ಬೆಂಗಳೂರು: ದಕ್ಷಿಣ ಭಾರತದ ಬಹುತೇಕ ಸೂಪರ್ ಸ್ಟಾರ್‌ಗಳ ಜೊತೆ ಜೋಡಿಯಾಗಿ ನಟಿಸಿದ ನಟಿ ಜಮುನಾ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಜಮುನಾ ಅವರಿಗೆ 86 ವರ್ಷ ವಯಸ್ಸಾಗಿತ್ತು.
1936ರಲ್ಲಿ ಹಂಪಿಯಲ್ಲಿ ಜನಿಸಿದ ಅವರು ಕನ್ನಡದಲ್ಲಿ ಡಾ. ರಾಜ್‌ಕುಮಾರ್ ಅವರ ಜೊತೆ ʼಸಾಕ್ಷಾತ್ಕಾರʼ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿ ಸೇರಿ 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ ಸಾಕ್ಷಾತ್ಕಾರ, ರತ್ನಗಿರಿ ರಹಸ್ಯ, ಭೂ ಕೈಲಾಸ, ಪೋಲಿಸ್ ಮತ್ತು ದಾದಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ದಕ್ಷಿಣ ಎನ್‌ಟಿಆರ್, ಅಕ್ಕಿನೇನಿ ನಾಗೇಶ್ವರ ರಾವ್ ಸೇರಿದಂತೆ ಹಲವು ಹಿರಿಯ ಸ್ಟಾರ್‌ಗಳ ಜತೆ ನಟಿಸಿದ್ದರು.
ಅವರಿಗೆ ʼಶ್ರೀಕೃಷ್ಣ ತುಲಾಭಾರಂ’ ಚಿತ್ರದ ಸತ್ಯಭಾಮೆ ಪಾತ್ರ ಅಪಾರ ಜನಪ್ರಿಯತೆ ತಂದು ಕೊಟ್ಟಿತ್ತು. ʼಪುಟ್ಟಿಲ್ಲು’ ನಟಿ ಜಮುನಾ ನಟಿಸಿದ ಚೊಚ್ಚಲ ಸಿನಿಮಾ. ನಿವೃತ್ತಿಯ ಬಳಿಕ ಅವರು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು.
2008ರಲ್ಲಿ ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿ, 1964 ಹಾಗೂ 1968ರಲ್ಲಿ ಫಿಲಂ ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಳನ್ನು ಅವರು ಪಡೆದಿದ್ದರು. ಬಳಿಕ ಅವರು ರಾಜಕಾರಣವನ್ನೂ ಪ್ರವೇಶಿಸಿ 1998ರಲ್ಲಿ ರಾಜಮಂಡ್ರಿಯಿಂದ ಕಾಂಗ್ರೆಸ್ ಟಿಕೆಟ್ ಪಡೆದ ಸ್ಪರ್ಧಿಸಿ ಗೆದ್ದು ಸಂಸದೆಯಾಗಿದ್ದರು.