ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ವೇಳೆ ಭಾರತೀಯರ ಬಣ್ಣದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ, ರಾಜೀನಾಮೆ ನೀಡಿದ್ದ ಸ್ಯಾಮ್ ಪಿತ್ರೋಡಾ (Sam Pitroda) ಅವರನ್ನು ಮತ್ತೆ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರನ್ನಾಗಿ (Indian Overseas Congress) ನೇಮಕ ಮಾಡಲಾಗಿದೆ. “ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಸ್ಯಾಮ್ ಪಿತ್ರೋಡಾ ಅವರನ್ನು ಮರು ನೇಮಕ ಮಾಡಿ ಎಐಸಿಸಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ತತ್‌ಕ್ಷಣದಿಂದಲೇ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ” ಎಂಬುದಾಗಿ ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.
“ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ ಇದ್ದಾರೆ” ಎಂಬುದಾಗಿ ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಸ್ಯಾಮ್ ಪಿತ್ರೋಡಾ ಹೇಳಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಬಿಜೆಪಿಯ ಹಲವು ನಾಯಕರು ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನು ಖಂಡಿಸಿದ್ದರು. ಇದರ ಹಿನ್ನೆಲೆಯಲ್ಲಿ ಸ್ಯಾಮ್ ಪಿತ್ರೋಡಾ ಅವರು ಮೇ 8ರಂದು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. “ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸ್ಯಾಮ್ ಪಿತ್ರೋಡಾ ನಿರ್ಧರಿಸಿದ್ದಾರೆ. ಇದು ಅವರು ಸ್ವ ಇಚ್ಛೆಯಿಂದ ತೆಗೆದುಕೊಂಡಿರುವ ತೀರ್ಮಾನವಾಗಿದೆ. ಅವರ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷರು ಸ್ವಾಗತಿಸಿದ್ದಾರೆ” ಎಂಬುದಾಗಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದರು.
Sam Pitroda re-appointed as chairman of the Indian Overseas Congress with immediate effect pic.twitter.com/JZNb5P3PCD
— ANI (@ANI) June 26, 2024
ಪಿತ್ರೋಡಾ ಹೇಳಿದ್ದೇನು?
ವೈವಿಧ್ಯತೆಯ ಬಗ್ಗೆ ಮಾತನಾಡುವಾಗ ಭಾರತದ ವಿವಿಧ ಭಾಗಗಳ ಜನತೆಯನ್ನು ಚೀನಿಯರು, ಅರಬ್ಬರು, ಬಿಳಿಯರು ಮತ್ತು ಆಫ್ರಿಕನ್ನರಿಗೆ ಹೋಲಿಸಿದ ಸ್ಯಾಮ್ ಪಿತ್ರೋಡಾ, ವಿವಾದ ಹುಟ್ಟುಹಾಕಿದರು. “ನಾವು ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಉಜ್ವಲ ಉದಾಹರಣೆಯಾಗಿದ್ದೇವೆ. ನಾವು ವೈವಿಧ್ಯತೆಯನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವ ದೇಶವಾಗಿದ್ದೇವೆ. ಇಲ್ಲಿ ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ. ಪಶ್ಚಿಮದಲ್ಲಿ ಜನರು ಹಾಗೆ ಅರಬ್ಬರಂತೆ, ಉತ್ತರದ ಜನರು ಬಹುಶಃ ಶ್ವೇತವರ್ಣೀಯರಂತೆ ಹಾಗೂ ದಕ್ಷಿಣದ ಜನರು ದಕ್ಷಿಣ ಆಫ್ರಿಕಾದವರಂತೆ ಕಾಣುತ್ತಾರೆ. ಪರವಾಗಿಲ್ಲ, ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು” ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಪಿತ್ರೋಡಾ ಹೇಳಿದ್ದರು.
ತಿರುಗೇಟು ಕೊಟ್ಟಿದ್ದ ಮೋದಿ
ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸ್ಯಾಮ್ ಪಿತ್ರೋಡಾ ಅವರಿಗೆ ತಿರುಗೇಟು ನೀಡಿದ್ದರು. “ಆದಿವಾಸಿ ಕುಟುಂಬದ ಮಗಳಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಚುನಾವಣೆ ವೇಳೆ ಸೋಲಿಸಲು ಕಾಂಗ್ರೆಸ್ ಏಕೆ ಶ್ರಮಿಸಿತು ಎಂದು ನಾನು ತುಂಬಾ ಯೋಚಿಸುತ್ತಿದ್ದೆ. ಇಂದು ನನಗೆ ಅದರ ಕಾರಣ ತಿಳಿಯಿತು. ‘ಶೆಹಜಾದಾ’ನ (ರಾಹುಲ್ ಗಾಂಧಿ) ಅಂಕಲ್ ಹಾಗೂ ಫಿಲಾಸಫಿ ಮಾರ್ಗದರ್ಶಕನೊಬ್ಬ ಅಮೆರಿಕದಲ್ಲಿದ್ದಾನೆ. ಆತ ಕ್ರಿಕೆಟ್‌ನ ಮೂರನೇ ಅಂಪೈರ್‌ನಂತೆ. ಈ ‘ಶೆಹಜಾದಾ’ ಮೂರನೇ ಅಂಪೈರ್‌ನಿಂದ ಸಲಹೆ ಪಡೆಯುತ್ತಾನೆ. ಕಪ್ಪು ಚರ್ಮ ಇರುವ ಭಾರತೀಯರು ಆಫ್ರಿಕಾದವರು ಎಂದು ಈ ʼತತ್ವಜ್ಞಾನಿ ಅಂಕಲ್ʼ ಹೇಳಿದ್ದಾರೆ. ಇದರರ್ಥ, ನೀವು ದೇಶದ ಹಲವಾರು ಜನರನ್ನು ಅವರ ಚರ್ಮದ ಬಣ್ಣದ ಆಧಾರದ ಮೇಲೆ ನಿಂದಿಸುತ್ತಿದ್ದೀರಿ” ಎಂದು ಕುಟುಕಿದ್ದರು.
ಇದನ್ನೂ ಓದಿ: ಪಿತ್ರೋಡಾ ‘ಸಂಪತ್ತು ಹಂಚಿಕೆ’ ಹೇಳಿಕೆ, ಮಣಿಶಂಕರ್ ಅಯ್ಯರ್ ಪಾಕ್ ಪ್ರೇಮ; ಕಾಂಗ್ರೆಸ್‌ಗೆ ಈಗ ತೀವ್ರ ಫಜೀತಿ!