ಬೆಂಗಳೂರಿನ ಎಚ್ಎಸ್ಆರ್ ಬಡಾವಣೆಯಲ್ಲಿ ಒಳ ಚರಂಡಿ ಅಗೆಯುವ ಸಂದರ್ಭ ಅನಿಲ ಪೈಪ್‌ಲೈನ್ (Gas Pipeline) ಒಡೆದ ಕಾರಣ, ಮನೆಯೊಳಗಿದ್ದ ಎರಡು ಸಿಲಿಂಡರ್‌ಗಳು ಸ್ಫೋಟಗೊಂಡು ಮನೆಗೆ ಭಾರಿ ಹಾನಿಯಾಗಿದೆ ಮಾತ್ರವಲ್ಲದೆ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಗೂ ಮನೆಯ ಹೊರಗಡೆ ನಡೆಯುತ್ತಿರುವ ಡ್ರೈನೇಜ್ ಕಾಮಗಾರಿಗೂ ಸಂಬಂಧವಿದೆ ಎನ್ನುವುದು ನಂತರ ಬಯಲಿಗೆ ಬಂದಿದೆ. ಅನಿಲ ಪೈಪ್ ಒಡೆದಾಗ ಅಲ್ಲಿಂದ ಅನಿಲ ಸೋರಿ, ಒಳ ಚರಂಡಿ ಪೈಪ್ ಸೇರಿ ಅದರ ಮೂಲಕ ಪಕ್ಕದ ಮನೆಯೊಳಗೆ ಅನಿಲ ಆವರಿಸಿದೆ. ಮನೆಯವರು ಲೈಟ್ ಆನ್ ಮಾಡಿದಾಗ ಅನಿಲ ಸ್ಫೋಟಗೊಂಡು ಅನಾಹುತ ಸಂಭವಿಸಿದೆ. ಇದು ಊಹಾತೀತ ಹಾಗೂ ಆಘಾತಕಾರಿ.
ಇಲ್ಲಿ ಯಾರು ತಪ್ಪಿತಸ್ಥರು ಎಂದು ಸರಿಯಾಗಿ ತನಿಖೆಯಾಗಬೇಕು. ಗೇಲ್ ಕಂಪನಿ ಮನೆಮನೆಗೆ ಅನಿಲ ಪೂರೈಸಲು ನೆಲದಡಿ ಪೈಪ್ ಲೈನ್ ಹಾಕಿದೆ. ಗೇಲ್ ಗ್ಯಾಸ್ ಪೈಪ್ ಹಾದು ಹೋಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಎಲ್ಲೂ ಹಾಕಿಲ್ಲ. ಇಂಥ ಪೈಪ್ ಒಡೆದರೆ ಅಪಾಯ ಎಂಬ ವಿವೇಚನೆಯೇ ಇಲ್ಲದೆ ಜಲಮಂಡಳಿ ಸಿಬ್ಬಂದಿ ಪೈಪ್‌ಗೆ ಹಾನಿ ಮಾಡಿದ್ದಾರೆ. ಈಗ ಗೇಲ್‌ನವರು ಬಿಬಿಎಂಪಿ ಸಿಬ್ಬಂದಿಯ ಕಡೆಗೂ, ಬಿಬಿಎಂಪಿಯವರು ಗೇಲ್ ಕಡೆಗೂ ಕೈತೋರಿಸಿ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ಸನ್ನಿವೇಶದ ಗಂಭೀರತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ನಮ್ಮನ್ನು ಆಳುವವರು ಮನೆಮನೆಗೂ ಪೈಪ್‌ಲೈನ್ ಮೂಲಕ ಅನಿಲ ಪೂರೈಕೆ ಮಾಡುವ ಬೃಹತ್ ಯೋಜನೆಗಳ ಮಾತಾಡುತ್ತಿದ್ದಾರೆ; ಅದರ ಚಾಲನೆಗೆ ಮುಂದಾಗಿದ್ದಾರೆ. ಈ ಪೈಪ್‌ಲೈನ್‌ಗಳಿಗೆ ಇಂಥ ಕಾಮಗಾರಿಗಳ ಸಂದರ್ಭ ಡ್ಯಾಮೇಜ್ ಆದರೆ ನಗರದಲ್ಲಿ ಉಂಟಾಗಬಹುದಾದ ಅನಾಹುತದ ಅಂದಾಜು ನಮಗೆ ಇದೆಯೇ?
ನಗರದಲ್ಲಿ ನಡೆಯುವ ಸರಿಯಾದ ಪ್ಲಾನಿಂಗ್ ಇಲ್ಲದ ಸಾರ್ವಜನಿಕ ಕಾಮಗಾರಿಗಳ ಸಂದರ್ಭದಲ್ಲಿ ಅಥವಾ ನಿರ್ಲಕ್ಷ್ಯದಿಂದ ಉಂಟಾಗುವ ಅನಾಹುತಗಳನ್ನು ನಾವು ಗಮನಿಸಿಯೇ ಇರುತ್ತೇವೆ. ಇತ್ತೀಚೆಗೆ ಮೆಟ್ರೋ ಪಿಲ್ಲರ್ ಕುಸಿತದಿಂದ ತಾಯಿ ಮಗು ಬಲಿಯಾದುದನ್ನು ನಾವು ಕಂಡಿದ್ದೇವೆ. ರಸ್ತೆಯ ಬದಿಯಲ್ಲಿ ಬಾಯಿ ತೆರೆದು ನಿಂತಿರುವ ಮ್ಯಾನ್‌ಹೋಲ್‌ಗಳಿಗೆ, ಚರಂಡಿಗಳಿಗೆ ಬಿದ್ದು ಗಾಯಗೊಳ್ಳುವ ಅಥವಾ ಪ್ರಾಣ ಬಿಡುವ ಪಾದಚಾರಿಗಳು, ದ್ವಿಚಕ್ರ ಸವಾರರ ಸುದ್ದಿ ಕೂಡ ನಾವು ಓದಿದ್ದೇವೆ. ಇಂಥ ಅನಾಹುತಗಳಿಗೆ ಜವಾಬ್ದಾರರು ಯಾರೆಂಬುದನ್ನು ಕಂಡುಕೊಳ್ಳುವಲ್ಲಿ ಸಂಬಂಧಪಟ್ಟವರು ಜಾಣ ಕುರುಡು, ಕಿವುಡು ನಟಿಸುತ್ತಾರೆ. ಆದ್ದರಿಂದ ಹೊಣೆಗಾರರಿಗೆ ಶಿಕ್ಷೆಯಾಗುವುದಿಲ್ಲ. ಇನ್ನು ಕಾಮಗಾರಿಗಳ ಹೆಸರಿನಲ್ಲಿ ನಡೆಯುವ ಕ್ರೂರ ವಿಡಂಬನೆಗಳು ಒಂದೆರಡಲ್ಲ. ರಸ್ತೆಯನ್ನು ಸರಿಪಡಿಸಿ ಡಾಮರು ಹಾಕಿ ಹೋದ ಮರುದಿನವೇ ಅಲ್ಲಿಯವರೆಗೂ ಮಾಯವಾಗಿದ್ದ ಜಲಮಂಡಳಿಯವರೋ ಪೈಪ್‌ಲೈನ್‌ನವರೋ ತುರ್ತಾಗಿ ಬಂದು ಅಗೆಯಲು ಆರಂಭಿಸುತ್ತಾರೆ. ಇದಕ್ಕೆಲ್ಲಾ ಇಲಾಖೆಗಳ ಬೇಜವಾಬ್ದಾರಿ, ಸಮನ್ವಯವಿಲ್ಲದಿರುವಿಕೆಯೇ ಕಾರಣ. ಇಲಾಖೆಗಳ ನಡುವೆ ಸಮನ್ವಯ ಮೂಡುವುದು ಯಾವಾಗ?
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಈ ಬಾರಿ ಬರಗಾಲದ ಭೀತಿ, ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಲಿ
ಮೂಲ ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಇಲಾಖೆಗಳ ಮಧ್ಯೆ ಸಮನ್ವಯವೇ ಇಲ್ಲವಾಗಿದೆ. ಬೆಂಗಳೂರೆಂಬುದು ಇಂದು ಯೋಜನೆಯೇ ಇಲ್ಲದ ನಗರವಾಗಿ ಬೆಳೆದಿದೆ. ನಮ್ಮಲ್ಲಿ ನಗರಾಭಿವೃದ್ಧಿ ಇಲಾಖೆ ಎಂಬುದೊಂದಿದೆ. ಅದು ಏನು ಮಾಡುತ್ತಿದೆಯೋ ಗೊತ್ತಿಲ್ಲ. ಬೆಂಗಳೂರು ನಗರ ನಿವಾಸಿಗಳು ದೇಶದಲ್ಲೇ ಅತ್ಯಧಿಕ ತೆರಿಗೆ ಪಾವತಿಸುವವರು. 2021-22ನೇ ಸಾಲಿನಲ್ಲಿ ದೇಶದ ರಾಜಧಾನಿ ದೆಹಲಿಯನ್ನೂ ಬೆಂಗಳೂರು ನೇರ ತೆರಿಗೆ ಪಾವತಿಯಲ್ಲಿ ಮೀರಿಸಿತು. ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. ಇಷ್ಟು ತೆರಿಗೆ ಪಾವತಿಸುವಾಗ, ನಾವು ಬದುಕಲು ಅಪಾಯಕಾರಿಯಲ್ಲದ ವಾತಾವರಣ ನಮಗೆ ಒದಗಿಸಿಕೊಡಿ ಎಂದು ಕೇಳುವುದು ತಪ್ಪೇ? ಸುರಕ್ಷಿತ ನಗರ ಬದುಕು ಎಂದರೆ ಆರೋಗ್ಯ- ಶಿಕ್ಷಣ ಸೇವೆಯ ಜತೆಗೆ, ಸುರಕ್ಷಿತವಾಗಿ ಓಡಾಡಬಹುದಾದ ರಸ್ತೆಗಳೂ ಆಗಿವೆ. ಮೂಲಸೌಕರ್ಯವು ಎಲ್ಲಕ್ಕಿಂತ ಮುಖ್ಯವಾದುದು. ಇನ್ನಾದರೂ ಮೂಲಸೌಕರ್ಯ ಕಾಮಗಾರಿಗಳ ಸಂದರ್ಭದಲ್ಲಿ ಸರ್ಕಾರಿ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಲಿ. ನಗರನಿವಾಸಿಗಳ ಹಿತ ಪ್ರಥಮ ಆದ್ಯತೆಯಾಗಿರಲಿ.