ಬೆಂಗಳೂರು: ಇಂದು ನಾಡಿನೆಲ್ಲೆಡೆ ಗಣರಾಜ್ಯೋತ್ಸವ ಸಂಭ್ರಮ (Republic day 2024) ಮೇಳೈಸಲಿದ್ದು, ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ (manekshaw parade ground) 75ನೇ ಗಣರಾಜ್ಯೋತ್ಸವ ದಿನದ ಪರೇಡ್ (Republic day parade) ಆಚರಣೆಗೆ ಸಕಲ ಸಿದ್ಧತೆ ನಡೆದಿದೆ.
ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರಿಂದ ಧ್ವಜಾರೋಹಣ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಂಎಂ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಗಣ್ಯರು ಭಾಗಿಯಾಗಲಿದ್ದಾರೆ. 38 ತುಕಡಿಗಳ 1150 ಯೋಧರಿಂದ ಆಕರ್ಷಕ ಪಥಸಂಚಲನ ನಡೆಯಲಿದೆ. ಕೇರಳ ಪೊಲೀಸ್, ಸ್ಕೌಟ್-ಗೈಡ್ಸ್, ಎನ್‌ಸಿಸಿ, ಸೇವಾದಳ, ವಿವಿಧ ಶಾಲಾತಂಡಗಳಿಂದ ಪರೇಡ್ ನಡೆಯಲಿದ್ದು, 38 ತುಕಡಿಗಳಲ್ಲಿ ಒಟ್ಟು 1150 ಮಂದಿ ಭಾಗಿಯಾಗಲಿದ್ದಾರೆ. ಪಥಸಂಚಲನದಲ್ಲಿ ಶ್ವಾನದಳ ಕೂಡ ಭಾಗಿಯಾಗಲಿದ್ದು, ಬಿಬಿಎಂಪಿ ಶಾಲಾ ಮಕ್ಕಳ 2 ತಂಡಗಳು, 1500 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಬಳಿಕ ಕೇರಳದ ಪೊಲೀಸ್ ತಂಡದಿಂದ ಯುದ್ಧಕಲೆ ಕಳರಿಪಯಟ್ಟು ಪ್ರದರ್ಶನ, ಭಾರತೀಯ ಸೇನೆಯಿಂದ ತುರ್ತು ಸ್ಥಿತಿಯ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ, ಪೊಲೀಸ್ ತಂಡದಿಂದ ಆಕರ್ಷಕ ಬೈಕ್ ಸ್ಟಂಟ್ ಪ್ರದರ್ಶನಗಳು ಇರಲಿವೆ. ಪರೇಡ್ ವಿಜೇತ ತಂಡಗಳಿಗೆ ರಾಜ್ಯಪಾಲರು ಪ್ರಶಸ್ತಿ ವಿತರಿಸಲಿದ್ದಾರೆ. ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.
ಪ್ರವೇಶ ದ್ವಾರಗಳ ವಿವರ ಹೀಗಿದೆ:
ಜಿ2- ಗಣ್ಯವ್ಯಕ್ತಿಗಳ ಪ್ರವೇಶ
ಜಿ4 – ಅತಿಗಣ್ಯ, ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು
ಜಿ5- ಸಾರ್ವಜನಿಕರಿಗೆ ಪ್ರವೇಶ
ಮಾರ್ಗ ಬದಲಾವಣೆ
ಜನವರಿ 26ರಂದು ಗಣರಾಜ್ಯ ಪರೇಡ್ ಹಿನ್ನೆಲೆಯಲ್ಲಿ ಕೆಲವು ಟ್ರಾಫಿಕ್ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8.30ರಿಂದ 10.30ರವರೆಗೆ ಕಬ್ಬನ್ ರಸ್ತೆ, ಬಿಆರ್‌ವಿ ಜಂಕ್ಷನ್, ಕಾಮರಾಜ ರಸ್ತೆ ಬಂದ್ ಮಾಡಲಾಗಿದ್ದು, ಪರ್ಯಾಯ ಮಾರ್ಗಗಳ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್‌ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು ಇನ್‌ಫೆಂಟ್ರಿ ರಸ್ತೆ- ಸಫೀನಾ ಪ್ಲಾಜಾ, ಎಡ ತಿರುವು ಪಡೆದು ಮೈನ್ ಗಾರ್ಡ್ ರಸ್ತೆ, ಡಿಕನ್‌ಸನ್ ರಸ್ತೆ ಮೂಲಕ ಸಾಗಿ ಕಬ್ಬನ್ ರಸ್ತೆಗೆ ಸಂಪರ್ಕ ಕಲ್ಪಿಸುತ್ತವೆ.
ಮಾಣಿಕ್ ಶಾ ಮೈದಾನದಲ್ಲಿ ಭಾರೀ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ನಗರದ 9 ಡಿಸಿಪಿ, 16 ಎಸಿಪಿ, 46 ಇನ್‌ಸ್ಪೆಕ್ಟರ್, 109 ಪಿಸಿಐ, 77 ಎಎಸ್‌ಐ ಸೇರಿದಂತೆ 1000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಸಂಚಾರ ನಿರ್ವಹಣೆಗಾಗಿ 4 ಡಿಸಿಪಿ, 6 ಎಸಿಪಿ, 21 ಪಿಐ ಸೇರಿದಂತೆ 575 ಸಿಬ್ಬಂದಿ ನಿಯೋಜಿಸಲಾಗಿದೆ. 10 ಕೆಎಸ್‌ಆರ್‌ಪಿ/ ಸಿಎಆರ್ ತುಕಡಿ, 2 ಅಗ್ನಿಶಾಮಕ ವಾಹನ, 2/ಆಂಬ್ಯುಲೆನ್ಸ್, ಕ್ಷಪ್ರ ಕಾರ್ಯಾಚರಣೆ ಪಡೆ, ಡಿಸ್ವಾಟ್ ನಿಯೋಜಿಸಲಾಗಿದೆ.
ಮೈದಾನದ ಸುತ್ತ ಭದ್ರತೆಗಾಗಿ 100 ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ತಪಾಸಣೆಗೆ 3 ಬ್ಯಾಗೇಜ್ ಸ್ಕ್ಯಾನರ್, 20 ಡಿಎಫ್‌ಎಂಡಿ, 40 ಹೆಚ್‌ಹೆಚ್‌ಎಂಡಿಗಳನ್ನು ಅಳವಡಿಕೆ ಮಾಡಲಾಗಿದೆ. ಆಹ್ವಾನಿತರಿಗೆ ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ:
1) ನಾಡಗೀತೆ ಹಾಗೂ ರೈತ ಗೀತೆ
2) ಬೆಂಗಳೂರು ಹೆಗ್ಗನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ 700 ಮಕ್ಕಳಿಂದ “ಈ ದೇಶವು ನಮಗಾಗಿಯೇ ಎಂದೆಂದಿಗೂ”
3) ಬೆಂಗಳೂರಿನ ಪಿಳ್ಳಣ್ಣ ಗಾರ್ಡನ್ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಸುಮಾರು 700 ವಿದ್ಯಾರ್ಥಿಗಳಿಂದ “ಅಕ್ಷರದವ್ವ ಸಾವಿತ್ರಿಬಾಯಿ ಫುಲೆ”
4) ಬೆಂಗಳೂರಿನ ಎಂ.ಇ.ಜಿ ಮತ್ತು ಕೇಂದ್ರ ತಂಡದಿಂದ “ಕಲರಿಪಯಟ್ಟು”
5) ಬೆಂಗಳೂರಿನ ಕ್ಯಾಪ್ಟನ್ ಬಾಸ್ಕೊ ರಾಜಸಿಂಗಂ ಕಾಮರಾಜ್, ಎ.ಎಸ್.ಸಿ ಸೆಂಟರ್ ಮತ್ತು ಕಾಲೇಜ್ ತಂಡದಿಂದ “ದ್ವಿಚಕ್ರ ವಾಹನ ಸಾಹಸ ಪ್ರದರ್ಶನ”
6) ಶ್ರೀ ಜೇಮ್ಸ್ 13 ಪ್ಯಾರ( ಎಸ್.ಎಫ್.ವಿಶೇಷ ತಂಡ ಇವರಿಂದ) “ಅಡಗು ತಾಣಗಳಲ್ಲಿ ಹೊಕ್ಕು ದಾಳಿ ಮಾಡುವ ನಿರೂಪಣೆ”
ಇದನ್ನೂ ಓದಿ: Republic Day Parade 2024: ಮಹಿಳೆಯರ ಪಾರುಪತ್ಯ, ಮ್ಯಾಕ್ರಾನ್ ಅತಿಥಿ; ಇಂದಿನ ಗಣರಾಜ್ಯ ಪರೇಡ್ ವಿಶೇಷತೆಗಳು ಏನೇನು?