Site icon Vistara News

Electoral Bond : ಆಯೋಗಕ್ಕೆ ಚುನಾವಣಾ ಬಾಂಡ್​ಗಳ ವಿವರ ಸಲ್ಲಿಸಿದ ಎಸ್​​ಬಿಐ

SBI

SBI Electoral Bond

ನವದೆಹಲಿ: ಸುಪ್ರೀಂ ಕೋರ್ಟ್ ನ ಖಡಕ್​ ಆದೇಶದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ಸಂಜೆ ಚುನಾವಣಾ ಬಾಂಡ್ ಗಳ (Electoral Bond) ಅಂಕಿ ಅಂಶಗಳು ಹಾಗೂ ಎಲ್ಲ ಮಾಹಿತಿಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ನ್ಯಾಯಾಲಯದ ಆದೇಶದಂತೆ ಶುಕ್ರವಾರ ಸಂಜೆ 5 ಗಂಟೆಯೊಳಗೆ ಚುನಾವಣಾ ಆಯೋಗವು ಮಾಹಿತಿಗಳನ್ನು ಕ್ರೋಢೀಕರಿಸಿ ಬಿಡುಗಡೆ ಮಾಡಬೇಕಿದೆ. ಆದಾಗ್ಯೂ ಬ್ಯಾಂಕಿನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ನ್ಯಾಯಾಲಯದ ಆದೇಶದ ಪಾಲನೆಯನ್ನು ದೃಢೀಕರಿಸುವ ಅಫಿಡವಿಟ್ ಸಲ್ಲಿಸಿಲ್ಲ.

ಅಫಿಡವಿಟ್ ಸಿದ್ಧವಾಗಿದೆ ಆದರೆ ಇನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ಎಲ್ಲ ಮಾಹಿತಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿದೆ.

ಈ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಲು ಮಾರ್ಚ್ 6ರ ಗಡುವನ್ನು ವಿಸ್ತರಿಸುವಂತೆ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಕ್ಕಾಗಿ ಬ್ಯಾಂಕ್ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ ನ್ಯಾಯಾಂಗ ನಿಂದನೆ ವಿಚಾರಣೆಯ ಎಚ್ಚರಿಕೆಯನ್ನೂ ಕೊಟ್ಟಿತ್ತು.

ಇದನ್ನೂ ಓದಿ : ಕಾಂಗ್ರೆಸ್​ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ; ಕರ್ನಾಟಕ ಅಭ್ಯರ್ಥಿಗಳ ಹೆಸರಿದೆಯೆ?

ಗರಂ ಆಗಿದ್ದ ಕೋರ್ಟ್​​

ಈ ಸಮಯದಲ್ಲಿ ನ್ಯಾಯಾಂಗ ನಿಂದನೆ ವ್ಯಾಪ್ತಿಯನ್ನು ಚಲಾಯಿಸಲು ನಮಗೆ ಒಲವು ಇಲ್ಲ. ಈ ಆದೇಶದಲ್ಲಿ ಸೂಚಿಸಲಾದ ಸಮಯದೊಳಗೆ ನಿರ್ದೇಶನಗಳನ್ನು ಅನುಸರಿಸದಿದ್ದರೆ ಉದ್ದೇಶಪೂರ್ವಕ ಅಸಹಕಾರಕ್ಕಾಗಿ ಈ ನ್ಯಾಯಾಲಯವು ಅದರ ವಿರುದ್ಧ ಕ್ರಮ ಕೈಗೊಳ್ಳಲು ಒಲವು ತೋರಬಹುದು ಎಂದು ನಾವು ಎಸ್​ಬಿಐಗೆ ನೋಟಿಸ್ ನೀಡುತ್ತೇವೆ ಎಂದು ನ್ಯಾಯಾಲಯ ಹೇಳಿದೆ.

ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸಂಗ್ರಹಿಸಲಾದ ಮಾಹಿತಿಯನ್ನು ಕ್ರೋಡೀಕರಿಸಲು ಮತ್ತು ಮರು ಪರಿಶೀಲನೆ ಮಾಡಿ ಬಿಡುಗಡೆ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಬ್ಯಾಂಕ್ ವಾದಿಸಿತ್ತು. ನ್ಯಾಯಾಂಗದ ಆದೇಶ ಪಾಲಿಸಲು ನಮಗೆ ಇನ್ನೂ ಸ್ವಲ್ಪ ಸಮಯ ಬೇಕು. ಮಾಹಿತಿ ರಹಸ್ಯವಾಗಿರಬೇಕು ಎಂಬ ಕಾರಣಕ್ಕೆ ಹೆಚ್ಚುವರಿ ಸಮಯ ಬೇಕಾಗಿದ ಎಂದು ಬ್ಯಾಂಕ್ ಹೇಳಿತ್ತು. ಜೂನ್ 30 ರವರೆಗೆ ಸಮಯ ಕೇಳಿತ್ತು.

ಚುನಾವಣೆ ಮುಗಿಯುತ್ತದೆ

ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಎಸ್​ಬಿಐನ ಮುಂಬೈ ಶಾಖೆಯಲ್ಲಿ ದಾನಿಗಳ ವಿವರಗಳು ಲಭ್ಯವಿದೆ. ಬ್ಯಾಂಕ್ ಮಾಹಿತಿಗಳನ್ನು ತೆರೆಯಬೇಕು, ವಿವರಗಳನ್ನು ಒಟ್ಟುಗೂಡಿಸಬೇಕು ಮತ್ತು ದತ್ತಾಂಶಗಳು ನೀಡಬೇಕು ಎಂದು ಹೇಳಿತ್ತು. ಮಾಹಿತಿಯನ್ನು ಟ್ಯಾಲಿ ಮಾಡಲು ಮಾಡಲು ನಾವು ನಿಮಗೆ ಹೇಳಿರಲಿಲ್ಲ. ನಾವು ನಿಮ್ಮನ್ನು ಸರಳವಾಗಿ ಮಾಹಿತಿ ಬಹಿರಂಗಪಡಿಸಲು ಕೇಳಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿಗಳು ಎಸ್​ಬಿಐ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.

ಕಳೆದ ತಿಂಗಳು ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪಿನಲ್ಲಿ ಚುನಾವಣಾ ಬಾಂಡ್ ಯೋಜನೆ “ಅಸಾಂವಿಧಾನಿಕ” ಎಂದು ಹೇಳಲಾಗಿತ್ತು. ಇದು ನಾಗರಿಕರ ಮಾಹಿತಿ ಹಕ್ಕನ್ನು ಉಲ್ಲಂಘಿಸಿದೆ ಎಂದು ಅಭಿಪ್ರಾಯಪಟ್ಟಿತ್ತು. ಮಾರ್ಚ್ 6ರೊಳಗೆ ಡೇಟಾವನ್ನು ಬಹಿರಂಗಪಡಿಸುವಂತೆ ಎಸ್​ಬಿಐಗೆ ಮತ್ತು ಮಾರ್ಚ್ 13 ರೊಳಗೆ ಈ ಮಾಹಿತಿಯನ್ನು ಸಾರ್ವಜನಿಕಗೊಳಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

Exit mobile version