ಬೆಂಗಳೂರು: ಹಿಂದು ಪದದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ವಿಚಾರಣೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಸತೀಶ್ ಜಾರಕಿಹೊಳಿ ವಿರುದ್ಧ ವಕೀಲ ದಿಲೀಪ್ ಕುಮಾರ್ ಎಂಬುವವರು ನೀಡಿದ್ದ ಖಾಸಗಿ ದೂರಿನ ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತೆ ಸೂಚಿಸಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ 2022ರ ನವೆಂಬರ್ 6ರಂದು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು ಹಿಂದು ಹಾಗೂ ಹಿಂದುತ್ವದ ಪದದ ಬಗ್ಗೆ ಮಾತನಾಡಿದ್ದರು. ಹಿಂದು ಪದಕ್ಕೆ ಅಶ್ಲೀಲ ಎಂಬ ಅರ್ಥವಿದೆ ಎಂದು ಹೇಳಿದ್ದರು.
ಹಿಂದು ಧರ್ಮ, ಆ ಧರ್ಮ ಈ ಧರ್ಮ ಎನ್ನುತ್ತಾರೆ. ಹಿಂದು ಶಬ್ದ ಎಲ್ಲಿಂದ ಬಂತು? ಪರ್ಷಿಯನ್‌ನಿಂದ ಬಂತು. ಅಂದರೆ ಇರಾನ್, ಇರಾಕ್, ಕಜಖ್‌ಸ್ತಾನದಿಂದ ಬಂದಿದ್ದು. ಭಾರತದ ಜತೆಗೆ ಇದಕ್ಕೆ ಏನು ಸಂಬಂಧ? ಇದರ ಬಗ್ಗೆ ಚರ್ಚೆ ಆಗಬೇಕು. ಈ ಶಬ್ದ ಎಲ್ಲಿಂದ ಬಂತು ಎಂಬುದರ ಕುರಿತು ವಾಟ್ಸ್‌ಆ್ಯಪ್, ಯೂಟ್ಯೂಬ್‌ನಲ್ಲಿ ನೋಡಿ. ಹಿಂದು ಶಬ್ದವನ್ನು ಇಷ್ಟು ಮೇಲೆ ಏಕೆ ಮೆರೆಸುತ್ತೀರಿ? ಅದರ ಅರ್ಥ ತಿಳಿದರೆ ನಾಚಿಕೆ ಆಗುತ್ತದೆ. ಅದಕ್ಕೆ ಬಹಳ ಕೀಳು ಅರ್ಥವಿದೆ. ಈ ಮಾಹಿತಿಯೂ ವೆಬ್‌ಸೈಟ್‌ನಲ್ಲಿದೆ, ಬೇಕಿದ್ದರೆ ನೋಡಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು.
ಇದನ್ನೂ ಓದಿ | CM Siddaramaiah: ಕುಂಕುಮ ನಿರಾಕರಿಸಿದ ಸಿದ್ದರಾಮಯ್ಯಗೆ ಬಿಜೆಪಿ ನಾಯಕರ ತರಾಟೆ
ಹಿಂದು ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಚಿವ ಜಾರಕಿಹೊಳಿ ವಿರುದ್ಧ ಹಿಂದು ಸಂಘಟನೆಗಳ ಮುಖಂಡರು, ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ಹೊರಹಾಕಿದ್ದರು. ನಂತರ ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು.