ಬೆಂಗಳೂರು: ಇಂದು (ಜು.15) ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ (Cabinet meeting) ಸಭೆ ಕರೆಯಲಾಗಿದ್ದು, ಇದರಲ್ಲಿ ರಾಜ್ಯ ಸರ್ಕಾರಿ ನೌಕರರ (Govt Employees) ವೇತನ ಹೆಚ್ಚಳ (Salary Hike) ಪ್ರಸ್ತಾವವನ್ನು ಅಜೆಂಡಾದಲ್ಲಿ ಸೇರಿಸಲಾಗಿದೆ. ಹೀಗಾಗಿ, ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು (Karnataka Govt) ಇಂದು ಸಿಹಿಸುದ್ದಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯ ಸರಕಾರಿ ನೌಕರರಿಗೆ 7ನೇ ರಾಜ್ಯ ವೇತನ ಆಯೋಗದ (7th pay commission) ಅಂತಿಮ ವರದಿಯ ಶಿಫಾರಸುಗಳ ಜಾರಿ ಸಂಬಂಧ ಇಂದು ಸಂಪುಟ ಸಭೆ ನಿರ್ಣಯ ಕೈಗೊಳ್ಳುವ ನಿರೀಕ್ಷೆಯಿದೆ.
ಇಂದು ಸಂಜೆ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಸಂಪುಟ ಕಾರ್ಯಸೂಚಿಯಲ್ಲಿ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯ ಶಿಫಾರಸುಗಳ ಜಾರಿ ವಿಷಯ ಸೇರ್ಪಡೆಯಾಗಿದೆ. ಬೇಡಿಕೆಗಾಗಿ ಮಾಸಾಂತ್ಯದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವ ಎಚ್ಚರಿಕೆಯನ್ನು ನೌಕರ ಸಂಘಟನೆಗಳು ನೀಡಿದ್ದವು. ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಸಂಪುಟ ಸಭೆಯಲ್ಲಿ ಈ ವಿಚಾರದಲ್ಲಿ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
7ನೇ ವೇತನ ಆಯೋಗವು ಶೇ.27.5 ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು. ಮಾರ್ಚ್ 2023 ರಿಂದಲೇ ಶೇ.17 ಮಧ್ಯಂತರ ಪರಿಹಾರ ನೀಡಲಾಗಿದ್ದು, ಇನ್ನು ಗರಿಷ್ಠ ಶೇ.10.5 ವೇತನ ಹೆಚ್ಚಳ ಆಗಬೇಕಿದೆ. 7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರಿಗೆ ಅಂತಿಮವಾಗಿ ಶೇ.8 ರಿಂದ ಶೇ.8.5 ರಷ್ಟು ವೇತನ ಹೆಚ್ಚಳ ನಿರೀಕ್ಷಿಸಲಾಗಿದ್ದು, ಒಟ್ಟಾರೆ ಏರಿಕೆ ಮೂಲವೇತನದ ಶೇ.25 ರಿಂದ ಶೇ.25.5 ತಲುಪುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮುಖ್ಯ ಕಾರ್ಯದರ್ಶಿಗೆ ಮನವಿ
ಬೆಂಗಳೂರು: ರಾಜ್ಯ 7ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನ, ಹಳೆಯ ಪಂಚಣಿ ಯೋಜನೆ (ಒಪಿಎಸ್), ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದ ನಿಯೋಗವು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿತು.
ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನೌಕರರ ಸಂಘ ಹಮ್ಮಿಕೊಂಡಿರುವ ಪ್ರತಿಭಟನೆಯ ಮೊದಲ ಹಂತವಾಗಿ ತಹಸೀಲ್ದಾರ್, ಜಿಲ್ಲಾಧಿಕಾರಿಗಳು, ಸ್ಥಳೀಯ ಶಾಸಕರು ಮತ್ತು ಸಚಿವರಿಗೆ ಮನವಿ ಪತ್ರ ನೀಡುವ ಮೂಲಕ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುತ್ತಿದೆ. ಈ ನಡುವೆ ಶುಕ್ರವಾರ, ಬೆಂಗಳೂರು ನಗರದ ಎಲ್ಲಾ ಇಲಾಖೆಗಳ ಸುಮಾರು 3000ಕ್ಕೂ ಹೆಚ್ಚು ನೌಕರರು, ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು. ಬಳಿಕ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಸಂಘದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.
ಇದನ್ನೂ ಓದಿ: Govt Employees: ವಿವಿಧ ಬೇಡಿಕೆ ಈಡೇರಿಸಲು ಮುಖ್ಯ ಕಾರ್ಯದರ್ಶಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ