ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘವು ಆಯೋಜಿಸಿದ್ದ ‘ಸನಾತನ ನಿರ್ಮೂಲನಾ ಸಮಾವೇಶ’ವೆಂಬ ಆಕ್ಷೇಪಾರ್ಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ ಮತ್ತು ಡಿಎಂಕೆ ಸರ್ಕಾರದಲ್ಲಿ ಸಚಿವರೂ ಆಗಿರುವ ಉದಯನಿಧಿ ಸ್ಟಾಲಿನ್ ಅವರು, ಸನಾತನ ಧರ್ಮವನ್ನು ಮಾರಕ ರೋಗಗಳಿಗೆ ಹೋಲಿಸಿ ವಿಷ ಕಾರಿದ್ದಾರೆ.
“ಕೆಲವು ವಿಷಯಗಳನ್ನು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಒಳ್ಳೆಯದು. ನಾವು ಡೆಂಗ್ಯೂ, ಸೊಳ್ಳೆ, ಮಲೇರಿಯಾ ಅಥವಾ ಕೊರೊನಾದಂತಹ ಸೋಂಕನ್ನು ವಿರೋಧಿಸಬಾರದು. ಅವುಗಳನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮವನ್ನೂ ನಾವು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು” ಎಂದು ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ, ಅಂದರೆ ಹಿಂದೂ ಧರ್ಮದ ವಿರುದ್ಧ ಅಸಹಿಷ್ಣುತೆಯಿಂದ ಭಾಷಣ ಮಾಡಿದ್ದಾರೆ. ಸನಾತನ ನಿರ್ಮೂಲನೆ ಸಮಾವೇಶ ಆಯೋಜಿಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸನಾತನ ಹಿಂದೂ ಧರ್ಮ ಇಂದು ನಿನ್ನೆಯದಲ್ಲ. ಸಾವಿರಾರು ವರ್ಷಗಳಿಂದ ಬಲವಾಗಿ ಬೇರು ಬಿಟ್ಟಿರುವ, ಶಾಂತಿ ಸಹನೆಯನ್ನು ಸಾರುತ್ತ ಜಾಗತಿಕ ಪ್ರಶಂಸೆ ಗಳಿಸಿರುವ ಧರ್ಮ ಇದು. ನಮ್ಮ ದೇಶ ಹಿಂದೂಸ್ಥಾನ ಎಂದೇ ಕರೆಯಲ್ಪಡುತ್ತದೆ. ದೇಶದ ಶೇ.೮೦ಕ್ಕೂ ಹೆಚ್ಚು ಜನರು ಸನಾತನ ಹಿಂದೂ ಧರ್ಮದ ಅನುಯಾಯಿಗಳಿದ್ದಾರೆ. ಶತಶತಮಾನಗಳಿಂದ ಸನಾತನ ಹಿಂದೂ ಧರ್ಮ ನೂರಾರು, ಸಾವಿರಾರು ವಿಘ್ನಗಳನ್ನು, ಪರಕೀಯರ ದಾಳಿಗಳನ್ನು ಮತ್ತು ಜಟಿಲ ಸವಾಲುಗಳನ್ನು ಎದುರಿಸಿ ಅವುಗಳನ್ನು ಮೆಟ್ಟಿ ನಿಂತಿದೆ. ಭಾರತದ ಮೇಲೆ ದಂಡೆತ್ತಿ ಬಂದ ಮುಸಲ್ಮಾನ ದೊರೆಗಳು ನೂರಾರು ದೇವಸ್ಥಾನಗಳನ್ನು ನಾಶ ಮಾಡಿದರು. ಹಿಂದೂಗಳು ಪೂಜಿಸುವ ಪವಿತ್ರ ಮೂರ್ತಿಗಳನ್ನು ಕಿತ್ತೆಸೆದರು. ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ ಅವರನ್ನು ಮತಾಂತರಿಸಿದರು. ಆದರೂ ಅವರಿಗೆ ಸನಾತನ ಹಿಂದೂ ಧರ್ಮವನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ. ಆನಂತರ ಬಂದ ಬ್ರಿಟಿಷರು ಹಿಂದೂ ಧರ್ಮವನ್ನು ತುಚ್ಛವಾಗಿ ಕಂಡರು. ಹಿಂದೂಗಳ ಆಚರಣೆಯನ್ನು ಅವಹೇಳನ ಮಾಡಿದರು. ಆದರೂ ಅವರಿಗೆ ಸನಾತನ ಹಿಂದೂ ಧರ್ಮದ ಹಿರಿಮೆಯನ್ನು ತಗ್ಗಿಸಲು ಸಾಧ್ಯವಾಗದೇ ಹೋಯಿತು. ಆನಂತರ ಸ್ವತಂತ್ರ ಭಾರತದಲ್ಲಿ ಅಧಿಕಾರಕ್ಕೆ ಕಾಂಗ್ರೆಸ್ ಪಕ್ಷ ಜಾತ್ಯತೀತತೆಯ ಹೆಸರಿನಲ್ಲಿ ಸನಾತನ ಹಿಂದೂ ಧರ್ಮದ ಕುರಿತು ಅಸಡ್ಡೆ ತೋರಿತು. ಅಧಿಕಾರಕ್ಕಾಗಿ ದಶಕಗಳ ಕಾಲ ಮತ ಬ್ಯಾಂಕ್ ರಾಜಕಾರಣದ ದಾಳ ಉರುಳಿಸಿತು. ಹಿಂದೂ ಧರ್ಮದ ಕುರಿತು ತಾರತಮ್ಯದ ಧೋರಣೆ ತಾಳಿತು. ಇದರ ಪರಿಣಾಮವಾಗಿಯೇ ಅಯೋಧ್ಯೆ ರಾಮ ಮಂದಿರ ಆಂದೋಲನದ ನೆಪದಲ್ಲಿ ದೇಶದ ಶತಕೋಟಿ ಹಿಂದೂಗಳು ಒಂದಾಗಿ ದನಿ ಎತ್ತಿದರು. ಇದರ ಪರಿಣಾಮವನ್ನು ಕಾಂಗ್ರೆಸ್ ಪಕ್ಷ ಈಗ ಅನುಭವಿಸುತ್ತಿದೆ.
ಹೀಗೆ ಸನಾತನ ಹಿಂದೂ ಧರ್ಮ ಕಾಲಕಾಲಕ್ಕೆ ನಾನಾ ಬಗೆಯ ಅಗ್ನಿ ಪರೀಕ್ಷೆಗಳನ್ನು ಎದುರಿಸುತ್ತ, ಮತ್ತಷ್ಟು ಶಕ್ತಿಯಾಗಿ ಬೆಳೆಯುತ್ತಿದೆ. ಕ್ರೈಸ್ತ ಮಿಷನರಿಗಳು ವಿದ್ಯಾದಾನದ ಹೆಸರಿನಲ್ಲಿ ಶಾಲೆಗಳನ್ನು ತೆರೆದು ಅಲ್ಲಿ ಸನಾತನ ಧರ್ಮದ ಅಪಪ್ರಚಾರ ಮಾಡಿದವು. ಹಿಂದೂ ವಿದ್ಯಾರ್ಥಿಗಳ ಪರಂಪರಾಗತ ಆಚರಣೆಗಳನ್ನು ನಿರ್ಬಂಧಿಸಿದವು, ಶಾಲೆಗೆ ಬರುವಾಗ ಕುಂಕುಮ ಹಚ್ಚಿಕೊಳ್ಳಕೂಡದು ಇತ್ಯಾದಿ ನಿಯಮಗಳನ್ನು ರೂಪಿಸಿದವು. ಆದರೆ ವಿದ್ಯಾರ್ಥಿಗಳ ಹೃದಯದಲ್ಲಿರುವ ಸನಾತನ ಧರ್ಮದ ಅಸ್ಮಿತೆಯನ್ನು ಅಳಿಸಿ ಹಾಕಲು ಅವುಗಳಿಗೆ ಈವರೆಗೆ ಸಾಧ್ಯವಾಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಹಿಂದೂ ಧರ್ಮೀಯರ ಶಿಕ್ಷಣ ಸಂಸ್ಥೆಗಳು ಇಂದು ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಪ್ರಸರಿಸಲಾರಂಭಿಸಿವೆ. ಹೀಗೆ ಸನಾತನ ಧರ್ಮವನ್ನು ಹತ್ತಿಕ್ಕಲು ಯತ್ನಿಸಿದಷ್ಟೂ ಅದು ಇನ್ನಷ್ಟು ಬಲಶಾಲಿಯಾಗಿ ಪುಟಿದೇಳುತ್ತಲೇ ಇದೆ. ಸನಾತನ ಧರ್ಮ ಈಗ ಹಿಂದೆಂದೂ ಇಲ್ಲದಷ್ಟು ಪ್ರಖರವಾಗಿ ಬೆಳಗುತ್ತಿದೆ. ಈ ಧರ್ಮದ ಹಲವಾರು ಆಚಾರ -ವಿಚಾರ, ಸಂಸ್ಜೃತಿ- ಸಂಪ್ರದಾಯಗಳು ವಿದೇಶಗಳಲ್ಲಿನ ಅನ್ಯ ಧರ್ಮೀಯರನ್ನೂ ಸೆಳೆಯುತ್ತಿವೆ. ಇತಿಹಾಸವೇ ಇದಕ್ಕೆ ಸಾಕ್ಷಿಯಾಗಿದೆ.
ಉದಯನಿಧಿ ಸ್ಟಾಲಿನ್ ನಂಥ ಅವಿವೇಕಿಗಳು ಸೂರ್ಯನತ್ತ ಮುಖ ಮಾಡಿ ಉಗುಳುತ್ತಲೇ ಇದ್ದಾರೆ. ಆ ಉಗುಳು ತಮ್ಮ ಮುಖಕ್ಕೇ ಬಂದು ಬೀಳುತ್ತಿದೆ ಎಂಬ ಪ್ರಜ್ಞೆಯೂ ಅವರಿಗಿಲ್ಲ!
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ವರ್ಗಾವಣೆ ದಂಧೆಗೆ ಸಿಎಂ ಸಿದ್ದರಾಮಯ್ಯ ತಡೆ ಹಾಕಲಿ
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಒಂದಿಷ್ಟು ಪಕ್ಷಗಳು ಸನಾತನ ಹಿಂದೂ ಧರ್ಮವನ್ನು ಪ್ರಜ್ಞಾಪೂರ್ವಕವಾಗಿ ಗುರಿಯಾಗಿಸಿ ಅಲ್ಪಸಂಖ್ಯಾತರ ಮತಗಳ ಧ್ರುವೀಕರಣಕ್ಕೆ ಹವಣಿಸುತ್ತವೆ. ಇದಕ್ಕೆ ಪೂರಕವಾಗಿ ಒಂದಿಷ್ಟು ಎಡಪಂಥೀಯ ಸಂಘಟನೆಗಳು ವೇದಿಕೆ ಒದಗಿಸುತ್ತವೆ. ಈಗ ಚೆನ್ನೈನಲ್ಲಿ ಆಯೋಜಿಸಿದ್ದ ಸನಾತನ ಧರ್ಮ ನಿರ್ಮೂಲನೆ ಸಮಾವೇಶ ಇಂಥದ್ದೇ ಒಂದು ಕಾರ್ಯಕ್ರಮ ಇರಬಹುದು. ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳು ಸೈದ್ಧಾಂತಿಕ ಚಿಂತನ ಮಂಥನ ಆಯೋಜಿಸುವುದು ತಪ್ಪಲ್ಲ. ಆದರೆ ಈ ನೆಪದಲ್ಲಿ ಹಿಂದೂ ಧರ್ಮವನ್ನು ಅವಹೇಳನ ಮಾಡುವುದು ಖಂಡನೀಯ. ಸನಾತನ ಧರ್ಮದ ಅನುಯಾಯಿಗಳು ಎಲ್ಲ ಪಕ್ಷಗಳಲ್ಲೂ ಇರುತ್ತಾರೆ ಎಂಬ ಸಂಗತಿಯನ್ನು ಇವರು ಮರೆಯದಿರಲಿ.