Site icon Vistara News

Sandeshkhali Violence: ಸಂದೇಶ್‌ಖಾಲಿ ಪ್ರಕರಣ ಆರೋಪಿ ಶಹಜಹಾನ್‌ ಕೊನೆಗೂ ಸಿಬಿಐ ಕೈಗೆ

Sheikh Shahjahan

ಕೋಲ್ಕತ್ತಾ: ಸಂದೇಶಖಾಲಿ ಪ್ರಕರಣದ (Sandeshkhali Violence) ಆರೋಪಿ ಶೇಖ್ ಶಹಜಹಾನ್‌ನನ್ನು (Sheikh Shahjahan) ಪಶ್ಚಿಮ ಬಂಗಾಳ (West Bengal) ಪೊಲೀಸರು ಕೊನೆಗೂ ಸಿಬಿಐಗೆ (CBI) ಹಸ್ತಾಂತರಿಸಿದ್ದಾರೆ. ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್ (Trinamool Congress – TMC) ನಾಯಕನನ್ನು ನಿನ್ನೆ ಸಂಜೆ 4:15ರೊಳಗೆ ಕೇಂದ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸುವಂತೆ ಕಲ್ಕತ್ತಾ ಹೈಕೋರ್ಟ್ (Calcutta high court)   ಪೊಲೀಸರಿಗೆ ಕಟ್ಟುನಿಟ್ಟಾಗಿ ಸೂಚಿಸಿದ ಬಳಿಕ ಈ ಹಸ್ತಾಂತರ ನಡೆದಿದೆ.

ಮಂಗಳವಾರದಂದು ಶಹಜಹಾನ್‌ನನ್ನು ಹಸ್ತಾಂತರಿಸುವಂತೆ ಹೈಕೋರ್ಟ್ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಸೂಚಿಸಿತ್ತು. ಆದರೆ ರಾಜ್ಯ ಪೊಲೀಸರು, ಮಮತಾ ಬ್ಯಾನರ್ಜಿ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದೆ ಎಂದು ಉಲ್ಲೇಖಿಸಿ ಅದನ್ನು ನಿರಾಕರಿಸಿದ್ದರು.

ಶೇಖ್‌ ಶಹಜಹಾನ್‌ನನ್ನು ಮಂಗಳವಾರವೇ (ಮಾರ್ಚ್‌ 5) ಸಿಬಿಐ ವಶಕ್ಕೆ ನೀಡಬೇಕು. ಇ.ಡಿ ಅಧಿಕಾರಿಗಳ ಮೇಲೆ ದಾಳಿ, ಲೈಂಗಿಕ ದೌರ್ಜನ್ಯ ಸೇರಿ ಎಲ್ಲ ಪ್ರಕರಣಗಳ ಕುರಿತ ದಾಖಲೆಗಳನ್ನು ಕೂಡ ಸಿಬಿಐ ಅಧಿಕಾರಿಗಳಿಗೆ ನೀಡಬೇಕು ಎಂದು ಕೋಲ್ಕೊತಾ ಹೈಕೋರ್ಟ್‌ ಆದೇಶಿಸಿತ್ತು. ಆದರೆ, ಶೇಖ್‌ ಶಹಜಹಾನ್‌ನನ್ನು ಸಿಬಿಐಗೆ ವಹಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿತ್ತು. ಅಷ್ಟೇ ಅಲ್ಲ, ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಕೋಲ್ಕೊತಾ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು.

ಶಹಜಹಾನ್‌ ಶೇಖ್‌ಗೆ ಸಂಬಂಧಿಸಿದ 12.78 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸಂದೇಶ್‌ಖಾಲಿಯಲ್ಲಿರುವ ಕೃಷಿ ಭೂಮಿ, ಕೋಲ್ಕೊತಾದಲ್ಲಿರುವ ಅಪಾರ್ಟ್‌ಮೆಂಟ್‌, ಬ್ಯಾಂಕ್‌ ಠೇವಣಿ ಸೇರಿ ಹಲವು ಆಸ್ತಿಗಳನ್ನು ಇ.ಡಿ ಜಪ್ತಿ ಮಾಡಿದೆ. ಇದರಿಂದಾಗಿ ಶಹಜಹಾನ್‌ ಶೇಖ್‌ಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.

ಸಂದೇಶ್‌ಖಾಲಿಯಲ್ಲಿ ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅವರ ಜಾಗ ಅತಿಕ್ರಮಣ, ಹಿಂಸಾಚಾರ ಸೇರಿ ಹಲವು ಪ್ರಕರಣಗಳು ಬೆಳಕಿಗೆ ಬಂದು, ಶಹಜಹಾನ್‌ ಶೇಖ್‌ ಪರಾರಿಯಾಗುತ್ತಲೇ ಕೋಲ್ಕೊತಾ ಹೈಕೋರ್ಟ್‌ ಸುಮೋಟೊ ಕೇಸ್‌ ದಾಖಲಿಸಿಕೊಂಡಿದೆ. ಇದಾದ ಬಳಿಕ, ಶಹಜಹಾನ್‌ ಶೇಖನನ್ನು ಬಂಧಿಸಲೇಬೇಕು ಎಂದು ಕೋರ್ಟ್‌ ಆದೇಶ ನೀಡಿದ ಬಳಿಕ ಆತನನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಶಹಜಹಾನ್‌ ಶೇಖ್‌ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು, “ಟಿಎಂಸಿ ನಾಯಕನಿಗೆ ಯಾವುದೇ ಕರುಣೆ, ದಯೆ ತೋರುವುದಿಲ್ಲ” ಎಂದು ಖಡಕ್‌ ಆಗಿ ಹೇಳಿತ್ತು. ಇ.ಡಿ ಅಧಿಕಾರಿಗಳ ದಾಳಿ ಸೇರಿ ಎಲ್ಲ ಪ್ರಕರಣಗಳು, ಅವುಗಳ ದಾಖಲೆಯನ್ನು ಸಿಬಿಐಗೆ ನೀಡಬೇಕು ಎಂದು ಹೈಕೋರ್ಟ್‌ ಆದೇಶಿಸಿತ್ತು.

ಇದನ್ನೂ ಓದಿ: ಶಹಜಹಾನ್‌ನನ್ನು ಸಿಬಿಐಗೆ ವಹಿಸಲೇಬೇಕು; ಕೋಲ್ಕೊತಾ ಹೈಕೋರ್ಟ್‌ ಮತ್ತೆ ಆದೇಶ

Exit mobile version