Site icon Vistara News

Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

Ram Navami

ಪ್ರತಿ ವರ್ಷದಂತೆ ಈ ಬಾರಿಯು ಭಗವಾನ್ ಶ್ರೀ ರಾಮನ (sriram) ಜನ್ಮ ದಿನವಾದ ರಾಮ ನವಮಿ (Ram Navami) ಮತ್ತೆ ಬಂದಿದೆ. ದೇಶಾದ್ಯಂತ ರಾಮ ನವಮಿ ಉತ್ಸವಕ್ಕೆ ರಾಮ ಭಕ್ತರು ಸಜ್ಜಾಗಿದ್ದಾರೆ. ರಾಮ ಮಂದಿರಗಳನ್ನೂ (ram mandir) ಸುಂದರವಾಗಿ ಅಲಂಕರಿಸಿ ಅತ್ಯಂತ ವೈಭವದಿಂದ ಉತ್ಸವವನ್ನು ಆಚರಿಸಲು ಸಿದ್ದತೆಗಳು ಭರದಿಂದ ಸಾಗುತ್ತಿದೆ.

ರಾಮ ನವಮಿಯಂದು ಸಾಮಾನ್ಯವಾಗಿ ರಾಮ ಭಕ್ತರು (Ram Bhaktas) ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಉಪವಾಸ (fasting) ವ್ರತವನ್ನು ಆಚರಿಸುತ್ತಾರೆ. ದೇವಾಲಯಗಳಲ್ಲಿ (temple) ಆಧ್ಯಾತ್ಮಕ ಪ್ರವಚನ, ಭಜನೆ, ಸಂಕೀರ್ತನೆಗಳನ್ನು ಆಯೋಜಿಸಲಾಗುತ್ತದೆ. ತೊಟ್ಟಿಲಲ್ಲಿ ಪುಟ್ಟ ರಾಮನನ್ನು ಇಟ್ಟು ತೂಗಿ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಈ ದಿನ ಎಲ್ಲರೂ ರಾಮನ ಭಕ್ತಿಯಲ್ಲಿ ಮಿಂದೇಳುತ್ತಾರೆ.

ರಾಮ ನವಮಿ ಆಚರಣೆ ಯಾವಾಗ?

ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಜನಿಸಿದ್ದಾನೆ. ಹೀಗಾಗಿ ಹಿಂದೂ ಚಾಂದ್ರಮಾನ ಪಂಚಾಂಗದಲ್ಲಿ ಬರುವ ಏಪ್ರಿಲ್ 17 ಬುಧವಾರದಂದು ರಾಮನವಮಿಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ:

ರಾಮ ನವಮಿ ದಿನ ಮಧ್ಯಾಹ್ನ ಗಂಟೆ 11.03 ರಿಂದ 1.38 ವಿಶೇಷವೆಂದು ಪರಿಗಣಿಸಲಾಗಿದೆ. ರಾಮ ನವಮಿ ತಿಥಿಯು ಏಪ್ರಿಲ್ 16ರಂದು ಬೆಳಗ್ಗೆ 1.23ಕ್ಕೆ ಪ್ರಾರಂಭವಾಗಿ ಏಪ್ರಿಲ್ 17ರಂದು ರಾತ್ರಿ 3.14 ಕ್ಕೆ ಮುಕ್ತಾಯವಾಗುತ್ತದೆ.

ರಾಮ ನವಮಿಯ ಇತಿಹಾಸವೇನು?

ಹಿಂದೂ ಪುರಾಣಗಳಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿಯೆಂದೇ ಪರಿಗಣಿಸಲ್ಪಟ್ಟಿರುವ ಭಗವಾನ್ ರಾಮನ ರಾಮ ನವಮಿಯಂದು ಜನ್ಮ ತಾಳಿದ್ದನು. ಹಿಂದೂ ಕ್ಯಾಲೆಂಡರ್‌ನಲ್ಲಿ ಸಾಂಪ್ರದಾಯಿಕವಾಗಿ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮ ನವಮಿಯನ್ನು ಆಚರಿಸಲಾಗುತ್ತದೆ. ಶ್ರೀರಾಮನು ವಿಷ್ಣುವಿನ ಏಳನೇ ಅವತಾರವೆಂದು ನಂಬಲಾಗುತ್ತದೆ. ಸದಾಚಾರ ಮತ್ತು ಸದ್ಗುಣಗಳ ಪ್ರತಿಪಾದಕನೆಂದು ರಾಮನನ್ನು ಕರೆಯಲಾಗುತ್ತದೆ. ಅನೇಕ ಶತಮಾನಗಳಿಂದ ರಾಮ ನವಮಿಯನ್ನು ಅತ್ಯಂತ ವೈಭವಾಗಿ ಆಚರಿಸಲಾಗುತ್ತದೆ.

ರಾಮ ನವಮಿ ಆಚರಣೆ ಏಕೆ ?

ಪ್ರಪಂಚದಾದ್ಯಂತದ ಹಿಂದೂಗಳು ಅಪಾರ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ. ರಾಮ ನವಮಿಯು ಧರ್ಮ ಅಥವಾ ಸದಾಚಾರದ ನಿರಂತರ ಮೌಲ್ಯಗಳನ್ನು ಗೌರವಿಸುವ ಆಚರಣೆಯಾಗಿದೆ. ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಇದು ಸೂಚಿಸುತ್ತದೆ. ಭಗವಾನ್ ರಾಮನ ಕರ್ತವ್ಯ, ಗೌರವ ಮತ್ತು ತ್ಯಾಗದ ಉದಾಹರಣೆಯು ಜನರಲ್ಲಿ ನೈತಿಕ ತತ್ತ್ವ ಗಳನ್ನು ಸಂರಕ್ಷಿಸಲು ಮತ್ತು ಸದ್ಗುಣಶೀಲ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ.

ಹೇಗೆ ಆಚರಣೆ ?

ರಾಮ ನವಮಿಯನ್ನು ಭಾರತದಲ್ಲಿ ಜನರು ಬಹಳ ಉತ್ಸಾಹ ಮತ್ತು ಆಸಕ್ತಿಯಿಂದ ಆಚರಿಸುತ್ತಾರೆ. ಭಗವಾನ್ ರಾಮನ ಸಣ್ಣ ವಿಗ್ರಹವನ್ನು ಪೀಠದ ಮೇಲೆ ಇರಿಸಲಾಗುತ್ತದೆ. ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಅಲಂಕರಿಸಲಾಗುತ್ತದೆ. ಮನೆ ಬಾಗಿಲಲ್ಲಿ ರಂಗೋಲಿಗಳನ್ನು ಬರೆಯಲಾಗುತ್ತದೆ. ಭಗವಾನ್ ರಾಮನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಉಪವಾಸ, ಮೆರವಣಿಗೆ, ಮಹಾಕಾವ್ಯ ರಾಮಾಯಣ ಪಠಿಸುವುದು ಮತ್ತು ಕೇಳುವುದು, ಹವನಗಳಂತ ವಿವಿಧ ಆಚರಣೆಗಳಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ರಾಮ ನವಮಿಯು ಒಂಬತ್ತು ದಿನಗಳ ಚೈತ್ರ ನವರಾತ್ರಿ ಉತ್ಸವದ ಅಂತ್ಯವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಜಾತಿ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಮೀರಿ ಎಲ್ಲ ಸಮುದಾಯಗಳು ಏಕತೆ ಮತ್ತು ಸಾಮರಸ್ಯದಿಂದ ಹಬ್ಬದಲ್ಲಿ ಪಾಲ್ಗೊಳ್ಳುತ್ತದೆ.

ಅಯೋಧ್ಯೆಯತ್ತ ಎಲ್ಲರ ಚಿತ್ತ

ಉತ್ತರಪ್ರದೇಶದ ಅಯೋಧ್ಯೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಯಾಕೆಂದರೆ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಬಳಿಕ ಮೊದಲ ಬಾರಿಗೆ ಹೊಸ ಮಂದಿರದಲ್ಲಿ ರಾಮನ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಈಗಾಗಲೇ ಇಲ್ಲಿ ಸಾಕಷ್ಟು ತಯಾರಿಗಳು ನಡೆದಿದ್ದು, ವಿಶ್ವದ ಗಮನ ಸೆಳೆದಿದೆ. ಹೊರದೇಶಗಳಲ್ಲೂ ಆಚರಣೆ ರಾಮ ಜನ್ಮದಿನವನ್ನು ಭಾರತದಲ್ಲಿ ಮಾತ್ರವಲ್ಲ ನೇಪಾಳ, ಬಾಂಗ್ಲಾದೇಶದ ಹಿಂದೂಗಳೂ ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಉತ್ತರ ಅಮೆರಿಕ ಮತ್ತು ಯುರೋಪ್ ನ ಕೆಲವು ರಾಷ್ಟ್ರಗಳಲ್ಲೂ ರಾಮನವಮಿಯನ್ನು ಆಚರಿಸಲಾಗುತ್ತದೆ.

Exit mobile version