ಪ್ರಧಾನಿ ಮೋದಿಯವರು ಜಪಾನ್ ಸೇರಿದಂತೆ ಹಲವು ದೇಶಗಳ ಪ್ರವಾಸದಲ್ಲಿದ್ದಾರೆ. ಜಪಾನ್‌ನಲ್ಲಿ ಜಿ7 ದೇಶಗಳ ಶೃಂಗಸಭೆಯಿಂದ ಆರಂಭವಾದ ಅವರ ಪ್ರವಾಸ, ಪಪುವಾ ನ್ಯೂಗಿನಿಯಾದಲ್ಲಿ ಭಾರತ- ಪೆಸಿಫಿಕ್ ದ್ವೀಪಗಳ ಸಹಕಾರ ಸಂಘಟನೆ (FIPIC)ಯ ಮಾತುಕತೆಯೊಂದಿಗೆ ಮುಂದುವರಿದು, ಸದ್ಯ ಆಸ್ಟ್ರೇಲಿಯಾದಲ್ಲಿದ್ದಾರೆ. ಅಮೆರಿಕ, ಜಪಾನ್, ಆಸ್ಟ್ರೇಲಿಯಗಳ ದೇಶ ಮುಖ್ಯಸ್ಥರ ಜತೆಗೆ ಜಿ7 ದೇಶಗಳ ಮುಖ್ಯಸ್ಥರನ್ನು ಭೇಟಿಯಾಗಿದ್ದಾರೆ. ಈ ಭೇಟಿಗಳ ಸಂದರ್ಭದಲ್ಲಿ ಅಲ್ಲಿಯ ಜನ ಅಷ್ಟೇ ಅಲ್ಲ, ಆ ದೇಶಗಳ ಪ್ರಧಾನಿ, ಅಧ್ಯಕ್ಷರಂಥ ಉನ್ನತ ಸ್ಥಾನದಲ್ಲಿದ್ದವರೂ ಮೋದಿಯವರನ್ನು ಆದರಿಸುತ್ತಿರುವ ಪರಿ ಅಚ್ಚರಿ ಎನಿಸುತ್ತದೆ. ಪಪುವಾ ನ್ಯೂಗಿನಿಯಾ ದೇಶಕ್ಕೆ ತೆರಳಿದಾಗ ಅಲ್ಲಿಯ ಪ್ರಧಾನಿ ಜೇಮ್ಸ್ ಮರಾಪೆ ಮೋದಿಯವರ ಕಾಲು ಮುಟ್ಟಿ ನಮಸ್ಕರಿಸಿದ್ದರು. ಆಸ್ಟ್ರೇಲಿಯಾದ ಪ್ರಧಾನಿ ಮೋದಿಯವರನ್ನು ʼಬಾಸ್ʼ ಎಂದು ಕರೆದು ಗೌರವಿಸಿದ್ದಾರೆ. ಅಷ್ಟೇ ಅಲ್ಲ. ಅಮೆರಿಕದ ರಾಕ್ ಸ್ಟಾರ್ ಬಂದಾಗಲೂ ಇಷ್ಟು ಜನ ಸೇರಿರಲಿಲ್ಲ ಎಂದು ಬಣ್ಣಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮೋದಿಯವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಭಾರತ್ ಮಾತಾಕಿ ಜೈ, ಹರ್ ಹರ್ ಮೋದಿ ಘೋಷಣೆ ಮುಗಿಲು ಮುಟ್ಟಿದೆ. ಫಿಜಿ ಮತ್ತು ಪಪುವಾ ನ್ಯೂಗಿನಿಯಾ ದೇಶಗಳು ಮೊದಿಯವರಿಗೆ ಆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿವೆ. ಜಪಾನ್‌ನಲ್ಲೂ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಕ್ವಾಡ್ ಶೃಂಗ ಸಭೆಯ ಸಂದರ್ಭ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಮೋದಿಯವರನ್ನು ಹುಡುಕಿಕೊಂಡು ಬಂದು ಆಲಂಗಿಸಿದ್ದು ಭಾರಿ ಸುದ್ದಿಯಾಗಿತ್ತು.
ಇದು ಮೋದಿಯವರಿಗೆ ಅವರ ವೈಯಕ್ತಿಕ ವರ್ಚಸ್ಸಿನಿಂದ ಸಿಕ್ಕಿರುವ ಗೌರವ ಎನ್ನಬಹುದಾದರೂ, ಇದು ವಿದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಭಾರತದ ಪ್ರಭಾವದ ಸೂಚಕವೂ ಹೌದು. ಪ್ರಮುಖ ಜಾಗತಿಕ ಆರ್ಥಿಕ ಶಕ್ತಿಗಳು, ಭಾರತದ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡಿವೆ. 3.5 ಟ್ರಿಲಿಯನ್ ಡಾಲರ್ ತಲುಪಿರುವ ನಮ್ಮ ದೇಶದ ಎಕಾನಮಿ ಅವರ ಗಮನ ಸೆಳೆದಿರುವುದರಲ್ಲಿ ಸಂಶಯವಿಲ್ಲ. ಎಲ್ಲ ಬಹುರಾಷ್ಟ್ರೀಯ ಕಂಪನಿಗಳೂ ತಮ್ಮ ಅಗಾಧವಾದ ಮಾರುಕಟ್ಟೆಯನ್ನು ಇಲ್ಲಿ ವಿಸ್ತರಿಸಿವೆ; ಇನ್ನಷ್ಟು ವಿಸ್ತರಿಸಲು ಉತ್ಸುಕವಾಗಿವೆ. ಹಾಗೆಯೇ ಮಿಲಿಟರಿ ಮತ್ತು ಆರ್ಥಿಕ ಶಕ್ತಿಯಾಗಿ ಭಾರತ ದಾಪುಗಾಲು ಹಾಕುತ್ತಿದೆ. ವಿಶ್ವದ ಆಗುಹೋಗುಗಳಲ್ಲಿ ಈಗ ಭಾರತವೂ ಪ್ರಮುಖ ಪಾತ್ರ ವಹಿಸುತ್ತಿದೆ ಎನ್ನಲು ಹಲವು ಬೆಳವಣಿಗೆಗಳು ಸಾಕ್ಷಿಯಾಗಿವೆ. ವ್ಯಾಪಾರ ವಹಿವಾಟು, ಹೂಡಿಕೆ, ಹವಾಮಾನ ವೈಪರೀತ್ಯ, ಸುಸ್ಥಿರ ಅಭಿವೃದ್ಧಿಯ ವಿಚಾರಗಳಲ್ಲಿ ಭಾರತದ ಮಾತಿಗೆ ಇತರ ದೇಶಗಳು ತಲೆದೂಗುತ್ತಿವೆ. ಸೋಲಾರ್ ಇಂಧನ ಕ್ರಾಂತಿಯಲ್ಲಿ ಭಾರತ ಮುಂದಿದೆ. ಈ ಕುರಿತು ಮೋದಿಯವರು ನೀಡಿರುವ ದಿಗ್ದರ್ಶನದಿಂದ ಸ್ಫೂರ್ತಿಗೊಂಡಿರುವ 125 ದೇಶಗಳು ಭಾರತದ ನೇತೃತ್ವದಲ್ಲಿ ʼಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟʼವನ್ನು 2015ರಲ್ಲಿ ರಚಿಸಿಕೊಂಡಿದ್ದು, ಅದಕ್ಕೆ ಭಾರತವೇ ಅಧ್ಯಕ್ಷ ಸ್ಥಾನದಲ್ಲಿದೆ. 2030ರ ಒಳಗೆ ಇ-ವಾಹನ ಮಾರುಕಟ್ಟೆಯ ನೇತಾರನಾಗುವ ಭರವಸೆಯನ್ನೂ ಮೋದಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿಪಾದಿಸುತ್ತ ಬಂದಿದ್ದು, ಪೆಟ್ರೋಲಿಯಂ ಇಂಧನಕ್ಕೆ ಪರ್ಯಾಯ ನೀತಿಗಳನ್ನು ರೂಪಿಸಲಾಗುತ್ತಿದೆ.
ಇದನ್ನೂ ಓದಿ: Narendra Modi: ಮೋದಿಯನ್ನು ಬಾಸ್ ಎಂದ ಆಸ್ಟ್ರೇಲಿಯಾ ಪ್ರಧಾನಿ; ಅಮೆರಿಕ ರಾಕ್‌ಸ್ಟಾರ್ ಜನಪ್ರಿಯತೆಗೆ ಹೋಲಿಕೆ
ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಅರ್ಧಪಾಲು ಜಗತ್ತಿಗೆ ನೇತಾರನ ಸ್ಥಾನದಲ್ಲಿದೆ. ಭಾರತದ ವೈದ್ಯರು ಹಾಗೂ ಐಟಿ ಉದ್ಯೋಗಿಗಳು ಉತ್ಕೃಷ್ಟತೆಯ ಪ್ರತೀಕಗಳಾಗಿ, ಅಮೆರಿಕ ಹಾಗೂ ಯುರೋಪ್ ಅನ್ನು ಆವರಿಸಿಕೊಂಡಿದ್ದಾರೆ. ಭಾರತದ ʼಲುಕ್ ಈಸ್ಟ್ ಪಾಲಿಸಿʼ ಹಾಗೂ ಅರಬ್ ದೇಶಗಳ ಜತೆಗೆ ಹೆಚ್ಚಿನ ಸೌಹಾರ್ದ ಸೃಷ್ಟಿಸಿಕೊಳ್ಳುವ ವಿದೇಶಾಂಗ ನೀತಿಯಂತೂ ನಮಗೆ ಅನೇಕ ಅತ್ಯುತ್ತಮ ಫಲಗಳನ್ನು ತಂದುಕೊಟ್ಟಿದೆ. ಉಕ್ರೇನ್- ರಷ್ಯಾ ಯುದ್ಧದ ಸಂದರ್ಭದಲ್ಲಿ ತೈಲದ ಕೊರತೆಯಿಂದ ಹಲವು ದೇಶಗಳು ತತ್ತರಿಸುತ್ತಿದ್ದರೂ ಭಾರತಕ್ಕೆ ಅದರ ಸಮಸ್ಯೆಯಾಗಲಿಲ್ಲ. ಭಾರತಕ್ಕೆ ದುಃಸ್ವಪ್ನವನ್ನು ಸೃಷ್ಟಿಸುವ ಚೀನಾದ ಪ್ರಯತ್ನಗಳು ಪೆಸಿಫಿಕ್ ಒಕ್ಕೂಟದ ಜತೆಗಿನ ಭಾರತದ ಮೈತ್ರಿ, ಬಲಿಷ್ಠ ದೇಶಗಳ ಜತೆಗಿನ ಸೌಹಾರ್ದದ ವಿದೇಶಾಂಗ ನೀತಿಗಳ ಫಲವಾಗಿ ವಿಫಲಗೊಂಡಿವೆ. ಇದೆಲ್ಲವೂ ದೇಶದ ಭವ್ಯ ಭವಿಷ್ಯದ ದೃಷ್ಟಿಯಿಂದ ಮಹತ್ವದ ವಿದ್ಯಮಾನಗಳು. ಈ ಸಲದ ಪ್ರವಾಸದಲ್ಲಿ ಮೋದಿಯವರಿಗೆ ಸಂದ ಗೌರವವನ್ನು ನಾವು ಹೀಗೆ ವಿಶ್ಲೇಷಿಸಿದಾಗ ಅದು ಸಂಪೂರ್ಣ ಅರ್ಥ ಪಡೆದುಕೊಳ್ಳುತ್ತದೆ.