂಡಿತು.
ಇದನ್ನೂ ಓದಿ: Rajya Sabha Election Result 2024: ರಾಜ್ಯಸಭೆ ಚುನಾವಣಾ ಫಲಿತಾಂಶ: ಉತ್ತರ ಪ್ರದೇಶದಲ್ಲಿ 10ರಲ್ಲಿ 8 ಸ್ಥಾನ ಗೆದ್ದ ಬಿಜೆಪಿ