ಮುಂಬಯಿ: ಖ್ಯಾತ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ ೬೨ ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಆಕಾಸ ಏರ್‌ಲೈನ್ ಸ್ಥಾಪಿಸಿದ್ದ ರಾಕೇಶ್ ಜುಂಜುನ್ ವಾಲಾ ಅವರು ಇತ್ತೀಚೆಗೆ ಡಯಾಬಿಟೀಸ್ ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದರು. ಆಸ್ಪತ್ರೆಯಿಂದ ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ಅವರು ಬೆಳಗ್ಗೆ ಆಸ್ಪತ್ರೆಗೆ ದಾಖಲಿಸುವ ಮಾರ್ಗದಲ್ಲಿ ನಿಧನರಾಗಿದ್ದಾರೆ.
ರಾಕೇಶ್ ಜುಂಜುನ್‌ವಾಲಾ ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳು ಇದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಷೇರು ಪೇಟೆಯಲ್ಲಿ ಹೂಡಿಕೆ ಆರಂಭಿಸಿದ್ದ ಅವರು ಭಾರತದ ವಾರೆನ್ ಬಫೆಟ್ ಎಂದೇ ಖ್ಯಾತಿ ಗಳಿಸಿದ್ದಾರೆ. ಟಾಟಾ ಸಮೂಹದ ಟೈಟನ್ ಕಂಪನಿಯಲ್ಲಿ ಅವರ ಹೂಡಿಕೆ ಗಮನಾರ್ಹವಾಗಿದೆ.
ಪ್ರಧಾನಿ ಮೋದಿ ಸಂತಾಪ
ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಒಂದು ಅದಮ್ಯ ಚೇತನವಾಗಿದ್ದರು. ತುಂಬ ಒಳನೋಟವುಳ್ಳ, ಹಾಸ್ಯಮಯ ವ್ಯಕ್ತಿತ್ವ ಅವರದಾಗಿತ್ತು. ಆರ್ಥಿಕ ಜಗತ್ತಿಗೆ ಅವರ ಕೊಡುಗೆ ಅಪಾರ. ಭಾರತದ ಅಭಿವೃದ್ಧಿಗಾಗಿ ಸದಾ ತುಡಿಯುತ್ತಿದ್ದರು. ಅವರ ಮರಣ ದುಃಖ ತಂದಿದೆ. ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಓಂ ಶಾಂತಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಆಗಸ್ಟ್ 7ರಿಂದ ಆಕಾಶಕ್ಕೇರಲಿದೆ ಆಕಾಶ ಏರ್ ವಿಮಾನ; ಟಿಕೆಟ್ ಮಾರಾಟ ಆರಂಭಿಸಿದ ಹೊಸ ಏರ್‌ಲೈನ್ಸ್