Site icon Vistara News

ವಿಸ್ತಾರ ಸಂಪಾದಕೀಯ: ಅರ್ಹರಿಗೆ ಸಂದ ಪದ್ಮ ಪ್ರಶಸ್ತಿ, ತೆರೆಮರೆಯ ಸಾಧಕರಿಗೂ ಗೌರವ

SM Krishna

ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ಪೌರ ಸನ್ಮಾನಗಳಾದ ಪದ್ಮ ಪ್ರಶಸ್ತಿಗಳ 2023ನೇ ಸಾಲಿನ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ಕರ್ನಾಟಕದ 8 ಮಂದಿ ಇದ್ದಾರೆ ಎಂಬುದು ಹೆಮ್ಮೆಯ ವಿಷಯ. ಎಸ್‌ ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ, ಎಸ್ ಎಲ್ ಭೈರಪ್ಪ ಹಾಗೂ ಸುಧಾ ಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿಗಳು ದೊರೆತಿವೆ. ಕನ್ನಡಿಗರಿಗೆ ಚಿರಪರಿಚಿತರಾಗಿರುವ ಇವರ ಕೊಡುಗೆಯನ್ನು ಮತ್ತೆ ವಿವರಿಸಬೇಕಿಲ್ಲ. ಹಾಗೆಯೇ ಐದು ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳು ಬಂದಿವೆ. ಕರ್ನಾಟಕದ ಕೊಡಗಿನ ಉಮ್ಮಥಾಟ್ ಜಾನಪದ ನೃತ್ಯಗಾರ್ತಿ ರಾಣಿ ಮಾಚಯ್ಯ, ಚಿಕ್ಕಬಳ್ಳಾಪುರದ ತಮಟೆ ಕಲಾವಿದ ಮುನಿವೆಂಕಟಪ್ಪ, ಹಿರಿಯ ಪುರಾತತ್ವ ಶಾಸ್ತ್ರಜ್ಞ ಎಸ್ ಸುಬ್ಬರಾಮನ್, ಕಲಾವಿದರಾದ ಶಾ ರಶೀದ್ ಅಹ್ಮದ್ ಖಾದ್ರಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಾಧಕ ಖಾದರ್ ವಲಿ ದುಡೇಕುಲ ಅವರಿಗೆ ಪದ್ಮಶ್ರೀ ದೊರೆತಿದೆ.

ದೇಶದಲ್ಲಿ ಒಟ್ಟು 106 ಸಾಧಕ ಸಾಧಕಿಯರಿಗೆ ಈ ಗೌರವಗಳನ್ನು ಘೋಷಿಸಲಾಗಿದೆ. ಪ್ರಶಸ್ತಿಗಳನ್ನು ನೀಡುವಲ್ಲಿ ಪ್ರತಿಭೆಗೆ ಗರಿಷ್ಠ ಮನ್ನಣೆ ದೊರೆತಿರುವುದು ಎದ್ದು ಕಾಣಿಸುವ ಅಂಶ. ಇದರ ಜತೆಗೆ ಪ್ರಾದೇಶಿಕ ಮತ್ತು ಸಮುದಾಯ ಪ್ರಾತಿನಿಧ್ಯವೂ ಕೈಗೂಡಿಸಿದೆ. ಆಯಾ ಕ್ಷೇತ್ರದ ಅರ್ಹರನ್ನೇ ಪರಿಗಣಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರಶಸ್ತಿಗೆ ಅರ್ಹತೆಯೇ ಮಾನದಂಡ ಎಂಬ ಮಾತು ಸವಕಲಾದರೂ, ಪದ್ಮ ಪ್ರಶಸ್ತಿಗಳ ಹಿನ್ನೆಲೆಯಲ್ಲಿ ಮತ್ತೆ ಮೌಲ್ಯ ಪಡೆದುಕೊಂಡಿದೆ. ತೆರೆಮರೆಯ ಹಲವು ಸಾಧಕರನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲೇ ಹೆಸರಿಸುವುದಾದರೆ, ಕೊಡವ ಸಂಸ್ಕೃತಿ ಹಾಗೂ ನೃತ್ಯವನ್ನು ಪಸರಿಸುವಲ್ಲಿ ರಾಣಿ
ಮಾಚಯ್ಯ ಅವರ ಪಾತ್ರ ಮಹತ್ತರವಾದುದು. ಮುನಿ ವೆಂಕಟಪ್ಪ ಅವರು ತಮಟೆ ನುಡಿಸುವ ಕಲೆಯನ್ನು ಅದ್ಭುತ ಎತ್ತರಕ್ಕೆ ಕೊಂಡೊಯ್ದವರು.

ರಾಷ್ಟ್ರೀಯವಾಗಿ ನೋಡಿದರೆ, ಹಿಂದುಳಿದ ಇರುಳ ಸಮುದಾಯದಿಂದ ಬಂದು ಹಾವು ಹಿಡಿಯುವ ಪರಿಣಿತರಾಗಿ ನಾಗರಿಕರಿಗೆ ಸುರಕ್ಷತೆ ಒದಗಿಸಿದವರು, ಕಲಂಕಾರಿ- ಪಿತೋರಾ ಮುಂತಾದ ಅಪರೂಪದ, ಅಳಿವಿನಂಚಿನ ಕಲೆಗಳನ್ನು ಪೋಷಿಸುತ್ತಿರುವವರು, ಸಣ್ಣ ಹಿಡುವಳಿದಾರರಾಗಿದ್ದೂ ಸಾವಯವ ಕೃಷಿಯನ್ನು ಪೋಷಿಸಿದವರು, ಹೋ- ಟೋಟೋ ಮುಂತಾದ ಬುಡಕಟ್ಟು ಸಮುದಾಯದ ಭಾಷೆಗಳ ಉಳಿವಿಗೆ ಶ್ರಮಿಸಿದವರು, ಅಳಿವಿನಂಚಿನಲ್ಲಿರುವ ವಾದ್ಯಗಳಿಗೆ ಜೀವ ತುಂಬಿದವರು- ಹೀಗೆ ಪುರಸ್ಕೃತರ ಪಟ್ಟಿ ನೋಡಿದರೆ ಭಾರತೀಯ ಸಾಮುದಾಯಿಕ- ಕಲಾತ್ಮಕ ಜೀವನಕ್ರಮವನ್ನೇ ಒಂದು ಸಲ ನೋಡಿದಂತಾಗುತ್ತದೆ. ಹಾಗೆ ನೋಡಿದರೆ ಈ ಪಟ್ಟಿಯಲ್ಲಿ ಶ್ರೀಮಂತರ ಸಂಖ್ಯೆ ಕಡಿಮೆ. ಬಡ ಕಲಾವಿದರು- ತಜ್ಞರ ಪ್ರಮಾಣವೇ ಅಧಿಕ. ಕಳೆದ ಸಲವೂ ಹೀಗೆಯೇ ಅನೇಕ ತೆರೆಮರೆಯ ಸಾಧಕರನ್ನು ಗುರುತಿಸಿದುದನ್ನು ನಾವು ಸ್ಮರಿಸಿಕೊಳ್ಳಬಹುದು.

ಇಂಥ ಆಯ್ಕೆಗಳ ಮೂಲಕ ಕೇಂದ್ರ ಸರ್ಕಾರ ಒಂದು ಮಹತ್ವದ ಸಂದೇಶವನ್ನೇ ನೀಡಿದೆ. ‘ಇಲ್ಲಿ ಯಾರೂ ಅಮುಖ್ಯರಲ್ಲ’ ಎಂಬುದು ಈ ಸಂದೇಶದ ಸಾರವಾಗಿದೆ. ತಮ್ಮ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರು, ಸಮಾಜಕ್ಕೆ ಅತ್ಯುಪಯುಕ್ತವಾದ ಕೊಡುಗೆ ನೀಡಿದವರನ್ನು ಗುರುತಿಸುವುದು ಸಮಾಜದ ಹೊಣೆ. ಆದರೆ ಸಮಾಜದ ಪ್ರತಿನಿಧಿಯಾಗಿ ಸರ್ಕಾರ ಆ ಕೆಲಸವನ್ನು ಮಾಡಬೇಕು. ಇಂಥವರನ್ನು ಗುರುತಿಸಿದಾಗ ಅದು ನಿಜಕ್ಕೂ ಕಲೆ ಮುಂತಾದ ಕ್ಷೇತ್ರಗಳಲ್ಲಿ ಮಗ್ನರಾಗಿದ್ದುಕೊಂಡು, ಪ್ರತಿಫಲಾಪೇಕ್ಷೆಯಿಲ್ಲದೆ ದುಡಿಯುವ ಸಾಧಕರಲ್ಲಿ ಮತ್ತಷ್ಟು ಉತ್ಸಾಹವನ್ನು ಚಿಮ್ಮಿಸುತ್ತದೆ.

ಈ ಸಲ ಅಳಿವಿನಂಚಿನ ಭಾಷೆ, ವಾದ್ಯಗಳು, ಸಂಗೀತದ ಉಳಿವಿಗಾಗಿ ಕೆಲಸ ಮಾಡಿದವರಿಗೆ ಹೆಚ್ಚಿನ ಪ್ರಶಸ್ತಿಗಳು ದೊರೆತಿರುವುದು ಬಹಳ ವಿಶೇಷ. ಇಂಥ ಅಪರೂಪದ ಕ್ಷೇತ್ರಗಳನ್ನೂ ತಜ್ಞರನ್ನೂ ಗುರುತಿಸಿದಾಗ ಅವರಿಗೆ ತಾವು ಪಟ್ಟ ಶ್ರಮಕ್ಕೆ ಧನ್ಯತೆಯೂ ಉಂಟಾಗುವುದಲ್ಲದೆ, ಅವುಗಳ ಉಳಿವಿನ ಅಗತ್ಯದ ಬಗ್ಗೆ ಜನತೆಯ ಕಣ್ಣನ್ನೂ ತೆರೆಸಿದಂತಾಗುತ್ತದೆ.

ಪದ್ಮ ಪ್ರಶಸ್ತಿಗಳನ್ನು ಓಲೈಕೆಗಾಗಿ, ಮತಬ್ಯಾಂಕ್‌ಗಾಗಿ, ಮತೀಯ ಕಾರಣಗಳಿಗಾಗಿ ನೀಡಿದ್ದನ್ನೂ, ಅಧಿಕಾರದಲ್ಲಿದ್ದವರು ತಮಗೆ ತಾವೇ ಕೊಟ್ಟುಕೊಂಡದ್ದನ್ನೂ ನಾವು ಕಂಡಿದ್ದೇವೆ. ಅರ್ಹರಿಗೆ ಸಂದಾಗ ಆ ಪ್ರಶಸ್ತಿಗಳು ಘನತೆ ಉಳಿಸಿಕೊಳ್ಳುತ್ತವೆ. ದೇಶದಾದ್ಯಂತ ಹೆಸರು ಮಾಡಿರುವ ಭೈರಪ್ಪನವರಂಥ ಸಾಹಿತಿಗೆ ನೀಡುವ ಮೂಲಕ ಪದ್ಮ ಪ್ರಶಸ್ತಿಯ ಮೌಲ್ಯವೂ ಇನ್ನಷ್ಟು ಹೆಚ್ಚಿದೆ.

ಇದನ್ನೂ ಓದಿ: Padma Awards 2023: ಜನಸಾಮಾನ್ಯರಿಂದ ಹಿಡಿದು ಅಸಾಮಾನ್ಯ ಸಾಧಕರಿಗೆ ಪದ್ಮ ಗೌರವ, ಇಲ್ಲಿದೆ ಪಟ್ಟಿ

Exit mobile version