Site icon Vistara News

Ram Navami 2024: ರಾಮ ನವಮಿಯನ್ನು ವಿಶೇಷವಾಗಿ ಆಚರಿಸುವ ಟಾಪ್‌ 5 ಸ್ಥಳಗಳಿವು

Rama Navami

ಬೆಂಗಳೂರು: ರಾಮ ನವಮಿಯನ್ನು (Rama Navami) ಶ್ರೀರಾಮನ ಜನ್ಮದಿನವೆಂದು ಆಚರಿಸಲಾಗುತ್ತದೆ. ರಾಜ ದಶರಥ ಮತ್ತು ರಾಣಿ ಕೌಸಲ್ಯ ದೇವಿಯ ಪುತ್ರನಾಗಿ ಶ್ರೀವಿಷ್ಣುವು ಶ್ರೀರಾಮನ ಅವತಾರದಲ್ಲಿ ದುಷ್ಟ ರಾವಣನನ್ನು ಸಂಹಾರ ಮಾಡಲು ಈ ದಿನ ಭೂಮಿಯ ಮೇಲೆ ಜನ್ಮ ತಾಳಿದನು ಎಂದು ನಂಬಲಾಗಿದೆ. ಹಾಗಾಗಿ ಏಪ್ರಿಲ್ 17ರಂದು ಭಾರತದಾದ್ಯಂತ ರಾಮನವಮಿಯನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಆದರೆ ದೇಶದ ಈ ಕೆಲವು ಸ್ಥಳಗಳಲ್ಲಿ ರಾಮನವಮಿಯನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಆ ಸ್ಥಳಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಉತ್ತರ ಪ್ರದೇಶದ ಅಯೋಧ್ಯೆ

ಭಗವಾನ್ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದೆ. ಇಲ್ಲಿ ರಾಮ ನವಮಿಯನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಅಯೋಧ್ಯೆ ಧಾಮದಲ್ಲಿ ರಾಮನವಮಿ ಮೇಳವನ್ನು ನಡೆಸಲಾಗುತ್ತಿದ್ದು, ಇದು ಸುಮಾರು 25 ಲಕ್ಷ ಭಕ್ತರನ್ನು ಸೆಳೆಯುವ ನಿರೀಕ್ಷೆಯಿದೆ ಎನ್ನಲಾಗಿದೆ. ಜೊತೆಗೆ ಹನುಮಾನ್ ಗಢಿ ಮತ್ತು ಕನಕ ಭವನದಂತಹ ಇತರ ದೇವಾಲಯಗಳಿಗೂ ನೀವು ಭೇಟಿ ನೀಡಬಹುದು. ರಾಮ ಮಂದಿರ ಆವರಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬಿಹಾರದ ಸೀತಾ ಮಢಿ

ಸೀತಾ ಮಾತೆಯ ಜನ್ಮ ಸ್ಥಳವಾಗಿ ಪೂಜೆ ಮಾಡಲಾಗುತ್ತಿರುವ ಬಿಹಾರದ ಸೀತಾ ಮಢಿಯು ರಾಮಭಕ್ತರಿಗೆ ರಾಮ ನವಮಿಯನ್ನು ಆಚರಿಸಲು ಇರುವ ವಿಶೇಷ ಸ್ಥಳವಾಗಿದೆ. ಇಲ್ಲಿನ ಜಾನಕಿ ಮಂದಿರದಲ್ಲಿ ರಾಮನವಮಿಯನ್ನು ಬಹಳ ವಿಶೇಷವಾಗಿ ಉತ್ಸಾಹದಿಂದ ಆಚರಿಸುತ್ತಾರೆ. ಈ ದಿನ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಈ ದಿನ ಮಂದಿರವನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ.

ತೆಲಂಗಾಣದ ಭದ್ರಾಚಲಂ

‘ದಕ್ಷಿಣದ ಅಯೋಧ್ಯೆ’ ಎಂದು ಕರೆಯಲ್ಪಡುವ ತೆಲಂಗಾಣದ ಭದ್ರಾಚಲಂನಲ್ಲಿರುವ ಸೀತಾ ರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ರಾಮನವಮಿಯನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. ಇಲ್ಲಿ ರಾಮ ನವಮಿಯನ್ನು ರಾಮನು ಸೀತಾಮಾತೆಯನ್ನು ವಿವಾಹವಾದ ದಿನ ಎಂದು ಆಚರಿಸಲಾಗುತ್ತದೆ. ಹಾಗಾಗಿ ಈ ದಿನ ದೇವಾಲಯದಲ್ಲಿ ವಿವಾಹ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಹಾಗೆಯೇ ಸಂಪ್ರದಾಯದ ಭಾಗವಾಗಿ ದೈವಿಕ ದಂಪತಿಗಳಿಗೆ ವಸ್ತ್ರಗಳು ಮತ್ತು ಮುತ್ಯಾಲ ತಾಳಂಬ್ರಲು ನೀಡಲಾಗುತ್ತದೆ. ಈ ದಿನ ದೇವಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಪ್ರವಚನಗಳು ಮತ್ತು ದೇವತೆಗಳ ಭವ್ಯವಾದ ಮೆರವಣಿಗೆ ನಡೆಯುತ್ತದೆ.

ತಮಿಳುನಾಡಿನ ರಾಮೇಶ್ವರಂ

ರಾಮೇಶ್ವರಂನಲ್ಲಿ ರಾವಣನಿಂದ ಸೀತೆಯನ್ನು ರಕ್ಷಿಸಲು ರಾಮನು ಶ್ರೀಲಂಕಾವನ್ನು ತಲುಪಲು ಸೇತುವೆಯನ್ನು ನಿರ್ಮಿಸಿದನ್ನು ನಂಬಲಾಗಿದೆ. ಇಲ್ಲಿನ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ರಾಮನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದು ರಾವಣನನ್ನು ಕೊಂದ ಪಾಪ ವಿಮೋಚನೆಗಾಗಿ ರಾಮನು ಶಿವನನ್ನು ಪೂಜಿಸಿದ ಸ್ಥಳ ಎನ್ನಲಾಗುತ್ತದೆ.

ಇದನ್ನೂ ಓದಿ: Theft Case : ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌; ರಾತ್ರಿಯಲ್ಲಿ ಬೈಕ್ ಕದಿಯುವ ಕಳ್ಳ

ತಮಿಳುನಾಡಿನ ಕೊಯಮತ್ತೂರು

ಇಲ್ಲಿನ ಅರುಲ್ಮಿಗು ಕೋದಂಡರಾಮರ ದೇವಸ್ಥಾನದಲ್ಲಿ ಬೆಳಗ್ಗೆ ಸೂರ್ಯದೇವನಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತ ರಾಮನವಮಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಲ್ಲಿ ಅಂದು ರಾಮಾಯಣ ಮತ್ತು ರಾಮಚರಿತಮಾನಸದಂತಹ ಪವಿತ್ರ ಗ್ರಂಥಗಳ ಪಠಣಗಳು, ಉತ್ಸವವನ್ನು ಒಳಗೊಂಡ ಮೆರವಣಿಗೆ ಇತ್ಯಾದಿ ವಿಶೇಷ ಆಚರಣೆಗಳನ್ನು ಮಾಡಲಾಗುತ್ತದೆ. ಹಾಗೆಯೇ ಭಕ್ತರಿಗೆ ಹಣ್ಣುಗಳು ಮತ್ತು ಸಿಹಿ ತಿಂಡಿಗಳನ್ನು ಧಾರಾಳವಾಗಿ ವಿತರಿಸಲಾಗುತ್ತದೆ.

Exit mobile version