Site icon Vistara News

ವಿಸ್ತಾರ ಸಂಪಾದಕೀಯ: ಸರ್ಕಾರಿ ನೌಕರರ ಪಿಂಚಣಿ ಸಂಕಟ ನಿವಾರಣೆಯಾಗಲಿ

Relieve the pension woes of government employees

Relieve the pension woes of government employees

ಹೊಸ ಪಿಂಚಣಿ ವ್ಯವಸ್ಥೆಯ ಸಾಧಕ – ಬಾಧಕಗಳ ಅಧ್ಯಯನ ನಡೆಸಲು ಮತ್ತು ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿ ಕುರಿತು ಪರಿಶೀಲನೆಗೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ರದ್ದುಗೊಳಿಸಿ, ಹಳೆಯ ಪಿಂಚಣಿ ವ್ಯವಸ್ಥೆಯನ್ನೇ (OPS) ಜಾರಿಗೊಳಿಸಬೇಕು ಎಂದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಹೋರಾಟ ನಡೆಯುತ್ತಿದೆ. ಕೆಲವು ರಾಜ್ಯಗಳು ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸಲು ಮುಂದಾಗಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಸರ್ಕಾರಿ ನೌಕರರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಪರಿಶೀಲನೆಗೆ ಸಮಿತಿ ರಚಿಸಿದೆ. ಹಾಗಾಗಿ, ನೂತನ ಪಿಂಚಣಿ ವ್ಯವಸ್ಥೆಯಲ್ಲಿ ಒಪಿಎಸ್‌ ಸೌಲಭ್ಯಗಳನ್ನು ಸೇರ್ಪಡೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಮೂಡಿದೆ. ನೌಕರರ ಆತಂಕವನ್ನು ಗಣನೆಗೆ ತೆಗೆದುಕೊಂಡಿರುವುದರಿಂದ ಈ ಸಮಿತಿಯ ರಚನೆ ಸ್ವಾಗತಾರ್ಹವಾಗಿದೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಆಗಬೇಕಾದ ಮಾರ್ಪಾಡುಗಳು, ಈಗಿರುವ ರಚನಾ ವ್ಯವಸ್ಥೆಯಲ್ಲಿ ಮಾಡಬಹುದಾದ ಬದಲಾವಣೆ, ತರಬಹುದಾದ ಸುಧಾರಣೆ, ಇದರಿಂದ ಕೇಂದ್ರ ಸರ್ಕಾರಕ್ಕೆ ಆಗುವ ವೆಚ್ಚ, ರಾಜ್ಯಗಳ ಜತೆ ಮಾತುಕತೆ ನಡೆಸುವುದು, ರಾಜ್ಯ ಸರ್ಕಾರಗಳ ಅಭಿಪ್ರಾಯ ಸಂಗ್ರಹಿಸುವುದು, ಪಿಂಚಣಿ ವ್ಯವಸ್ಥೆ ಸುಧಾರಣೆಗೆ ನೂತನ ರಚನೆ ಕುರಿತು ಚಿಂತನೆ ಸೇರಿ ಹಲವು ದಿಸೆಯಲ್ಲಿ ಸಮಿತಿಯು ಕಾರ್ಯನಿರ್ವಹಿಸಲಿದೆ. ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸಬೇಕು ಎಂದು ಕರ್ನಾಟಕದಲ್ಲಿ ತೀವ್ರ ಹೋರಾಟ ನಡೆದಿದೆ. ರಾಜಸ್ಥಾನ, ಪಂಜಾಬ್‌, ಛತ್ತೀಸ್‌ಗಢ, ಜಾರ್ಖಂಡ್‌ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸಿವೆ. 2004ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ಯೋಜನೆಯನ್ನು (OPS) ಸ್ಥಗಿತಗೊಳಿಸಿ ನೂತನ ಪಿಂಚಣಿ ಯೋಜನೆಯನ್ನು (NPS)ಪರಿಚಯಿಸಿತ್ತು.

ಇವೆರಡರಲ್ಲೂ ಹಲವು ಧನಾತ್ಮಕ ಹಾಗೂ ಹಲವು ಋಣಾತ್ಮಕ ಅಂಶಗಳಿವೆ. ಹಳೆಯ ವಿಧಾನದಲ್ಲಿ, ಪಿಂಚಣಿಯು ನೌಕರನ ಕೊನೆಯ ಸಂಬಳದ ಶೇ.50ರಷ್ಟಿತ್ತು ಮತ್ತು ಸಂಪೂರ್ಣ ಮೊತ್ತವನ್ನು ಸರ್ಕಾರವು ಪಾವತಿಸುತ್ತಿತ್ತು. ಎನ್‌ಪಿಎಸ್‌ನಲ್ಲಿ ಇದು ನೌಕರರ ಕೊಡುಗೆ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಇಲ್ಲಿ ಸರ್ಕಾರಿ ನೌಕರರು ತಮ್ಮ ಸಂಬಳದ 10 ಪ್ರತಿಶತವನ್ನು ನಿವೃತ್ತಿ ನಿಧಿಗೆ ನೀಡಬೇಕಾಗುತ್ತದೆ. ಪಿಂಚಣಿ ನಿಧಿಗೆ ಸರ್ಕಾರ ಶೇ.14ರವರೆಗೆ ನೀಡುತ್ತದೆ. ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿಯ (CMIE) ಅಂಕಿ ಅಂಶಗಳ ಪ್ರಕಾರ, ಪಿಂಚಣಿಗಾಗಿ ರಾಜ್ಯ ಸರ್ಕಾರಗಳ ವೆಚ್ಚ ಪ್ರತಿ ವರ್ಷ ಏರಿಕೆಯಾಗುತ್ತಿದೆ. ಆರಂಭದಲ್ಲಿ ರಾಜ್ಯದ ಆದಾಯದ 10% ಇದ್ದ ವೆಚ್ಚ 2020-21ರ ವೇಳೆಗೆ 25%ಕ್ಕೆ ಏರಿಕೆಯಾಗಿದೆ. ಎಲ್ಲ ರಾಜ್ಯಗಳೂ ಒಪಿಎಸ್‌ಗೆ ಹಿಂತಿರುಗಿದರೆ ಸರ್ಕಾರಗಳ ಬೊಕ್ಕಸಕ್ಕೆ 31 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ. ಇದನ್ನು ಭರಿಸುವುದು ಹೇಗೆ ಎಂಬುದು ಈಗಿನ ಪ್ರಶ್ನೆ. ಎರಡನೆಯದಾಗಿ, 20 ವರ್ಷ ಉದ್ಯೋಗದಲ್ಲಿ ಇದ್ದವರಿಗೆ ಮಾತ್ರ ಒಪಿಎಸ್‌ ಸಿಗುತ್ತದೆ.

ಇದನ್ನೂ ಓದಿ: NPS Committee: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಪರಿಶೀಲನೆಗೆ ಸಮಿತಿ ರಚಿಸಿದ ಕೇಂದ್ರ, ಒಪಿಎಸ್‌ ಸೌಲಭ್ಯ ಸೇರ್ಪಡೆ?

ಸರ್ಕಾರಗಳು ಪಿಂಚಣಿಗೋಸ್ಕರ ನಿರ್ದಿಷ್ಟ ನಿಧಿಯನ್ನು ಹೊಂದಿಲ್ಲ. ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆಯ ಹಣದಿಂದಲೇ ನೀಡುತ್ತವೆ. ಸುಮಾರು 77 ಲಕ್ಷ ಪಿಂಚಣಿದಾರರು ಹಾಗೂ ಹಾಲಿ ಕರ್ತವ್ಯದಲ್ಲಿರುವ ಉದ್ಯೋಗಿಗಳ ಸಂಖ್ಯೆ 50 ಲಕ್ಷ ಇದೆ. ಭಾರತದಲ್ಲಿ ಸುಮಾರು 31 ಕೋಟಿ ಮಂದಿ ಉದ್ಯೋಗದಲ್ಲಿದ್ದಾರೆ. ಆದರೆ 3.4 ಕೋಟಿ ನಿವೃತ್ತ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ವೃದ್ಧಾಪ್ಯದಲ್ಲಿ ಪಿಂಚಣಿ ಆದಾಯ ಸಿಗುತ್ತಿದೆ.
ಎನ್‌ಪಿಎಸ್‌ ಅನ್ನು 2004ರ ಜನವರಿ 1ರ ಬಳಿಕ ಎಲ್ಲ ಸರ್ಕಾರಿ ಉದ್ಯೋಗಿಗಳಿಗೆ ಅನ್ವಯಿಸಲಾಗಿದೆ. 2009ರಲ್ಲಿ ಎಲ್ಲ ನಾಗರಿಕರಿಗೂ ಇದನ್ನು ವಿಸ್ತರಿಸಲಾಯಿತು. ಖಾಸಗಿ ವಲಯದ ಉದ್ಯೋಗಿಗಳೂ, ಸ್ವ ಉದ್ಯೋಗಿಗಳೂ ಇದರಲ್ಲಿ ಹೂಡಿಕೆ ಮಾಡಬಹುದು. ಎರಡೂ ಪದ್ಧತಿಗಳಿಗೂ ಅದರದೇ ಲಾಭ- ನಷ್ಟಗಳಿರುವುದರಿಂದ, ಸಮಿತಿಯು ಇವೆರಡರ ನಡುವೆ ಒಂದು ಉತ್ತಮ ಮಧ್ಯಮದಾರಿಯನ್ನು ಕಂಡುಕೊಳ್ಳಬೇಕಿದೆ. ಕೇಂದ್ರ ಸರ್ಕಾರ ನೇಮಿಸಿರುವ ಸಮಿತಿ ಆದಷ್ಟು ಬೇಗ ವರದಿ ನೀಡಲಿ; ಸರ್ಕಾರಿ ನೌಕರರ ಬಹು ದಿನಗಳ ಪಿಂಚಣಿ ಸಂಕಟ ನಿವಾರಣೆಯಾಗಲಿ.

Exit mobile version