ಬೆಂಗಳೂರು: ಐಎಎಸ್, ಐಆರ್‌ಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ (competitive exam training) ನವ ದೆಹಲಿಯಲ್ಲಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಉತ್ತಮ ಹಾಸ್ಟೆಲ್ ಕಟ್ಟಿಸುವ ಜತೆಗೆ ತಿಂಗಳಿಗೆ 15 ಸಾವಿರ ರೂಪಾಯಿ ಶಿಷ್ಯವೇತನ (SC ST Scholarship) ಕೊಡಲಾಗುವುದು (ಸದ್ಯ 10 ಸಾವಿರ ಕೊಡಲಾಗುತ್ತಿದ್ದು, 5 ಸಾವಿರ ಹೆಚ್ಚಿಸಲಾಗುವುದು). ದೆಹಲಿ ಹಾಸ್ಟೆಲ್‌ನಲ್ಲಿ ಹೈಟೆಕ್ ಲೈಬ್ರರಿ ಮಾಡಲಾಗುವುದು. ಅಲ್ಲಿ ಎಲ್ಲಾ ರೀತಿಯ ಪುಸ್ತಕಗಳು ಸಿಗುವ ವ್ಯವಸ್ಥೆ ಕಲ್ಪಿಸಲಾಗುವುದು. ಈ ಸಂಬಂಧ ತಕ್ಷಣ ಆದೇಶ ಹೊರಡಿಸಲಾಗುವುದು ಸಿ.ಎಂ.ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರದ ನಡೆದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಪರಿಷತ್ ಸಭೆಯಲ್ಲಿ ಸಿಎಂ ಮಾತನಾಡಿದರು. 2024-25 ನೇ ಸಾಲಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಲ್ಲಿ ಲಭ್ಯ ಇರುವ ಹಣವನ್ನು ಖರ್ಚು ಮಾಡಲು ಕ್ರಿಯಾ ಯೋಜನೆಗೆ ಅನುಮೋದನೆ ಮಾಡಲಾಗಿದೆ. ರಾಜ್ಯದ ಅಭಿವೃದ್ಧಿ ಆಯವ್ಯಯ ಈ ಸಾಲಿನಲ್ಲಿ ಒಟ್ಟು 1,60,000 ಕೋಟಿ. ಇದರಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿಗೆ ಸುಮಾರು 39,121.46 ಕೋಟಿ ರೂ.ಗಳನ್ನು 34 ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷಕ್ಕಿಂತ 3900 ಕೋಟಿ ಹೆಚ್ಚು ಅನುದಾನ
ಕಳೆದ ವರ್ಷಕ್ಕಿಂತ ಈ ವರ್ಷ 3900 ಕೋಟಿ ಹೆಚ್ಚಾಗಿದೆ. 3900 ಕೋಟಿ ಹೆಚ್ಚುವರಿ ಹಣ ಈ ವರ್ಷ ನೀಡಿದ್ದೇವೆ. ಈ ಹಣ ಇಲಾಖೆಗಳಿಗೆ ಹಂಚಿಕೆಯಾಗಿದ್ದು ಇದರ ಸದುಪಯೋಗ ಆಗಬೇಕು. ಸಮಾಜ ಕಲ್ಯಾಣ ಇಲಾಖೆ, ನಿಗಮಗಳು ಕಾಯ್ದೆಯ ಉದ್ದೇಶಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಹಿಂದಿನ ವರ್ಷ 97.81 ಕೋಟಿ ಉಳಿತಾಯವಾಗಿದೆ. ಈ ಹಣವೂ ಸೇರಿದೆ. ಶೇ.100 ಸಾಧನೆ ಆಗಬೇಕು. ಇದರಲ್ಲಿ ನಿರ್ಲಕ್ಷ್ಯ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ | Valmiki Corporation Scam: ವಾಲ್ಮೀಕಿ ನಿಗಮ ಹಗರಣದಲ್ಲಿ ಮುಂದುವರಿದ ಮಾಜಿ ಸಚಿವರ ಪಿಎಸ್ ವಿಚಾರಣೆ; ನಾಗೇಂದ್ರಗೆ ಢವಢವ!
ಕಾಯ್ದೆಯಲ್ಲಿದ್ದ 7D ರದ್ದು ಮಾಡಿದ ರೀತಿಯಲ್ಲೇ 7C ಕೂಡ ರದ್ದು ಮಾಡಬೇಕು ಎನ್ನುವ ಶಾಸಕ ನರೇಂದ್ರಸ್ವಾಮಿ ಅವರು ಸಲಹೆ ನೀಡಿದ್ದಾರೆ. ಈ ಸಲಹೆಯ ಸಾಧಕ ಬಾದಕಗಳನ್ನು ಪರಿಶೀಲಿಸಲಾಗುವುದು. ಖಾಲಿ ಇರುವ ಹೋಬಳಿಗಳಲ್ಲೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಆರಂಭಿಸಲೇಬೇಕು. ಆಯಾ ಹೋಬಳಿಯ ವಿದ್ಯಾರ್ಥಿಗಳಿಗೆ ಶೇ75 ರಷ್ಟು ಸೀಟು, ಉಳಿದ ಶೇ25 ರಷ್ಟು ಸೀಟುಗಳನ್ನು ಇತರೆ ಪ್ರದೇಶದ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ನೀಡಬೇಕು ಎಂದು ಸೂಚಿಸಿದರು.
ಸರ್ಕಾರಿ ಶಾಲೆಗಿಂತ ಕ್ರೈಸ್‌ನಲ್ಲಿ ಓದಿರುವ ಬಡ ವಿಧ್ಯಾರ್ಥಿನಿ ಕ್ರೈಸ್ ಶಾಲೆಯಲ್ಲಿ ಓದಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಇದನ್ನು ಪ್ರೋತ್ಸಾಹಿಸುತ್ತಲೇ ಇತರೆ ನ್ಯೂನ್ಯತೆಗಳನ್ನು ಸರಿಪಡಿಸಲು ಅಧಿಕಾರಿಗಳು ಶ್ರಮಿಸಬೇಕು. ಬಜೆಟ್‌ನಲ್ಲಿ ನಾವು ಘೋಷಿಸಿರುವ ಎಲ್ಲಾ ಕಾರ್ಯಕ್ರಮಗಳನ್ನೂ ನೀವು ಜಾರಿ ಮಾಡಲೇಬೇಕು. ಹಿಂದಿನ ಬಿಜೆಪಿ ಸರ್ಕಾರ ಮೂರು ವರ್ಷ ಕ್ರೈಸ್ ಮಕ್ಕಳಿಗೆ ಬಾತ್ ರೂಮ್ ಕಿಟ್ ಕೊಡ್ಲೇ ಇಲ್ಲ. ಈಗ ನಾವು ಸರಿಯಾಗಿ ವಿತರಿಸುತ್ತಿದ್ದೇವೆ ಎಂದರು.
ಹಾಸ್ಟೆಲ್‌ಗಳಿಗೆ ಭೇಟಿ ನೀಡದಿದ್ದರೆ ಸಸ್ಪೆಂಡ್
ಆಶ್ರಮ ಶಾಲೆಗಳಲ್ಲಿ ರಾತ್ರಿ ವೇಳೆ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ ಎನ್ನುವುದು ಕಂಡುಬಂದಿದೆ. ಇದಕ್ಕೆ ಅವಕಾಶ ಆಗಬಾರದು. ಮನೆಗೆ ಕರೆದೊಯ್ಯದಂತೆ ಪೋಷಕರಿಗೆ ಒಪ್ಪಿಸಬೇಕು. ಹಳ್ಳಿಗಾಡು, ಬಡ ಕುಟುಂಬಗಳಿಗೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ಸರಿಯಾಗಿ ತಲುಪಿಸಬೇಕು. ಇದರಲ್ಲಿ ವಿಫಲರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಾವು ಕೊಟ್ಟ ಅನುದಾನ ಆಯಾ ಉದ್ದೇಶಗಳಿಗೇ ಬಳಕೆಯಾಗಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲದಂತೆ ಆಯಾ ಸಮುದಾಯಗಳಿಗೆ ಸವಲತ್ತು ತಲುಪಿಸಬೇಕು. ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸದಿದ್ದರೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗುವುದು ಎಂದರು.
ಇದನ್ನೂ ಓದಿ | SCSP TSP Scheme: ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಶೇ.100 ಖರ್ಚು ಮಾಡದಿದ್ರೆ ಕಠಿಣ ಕ್ರಮ; ಸಿಎಂ ವಾರ್ನಿಂಗ್
10 ವರ್ಷದಲ್ಲಿ ಈ ಯೋಜನೆಯಿಂದ ಸಮುದಾಯದ ಮೇಲೆ ಬೀರಿರುವ ಪರಿಣಾಮ, ಸಮುದಾಯಕ್ಕೆ ಯೋಜನೆ ತಲುಪಿರುವ ಪ್ರಮಾಣದ ಬಗ್ಗೆ, ಹಾಗೂ ಅವರ ಆರ್ಥಿಕ ಸ್ಥಿತಿ ಪ್ರಗತಿ ಆಗಿರುವ ಬಗ್ಗೆ ಮೌಲ್ಯಮಾಪನ ಮಾಡಲಾಗುವುದು. 3 ತಿಂಗಳ ಬಳಿಕ ಮತ್ತೊಮ್ಮೆ ಪರಿಷತ್ ಸಭೆ ಕರೆಯುತ್ತೇವೆ. ಯಾರಿಂದ ಲೋಪ ಆಗಿದೆ ಎಂದು ಗೊತ್ತಾದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈ ವರ್ಷದ ಕ್ರಿಯಾ ಯೋಜನೆಯನ್ನು ಸಭೆಯಲ್ಲಿ ಶಾಸಕರು, ಸಚಿವರು, ಅಧಿಕಾರಿಗಳು ನೀಡಿದ ಸಲಹೆಗಳ ಸಮೇತ ಜಾರಿ ಆಗಬೇಕು ಎನ್ನುವ ಸೂಚನೆಯನ್ನು ಮುಖ್ಯಮಂತ್ರಿಗಳು ನೀಡಿದರು.