Site icon Vistara News

ವಿಸ್ತಾರ ಸಂಪಾದಕೀಯ: ರೌಡಿ – ರಾಜಕಾರಣ ನಂಟು ಪ್ರಜಾಪ್ರಭುತ್ವಕ್ಕೆ ಆಪತ್ತು

ಸಂಪಾದಕೀಯ

ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆ, ರಾಜಕಾರಣಿಗಳು ಹಾಗೂ ರೌಡಿಗಳು ಹತ್ತಿರ ಹತ್ತಿರ ಬರುತ್ತಿದ್ದಾರೆ. ಸದ್ಯ ನಡೆದ ಕೆಲವು ರಾಜಕೀಯ ಪಕ್ಷಗಳ ಕಾರ್ಯಕ್ರಮಗಳನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತಿದೆ. ಶಿಸ್ತಿನ ಪಕ್ಷ ಎಂದೇ ಹೆಸರಾಗಿದ್ದ ಭಾರತೀಯ ಜನತಾ ಪಾರ್ಟಿಗೂ ರೌಡಿಗಳು ಪ್ರವೇಶ ಪಡೆಯುತ್ತಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ರೌಡಿ ಶೀಟರ್‌ ಎಂದು ಗುರುತಿಸಲಾದ, ಇತ್ತೀಚೆಗೆ ರೌಡಿ ಶೀಟರ್‌ಗಳ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆ ತಪ್ಪಿಸಿಕೊಂಡಿದ್ದಾನೆ ಎಂದೇ ಪೊಲೀಸ್‌ ಇಲಾಖೆ ಪ್ರಕಟಣೆ ಹೊರಡಿಸಿದ್ದ ಸೈಲೆಂಟ್‌ ಸುನಿಲ್‌ ಎಂಬಾತ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಜೆಪಿಯ ನಾಯಕರು ಭಾಗವಹಿಸಿದ್ದಾರೆ. ಇದರ ಜತೆಗೆ ನಾಗಮಂಗಲದಲ್ಲಿ ಫೈಟರ್‌ ರವಿ ಎಂಬ ಮಾಜಿ ರೌಡಿ ಅಧಿಕೃತವಾಗಿ ಬಿಜೆಪಿ ಸೇರಿದ್ದಾನೆ. ರವಿ ಕಾಂಗ್ರೆಸ್, ಜೆಡಿಎಸ್ ಬಾಗಿಲಿಗೆ ಹೋಗಿ ಸದಸ್ಯತ್ವ ಕೇಳಿದ್ದು, ಅಲ್ಲಿ ತಿರಸ್ಕರಿಸಿದಾಗ ಬಿಜೆಪಿ ಸದಸ್ಯತ್ವ ನೀಡಿದೆ ಎಂಬ ಮಾಹಿತಿಯಂತೂ, ʻಶಿಸ್ತಿನ ಪಕ್ಷʼ ಈ ದುರ್ಗತಿಗೆ ಇಳಿಯಬೇಕಿತ್ತೇ ಎಂದು ಪ್ರಶ್ನಿಸುವಂತೆ ಮಾಡಿದೆ.

ಸಹಜವಾಗಿಯೇ ಇದನ್ನು, ಬಿಜೆಪಿಯನ್ನು ಟೀಕಿಸಲು ಕಾಂಗ್ರೆಸ್‌ ಬಳಸಿಕೊಳ್ಳುತ್ತಿದೆ. ಆದರೆ ಪ್ರಸ್ತುತ ಈ ವಿಚಾರದಲ್ಲಿ ಯಾರೂ ಸುಭಗರಿಲ್ಲ ಎಂಬುದನ್ನಂತೂ ನೆನಪಿಸಿಕೊಳ್ಳಲೇಬೇಕು. 2018ರಲ್ಲಿ ವಿಧಾನಸಭೆಗೆ ಆರಿಸಿ ಬಂದ 221 ಶಾಸಕರಲ್ಲಿ 77 (35%) ಶಾಸಕರು ಕ್ರಿಮಿನಲ್‌ ಹಿನ್ನೆಲೆಯುಳ್ಳವರಾಗಿದ್ದಾರೆ. ಇದರಲ್ಲಿ 54 ಮಂದಿ ಹತ್ಯೆ ಯತ್ನ, ಅಪಹರಣ ಯತ್ನದಂಥ ಗಂಭೀರ ಪ್ರಕರಣಗಳ ಹಿನ್ನೆಲೆ ಹೊಂದಿದವರು. ಈ 77 ಮಂದಿಯಲ್ಲಿ ಬಿಜೆಪಿ 42, ಕಾಂಗ್ರೆಸ್‌ 23, ಜನತಾ ದಳ 11 ಅಪರಾಧ ಹಿನ್ನೆಲೆಯ ದಾಖಲೆ ಹೊಂದಿದವರನ್ನು ಸಂಪಾದಿಸಿಕೊಂಡಿದೆ. ಇದೆಲ್ಲವೂ ಚುನಾವಣಾ ಆಯೋಗಕ್ಕೆ ಚುನಾವಣೆಯ ಪೂರ್ವದಲ್ಲಿ ಈ ಅಭ್ಯರ್ಥಿಗಳೇ ನೀಡಿದ ಅಫಿಡವಿಟ್‌ನಿಂದ ಪಡೆದ ಮಾಹಿತಿ. ಇನ್ನು ರಾಷ್ಟ್ರಮಟ್ಟದಲ್ಲಿಯೂ ಈ ಸಂಖ್ಯೆ ಧಾರಾಳವಾಗಿದೆ. 539 ಲೋಕಸಭೆ ಸದಸ್ಯರಲ್ಲಿ 233 ಎಂಪಿಗಳು ಕ್ರಿಮಿನಲ್‌ ಹೊಂದಿದವರು; ಇವರಲ್ಲಿ 159 (29%) ಮಂದಿಯ ಅಪರಾಧ ಗಂಭೀರ ಸ್ವರೂಪದ್ದು. ಮತ್ತು ಇವರು ಎಲ್ಲ ಪಕ್ಷಗಳಲ್ಲೂ ಹರಡಿಕೊಂಡಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೆ. ಪ್ರಸ್ತುತ ಬಿಜೆಪಿಗೆ ರೌಡಿ ಶೀಟರ್‌ ಸೇರ್ಪಡೆಯನ್ನು ಟೀಕೆ ಮಾಡುತ್ತಿರುವ ಕಾಂಗ್ರೆಸ್‌ನದೂ ಈ ವಿಷಯದಲ್ಲಿ ಸಾಕಷ್ಟು ಪಾಲು ಇದೆ.

ರೌಡಿಗಳೇಕೆ ರಾಜಕಾರಣಕ್ಕೆ ಬರುತ್ತಾರೆ ಹಾಗೂ ರಾಜಕಾರಣಿಗಳಿಗೇಕೆ ರೌಡಿಗಳ ಸ್ನೇಹ ಬೇಕಿದೆ ಎಂಬುದನ್ನು ಊಹಿಸುವುದು ಸುಲಭ. ರಾಜಕಾರಣಿಗಳಿಗೆ ಪ್ರಚಾರಕ್ಕೆ, ಜನ ಸೇರಿಸಲು ರೌಡಿಗಳು ಬೇಕಾಗಿದ್ದರೆ, ರೌಡಿಗಳಿಗೆ ಕಾನೂನಿನ ಕೈಗಳಿಂದ ಪಾರಾಗಲು ರಾಜಕಾರಣಿಗಳ ರಕ್ಷಣೆ ಬೇಕು. ಉತ್ತರ ಪ್ರದೇಶದಲ್ಲಿ ಎಸ್‌ಪಿ ಹಾಗೂ ಬಿಎಸ್‌ಪಿ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷಗಳು ರೌಡಿಗಳಿಂದಲೇ ತುಂಬಿಹೋಗಿವೆ ಎಂಬುದನ್ನು ಸಮರ್ಥಿಸುವ ಅಂಕಿಅಂಶಗಳಿವೆ. ಹಾಗಾದರೆ ಇದು ಸಮರ್ಥನೀಯವೇ? ಖಂಡಿತಾ ಅಲ್ಲ. ರೌಡಿಗಳೇನೋ ತಾವು ಮಾಜಿ ರೌಡಿಗಳು ಎಂದು ಹೇಳಿಕೊಂಡು ರಾಜಕಾರಣ ಮಾಡಬಹುದು; ತಮ್ಮಲ್ಲಿರುವ ಹಣದ ಬಲದಿಂದ ಗೆದ್ದು ಬರಲೂ ಬಹುದು. ಆದರೆ ಅವರ ಉದ್ದೇಶವೇ ಅಧಿಕಾರದ ಮೂಲಕ ಪಡೆಯುವ ರಕ್ಷಣೆ ಹಾಗೂ ಅದರ ಮೂಲಕ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳುವುದಾಗಿರುತ್ತದೆ. ಸಮಾಜ ಸೇವೆಯ ಯಾವ ಉದ್ದೇಶವೂ ಅವರಲ್ಲಿ ಇರುವುದಿಲ್ಲ. ಪೊಲೀಸ್‌ ಇಲಾಖೆ ಕೂಡ ಇಂಥ ಕೇಡಿಗಳ ಮುಂದೆ ಕೈಕಟ್ಟಿ ನಿಲ್ಲಬೇಕಾದ ದುರ್ಭರ ಪರಿಸ್ಥಿತಿ ಉಂಟಾಗುತ್ತದೆ. ಇಂಥದೊಂದು ಸನ್ನಿವೇಶ ಉಂಟಾಗುವುದು ಯಾವ ಪ್ರಜಾಪ್ರಭುತ್ವಕ್ಕೂ ಭೂಷಣ ಅಲ್ಲ. ರಾಜಕಾರಣವೆಂಬುದು ಸೇವೆಯ ಮಹಾನ್‌ ಉದ್ದೇಶಕ್ಕಾಗಿ ಇರುವಂಥದು ಎಂಬುದೇ ಜನಪ್ರಿಯ ಆಶಯ ಹಾಗೂ ಅದರ ಮೌಲ್ಯ ಕೂಡ.

ತನ್ನದು ಶಿಸ್ತಿನ ಪಕ್ಷ ಎಂದು ಹೇಳುವ ಬಿಜೆಪಿಗೆ ಇಂಥ ಪರಿಸ್ಥಿತಿ ಬರಬಾರದಾಗಿತ್ತು. ಈಗಲೂ ರೌಡಿ ಶೀಟರ್‌ ಪಟ್ಟಿಯಲ್ಲಿರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ, ಅವರ ಆಸರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಗತ್ಯ ಖಂಡಿತವಾಗಿಯೂ ಜನಸೇವಕರಿಗೆ ಇರಲಾರದು. ಒಂದು ಪಕ್ಷವನ್ನು ಸದೃಢ ಮಾಡುವುದೆಂದರೆ ರೌಡಿಗಳನ್ನು ಸೇರಿಸಿಕೊಳ್ಳುವುದಲ್ಲ. ಮೌಲ್ಯಗಳ ಮೂಲಕ, ಸಮಾಜ ಸೇವೆಯ ಕಾರ್ಯಗಳ ಮೂಲಕ ಜನರನ್ನು ತಲುಪುವುದೇ ಆಶಯವಾಗಿರಬೇಕು. ರೌಡಿಗಳೂ ಮನಪರಿವರ್ತನೆಯ ಮೂಲಕ ರಾಜಕಾರಣದಲ್ಲಿ ತೊಡಗಿಕೊಂಡರೆ ಅವರನ್ನು ಸ್ವಾಗತಿಸಬಾರದೆಂದೇನಿಲ್ಲ. ಆದರೆ ಚುನಾವಣೆಯ ಹೊಸ್ತಿಲಲ್ಲಿ ಅವಸರವಸರವಾಗಿ ಪಕ್ಷ ಸೇರಿಕೊಳ್ಳುವವರ ಹುನ್ನಾರ ಮತ್ತು ಸೇರಿಸಿಕೊಳ್ಳುವವರ ತುರ್ತು ಏನೆಂದು ಜನರಿಗೆ ಅರ್ಥವಾಗದೇ ಹೋಗುತ್ತದೆಯೇ? ಸಾಧ್ಯವಾದಷ್ಟೂ ಕಳಂಕಮುಕ್ತ ರಾಜಕಾರಣ ಮಾಡಬೇಕು ಎನ್ನುವುದು ಬಿಜೆಪಿಯ ಆಚಾರ್ಯಪುರುಷರಾದ ಶ್ಯಾಮ್‌ಪ್ರಸಾದ್‌ ಮುಖರ್ಜಿ, ವಾಜಪೇಯಿ, ಆಡ್ವಾಣಿಯವರ ಕಾಳಜಿಯಾಗಿತ್ತು. ಅದು ಬಿಜೆಪಿಯದೂ ಸೇರಿದಂತೆ ಎಲ್ಲ ಜನನಾಯಕರ ಕಾಳಜಿಯಾಗಿರಲಿ.

ಇದನ್ನು ಓದಿ | ವಿಸ್ತಾರ ಸಂಪಾದಕೀಯ | ಅಫಘಾನಿಸ್ತಾನದಲ್ಲಿ ಕ್ರೌರ್ಯದಲ್ಲಿ ಬೇಯುತ್ತಿರುವ ನಾಗರಿಕ ಸಮಾಜ

Exit mobile version