ಹೊಸದಿಲ್ಲಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ (Silkyara tunnel) ಸಿಲುಕಿದ್ದ ಕಾರ್ಮಿಕರನ್ನು ಹೊರತೆಗೆಯಲು ಪ್ರಾಣ ಪಣವಿಟ್ಟು ಇಲಿ- ಬಿಲ ಕೊರೆತದ ಕಾರ್ಯಾಚರಣೆ ನಡೆಸಿದ ರ್‍ಯಾಟ್ ಹೋಲ್ ಮೈನರ್ (Rat hole miner) ಒಬ್ಬನ ಮನೆಯನ್ನು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ (Delhi development Authority) ನೆಲಸಮ (home demolition) ಮಾಡಿದೆ.
ಇಲಿ-ಬಿಲ ಗಣಿಗಾರರಲ್ಲಿ ಒಬ್ಬರಾದ ವಕೀಲ್ ಹಸನ್ (Wakeel Hassan) ಅವರ ಮನೆಯನ್ನು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನೆಲಸಮ ಮಾಡಿದ್ದಾರೆ. ಕಳೆದ ನವೆಂಬರ್‌ನಲ್ಲಿ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ಈತ ನೆರವಾಗಿದ್ದರು. ದೆಹಲಿ ಅಭಿವೃದ್ಧಿ ಪ್ರಾಧಿಕಾರ ನಡೆಸಿದ ನೆಲಸಮ ಕಾರ್ಯಾಚರಣೆಯಲ್ಲಿ ಈತನ ಮನೆಯನ್ನೂ ಧ್ವಂಸಗೊಳಿಸಲಾಗಿದೆ. ಈಶಾನ್ಯ ದೆಹಲಿಯ ಖಜೂರಿ ಖಾಸ್‌ನಲ್ಲಿ ಈತನ ಮನೆಯಿತ್ತು.
ಡಿಡಿಎ ಅಧಿಕಾರಿಗಳ ಪ್ರಕಾರ, ಸಾಕಷ್ಟು ಪೂರ್ವ ಸೂಚನೆ ನೀಡಿದ ನಂತರವೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಮನೆಗಳು ಅಕ್ರಮ ರಚನೆಗಳಾವೆ ಎಂದಿದೆ. “ಫೆಬ್ರವರಿ 28ರಂದು ಖಜೂರಿ ಖಾಸ್ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಅಕ್ರಮವಾಗಿ ರಚಿಸಿದ ಮನೆಗಳನ್ನು ನಾಶ ಮಾಡಲಾಗಿದೆ. ಇದು ಅಭಿವೃದ್ಧಿಗಾಗಿ ಯೋಜಿಸಲಾದ ಜಮೀನು” ಎಂದು ಡಿಡಿಎ ಹೇಳಿಕೆಯಲ್ಲಿ ತಿಳಿಸಿದೆ.
ಡಿಡಿಎ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ದೆಹಲಿ ಪೊಲೀಸರೊಂದಿಗೆ ಸೇರಿ ಅಕ್ರಮ ಧ್ವಂಸ ಕಾರ್ಯ ನಡೆದಿದೆ. ಆದರೆ, “ಈ ಕುರಿತು ತಮಗೆ ಯಾವುದೇ ಪೂರ್ವ ಸೂಚನೆ ನೀಡಿಲ್ಲ” ಎಂದು ಹಸನ್ ಕುಟುಂಬದವರು ಆರೋಪಿಸಿದ್ದಾರೆ. “ನಾವು ಜೀವವನ್ನು ಪಣಕ್ಕಿಡುವ ರಿಸ್ಕ್ ತೆಗೆದುಕೊಂಡು, ನಮಗೇನು ಸಿಗುತ್ತದೆ ಎಂದು ಕೂಡ ಯೋಚಿಸದೆ, ಅಪಾಯದಲ್ಲಿದ್ದ ಜನರನ್ನು ಉಳಿಸಲು ಹೋರಾಡಿದ್ದೇನೆ. ಅಧಿಕಾರಿಗಳು ನನ್ನ ಮಕ್ಕಳನ್ನು ಈ ರೀತಿ ನಿರಾಶ್ರಿತರನ್ನಾಗಿ ಮಾಡುವ ಮೂಲಕ ನನಗೆ ಮರುಪಾವತಿ ಮಾಡುತ್ತಿದ್ದಾರೆ” ಎಂದು ಹಸನ್ ಶೋಕಿಸಿದ್ದಾರೆ. “ನನಗೆ ಬೇರೆ ಮನೆ ಕಟ್ಟಿಕೊಡುವವರೆಗೂ ಉಪವಾಸ ಸತ್ಯಾಗ್ರಹ ಮಾಡುತ್ತೇನೆʼ ಎಂಬುದಾಗಿ ಅವರು ಹೇಳಿದ್ದಾರೆ.
“ನನ್ನ 15 ವರ್ಷದ ಮಗಳು ಮನೆ ಕೆಡವುವ ಸಂದರ್ಭದಲ್ಲಿ ಗಾಯಗೊಂಡಳು. ನೆಲಸಮಗೊಳಿಸುವಿಕೆ ನಿಲ್ಲಿಸುವಂತೆ ನಾನು ಡಿಡಿಎ ತಂಡವನ್ನು ಬೇಡಿಕೊಂಡೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. ಈ ಸಮಯದಲ್ಲಿ ಅವರು ನನ್ನ ಮನೆಯನ್ನು ಮಾತ್ರ ತೆಗೆದುಹಾಕಿದರು” ಎಂದು ಹಸನ್ ಆರೋಪಿಸಿದ್ದಾರೆ. ಈ ಆರೋಪಕ್ಕೆ ಡಿಡಿಎ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇಲಿ-ರಂಧ್ರ ಗಣಿಗಾರಿಕೆ ಕಾನೂನುಬಾಹಿರವಾಗಿದ್ದರೂ, ಸಿಲ್ಕ್ಯಾರಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅದನ್ನು ಅನಿವಾರ್ಯವಾಗಿ ಬಳಸಿಕೊಳ್ಳಲಾಗಿತ್ತು. ಇದು ಮೈನರ್‌ಗಳು ಸಣ್ಣಪುಟ್ಟ ಉಪಕರಣಗಳನ್ನು ಬಳಸಿಕೊಂಡು ಗಣಿಗಳಲ್ಲಿ ಸಣ್ಣ ಬಿಲಗಳನ್ನು ಅಗೆಯುವುದನ್ನು ಸೂಚಿಸುತ್ತದೆ.
2023ರ ನವೆಂಬರ್‌ನಲ್ಲಿ, ನಿರ್ಮಾಣ ಹಂತದಲ್ಲಿದ್ದ ಸಿಲ್ಕ್ಯಾರಾ ಸುರಂಗದ ಒಂದು ಭಾಗವು ಕುಸಿದಿತ್ತು. ಒಳಗೆ 41 ಕಾರ್ಮಿಕರು ಸಿಕ್ಕಿಬಿದ್ದಿದ್ದರು. ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರೂ ಅಧಿಕಾರಿಗಳು ಸಫಲರಾಗಿರಲಿಲ್ಲ. 17 ದಿನಗಳ ಕಾಲ ಕಾರ್ಮಿಕರು ಸುರಂಗದಲ್ಲಿ ಬಾಕಿಯಾಗಿದ್ದರು. ಕೊನೆಯ ಪ್ರಯತ್ನವಾಗಿ 12 ಸದಸ್ಯರ ರ್‍ಯಾಟ್-ಹೋಲ್ ಮೈನರ್ಸ್ ತಂಡವು 57 ಮೀಟರ್ ದಪ್ಪದ ಅವಶೇಷಗಳ ಗೋಡೆಯನ್ನು ಕೊರೆದು 41 ಮಂದಿಯನ್ನು ಬಚಾವ್ ಮಾಡಿತ್ತು. ಇವರ ಈ ಶೌರ್ಯಕ್ಕಾಗಿ ರಾಷ್ಟ್ರಮಟ್ಟದ ಶ್ಲಾಘನೆಯೂ ದೊರೆತಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಇವರನ್ನು ಸನ್ಮಾನಿಸಿದ್ದರು.
ಇದನ್ನೂ ಓದಿ: Uttarkashi Tunnel Rescue: ಕುಸಿದ ಸುರಂಗದೊಳಗೆ ಕಳೆದ ಆ 17 ದಿನಗಳು!