ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಲ್ಲಿ (Academic Year) ಅಗತ್ಯ ಪೂರ್ವಸಿದ್ಧತೆಗಳಿಗಾಗಿ ಮೇ 29ರಿಂದಲೇ ಶಾಲೆಗಳನ್ನು (Schools Reopen) ಪ್ರಾರಂಭಿಸಲು ಶಿಕ್ಷಣ ಇಲಾಖೆ (Education Department) ಸೂಚಿಸಿದೆ. ಜೊತೆಗೆ ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನೂ (Academic Calender) ನಿಗದಿಪಡಿಸಿದೆ.
ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾಯೋಜನೆ / ಮಾರ್ಗಸೂಚಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. 2023-24ನೇ ಶೈಕ್ಷಣಿಕ ಸಾಲಿನ ಚಟುವಟಿಕೆಗಳು ಮುಕ್ತಾಯವಾಗುತ್ತಿದ್ದು, ಮುಂದಿನ 2024-25 ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುವುದರಿಂದ ರಾಜ್ಯಾದ್ಯಂತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾಯೋಜನೆ/ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ.
ಈ ಮಾರ್ಗಸೂಚಿಯಲ್ಲಿ ವಾರ್ಷಿಕ/ಮಾಹೆವಾರು ಪಾಠ ಹಂಚಿಕೆ, ಪಠ್ಯತರ ಚಟುವಟಿಕೆಗಳು, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆಗಳು, ಸಂಭ್ರಮ ಶನಿವಾರ (ನೋ ಬ್ಯಾಗ್ ಡೇ) ಆಯೋಜನೆಗೆ ಪೂರಕವಾದ ಪಠ್ಯಾಧಾರಿತ ಚಟುವಟಿಕೆ ಬ್ಯಾಂಕ್ ನಿರ್ವಹಣೆ ಹಾಗೂ ವಿವಿಧ ಶಾಲಾ ಹಂತದ CCE (ಪರೀಕ್ಷೆಗಳು/ ಮೌಲ್ಯಾಂಕನ, ವಿಶ್ಲೇಷಣೆ) ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯವಾಗುವಂತೆ ಯೋಜಿಸಿ, ಸಿದ್ಧಪಡಿಸಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಲಭ್ಯವಾಗುವ ಶೈಕ್ಷಣಿಕ ಚಟುವಟಿಕೆ ಅವಧಿಗಳು, ರಜಾ ದಿನಗಳನ್ನಾಧರಿಸಿ ಅದಕ್ಕನುಗುಣವಾಗಿ ವಾರ್ಷಿಕ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಲು ಸೂಚಿಸಿದೆ.
ಈ ವೇಳಾಪಟ್ಟಿಯ ಪ್ರಕಾರ ಮೊದಲನೇ ಅವಧಿಯು 2024ರ ಮೇ 29ರಿಂದ ಅಕ್ಟೋಬರ್ 2 ರವರೆಗೆ, ಎರಡನೇ ಅವಧಿಯು ಅಕ್ಟೋಬರ್ 21ರಿಂದ 2025ರ ಏಪ್ರಿಲ್ 10 ರವರೆಗೆ ಇರಲಿದೆ. ಅಕ್ಟೋಬರ್ 3 ರಿಂದ 20 ರವರೆಗೆ ದಸರಾ ರಜೆ, 2025ರ ಏಪ್ರಿಲ್ 11 ರಿಂದ ಮೇ 28ರವರೆಗೆ ಬೇಸಿಗೆ ರಜೆ ನಿಗದಿ ಮಾಡಿದೆ.
244 ಶಾಲಾ ಕರ್ತವ್ಯದ ದಿನಗಳು ಇರಲಿದ್ದು, ಇದರಲ್ಲಿ ಪರೀಕ್ಷೆ ಮೌಲ್ಯಾಂಕನ ಕಾರ್ಯಕ್ಕೆ 26 ದಿನಗಳು, ಪಠ್ಯೇತರ ಚಟುವಟಿಕೆಗೆ 24 ದಿನಗಳು, ಮೌಲ್ಯಮಾಪನ, ಫಲಿತಾಂಶ ವಿಶ್ಲೇಷಣೆಗೆ 10 ದಿನ, ಶಾಲಾ ಸ್ಥಳೀಯ ರಜೆ 4 ದಿನ, ಬೋಧನಾ ಕಲಿಕೆಗೆ 180 ದಿನಗಳು ಎಂದು ವಿಂಗಡಿಸಲಾಗಿದೆ.
5, 8 ಮತ್ತು 9 ನೇ ತರಗತಿಯ ಎಸ್‌ಎ-2 ಮೌಲ್ಯಾಂಕನ ಸೇರಿ ಉಳಿದ 1 ರಿಂದ 9 ನೇ ತರಗತಿಗಳ ಫಲಿತಾಂಶ ಏಪ್ರಿಲ್ 8 ರಂದು ಪ್ರಕಟವಾಗಲಿದೆ. ಏಪ್ರಿಲ್ 10 ರಂದು ಪ್ರೌಢಶಾಲಾ ಹಂತದ ಎರಡನೇ ಸಮುದಾಯ ದತ್ತ ಶಾಲೆ/ ಪೋಷಕರ ಸಭೆ ಕರೆದು ಫಲಿತಾಂಶ ಪ್ರಕಟಿಸಲಾಗುತ್ತದೆ. ಏಪ್ರಿಲ್ 10ಕ್ಕೆ ಪ್ರಸಕ್ತ ಶೈಕ್ಷಣಿಕ ಸಾಲು 1 ರಿಂದ 9ನೇ ತರಗತಿವರೆಗೆ ಮುಕ್ತಾಯವಾಗಲಿದೆ. ಏಪ್ರಿಲ್ 11ರಿಂದ ಮೇ 28ರ ತನಕ ಬೇಸಿಗೆ ರಜೆ ಇರಲಿದೆ. ಪೂರ್ಣಗೊಂಡ ಮೌಲ್ಯಾಂಕನ ಪರೀಕ್ಷೆಗಳ ಮೌಲ್ಯಮಾಪನ ಫಲಿತಾಂಶವನ್ನು ಶೇ 100 ಅಂಕಗಳಿಗೆ ಕ್ರೋಢೀಕರಿಸಿ, ನಿಯಮಾನುಸಾರ ಗ್ರೇಡ್ ದಾಖಲಿಸಿ SATS ನಲ್ಲಿ ಏಪ್ರಿಲ್ 25ರೊಳಗೆ ಅಪ್ಡೇಟ್ ಮಾಡಲಾಗುತ್ತದೆ.
ಏಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಚರಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಹಾಗೂ ಎಸ್.ಡಿ.ಎಂ.ಸಿ/ ಖಾಸಗಿ ಶಾಲೆಗಳಲ್ಲಿ ಸಂಬಂಧಿಸಿದ ಆಡಳಿತ ಮಂಡಳಿಯವರು ಮತ್ತು ಮಕ್ಕಳೊಂದಿಗೆ ಉತ್ತಮ ಪೂರ್ವ ತಯಾರಿಯೊಂದಿಗೆ ಪ್ರಸ್ತುತ ಚಾಲ್ತಿ ಇರುವ ಲೋಕಸಭಾ ಚುನಾವಣಾ ಮಾರ್ಗಸೂಚಿ ಪ್ರಕಾರ ಇದನ್ನು ಆಚರಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.
ಇದನ್ನೂ ಓದಿ: Heat Stroke: ರಾಜ್ಯದಲ್ಲಿ 600 ಹೀಟ್ ಸ್ಟ್ರೋಕ್ ಕೇಸ್; ಏರುತ್ತಿದೆ ಶಾಖ, ಸಾವಿಗೂ ಕಾರಣವಾದೀತು, ಎಚ್ಚರಿಕೆ ವಹಿಸಿ!