Site icon Vistara News

Sandeshkhali case: ಸಂದೇಶಖಾಲಿ ಪ್ರಕರಣ; ಬಂಗಾಳದ ಉನ್ನತ ಅಧಿಕಾರಿಗಳ ವಿರುದ್ಧ ಲೋಕಸಭೆ ಸಮಿತಿ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆ

supreme

ಹೊಸದಿಲ್ಲಿ: ಪಶ್ಚಿಮ ಬಂಗಾಳದ (West Bengal) ಮುಖ್ಯ ಕಾರ್ಯದರ್ಶಿ ಭಗವತಿ ಪ್ರಸಾದ್ ಗೋಪಾಲಿಕಾ ಮತ್ತು ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳ ವಿರುದ್ಧ ಲೋಕಸಭೆಯ ವಿಶೇಷಾಧಿಕಾರ ಸಮಿತಿ (Lok Sabha Privileges Committee) ನೀಡಿದ ಹಕ್ಕುಚ್ಯುತಿ ನೋಟೀಸ್‌ಗೆ (privilege proceedings) ಸುಪ್ರೀಂ ಕೋರ್ಟ್ (Supreme court) ಸೋಮವಾರ ತಡೆಯಾಜ್ಞೆ ನೀಡಿದೆ.

ಅಧಿಕಾರಿಗಳು ತನ್ನ ಮುಂದೆ ಸೋಮವಾರ ತನ್ನ ಮುಂದೆ ಹಾಜರಾಗುವಂತೆ ಲೋಕಸಭೆಯ ವಿಶೇಷಾಧಿಕಾರ ಸಮಿತಿ ತುರ್ತು ಆದೇಶ ನೀಡಿತ್ತು. ಭಾರತೀಯ ಜನತಾ ಪಕ್ಷದ ಸಂಸದ ಸುಕಾಂತ ಮಜುಂದಾರ್ ಅವರು ಪಶ್ಚಿಮ ಬಂಗಾಳದಲ್ಲಿ ನಡೆಸಿದ ಪ್ರತಿಭಟನೆಯ ವೇಳೆ ತಾವು ಎದುರಿಸಿದ ದುರ್ವರ್ತನೆ ಮತ್ತು ಜೀವಬೆದರಿಕೆ ಘಟನೆಯ ಬಗ್ಗೆ ಸಮಿತಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಮಿತಿ ನೋಟೀಸ್‌ ನೀಡಿತ್ತು.

ಇದಕ್ಕೆ ತಡೆ ಕೋರಿ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವ್ಲಾ ಮತ್ತು ಮನೋಜ್ ಮಿಶ್ರಾ ನೇತೃತ್ವದ ಪೀಠ ಪುರಸ್ಕರಿಸಿದ್ದು, ಈ ಬಗ್ಗೆ ನೋಟಿಸ್ ಜಾರಿ ಮಾಡಿದೆ. ನಾಲ್ಕು ವಾರಗಳ ನಂತರ ಅದರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಕಳೆದ ವಾರ ಪಶ್ಚಿಮ ಬಂಗಾಳದ ಹಿಂಸಾಚಾರ ಪೀಡಿತ ಸಂದೇಶ್‌ಖಾಲಿಗೆ (Sandeshkhali case, Sandeshkhali Violence) ಹೊರಟಿದ್ದ ಬಿಜೆಪಿ ಸಂಸದ ಹಾಗೂ ಕಾರ್ಯಕರ್ತರನ್ನು ರಾಜ್ಯದ ಪೊಲೀಸ್ ಸಿಬ್ಬಂದಿ ತಡೆದಿದ್ದರು. ಆಗ ಉಂಟಾದ ಘರ್ಷಣೆಯಲ್ಲಿ ಸುಕಾಂತ ಮಜುಂದಾರ್ ಗಾಯಗೊಂಡಿದ್ದರು.

ರಾಜ್ಯದ ಅಧಿಕಾರಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಸಿಂಘ್ವಿ ಸಲ್ಲಿಸಿದ ಅರ್ಜಿಗಳನ್ನು ಪೀಠವು ಗಮನಿಸಿದ್ದು, ಸೋಮವಾರ ಬೆಳಗ್ಗೆ 10.30ಕ್ಕೆ ಅಧಿಕಾರಿಗಳ ಹಾಜರಾತಿ ಕೋರಿ ನೀಡಲಾಗಿದ್ದ ನೋಟಿಸ್‌ಗೆ ತಡೆ ನೀಡಿದೆ. ಲೋಕಸಭೆಯ ಸೆಕ್ರೆಟರಿಯೇಟ್ ಪರ ವಕೀಲರು, ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡುವುದನ್ನು ವಿರೋಧಿಸಿದರು. ಇದು ಸದನ ಸಮಿತಿಯ ಔಪಚಾರಿಕ ಸಭೆಯಾಗಿದೆ ಎಂದು ಹೇಳಿದರು.

“ಸಮಿತಿ ಯಾವುದೇ ಆರೋಪ ಮಾಡುತ್ತಿಲ್ಲ. ಇದು ನಿಯಮಿತ ಪ್ರಕ್ರಿಯೆ. ಸ್ಪೀಕರ್ ಇನ್ನಷ್ಟು ಪರಿಶೀಲನೆ ಬಯಸಿದರೆ ಮಾತ್ರ ನಂತರ ನೋಟಿಸ್ ನೀಡಲಾಗುತ್ತದೆ” ಎಂದು ವಕೀಲರು ಹೇಳಿದರು. ನ್ಯಾಯಪೀಠವು ಲೋಕಸಭೆಯ ಕಾರ್ಯದರ್ಶಿ ಮತ್ತು ಇತರರಿಗೆ ನೋಟಿಸ್ ಜಾರಿಗೊಳಿಸಿದ್ದು, ಈ ಬಗ್ಗೆ ನಾಲ್ಕು ವಾರಗಳಲ್ಲಿ ಅವರ ಪ್ರತಿಕ್ರಿಯೆಯನ್ನು ಕೇಳಿದೆ. ಕೆಳ ಸದನದ ಸಮಿತಿಯ ಮುಂದೆ ಅಧಿಕಾರಿಗಳ ವಿಚಾರಣೆಗೆ ತಡೆ ನೀಡಿದೆ.

ಸಂದೇಶ್‌ಖಾಲಿಯ ತೃಣಮೂಲ ಕಾಂಗ್ರೆಸ್ ನಾಯಕ ಶಾಜಹಾನ್ ಶೇಖ್ ಮತ್ತು ಅವರ ಸಹಚರರು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಹಲವು ಮಹಿಳೆಯರು ಆರೋಪಿಸಿದ್ದರು. ಈ ಸಂಸದನ ಮನೆಗೆ ದಾಳಿ ನಡೆಸಲು ಜಾರಿ ನಿರ್ದೇಶನಾಲಯ ಮುಂದಾದಾಗ, ಅಧಿಕಾರಿಗಳ ಮೇಲೆ ಸಂಸದನ ಸಹಚರರು ದಾಳಿ ನಡೆಸಿದ್ದರು. ನಂತರ ಪ್ರತಿಭಟನಾರ್ಥವಾಗಿ ಸಂದೇಶಖಾಲಿ ಪ್ರವೇಶಿಸಲು ಮುಂದಾದ ಬಿಜೆಪಿ ಸಂಸದರನ್ನು ತಡೆಯಲಾಗಿದೆ.

ಶಾಜಹಾನ್ ಶೇಖ್ ಮತ್ತು ಅವರ ಬೆಂಬಲಿಗರು ತಮ್ಮ ಮೇಲೆ ಬಲವಂತದ ಲೈಂಗಿಕ ದೌರ್ಜನ್ಯ ಮತ್ತು ಭೂ ಕಬಳಿಕೆ ಮಾಡಿದ್ದಾರೆ ಎಂದು ಅನೇಕ ಮಹಿಳೆಯರು ಆರೋಪಿಸಿದ್ದು, ಸಂದೇಶಖಾಲಿ ಹಲವು ದಿನಗಳಿಂದ ಉದ್ವಿಗ್ನ ಸ್ಥಿತಿಯಲ್ಲಿದೆ.

ಇದನ್ನೂ ಓದಿ: Sandeshkhali Violence: ಸಂದೇಶ್‌ಖಾಲಿ ಹಿಂಸಾಚಾರ; ಟಿಎಂಸಿ ನಾಯಕ ನಾಪತ್ತೆ, ಸಿಪಿಎಂ ಮಾಜಿ ನಾಯಕನ ಸೆರೆ

Exit mobile version