Site icon Vistara News

ವಿಸ್ತಾರ ಸಂಪಾದಕೀಯ: ರೈಲು ದುರಂತ ಬಳಿಕ ಪರಿಹಾರ ಕಾರ್ಯ; ರೈಲ್ವೆ ಸಚಿವರ ನಡೆ ಅನುಕರಣೀಯ

Ashwini Vaishnav

#image_title

ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳ ನಡುವೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮೃತರ ಸಂಖ್ಯೆ 288 ತಲುಪಿದೆ. ಇತ್ತೀಚಿನ ದಶಕಗಳಲ್ಲೇ ಇದು ಘನಘೋರ ಅಪಘಾತವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಭಾರತೀಯ ರೈಲು ವ್ಯವಸ್ಥೆ ಸುರಕ್ಷಿತ ಎನಿಸಿಕೊಂಡಿತ್ತು. ʼಕವಚʼದಂಥ ಅತ್ಯಾಧುನಿಕ ತಂತ್ರಜ್ಞಾನಗಳು ಬಂದಿದ್ದವು. ಆದರೂ ಇಂಥ ಘೋರ ದುರಂತ ಸಂಭವಿಸಿರುವುದು ರೈಲ್ವೆ ಸುರಕ್ಷತೆಯನ್ನು ಮತ್ತೊಮ್ಮೆ ಆಮೂಲಾಗ್ರ ಪರಿಶೀಲಿಸಲು ಆಸ್ಪದ ಮಾಡಿಕೊಟ್ಟಿದೆ. ಈ ನಡುವೆ ಅಪಘಾತದ ಬಳಿಕ ಕೇವಲ 51 ಗಂಟೆಯೊಳಗೆ ಮೂರೂ ರೈಲುಗಳ ಬೋಗಿಗಳನ್ನು ತೆರವುಗೊಳಿಸಿ ಮತ್ತೆ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ಮಾತ್ರ ಗಮನಾರ್ಹ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಸುಮಾರು 36 ಗಂಟೆಗಳ ಕಾಲ ಸ್ಥಳದಲ್ಲೇ ಇದ್ದು ಮೇಲುಸ್ತುವಾರಿ ನೋಡಿಕೊಂಡಿರುವುದು ವಿಶೇಷವಾಗಿ ಗಮನ ಸೆಳೆದಿದೆ. ಹೊಸದಾಗಿ ರೈಲು ಸಂಚಾರ ಆರಂಭವಾಗಿ ರೈಲು ಹೊರಡುವವರಿಗೂ ಅವರು ಸ್ಥಳದಲ್ಲಿದ್ದು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದು ಅನುಕರಣೀಯ ನಡೆಯಾಗಿದೆ.

ಹಿಂದೆ ನೆಹರೂ ಸರ್ಕಾರದ ಕಾಲದಲ್ಲಿ ರೈಲು ಅಪಘಾತ ಸಂಭವಿಸಿದಾಗ ಆಗಿನ ರೈಲ್ವೆ ಸಚಿವರಾಗಿದ್ದ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಅವರ ಆ ನಡೆಯನ್ನು ಇಂದಿಗೂ ಪ್ರಶಂಸಿಸಲಾಗುತ್ತದೆ. ಆದರೆ, ಈಗಿನ ಈ ಕಾಲಘಟ್ಟದಲ್ಲಿ ರಾಜೀನಾಮೆ ನೀಡಿ ತೆರೆಮರೆಗೆ ಸರಿಯುವುದಕ್ಕಿಂತ ಸನ್ನಿವೇಶ ಮತ್ತು ಸವಾಲನ್ನು ಎದುರಿಸಿ ನಿಲ್ಲುವುದು ಕೂಡ ಮಹತ್ವದ್ದೇ ಆಗಿರುತ್ತದೆ. ರೈಲು ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ರಕ್ಷಣಾ ಕಾರ್ಯಾಚರಣೆಗೆ ಕ್ಷಿಪ್ರತೆ ತಂದುಕೊಟ್ಟ, ಸಂತ್ರಸ್ತರಿಗೆ ಭಾರಿ ಮೊತ್ತದ ಪರಿಹಾರ ಘೋಷಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಡೆ ಕೂಡ ಮೆಚ್ಚುವಂಥದ್ದಾಗಿದೆ.

ಇದನ್ನೂ ಓದಿ : Uttara Kannada News: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕು: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

ಇತ್ತೀಚೆಗೆ ರೈಲ್ವೆ ಇಲಾಖೆ ಕೈಗೊಂಡ ಹಲವಾರು ಕ್ರಾಂತಿಕಾರಕ ಕ್ರಮಗಳಿಂದಾಗಿ ರೈಲು ದುರಂತಗಳು ಬಹುತೇಕ ನಿಂತು ಹೋಗಿದ್ದವು. ಅಪಘಾತದ ಸಂಖ್ಯೆ ಶೂನ್ಯಕ್ಕೆ ಇಳಿದಿದೆ ಎಂದು ರೈಲ್ವೆ ಇಲಾಖೆ ಬೆನ್ನು ತಟ್ಟಿಕೊಂಡಿತ್ತು. ʼಕವಚ್​​’ ಹೆಸರಿನ ಆಧುನಿಕ ತಂತ್ರಜ್ಞಾನದ ಅಳವಡಿಕೆ ಮೂಲಕ ಅವಘಡಗಳ ಸಂಖ್ಯೆಯನ್ನು ಶೂನ್ಯಕ್ಕಿಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿತ್ತು. ಕವಚ್‌ ಎಂಬುದು ಸೆನ್ಸರ್ ಆಧಾರಿತ ತಂತ್ರಜ್ಞಾನ. ಪ್ರತಿ ರೈಲಿನ ಇಂಜಿನ್‌ನಲ್ಲಿ ಅಳವಡಿಸಲಾಗುತ್ತದೆ. ಹಳಿಯಲ್ಲಿ ಸಾಗುವ ಯಾವುದೇ ರೈಲು ಎದುರುಗಡೆಯಿಂದ ಮತ್ತೊಂದು ರೈಲು ಬರುತ್ತಿದ್ದರೆ, ಬೇರೆ ರೈಲು ಅದೇ ಹಳಿಯ ಮೇಲೆ ನಿಂತಿದ್ದರೆ ಅಥವಾ ರೈಲು ಹಳಿಯ ಮೇಲೆ ಅನ್ಯ ವಾಹನಗಳು ನಿಂತಿದ್ದರೆ ಅದನ್ನು ಕವಚ್ ಸೆನ್ಸರ್ ದೂರದಿಂದಲೇ ಗ್ರಹಿಸಿ, ಆಂತರಿಕ ನಿರ್ವಹಣಾ ವ್ಯವಸ್ಥೆಗೆ ಸಿಗ್ನಲ್ ರವಾನಿಸುತ್ತದೆ. ಸಿಗ್ನಲ್ ಪಡೆದ ಆಂತರಿಕ ನಿರ್ವಹಣಾ ವ್ಯವಸ್ಥೆಯು ಸ್ವಯಂಚಾಲಿತವಾಗಿ ಬ್ರೇಕ್ ಹಾಕುತ್ತದೆ. ಆದರೆ ಈಗ ಈ ಭೀಕರ ದುರಂತ ಸಂಭವಿಸಿದ ಮಾರ್ಗದಲ್ಲಿ ಕವಚ ತಂತ್ರಜ್ಞಾನ ಅಳವಡಿಸಿರಲಿಲ್ಲ. ಯಾಕೆ ಅಳವಡಿಸಿರಲಿಲ್ಲವೋ ತಿಳಿಯದು. ರೈಲ್ವೇ ಹಳಿಗಳ ವಿದ್ಯುದೀಕರಣ ಪ್ರಕ್ರಿಯೆಯಂತೆಯೇ ಇದು ಕೂಡ ಇಂದು ಅತ್ಯಗತ್ಯವಾಗಿದ್ದು, ತಂತ್ರಜ್ಞಾನದ ಸರ್ವಾಂಗೀಣ ಬಳಕೆ ಇನ್ನಷ್ಟು ಅಗತ್ಯವಾಗಿದೆ ಎಂಬುದನ್ನು ಇದು ಸೂಚಿಸಿದೆ.

ಸದ್ಯ ದುರಂತದ ಕಾರಣ ಪತ್ತೆ ಹಚ್ಚುವ ಹೊಣೆ ಸಿಬಿಐಗೆ ವಹಿಸಲಾಗಿದೆ. ಇದು ಮಾನವಸಹಜ ಪ್ರಮಾದದಿಂದ ಆಗಿದ್ದರೂ ಶಿಕ್ಷಾರ್ಹ. ಉದ್ದೇಶಪೂರ್ವಕ ದುಷ್ಕೃತ್ಯ ಎಂಬುದಾದರೆ ಘೋರ ಅಪರಾಧ. ಎರಡೂ ಬಗೆಯಲ್ಲೂ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮತ್ತೆ ಇಂಥ ದುರ್ಘಟನೆ ಸಂಭವಿಸದಂತೆ ರೈಲ್ವೆ ಸಚಿವರು ಹಾಗೂ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು

Exit mobile version