Site icon Vistara News

Actor Dwarakish: ಕರುನಾಡ ಕುಳ್ಳ, ಹಿರಿಯ ನಟ ದ್ವಾರಕೀಶ್‌ ಇನ್ನಿಲ್ಲ

Actor Dwarakish

ಬೆಂಗಳೂರು: ಕರುನಾಡ ಕುಳ್ಳ, ಮನೋಜ್ಞ ನಟನೆಯ ಮೂಲಕ ಮನೆಮಾತಾಗಿದ್ದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ (81) (Actor Dwarakish) ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್‌ ಅವರು ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ (ಏಪ್ರಿಲ್‌ 16) ನಿಧನರಾಗಿದ್ದಾರೆ. ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ದ್ವಾರಕೀಶ್‌ ಅವರ ಅಗಲಿಕೆಗೆ ಸ್ಯಾಂಡಲ್‌ವುಡ್‌ ನಟರು ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

1942ರ ಆಗಸ್ಟ್‌ 19ರಂದು ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಸಿದ ಅವರು ನಟನೆಯ ಮೂಲಕವೇ ಮನೆಮಾತಾಗಿದ್ದರು. ಇವರ ತಂದೆ ಶಾಮರಾವ್‌ ಹಾಗೂ ತಾಯಿ ಜಯಮ್ಮ. ಶಾರದಾ ವಿಲಾಸ್‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಇವರು ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದರು. ಆರಂಭದಲ್ಲಿ ಸಹೋದರನ ಜತೆಗೂಡಿ ಭಾರತ್ ಆಟೋ ಸ್ಪೇರ್ ಸ್ಟೋರ್ ಪ್ರಾರಂಭಿಸಿದರು. ಆದರೆ, ಅವರ ಆಸಕ್ತಿ ಸಿನಿಮಾ ಕಡೆಗೆ ಇತ್ತು.

ಡಿಕೆಶಿ ಸಂತಾಪ, ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ

ದ್ವಾರಕೀಶ್‌ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನಟಿ ಗಿರಿಜಾ ಲೋಕೇಶ್‌ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ. “ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಶ್ರೀ ದ್ವಾರಕೀಶ್‌ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. 1964ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ಹಾಸ್ಯ ಕಲಾವಿದ, ನಾಯಕ ಹಾಗೂ ಪೋಷಕ ನಟನಾಗಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕನ್ನಡ ಚಿತ್ರರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ದ್ವಾರಕೀಶ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಡಿಕೆಶಿ ಪೋಸ್ಟ್‌ ಮಾಡಿದ್ದಾರೆ. ಇನ್ನು, ದ್ವಾರಕೀಶ್‌ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇರಿಸಲು ತೀರ್ಮಾನಿಸಲಾಗಿದೆ.

ಡಾ.ರಾಜಕುಮಾರ್‌ ಸೇರಿ ಹಲವು ಗಣ್ಯರೊಂದಿಗೆ ನಟಿಸಿ ಅವರು ಸೈ ಎನಿಸಿಕೊಂಡಿದ್ದರು. ಕನ್ನಡ ಸಿನಿಮಾ ಜಗತ್ತಿನ ಪ್ರಚಂಡ ಕುಳ್ಳ ಎಂದೇ ಖ್ಯಾತರಾಗಿದ್ದ ಅವರು 1963ರಲ್ಲಿ ವೀರಸಂಕಲ್ಪ ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಅದರಲ್ಲೂ, 1966ರಲ್ಲಿ ಡಾ.ರಾಜಕುಮಾರ್‌ ಅಭಿನಯದ ಮೇಯರ್‌ ಮುತ್ತಣ್ಣ ಸಿನಿಮಾ ನಿರ್ಮಾಣ ಮಾಡಿದರು. ಅಲ್ಲಿಂದ ಡಾ.ರಾಜಕುಮಾರ್‌ ಅವರ ಜತೆ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು.

1985ರಲ್ಲಿ ಸಿನಿಮಾ ನಿರ್ದೇಶನಕ್ಕೆ ಕಾಲಿಟ್ಟ ದ್ವಾರಕೀಶ್‌ ಅವರು ಅಲ್ಲೂ ಯಶಸ್ವಿಯಾದರು. ಡಾ.ವಿಷ್ಣುವರ್ಧನ್‌ ಅಭಿನಯದ ನೀ ಬರೆದ ಕಾದಂಬರ್‌ ಸೂಪರ್‌ ಹಿಟ್‌ ಆಯಿತು. ಕಿಟ್ಟು-ಪುಟ್ಟು, ಸಿಂಗಾಪುರದಲ್ಲಿ ರಾಜಕುಳ್ಳ, ಭಾಗ್ಯವಂತರು, ಗುರು ಶಿಷ್ಯರು, ಪೆದ್ದ-ಗೆದ್ದ, ಆಪ್ತಮಿತ್ರ ಸೇರಿದಂತೆ ಹಲವು ಹಿಟ್‌ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ದ್ವಾರಕೀಶ್‌ ಅವರದ್ದಾಗಿದೆ. ಚೌಕ ಇವರ ಕೊನೆಯ ಸಿನಿಮಾ ಆಗಿದೆ. ʼದ್ವಾರಕೀಶ್‌ ಚಿತ್ರʼ ಇವರ ನಿರ್ಮಾಣ ಸಂಸ್ಥೆಯಾಗಿತ್ತು. ಇವರು ಸುಮಾರು 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು.

ಕುಳ್ಳ ಏಜೆಂಟ್‌ 000, ಕಿಟ್ಟು ಪುಟ್ಟು, ಕಳ್ಳ-ಕುಳ್ಳ, ಕುಳ್ಳ-ಕುಳ್ಳಿ, ಗುರು-ಶಿಷ್ಯರು, ಮಂಕು ತಿಮ್ಮ, ಪ್ರಚಂಡ ಕುಳ್ಳ, ನ್ಯಾಯ ಎಲ್ಲಿದೆ, ಹೊಸ ಕಳ್ಳ, ಹಳೇ ಕುಳ್ಳ, ಆಪ್ತಮಿತ್ರ ಇವರು ನಟಿಸಿದ ಪ್ರಮುಖ ಚಿತ್ರಗಳು. ನಾಯಕ ನಟನಾಗಿ, ಹಾಸ್ಯ ಕಲಾವಿದನಾಗಿ ಅಲ್ಲದೆ ಪೋಷಕ ಪಾತ್ರಗಳ ಮೂಲಕವೂ ಅವರು ಗಮನ ಸೆಳೆದಿದ್ದರು.

19 ಸಿನಿಮಾಗಳ ನಿರ್ದೇಶನ

ಡಾ.ವಿಷ್ಣುವರ್ಧನ್‌ ಹಾಗೂ ದ್ವಾರಕೀಶ್‌ ಜೋಡಿಯು ರಾಜ್ಯಾದ್ಯಂತ ಮೋಡಿ ಮಾಡಿತು. ಈ ಜೋಡಿಯು ಕಳ್ಳ-ಕುಳ್ಳ ಎಂದೇ ಖ್ಯಾತಿಯಾಯಿತು. ನೀ ಬರೆದ ಕಾದಂಬರಿ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ದ್ವಾರಕೀಶ್‌ ಅವರು 19 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ರಾಯರು ಬಂದರು ಮಾವನ ಮನೆಗೆ ಡಾನ್ಸ್‌ ರಾಜ ಡಾನ್ಸ್‌, ಶ್ರುತಿ ಹಾಕಿದ ಹೆಜ್ಜೆ ನಿರ್ದೇಶನ ಮಾಡಿದ ಪ್ರಮುಖ ಚಿತ್ರಗಳಾಗಿವೆ. ಕನ್ನಡದ ಜತೆಗೆ ಹಿಂದಿ, ತಮಿಳು, ತೆಲುಗು ಸಿನಿಮಾಗಳನ್ನೂ ನಿರ್ಮಾಣ ಮಾಡಿದ ಕೀರ್ತಿ ಇವರದ್ದು. ಇವರು 52 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ: Meera Jasmine: ʻಮೌರ್ಯʼ, ʻಅರಸುʼ ಖ್ಯಾತಿ ನಟಿಯ ತಂದೆ ಇನ್ನಿಲ್ಲ

Exit mobile version