ಮುಂಬೈ: ‘ನಿದ್ದೆಯೇ ಬುದ್ಧಿಯ ಮೂಲ’ ಎನ್ನುತ್ತಾರೆ. ಬೆಳಗ್ಗೆ 2 ಗಂಟೆ ಬೇಗ ಎದ್ದರೆ ದಿನವಿಡೀ ಆಕಳಿಕೆ, ಬೇಸರ, ಕೆಲಸದಲ್ಲಿ ನಿರಾಸಕ್ತಿ ಮೂಡುತ್ತದೆ. ಸತತವಾಗಿ ನಿದ್ದೆ (Sleeping) ಇಲ್ಲದಿದ್ದರೆ ಮನುಷ್ಯ ಹುಚ್ಚನಾಗುತ್ತಾನೆ ಎಂದು ಕೂಡ ಹೇಳುತ್ತಾರೆ. ಈಗ ಬಾಂಬೆ ಹೈಕೋರ್ಟ್ (Bombay High Court) ಕೂಡ ಇದನ್ನೇ ಉಚ್ಚರಿಸಿದೆ. “ನಿದ್ದೆ ಮನುಷ್ಯನ ಹಕ್ಕು (Right To Sleep) ಹಾಗೂ ಮೂಲಭೂತ ಅವಶ್ಯಕತೆಯಾಗಿದೆ. ಯಾರೂ ಇದನ್ನು ಕಸಿಯಬಾರದು” ಎಂಬುದಾಗಿ ಅರ್ಜಿಯೊಂದರ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಯೊಬ್ಬರನ್ನು ರಾತ್ರಿಯಿಡೀ ವಿಚಾರಣೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಹಾಗೂ ಮಂಜೂಷ ದೇಶಪಾಂಡೆ ಅವರು ಈ ಮೇಲಿನಂತೆ ಆದೇಶ ಹೊರಡಿಸಿದ್ದಾರೆ. “ಇ.ಡಿ ಅಧಿಕಾರಿಗಳು ಯಾರನ್ನೇ ಆಗಲಿ ವಿಚಾರಣೆ ನಡೆಸಲು, ಸಮನ್ಸ್ ನೀಡಲು, ಅವರ ಮನೆಗೆ ದಾಳಿ ನಡೆಸಿ ಪರಿಶೀಲನೆ ಮಾಡಲು, ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ನಿಯಮಿತ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು” ಎಂದು ಕೂಡ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.
“ನಿದ್ದೆ ಮನುಷ್ಯನ ಹಕ್ಕಾಗಿದೆ. ಅದೊಂದು ಸಾಮಾನ್ಯ ಅವಶ್ಯಕತೆಯಾಗಿದೆ. ಯಾರಾದರೂ ಮನುಷ್ಯನ ನಿದ್ದೆಯ ಹಕ್ಕನ್ನು ಕಸಿದುಕೊಂಡರೆ, ಆತನ ನಿದ್ದೆಗೆ ಭಂಗ ಮಾಡಿದರೆ ಅದು ಮನುಷ್ಯನ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅದರಲ್ಲೂ, ಇ.ಡಿ ಅಧಿಕಾರಿಗಳು ಹೊತ್ತಲ್ಲದ ಹೊತ್ತಲ್ಲಿ ದಾಳಿ ನಡೆಸಿ, ವಿಚಾರಣೆ ಮಾಡಿದರೆ ಖಂಡಿತವಾಗಿಯೂ ಅವರ ನಿದ್ದೆಗೆ ಭಂಗವುಂಟಾಗುತ್ತದೆ. ಯಾವುದೇ ವ್ಯಕ್ತಿಗೆ ಸರಿಯಾದ ನಿದ್ದೆ ಇಲ್ಲದಿದ್ದರೆ ಆತನ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.
ಏನಿದು ಪ್ರಕರಣ?
ಮಹಾರಾಷ್ಟ್ರದ ಗಾಂಧಿಧಾಮ ನಿವಾಸಿಯಾದ ರಾಮ್ ಕೋಟುಮಲ್ (64) ಎಂಬುವರನ್ನು ಇ.ಡಿ ಅಧಿಕಾರಿಗಳು 2023ರ ಆಗಸ್ಟ್‌ನಲ್ಲಿ ಬಂಧಿಸಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಅವರನ್ನು ಬಂಧಿಸಿದ್ದರು. ಇ.ಡಿ ಅಧಿಕಾರಿಗಳು ರಾತ್ರಿಯಿಡೀ ಅವರನ್ನು ವಿಚಾರಣೆ ನಡೆಸಿದ್ದರು. ಆರೋಪಿಯು ಶೌಚಾಲಯಕ್ಕೆ ಹೋದರೆ, ಅಲ್ಲಿಯೂ ಅವರಿಗೆ ತೊಂದರೆ ಕೊಟ್ಟಿದ್ದರು. ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ರಾಮ್ ಕೋಟುಮಲ್ ಅವರ ಬಂಧನವೇ ಕಾನೂನುಬಾಹಿರವಾಗಿದೆ ಎಂಬುದಾಗಿ ಅವರ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿದರು. ಆಗ ನ್ಯಾಯಾಲಯವು ಇ.ಡಿ ಅಧಿಕಾರಿಗಳಿಗೆ ಸಮಯ ನಿಗದಿಪಡಿಸಿಕೊಳ್ಳುವಂತೆ ಸೂಚಿಸಿತ್ತು.
ಇದನ್ನೂ ಓದಿ: Robbery Case : ನಿದ್ದೆಗೆ ಜಾರಿದ ಮಾಲೀಕನ ಕೈ-ಕಾಲು ಕಟ್ಟಿ, ಮನೆಯನ್ನೇ ಲೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್!