Site icon Vistara News

Sandeshkhali Violence: ಸಂದೇಶ್‌ಖಾಲಿ ಹಿಂಸಾಚಾರ; ಟಿಎಂಸಿ ನಾಯಕ ನಾಪತ್ತೆ, ಸಿಪಿಎಂ ಮಾಜಿ ನಾಯಕನ ಸೆರೆ

Sandeshkhali Violence

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಗ್ರಾಮದಲ್ಲಿ ನಡೆದ ಹಿಂಸಾಚಾರಕ್ಕೆ (Sandeshkhali Violence) ಸಂಬಂಧಿಸಿ ಸಿಪಿಐಎಂ(CPIM)ನ ಮಾಜಿ ಶಾಸಕನೊಬ್ಬನನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಬ್ಬ ತೃಣಮೂಲ ಕಾಂಗ್ರೆಸ್‌ (TMC) ನಾಯಕ ನಾಪತ್ತೆಯಾಗಿದ್ದಾನೆ. ಇದೀಗ ಈ ಪ್ರಕರಣ ರಾಷ್ಟ್ರೀಯ ವ್ಯಾಪಕತೆ ಪಡೆಯುತ್ತಿದೆ.

ಉತ್ತಮ್‌ ಸರ್ದಾರ್‌ ಎಂಬಾತನನ್ನು ಬಂಧಿಸಲಾಗಿದೆ. ಈತನ ಬಂಧನ ವಿರೋಧಿಸಿ ಸಿಪಿಎಂ ಬಂದ್‌ ಕರೆ ನೀಡಿದೆ. ಬಹುಕೋಟಿ ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳು ಹುಡುಕುತ್ತಿರುವ ತೃಣಮೂಲ ಕಾಂಗ್ರೆಸ್‌ನ ನಾಯಕ ಶೇಖ್ ಷಹಜಹಾನ್‌ ಪರಾರಿಯಾಗಿದ್ದು, ಆತನ ನಿಕಟವರ್ತಿ ಶಿಬಾಪ್ರಸಾದ್ ಅಲಿಯಾಸ್‌ ಶಿಬು ಹಜ್ರಾ ಎಂಬಾತ ಕೂಡ ಪೊಲೀಸರಿಗೆ ಬೇಕಾಗಿದ್ದಾನೆ.

ಏನಿದು ಪ್ರಕರಣ?

ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯು ಕಳೆದ ಬುಧವಾರದಿಂದ ಹಿಂಸಾಚಾರದಲ್ಲಿ ಮುಳುಗಿದೆ. ತೃಣಮೂಲ ನಾಯಕ ಷಹಜಹಾನ್‌ನ ಇಬ್ಬರು ನಿಕಟ ಸಹಚರರು ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಪೊಲೀಸರಿಗೆ ಬೇಕಾಗಿದ್ದಾರೆ. ಇದೇ ಪ್ರದೇಶದಲ್ಲಿರುವ ಷಹಜಹಾನ್ ಮನೆಗೆ ಜನವರಿ 5ರಂದು ಇಡಿ ಅಧಿಕಾರಿಗಳು ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಷಹಜಹಾನ್‌ ಬೆಂಬಲಿಗರು ಹಾಗೂ ಕೆಲವು ಗ್ರಾಮಸ್ಥರು ಸೇರಿ ದಾಳಿ ನಡೆಸಿದ್ದರು. ಆಗ ಮೂವರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಅಂದಿನಿಂದ ಇಡಿ, ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ರಾಜ್ಯ ಪೊಲೀಸರು ಪರಾರಿಯಾಗಿರುವ ಷಹಜಹಾನ್‌ನನ್ನು ಹುಡುಕಾಡುತ್ತಿದ್ದು, ಆತನನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ.

ಷಹಜಹಾನ್ ತಲೆಮರೆಸಿಕೊಂಡ ಒಂದು ತಿಂಗಳ ನಂತರ, ಫೆಬ್ರವರಿ 8ರಂದು, ಸಂದೇಶಖಾಲಿಯಲ್ಲಿ ಮಹಿಳೆಯರು ಪೊರಕೆ ಮತ್ತು ಬಡಿಗೆಗಳೊಂದಿಗೆ ಬೀದಿಗಿಳಿದರು. ಆತನ ಇಬ್ಬರು ಸಹಾಯಕರಾದ ಶಿಬಾ ಪ್ರಸಾದ್ ಹಜ್ರಾ ಮತ್ತು ಉತ್ತಮ್ ಸರ್ದಾರ್ ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.

ಮರುದಿನ, ಪ್ರತಿಭಟನಾಕಾರರು ಹಜ್ರಾಗೆ ಸೇರಿದ ಆಸ್ತಿಗಳ ಮೇಲೆ ದಾಳಿ ಮಾಡಿ ಅವರ ಕೋಳಿ ಫಾರಂಗೆ ಬೆಂಕಿ ಹಚ್ಚಿದರು. ಟಿಎಂಸಿ ನಾಯಕ ಕಬಳಿಸಿರುವ ಜಮೀನಿನಲ್ಲಿ ಕೋಳಿ ಫಾರಂ ಸ್ಥಾಪಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಷಹಜಹಾನ್ ಮತ್ತು ಆತನ ಸಹಾಯಕರು ವರ್ಷಗಟ್ಟಲೆ ತಮ್ಮ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ನಡೆಸಿ ಶೋಷಣೆ ಮಾಡಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ. ಪೊಲೀಸರು ಸಂದೇಶಖಾಲಿಯ ವಿವಿಧ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಲ್ಲದೆ, 16 ಪಂಚಾಯತ್‌ಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದರು.

ಸಂದೇಶಖಾಲಿಯಲ್ಲಿ ಕ್ರೋಧವಶರಾಗಿರುವ ಗ್ರಾಮಸ್ಥರನ್ನು ಸಮಾಧಾನಪಡಿಸುವ ಪ್ರಯತ್ನದಲ್ಲಿ, ಆಡಳಿತ ಟಿಎಂಸಿ ಪಕ್ಷವು ಉತ್ತಮ್ ಸರ್ದಾರ್‌ನನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಆದರೆ ಹಜ್ರಾ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ಪಕ್ಷ ಹೇಳಿದೆ. ಪ್ರತಿಪಕ್ಷಗಳ ಟೀಕೆಗೆ ಗುರಿಯಾದ ಸರ್ದಾರ್‌ನನ್ನು ಅಮಾನತುಗೊಳಿಸಿದ ಕೂಡಲೇ ಬಂಧಿಸಲಾಗಿದೆ.

ಭಾನುವಾರ ಸ್ಥಳೀಯ ಮಹಿಳೆಯರ ಆರೋಪದ ಮೇಲೆ ಸಂದೇಶಖಾಲಿಯ ಮಾಜಿ ಸಿಪಿಐ(ಎಂ) ಶಾಸಕ ನಿರಪಾದ ಸರ್ದಾರ್ ಮತ್ತು ಸ್ಥಳೀಯ ಬಿಜೆಪಿ ಮುಖಂಡ ವಿಕಾಸ್ ಸಿಂಗ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಪಿಐ(ಎಂ)ನ ಮಾಜಿ ಶಾಸಕರ ಕುಟುಂಬ ಸದಸ್ಯರು ಯಾವುದೇ ಮುನ್ಸೂಚನೆ ನೀಡದೆ ಬಂಧಿಸಲಾಗಿದೆ ಎಂದು ಹೇಳಿದರೆ, ಸಿಂಗ್ ಅವರ ಸಂಬಂಧಿಕರು ಅವರು ನಿರಪರಾಧಿ ಎಂದು ಹೇಳಿದ್ದಾರೆ.

ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಸೋಮವಾರ ಈ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ. “ಯಾರು ಬೇಕಾದರೂ ಸಂದೇಶಖಾಲಿಗೆ ಹೋಗಬಹುದು. ಅದರಲ್ಲಿ ನಮಗೆ ಯಾವುದೇ ಸಮಸ್ಯೆಗಳಿಲ್ಲ. ನಾವು ಈಗಾಗಲೇ ರಾಜ್ಯ ಮಹಿಳಾ ಆಯೋಗದ ತಂಡವನ್ನು ಸಂದೇಶಖಾಲಿಗೆ ಕಳುಹಿಸಿದ್ದೇವೆ ಮತ್ತು ಅನೇಕ ಬಂಧನಗಳನ್ನು ಮಾಡಲಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಹಿಂಸಾಚಾರದಲ್ಲಿ ಭಾಗಿಯಾದವರೆಲ್ಲರನ್ನೂ ಬಂಧಿಸಲಾಗುವುದು” ಎಂದು ಅವರು ಹೇಳಿದರು.

ಸಂದೇಶಖಾಲಿಯ ಹಾಲಿ ಶಾಸಕ, ಟಿಎಂಸಿಯ ಸುಕುಮಾರ್ ಮಹಾತಾ ಅವರು ಸ್ಥಳೀಯ ಮಹಿಳೆಯರ ಆರೋಪಗಳನ್ನು ನಿರಾಕರಿಸಿದ್ದಾರೆ. ಸ್ಥಳೀಯ ಪೊಲೀಸರು ಕೂಡ ಆರೋಪಗಳು “ಆಧಾರರಹಿತ” ಎಂದು ಹೇಳಿದ್ದಾರೆ.

ಟಿಎಂಸಿ ಕಳೆದ ಎರಡು ಚುನಾವಣೆಗಳಲ್ಲಿ ಸಂದೇಶಖಾಲಿ ವಿಧಾನಸಭಾ ಕ್ಷೇತ್ರದಿಂದ ಮತ್ತು ಕಳೆದ ಮೂರು ಚುನಾವಣೆಯಲ್ಲಿ ಬಸಿರ್ಹತ್ ಲೋಕಸಭಾ ಕ್ಷೇತ್ರದಿಂದ ಗೆದ್ದಿದೆ. ಸುತ್ತಮುತ್ತಲಿನ ಪ್ರದೇಶಗಳಿಗೆ ಅಶಾಂತಿ ಹರಡುವುದನ್ನು ತಡೆಯಲು ಪಕ್ಷವು ಈಗ ಹಾನಿ ನಿಯಂತ್ರಣ ಕ್ರಮಗಳಿಗೆ ಮುಂದಾಗಿದೆ. ಬಿಜೆಪಿ ಮತ್ತು ಸಿಪಿಐ(ಎಂ) ಎರಡೂ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿವೆ. ಬಿಜೆಪಿ ಮತ್ತು ಸಿಪಿಐ(ಎಂ) ನಿಯೋಗಗಳು ಸಂದೇಶಖಾಲಿ ಪ್ರವೇಶಿಸಲು ಯತ್ನಿಸಿವೆ. ಅವರನ್ನು ಪೊಲೀಸರು ತಡೆದಿದ್ದಾರೆ.

ಸಂದೇಶ್‌ಖಾಲಿ ಬಾಂಗ್ಲಾದೇಶದ ಗಡಿಗೆ ಸಮೀಪದಲ್ಲಿದೆ. ಬಾಂಗ್ಲಾದಿಂದ ನಡೆಯುವ ಅಕ್ರಮ ವಲಸೆಗೆ ಸ್ಥಳೀಯರ ವಿರೋಧವಿದೆ. ಬಿಜೆಪಿಯು ಇದನ್ನು ಎತ್ತಿಕೊಂಡಿದೆ. “ಸಂದೇಶಖಾಲಿಯಲ್ಲಿ, 67% ಜನಸಂಖ್ಯೆಯು ಪರಿಶಿಷ್ಟ ಪಂಗಡ ಅಥವಾ ಪರಿಶಿಷ್ಟ ಜಾತಿಯವರದು. ಅವರಿಗೆ ಸ್ಥಳೀಯ ಮುಸ್ಲಿಂ ಟಿಎಂಸಿ ಮುಖಂಡರು ಚಿತ್ರಹಿಂಸೆ ನೀಡಿದ್ದಾರೆ. ಷಹಜಹಾನ್ ಗಲಾಟೆಯ ನಂತರ, ಹಿಂದೂ ಸಮುದಾಯ ಪ್ರತಿಭಟಿಸಿದೆ” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Sadhus Assaulted: ಪಶ್ಚಿಮ ಬಂಗಾಳದಲ್ಲಿ ಸಾಧುಗಳ ಮೇಲೆ ಗುಂಪು ಹಲ್ಲೆ; ʼಮಮತಾ ಆಡಳಿತದಲ್ಲಿ ಹಿಂದೂ ಆಗಿರುವುದೇ ಅಪರಾಧ’ ಎಂದು ಬಿಜೆಪಿ ಆಕ್ರೋಶ

Exit mobile version