Site icon Vistara News

Sam Pitroda: ಭಾರತೀಯರ ಬಣ್ಣದ ಕುರಿತು ಮಾತಾಡಿದ ಸ್ಯಾಮ್‌ ಪಿತ್ರೋಡಾ ತಲೆದಂಡ; ಕಾಂಗ್ರೆಸ್‌ ಸ್ಥಾನಕ್ಕೆ ರಾಜೀನಾಮೆ!

Sam Pitroda

Sam Pitroda Steps Down As Chairman Of Indian Overseas Congress Amid Row Over Racist Remark

ನವದೆಹಲಿ: ಭಾರತೀಯರ (Indians) ಬಣ್ಣದ ಕುರಿತು ಮಾತನಾಡುವ ಮೂಲಕ ಭಾರಿ ವಿವಾದಕ್ಕೆ ಕಾರಣವಾಗಿದ್ದ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ (Sam Pitroda) ತಲೆದಂಡವಾಗಿದೆ. “ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ ಇದ್ದಾರೆ” ಎಂಬುದಾಗಿ ಹೇಳುವ ಮೂಲಕ ಮನುಷ್ಯರ ಚರ್ಮದ ಬಣ್ಣದ ಕುರಿತು ಕೀಳು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ (Indian Overseas Congress) ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್‌ ಪಿತ್ರೋಡಾ ರಾಜೀನಾಮೆ ನೀಡಿದ್ದಾರೆ.

ಸ್ಯಾಮ್‌ ಪಿತ್ರೋಡಾ ರಾಜೀನಾಮೆ ಕುರಿತು ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್‌ ರಮೇಶ್‌ ಮಾಹಿತಿ ನೀಡಿದ್ದಾರೆ. “ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸ್ಯಾಮ್‌ ಪಿತ್ರೋಡಾ ನಿರ್ಧರಿಸಿದ್ದಾರೆ. ಇದು ಅವರು ಸ್ವ ಇಚ್ಛೆಯಿಂದ ತೆಗೆದುಕೊಂಡಿರವ ತೀರ್ಮಾನವಾಗಿದೆ. ಅವರ ನಿರ್ಧಾರವನ್ನು ಕಾಂಗ್ರೆಸ್‌ ಅಧ್ಯಕ್ಷರು ಸ್ವಾಗತಿಸಿದ್ದಾರೆ” ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಜೈರಾಮ್‌ ರಮೇಶ್‌ ಅವರು ಬರೆದುಕೊಂಡಿದ್ದಾರೆ. ಭಾರತೀಯರ ಚರ್ಮದ ಬಣ್ಣದ ಕುರಿತು ಅಪಹಾಸ್ಯದ ರೀತಿಯಲ್ಲಿ ಸ್ಯಾಮ್‌ ಪಿತ್ರೋಡಾ ಮಾತನಾಡಿದ್ದಕ್ಕೆ ಬಿಜೆಪಿ ನಾಯಕರು ಮಾತ್ರವಲ್ಲ, ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಸ್ಯಾಮ್‌ ಪಿತ್ರೋಡಾ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪಿತ್ರೋಡಾ ಹೇಳಿದ್ದೇನು?

ವೈವಿಧ್ಯತೆಯ ಬಗ್ಗೆ ಮಾತನಾಡುವಾಗ ಭಾರತದ ವಿವಿಧ ಭಾಗಗಳ ಜನತೆಯನ್ನು ಚೀನಿಯರು, ಅರಬ್ಬರು, ಬಿಳಿಯರು ಮತ್ತು ಆಫ್ರಿಕನ್ನರಿಗೆ ಹೋಲಿಸಿದ ಸ್ಯಾಮ್‌ ಪಿತ್ರೋಡಾ, ವಿವಾದ ಹುಟ್ಟುಹಾಕಿದರು. “ನಾವು ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಉಜ್ವಲ ಉದಾಹರಣೆಯಾಗಿದ್ದೇವೆ. ನಾವು ವೈವಿಧ್ಯತೆಯನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವ ದೇಶವಾಗಿದ್ದೇವೆ. ಇಲ್ಲಿ ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ. ಪಶ್ಚಿಮದಲ್ಲಿ ಜನರು ಹಾಗೆ ಅರಬ್ಬರಂತೆ, ಉತ್ತರದ ಜನರು ಬಹುಶಃ ಶ್ವೇತವರ್ಣೀಯರಂತೆ ಹಾಗೂ ದಕ್ಷಿಣದ ಜನರು ದಕ್ಷಿಣ ಆಫ್ರಿಕಾದವರಂತೆ ಕಾಣುತ್ತಾರೆ. ಪರವಾಗಿಲ್ಲ, ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು” ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಪಿತ್ರೋಡಾ ಹೇಳಿದ್ದರು.

ತಿರುಗೇಟು ಕೊಟ್ಟಿದ್ದ ಮೋದಿ

ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸ್ಯಾಮ್‌ ಪಿತ್ರೋಡಾ ಅವರಿಗೆ ತಿರುಗೇಟು ನೀಡಿದ್ದರು. “ಆದಿವಾಸಿ ಕುಟುಂಬದ ಮಗಳಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಚುನಾವಣೆ ವೇಳೆ ಸೋಲಿಸಲು ಕಾಂಗ್ರೆಸ್ ಏಕೆ ಶ್ರಮಿಸಿತು ಎಂದು ನಾನು ತುಂಬಾ ಯೋಚಿಸುತ್ತಿದ್ದೆ. ಇಂದು ನನಗೆ ಅದರ ಕಾರಣ ತಿಳಿಯಿತು. ‘ಶೆಹಜಾದಾ’ನ (ರಾಹುಲ್‌ ಗಾಂಧಿ) ಅಂಕಲ್‌ ಹಾಗೂ ಫಿಲಾಸಫಿ ಮಾರ್ಗದರ್ಶಕನೊಬ್ಬ ಅಮೆರಿಕದಲ್ಲಿದ್ದಾನೆ. ಆತ ಕ್ರಿಕೆಟ್‌ನ ಮೂರನೇ ಅಂಪೈರ್‌ನಂತೆ. ಈ ‘ಶೆಹಜಾದಾ’ ಮೂರನೇ ಅಂಪೈರ್‌ನಿಂದ ಸಲಹೆ ಪಡೆಯುತ್ತಾನೆ. ಕಪ್ಪು ಚರ್ಮ ಇರುವ ಭಾರತೀಯರು ಆಫ್ರಿಕಾದವರು ಎಂದು ಈ ʼತತ್ವಜ್ಞಾನಿ ಅಂಕಲ್‌ʼ ಹೇಳಿದ್ದಾರೆ. ಇದರರ್ಥ, ನೀವು ದೇಶದ ಹಲವಾರು ಜನರನ್ನು ಅವರ ಚರ್ಮದ ಬಣ್ಣದ ಆಧಾರದ ಮೇಲೆ ನಿಂದಿಸುತ್ತಿದ್ದೀರಿ” ಎಂದು ಕುಟುಕಿದ್ದರು.

ಇದನ್ನೂ ಓದಿ: Narendra Modi: ವಿಶ್ವದ ಗೌರವಕ್ಕೆ ಮೋದಿ ಅರ್ಹ; ಸಾಗರೋತ್ತರ ಕಾಂಗ್ರೆಸ್‌ ನಾಯಕನಿಂದಲೇ ಬಂತು ಮೆಚ್ಚುಗೆ

Exit mobile version