ಹೊಸದಿಲ್ಲಿ: ನಿನ್ನೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಮೆದುಳಿನ ತುರ್ತು ಶಸ್ತ್ರಚಿಕಿತ್ಸೆಗೆ (Brain Surgery) ಒಳಗಾಗಿರುವ ಆಧ್ಯಾತ್ಮಿಕ ನಾಯಕ (spiritual leader) ಸದ್ಗುರು ಜಗ್ಗಿ ವಾಸುದೇವ್ (Sadguru Jaggi Vasudev) ಅವರ ಆರೋಗ್ಯದ (Sadguru Health updates) ಬಗ್ಗೆ ಮಹತ್ವದ ಸಂದೇಶವನ್ನು ಅವರ ಪುತ್ರಿ ರಾಧೆ ಜಗ್ಗಿ (Radhe Jaggi) ಇನ್‌ಸ್ಟಾಗ್ರಾಮ್‌ನಲ್ಲಿ (instagram) ನೀಡಿದ್ದಾರೆ.
ಸದ್ಗುರು (Sadguru Jaggi Vasudev) ಆರೋಗ್ಯವಾಗಿದ್ದಾರೆ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಾಧೆ ಹೇಳಿದ್ದಾರೆ. “ಆರೋಗ್ಯ ವಿಚಾರಿಸುತ್ತಿರುವವರಿಗೆ: ಸದ್ಗುರುಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ರಾಧೆ ಜಗ್ಗಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಬುಧವಾರ ತಮ್ಮ ತಂದೆಯ ಆರೋಗ್ಯದ ಕುರಿತು ಅಪ್‌ಡೇಟ್ ಹಂಚಿಕೊಂಡಿದ್ದಾರೆ.
ನಿನ್ನೆ ಮೆದುಳಿನಲ್ಲಿ ಮಾರಕ ರಕ್ತಸ್ರಾವವನ್ನು ಅನುಭವಿಸಿದ ನಂತರ ಸದ್ಗುರು ದಿಲ್ಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ರಾಧೆ ಅವರ ಅಪ್‌ಡೇಟ್‌ಗೂ ಮುನ್ನ ಸದ್ಗುರು ತಮ್ಮ ಆಸ್ಪತ್ರೆಯ ಹಾಸಿಗೆಯಿಂದ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ವೀಡಿಯೊ ವೈರಲ್ ಆಗಿತ್ತು.
“ಅಪೋಲೋ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕರು ಸಮಸ್ಯೆ ಹುಡುಕೋಣ ಎಂದು ನನ್ನ ತಲೆಬುರುಡೆಯನ್ನು ತೆರೆದರು. ಆದರೆ ಏನೂ ಕಂಡುಬರಲಿಲ್ಲ- ಅದು ಸಂಪೂರ್ಣವಾಗಿ ಖಾಲಿಯಾಗಿತ್ತು. ಆದ್ದರಿಂದ ಅವರು ಅದನ್ನು ಬಿಟ್ಟುಕೊಟ್ಟು ಮತ್ತೆ ಹೊಲಿಗೆ ಹಾಕಿದರು. ನಾನು ಈಗ ದೆಹಲಿಯಲ್ಲಿ ನಾನು ತೇಪೆಹಾಕಿದ ತಲೆಬುರುಡೆಯೊಂದಿಗೆ ಇದ್ದೇನೆ, ಆದರೆ ಮೆದುಳು ಯಾವುದೇ ಹಾನಿಗೊಳಗಾಗಿಲ್ಲ” ಎಂದು ಸದ್ಗುರು ವಿನೋದಮಯವಾಗಿ ಅದರಲ್ಲಿ ಹೇಳಿದ್ದರು.
ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಸದ್ಗರುವಿನೊಂದಿಗೆ ಮಾತನಾಡಿದ್ದು, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. “ಸದ್ಗುರು ಅವರೊಂದಿಗೆ ಮಾತನಾಡಿದ್ದೇನೆ. ಅವರಿಗೆ ಉತ್ತಮ ಆರೋಗ್ಯ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದೇನೆ” ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೋದಿಯವರ ಸಂದೇಶಕ್ಕೆ ಪ್ರತಿಕ್ರಿಯಿಸಿದ ಸದ್ಗುರು, “ಪ್ರೀತಿಯ ಪ್ರಧಾನ ಮಂತ್ರಿಜೀ, ನನ್ನ ಬಗ್ಗೆ ಕಳವಳ ಪಡಬೇಡಿ. ನಿಮಗೆ ಮುನ್ನಡೆಸಲು ಒಂದು ದೇಶವೇ ಇದೆ. ನಿಮ್ಮ ಕಾಳಜಿಯಿಂದ ನನ್ನ ಹೃದಯತುಂಬಿದೆ. ನಾನು ಚೇತರಿಕೆಯ ಹಾದಿಯಲ್ಲಿದ್ದೇನೆ. ಧನ್ಯವಾದ” ಎಂದಿದ್ದಾರೆ.
ಆಸ್ಪತ್ರೆ ನೀಡಿದ ಮಾಹಿತಿ
ದೆಹಲಿಯ ಇಂದ್ರಪ್ರಸ್ಥ ಅಪೋಲೋ ಹಾಸ್ಪಿಟಲ್ಸ್‌ನ ಹಿರಿಯ ಸಲಹೆಗಾರ, ನರರೋಗ ತಜ್ಞ ಡಾ. ವಿನಿತ್ ಸೂರಿ ಅವರ ಬಳಿ ಮಾರ್ಚ್ 15ರ ಮಧ್ಯಾಹ್ನ 3:45ರ ಸುಮಾರಿಗೆ ಸದ್ಗುರು ತೀವ್ರ ತಲೆನೋವಿನ ಕಾರಣ ಸಮಾಲೋಚಿಸಿದ್ದರು. ವಿನಿತ್ ಸೂರಿ ಅವರು ತಕ್ಷಣವೇ ಇದು ಸಬ್-ಡ್ಯೂರಲ್ ಹೆಮಟೋಮಾ ಇರಬಹುದು ಎಂದು ಶಂಕಿಸಿದ್ದರು. ತುರ್ತು MRI ಸ್ಕ್ಯಾನ್‌ಗೆ ಸಲಹೆ ನೀಡಿದ್ದರು. ಅದೇ ದಿನ ಸಂಜೆ 4:30ಕ್ಕೆ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ಸದ್ಗುರು ಮೆದುಳಿನ ಎಂಆರ್‌ಐ ಮಾಡಿಸಿಕೊಂಡರು. ಮೆದುಳಿನಲ್ಲಿ ಭಾರೀ ರಕ್ತಸ್ರಾವ ಕಂಡುಬಂದಿತ್ತು.
24-48 ಗಂಟೆಗಳ ಅವಧಿಯ ಒಂದು ತಾಜಾ ರಕ್ತಸ್ರಾವದ ಜೊತೆಗೆ, 3-4 ವಾರಗಳ ಅವಧಿಯ ಹಿಂದಿನ ದೀರ್ಘಕಾಲದ ರಕ್ತಸ್ರಾವದ ಗುರುತೂ ಇತ್ತು. ಸದ್ಗುರುಗಳಿಗೆ ತಕ್ಷಣವೇ ಆಸ್ಪತ್ರೆಗೆ ಸೇರಲು ಸಲಹೆ ನೀಡಲಾಯಿತು. ಆದರೆ ಅವರು ಮಾರ್ಚ್ 15ರಂದು ಸಂಜೆ 6 ಗಂಟೆಗೆ ಮತ್ತು ಮಾರ್ಚ್ 16ರಂದು ಇಂಡಿಯಾ ಟುಡೇ ಸಮಾವೇಶದಲ್ಲಿ ಭಾಗವಹಿಸಲಿದ್ದರು.
ಡಾ. ಸೂರಿ ಅವರ ಪ್ರಕಾರ, ಸದ್ಗುರು “ನನ್ನ ಕಳೆದ 40 ವರ್ಷಗಳಲ್ಲಿ ನಾನು ಒಂದೇ ಒಂದು ಸಭೆಯನ್ನು ತಪ್ಪಿಸಿಲ್ಲ” ಎಂದು ಹೇಳಿದರು. ತೀವ್ರವಾದ ನೋವಿನ ನಡುವೆಯೂ ಅವರು ನೋವು ನಿವಾರಕಗಳ ಬೆಂಬಲದಿಂದ ಸಭೆಯಲ್ಲಿ ಭಾಗವಹಿಸಿದರು.
ಮಾರ್ಚ್ 17ರಂದು ಸದ್ಗುರುವಿಗೆ ಎಡಗಾಲಿನ ಊತ, ಪ್ರಜ್ಞೆಯಲ್ಲಿ ಕುಸಿತ, ಪುನರಾವರ್ತಿತ ವಾಂತಿ ಕಂಡುಬಂತು. ತಲೆನೋವು ತೀವ್ರವಾಗಿ ಉಲ್ಬಣಗೊಂಡಿತು. ಅಂತಿಮವಾಗಿ ಡಾ. ವಿನಿತ್ ಸೂರಿ ಅವರ ಆರೈಕೆಯಲ್ಲಿ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. “ಇದೀಗ ನೀವು ಸರ್ಜರಿ ನಿರ್ವಹಿಸುವ ಸಮಯ” ಎಂದು ಸದ್ಗುರು ಹೇಳಿದರು.
ಮೆದುಳಿನ ಊತ ಮಾರಣಾಂತಿಕವಾಗಿ ಬೆಳೆದುದನ್ನು ತುರ್ತು CT ಮುಖ್ಯಸ್ಥರು ಖಚಿತಪಡಿಸಿದರು. ಡಾ. ವಿನಿತ್ ಸೂರಿ, ಡಾ. ಪ್ರಣವ್ ಕುಮಾರ್, ಡಾ. ಸುಧೀರ್ ತ್ಯಾಗಿ ಮತ್ತು ಡಾ. ಎಸ್ ಚಟರ್ಜಿ ಅವರನ್ನೊಳಗೊಂಡ ವೈದ್ಯರ ತಂಡವು ಸದ್ಗುರುಗಳ ಸರ್ಜರಿ ನಿರ್ವಹಿಸಿತು. ತಲೆಬುರುಡೆಯಲ್ಲಿನ ರಕ್ತಸ್ರಾವವನ್ನು ತೆಗೆದುಹಾಕಲು ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ನಡೆಯಿತು. ಶಸ್ತ್ರಚಿಕಿತ್ಸೆಯ ನಂತರ ಸದ್ಗುರುಗಳನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ವೈದ್ಯರ ಪ್ರಕಾರ ಸದ್ಗುರು ಆರೋಗ್ಯದಲ್ಲಿ ಸ್ಥಿರವಾದ ಪ್ರಗತಿಯನ್ನು ತೋರಿಸಿದ್ದಾರೆ. ಅವರ ಮೆದುಳು, ದೇಹ ಮತ್ತು ಪ್ರಮುಖ ಆರೋಗ್ಯ ಸೂಚಿಗಳು ಸುಧಾರಿಸಿವೆ.
ಇದನ್ನೂ ಓದಿ: Sadguru Jaggi Vasudev: ಆಸ್ಪತ್ರೆ ಬೆಡ್‌ನಲ್ಲಿ ಸದ್ಗುರು; ದಿಗ್ಭ್ರಾಂತರಾದ ಕಂಗನಾ!