ಗದಗ: ಕರಾಳ ದಿನಾಚರಣೆ ಮಾಡುವವರನ್ನು ಸರ್ಕಾರ ಪ್ರತಿಬಂಧಿಸಬೇಕು ಎಂದು ತೋಂಟದಾರ್ಯ ಮಠ ಶ್ರೀ ಸಿದ್ಧರಾಮ ಶ್ರೀಗಳು (Sri Siddarama swamiji) ಹೇಳಿದ್ದಾರೆ. ತೋಂಟದಾರ್ಯ ಮಠದಲ್ಲಿ ಭಾವೈಕ್ಯತಾ ದಿನಾಚರಣೆಗೆ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀ (Sri Dingaleshwar Swamiji) ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಪ್ರತಿಯಾಗಿ ಅವರು ಇದನ್ನು ಹೇಳಿದ್ದಾರೆ.
ಗದಗ ತೋಂಟದಾರ್ಯ ಮಠ (Tontadarya Matha) ಹಾಗೂ ಶಿರಹಟ್ಟಿ ಫಕೀರೇಶ್ವರ ಮಠದ (Shirahatti Fakkireshwar Mutt) ನಡುವೆ ಸಿದ್ದಲಿಂಗ ಶ್ರೀಗಳ (Sri Siddalinga Swamiji) ಜಯಂತಿಯ ಆಚರಣೆಯ ವಿಷಯದಲ್ಲಿ ಉಂಟಾಗಿರುವ ಸಂಘರ್ಷ ಈಗ ತಾರಕಕ್ಕೆ ಏರಿದೆ. ಒಂದು ಮಠದ ಆಚರಣೆಯ ವಿರುದ್ಧ ಮತ್ತೊಂದು ಮಠ ವಿರೋಧ ವ್ಯಕ್ತಪಡಿಸಿದೆ. ಫೆಬ್ರವರಿ 21ನೇ ತಾರೀಕು ತೋಂಟದ ಸಿದ್ದಲಿಂಗ ಶ್ರೀಗಳ ಜಯಂತಿಯನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಲು ತೋಂಟದಾರ್ಯ ಶ್ರೀಗಳು ಮುಂದಾಗಿದ್ದಾರೆ. ಇದಕ್ಕೆ ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ.
“ಭಾವೈಕ್ಯತೆ ದಿನ ಅನ್ನುವುದು ಏಕವ್ಯಕ್ತಿಗೆ ಮೀಸಲು ಅಲ್ಲ. ತೋಂಟದಾರ್ಯ ಮಠ ಸರ್ವಜನಾಂಗದ ಶಾಂತಿಯ ತೋಟ. ನಾವು ಇಲ್ಲಿ ಜಾತ್ರೆಯ ಕಮಿಟಿಗೆ ಮುಸ್ಲಿಂ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಮಸೀದಿಗಳಿಗೆ ಮಠದ ಜಾಗ ಬಿಟ್ಟು ಕೊಟ್ಟಿದ್ದೇವೆ. ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ಎಲ್ಲಾ ಸಮುದಾಯಗಳ ಜೊತೆಗೆ ಭಾವೈಕ್ಯತೆಯಿಂದ ಇದ್ದರು. ಮಠದಲ್ಲಿ ಅಲ್ಲಾ, ಮಸೀದಿಯಲ್ಲಿ ಸಿದ್ಧಲಿಂಗನನ್ನ ಕಾಣಬೇಕೆಂದು ಶ್ರೀಗಳು ಹೇಳಿದ್ದರು. ಇನ್ನೊಬ್ಬರನ್ನ ಟೀಕೆ ಮಾಡಬಾರದು, ನಮ್ಮ ಕೆಲಸ ನಾವು ಮಾಡಿಕೊಂಡು ಹೋಗಬೇಕು ಎಂದಿದ್ದರು” ಎಂದು ತೋಂಟದಾರ್ಯ ಶ್ರೀಗಳು ಹೇಳಿದ್ದಾರೆ.
“ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿದ್ದ ಸಿದ್ದಲಿಂಗ ಶ್ರೀಗಳಿಗೆ ಭಾವೈಕ್ಯತೆ ಪದ ಬಳಕೆ ಅಗತ್ಯವಿಲ್ಲʼʼ ಎಂದಿದ್ದ ದಿಂಗಾಲೇಶ್ವರ ಶ್ರೀಗಳಿಗೆ ಉತ್ತರ ನೀಡಿರುವ ತೋಂಟದಾರ್ಯ ಶ್ರೀಗಳು, “ಲಿಂಗಾಯತ ಪ್ರತ್ಯೇಕ ಧರ್ಮವೇ, ಅದನ್ನು ಯಾರೂ ಒಡೆಯಬೇಕಿಲ್ಲ. ವೀರಶೈವ ಅನ್ನೋದು ಲಿಂಗಾಯತ ಧರ್ಮದ ಒಂದು ಭಾಗ. ಈ ಹಿಂದೆ ಬಸವರಾಜ್ ಬೊಮ್ಮಾಯಿ ಭಾವೈಕ್ಯತೆ ದಿನ ಘೋಷಿಸಿ ಸುಮ್ಮನಾಗಿದ್ದರು. ರಾಜಕಾರಣಿಗಳು ಯಾರ್ಯಾರಿಗೆ ಮಣಿತಾರೋ ಗೊತ್ತಿಲ್ಲ. ಯಾರೋ ಒಬ್ಬರಿಗೆ ಮಣಿದು ಆಚರಣೆ ಕೈ ಬಿಟ್ಟರು. ಹಿಂದೂ ಧರ್ಮಕ್ಕೆ ಸಂಸ್ಥಾಪಕ ಯಾರು? ಪರ್ಷಿಯನ್ನರು ಹಿಂದೂ ಅಂತ ಕರೆದರು” ಎಂದಿದ್ದಾರೆ.
ಭಾವೈಕ್ಯತೆ ದಿನ ಆಚರಿಸಿದರೆ ಫಕ್ಕೀರೇಶ್ವರ ಮಠದ ಭಕ್ತರಿಂದ ಕರಾಳ ದಿನಾಚರಣೆ ನಡಸಲಾಗುವುದು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, “ಅವರ ಕರಾಳ ದಿನಾಚರಣೆಗೆ ನಾವು ಏನೂ ಮಾಡುವುದಕ್ಕಾಗುವುದಿಲ್ಲ. ನಮಗೆ ರಕ್ಷಣೆ ಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಕರಾಳ ದಿನಾಚರಣೆ ಮಾಡುವವರಿಗೆ ಸರ್ಕಾರ ಪ್ರತಿಬಂಧ ಮಾಡಬೇಕು. ಭಾವೈಕ್ಯತೆಯ ದಿನಾಚರಣೆ ಮಾಡೋದನ್ನೂ ಸರ್ಕಾರ ತಪ್ಪು ಅಂದ್ರೆ ಕೈ ಬಿಡುತ್ತೇವೆ” ಎಂದು ಹೇಳಿದ್ದಾರೆ.
ಈ ಮೊದಲು, “ಫೆ.21ರಂದು ನಮ್ಮ ಮಠಕ್ಕೆ, ಭಕ್ತರ ಪಾಲಿಗೆ ಕರಾಳ ದಿನʼʼ ಎಂದು ಗದಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಫಕೀರ ದಿಂಗಾಲೇಶ್ವರ ಶ್ರೀಗಳು ಎಚ್ಚರಿಕೆ ನೀಡಿದ್ದರು. “ಭಾವೈಕ್ಯತೆಯ ಪರಂಪರೆ ಶಿರಹಟ್ಟಿಯ ಫಕೀರೇಶ್ವರ ಮಠದ್ದಾಗಿದೆ. ಲಿಂಗೈಕ್ಯ ಡಾ. ಸಿದ್ದಲಿಂಗ ಸ್ವಾಮೀಜಿಯವರಿಗೆ ಭಾವೈಕ್ಯತೆಯ ಹರಿಕಾರ ಎಂಬುದು ಅನ್ವಯ ಆಗುವುದಿಲ್ಲ. ಹೀಗಾಗಿ ಭಾವೈಕ್ಯತಾ ಹರಿಕಾರ ಎನ್ನುವ ಪದವನ್ನು ಬಳಕೆ ಮಾಡಬಾರದು. ಈಗಿನ ತೋಂಟದಾರ್ಯ ಮಠದ ಶ್ರೀಗಳಾದ ಸಿದ್ದರಾಮ ಸ್ವಾಮೀಜಿ ಹಾಗೆ ಮನವಿ ಮಾಡಿದ್ದಾರೆ. ಶಿರಹಟ್ಟಿ ಫಕೀರೇಶ್ವರ ಮಠ ಹಿಂದೂ- ಮುಸ್ಲಿಂ ಭಾವ್ಯಕ್ಯತೆ ಮಠ. ತೋಂಟದಾರ್ಯ ಮಠ ವಿರಕ್ತಮಠ, ಮಠದ ಸಂಪ್ರದಾಯ ಹೊಂದಿದೆ. ಫಕೀರೇಶ್ವರ ಮಠಕ್ಕೆ ಭಾವೈಕ್ಯತೆಯ ಸಂಪ್ರದಾಯವಿದೆ. ಫಕೀರೇಶ್ವರ ಮಠ ಹಿಂದೂ ಮುಸ್ಲಿಂ ಎರಡೂ ಸಂಪ್ರದಾಯ ಹೊಂದಿರುವ ಮಠ. ಹೀಗಾಗಿ ಅವರ ಭಾವೈಕ್ಯತಾ ದಿನ ಆಚರಣೆಗೆ ನಮ್ಮ ವಿರೋಧ ಇದೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ತೋಂಟದಾರ್ಯ ಮಠದ ಬೀದಿಯಲ್ಲಿ ಬೃಹತ್ ಹೋರಾಟ ಮಾಡುತ್ತೇವೆ” ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.
ಇದನ್ನೂ ಓದಿ: ಭಾವೈಕ್ಯತಾ ದಿನವಾಗಿ ತೋಂಟದ ಸಿದ್ದಲಿಂಗ ಶ್ರೀಗಳ ಜಯಂತಿ; ಫಕೀರ ದಿಂಗಾಲೇಶ್ವರ ಶ್ರೀ ತೀವ್ರ ವಿರೋಧ