Site icon Vistara News

Maheshchandra Guru : ನಿವೃತ್ತ ಪ್ರಾಧ್ಯಾಪಕ, ಪ್ರಗತಿಪರ ಚಿಂತಕ ಮಹೇಶ್​ಚಂದ್ರ ಗುರು ನಿಧನ

Maheshchandra Guru

ಮೈಸೂರು: ಮೈಸೂರು ವಿಶ್ವ ವಿದ್ಯಾಲಯದ ನಿವೃತ್ತ ಧ್ಯಾಪಕ ಹಾಗೂ ಪ್ರಗತಿಪರ ಚಿಂತಕರಾಗಿದ್ದ ಪ್ರೊ.ಮಹೇಶ್‌ ಚಂದ್ರ ಗುರು (Maheshchandra Guru) ನಿಧನ ಹೊಂದಿದ್ದಾರೆ. 68 ವರ್ಷದ ಅವರು ಅನಾರೋಗ್ಯಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಹೇಶ್ ಚಂದ್ರ ಗುರು ಕಾಲಿನ ಗ್ಯಾಂಗ್ರಿನ್​​ಗೆ ಒಳಗಾಗಿದ್ದರು. ಹೀಗಾಗಿ ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಇಂದು ರಾತ್ರಿ 7.30ಕ್ಕೆ ಹೃದಯಘಾತ ಸಂಭವಿಸಿ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.

ಮಹೇಶ್​ಚಂದ್ರ ಅವರು ಆರಂಭದಲ್ಲಿ ಹೈದರಬಾದ್‌ ಕರ್ತವ್ಯ ನಿರ್ವಹಿಸಿದ್ದರು. ಅಲ್ಲಿ ಅವರು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಹುದ್ದೆ ಆರಂಭಿಸಿದ್ದರು. ಅಲ್ಲಿಂದ ಅವರು ಮಂಗಳೂರು ವಿವಿಯಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕ ಹುದ್ದೆಗೆ ನೇಮಕಗೊಂಡರು. ಅಲ್ಲಿಂದ ಮೈಸೂರು ವಿವಿಗೆ ವರ್ಗಾವಣೆಗೊಂಡು 2009ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.

ಇದನ್ನೂ ಓದಿ: CM siddaramaiah : ಕಾಂಗ್ರೆಸ್ ಪಕ್ಷ, ಸರ್ಕಾರ ಸಿದ್ದರಾಮಯ್ಯ ಬೆಂಬಲಕ್ಕಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ನಿವೃತ್ತಿ ಬಳಿಕ ಪ್ರಗತಿಪರ ಚಳವಳಿಗಳಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಅವರು ಪ್ರಗತಿಪರ ಹಾಗೂ ವೈಚಾರಿಕ ಚಿಂತನೆಗಳನ್ನು ಬಿತ್ತುತ್ತಿದ್ದರು. ಮೈಸೂರಿನ ಐತಿಹಾಸಿಕ ದಸರಾ ವೇಳೆ ಮಹಿಷಾ ದಸರಾ ಆಚರಣೆಯನ್ನು ಆರಂಭಿಸಿದ್ದರು. ಪ್ರೊ.ಮಹೇಶ್‌ ಚಂದ್ರ ಗುರು ಅವರ ನಿಧನಕ್ಕೆ ನಾಡಿನ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಂತಾಪ

ನನಗೆ ಆತ್ಮೀಯರಾಗಿದ್ದ ಮೈಸೂರಿನ ಪ್ರಗತಿಪರ ಚಿಂತಕ ಡಾ.ಮಹೇಶ್ ಚಂದ್ರಗುರು ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಮಹೇಶ್ ಚಂದ್ರ ಗುರು ಅವರು ತರಗತಿಗಳಿಂದ ಹೊರಗೆ ಕೂಡಾ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು.

ಬುದ್ದ, ಬಸವ, ಅಂಬೇಡ್ಕರ್ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಡಾ.ಮಹೇಶ್ ಚಂದ್ರ ಗುರು ಎಂದೂ ಮೌನಕ್ಕೆ ಮೊರೆಹೋಗದೆ ಮತ್ತು ಪರಿಣಾಮವನ್ನೂ ಲೆಕ್ಕಿಸದೆ ನೇರವಾಗಿ ಮತ್ತು ನಿಷ್ಠುರವಾಗಿ ತಮ್ಮ ಅಭಿಪ್ರಾಯ ಮಂಡಿಸುತ್ತಿದ್ದರು. ಡಾ.ಮಹೇಶ್ ಚಂದ್ರ ಗುರು ಅವರ ನಿಧನದಿಂದ ಸಮಾಜ ಒಬ್ಬ ಚಿಂತನಶೀಲ ಮಾರ್ಗದರ್ಶಕನನ್ನು ಕಳೆದುಕೊಂಡಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.

Exit mobile version