ಮುಂಬೈ: ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಾರ್ಚ್ 15ರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಹಿವಾಟು ಸ್ಥಗಿತಗೊಳಿಸಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ, ದೇಶದ 3 ಬ್ಯಾಂಕ್‌ಗಳಿಗೆ ಆರ್‌ಬಿಐ ಸುಮಾರು 3 ಕೋಟಿ ರೂ. ದಂಡ ವಿಧಿಸಿದೆ. ಭಾರತೀಯ ಸ್ಟೇಟ್ ಬ್ಯಾಂಕ್ (SBI), ಕೆನರಾ ಬ್ಯಾಂಕ್ ಹಾಗೂ ಸಿಟಿ ಯೂನಿಯನ್ ಬ್ಯಾಂಕ್‌ಗಳಿಗೆ (City Union Bank) ಸುಮಾರು 3 ಕೋಟಿ ರೂ. ದಂಡ ವಿಧಿಸಲಾಗಿದೆ. ಆರ್‌ಬಿಐ ನಿಬಂಧನೆಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಎಸ್‌ಬಿಐಗೆ 2 ಕೋಟಿ ರೂ. ದಂಡ ವಿಧಿಸಲಾಗಿದೆ. ಠೇವಣಿದಾರರ ಶೈಕ್ಷಣಿಕ ಜಾಗೃತಿ ಫಂಡ್ ಯೋಜನೆ (2014) ಅಡಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ದಂಡ ವಿಧಿಸಿದೆ. ಇನ್ನು, ಆದಾಯ ಗುರುತಿಸುವ ಮಾನದಂಡಗಳು, ಅನುತ್ಪಾದಕ ಆಸ್ತಿ ಪತ್ತೆಹಚ್ಚುವಲ್ಲಿ ಚ್ಯುತಿ ಸೇರಿ ಹಲವು ಕಾರಣಗಳಿಂದಾಗಿ ಸಿಟಿ ಯುನಿಯನ್ ಬ್ಯಾಂಕ್‌ಗೆ 66 ಲಕ್ಷ ರೂ. ದಂಡ ವಿಧಿಸಿದೆ. ಮತ್ತೊಂದೆಡೆ, ಆರ್‌ಬಿಐ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಲವಾದ ಕೆನರಾ ಬ್ಯಾಂಕ್‌ಗೆ 32.30 ಲಕ್ಷ ರೂ. ದಂಡ ವಿಧಿಸಿದೆ.
ಅನುತ್ಪಾದಕ ಆಸ್ತಿ (NPA) ಬಿಕ್ಕಟ್ಟು ನಿವಾರಣೆ, ಬ್ಯಾಂಕ್‌ಗಳ ದಿವಾಳಿತನ ತಡೆಗಾಗಿ ಹಲವು ನಿಯಮಗಳನ್ನು ಆರ್‌ಬಿಐ ಜಾರಿಗೆ ತಂದಿದೆ. ಹಾಗಾಗಿ, ಎಲ್ಲ ಬ್ಯಾಂಕ್‌ಗಳು ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಿಯಮಗಳನ್ನು ಪಾಲಿಸುವಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಆರ್‌ಬಿಐ ದಂಡ ವಿಧಿಸುತ್ತದೆ. ಇದೇ ರೀತಿ, ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ ಒಡಿಶಾ ಮೂಲದ ಓಶಿಯನ್ ಕ್ಯಾಪಿಟಲ್ ಮಾರ್ಕೆಟ್ ಲಿಮಿಟೆಡ್, ರೌರ್ಕೇಲಾಗೆ 16 ಲಕ್ಷ ರೂ. ದಂಡ ವಿಧಿಸಲಾಗಿದೆ.
ಇದನ್ನೂ ಓದಿ: Paytm Crisis: ಪೇಟಿಎಂ ಬಿಕ್ಕಟ್ಟಿನ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ವಿದಾಯ
ಆರ್‌ಬಿಐ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಪೇಟಿಎಂ ವಹಿವಾಟು ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ಒಂದೇ ಒಂದು ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಮೂಲಕ 1,000 ಕ್ಕೂ ಹೆಚ್ಚು ಖಾತೆಗಳನ್ನು ಲಿಂಕ್ ಮಾಡಿರುವುದು ಕಂಡುಬಂದಿದೆ. ಆರ್‌ಬಿಐ ಮತ್ತು ಲೆಕ್ಕಪರಿಶೋಧಕರು ನಡೆಸಿದ ಪರಿಶೀಲನಾ ಪ್ರಕ್ರಿಯೆಗಳಲ್ಲಿ ಬ್ಯಾಂಕ್ ಸಲ್ಲಿಸಿದ ಮಾಹಿತಿ ತಪ್ಪಾಗಿದೆ ಎಂದು ತಿಳಿದುಬಂದಿತ್ತು. ಕೆಲವು ಖಾತೆಗಳನ್ನು ಅಕ್ರಮ ಹಣ ವರ್ಗಾವಣೆಗೆ ಬಳಸಿರಬಹುದು ಎಂದು ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡುವುದರ ಜೊತೆಗೆ, ಆರ್‌ಬಿಐ ತನ್ನ ಸಂಶೋಧನೆಗಳನ್ನು ಗೃಹ ಸಚಿವಾಲಯ ಮತ್ತು ಪ್ರಧಾನಿ ಕಚೇರಿಗೆ ಕಳುಹಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ