ಮುಂಬಯಿ : ಎಫ್ ಐಐ ಹೊರಹರಿವು ಮತ್ತು ಯುಎಸ್ ಬಾಂಡ್ ಹೆಚ್ಚಳದ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಗುರುವಾರ ತೀವ್ರ ಕುಸಿತ (Sensex Crash) ಕಂಡಿವೆ. ಬಿಎಸ್ಇ (BSE) ಸೆನ್ಸೆಕ್ಸ್ 1,132 ಪಾಯಿಂಟ್ಸ್ ಕುಸಿದು 72,334 ಕ್ಕೆ ತಲುಪಿದ್ದರೆ, ನಿಫ್ಟಿ 50 370 ಪಾಯಿಂಟ್ಸ್ ಕುಸಿದು 21,932 ಕ್ಕೆ ತಲುಪಿದೆ. ಬಿಎಸ್ಇ ಸೂಚ್ಯಂಕವು ಅಂತಿಮವಾಗಿ 1,062 ಪಾಯಿಂಟ್ ಅಂದರೆ ಶೇಕಡಾ 1.45 ರಷ್ಟು ಕುಸಿದು 72,404 ಕ್ಕೆ ಕೊನೆಗೊಂಡಿತು. ನಿಫ್ಟಿ 50 ಕೂಡ 345 ಪಾಯಿಂಟ್ ಅಂದರೆ ಶೇಕಡಾ 1.55 ರಷ್ಟು ಕುಸಿದು 21,958 ಕ್ಕೆ ತಲುಪಿದೆ.
ಮಾರುಕಟ್ಟೆಗಳಲ್ಲಿ, ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ಶೇಕಡಾ 2 ರಷ್ಟು ಕುಸಿದರೆ, ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕವು ಶೇಕಡಾ 2.4 ರಷ್ಟು ಕುಸಿದಿದೆ. “ಮಾರುಕಟ್ಟೆಯ ಕುಸಿತಕ್ಕೆ ಮುಖ್ಯವಾಗಿ ಸಾರ್ವತ್ರಿಕ ಚುನಾವಣೆಗಳ ಸುತ್ತಲಿನ ಅನಿಶ್ಚಿತತೆ ಕಾರಣವಾಗಿದೆ. ಈ ಅನಿಶ್ಚಿತತೆಯು ಭಾರತದ ಚಂಚಲತೆಯ ಮಾಪಕವಾದ ಇಂಡಿಯಾ ವಿಐಎಕ್ಸ್ ಅನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಇದು 52 ವಾರಗಳ ಗರಿಷ್ಠ 19 ಕ್ಕೆ ತಲುಪಿದೆ, ಇದು ಮಾರುಕಟ್ಟೆ ಆತಂಕವನ್ನು ಸೂಚಿಸಿದೆ. ಲಾರ್ಜ್ ಕ್ಯಾಪ್ ಕಂಪನಿಗಳ ನಾಲ್ಕನೇ ತ್ರೈಮಾಸಿಕ ಗಳಿಕೆಯ ಇಳಿಕೆಯು ಹೂಡಿಕೆದಾರರ ನಿರಾಸಕ್ತಿಗೆ ಕಾರಣವಾಗಿದೆ ಎಂದು ಷೇರು ಮಾರುಕಟ್ಟೆ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯ ಅನಿಶ್ಚಿತತೆಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಎಲ್ &ಟಿ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಐಟಿಸಿ ಸೇರಿದಂತೆ ದೊಡ್ಡ ಸಂಸ್ಥೆಗಳ ಷೇರುಗಳು ವ್ಯಾಪಕ ಮಾರಾಟವನ್ನು ಕಂಡವು. ಈ ಪ್ರಮುಖ ಕಂಪನಿಗಳ ಸೂಚ್ಯಂಕದ ಕುಸಿತವು ಒಟ್ಟಾರೆ ಕುಸಿತ 80 ಪ್ರತಿಶತದಷ್ಟು ಪಾಲು ಹೊಂದಿದೆ. ಷೇರು ಮಾರುಕಟ್ಟೆಗಳ ಮೇಲೆ ಗಣನೀಯವಾಗಿ ಕೆಳಮುಖ ಒತ್ತಡಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Dietary Guidelines: ಭಾರತೀಯರ ಆಹಾರ ಹೇಗಿರಬೇಕು? ಐಸಿಎಂಆರ್ ಮಾರ್ಗಸೂಚಿ ಹೀಗಿದೆ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಮೇ ತಿಂಗಳಾದ್ಯಂತ ತಮ್ಮ ಹೂಡಿಕೆಗಳನ್ನು ಸಕ್ರಿಯವಾಗಿ ಮಾರಾಟ ಮಾಡುತ್ತಿದ್ದಾರೆ. ಒಟ್ಟು ಮಾರಾಟ 15,863.14 ಕೋಟಿ ರೂ. ಆಗಿದ್ದು ಇದು ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಮೇ 8 ರಂದು ವಿದೇಶಿ ಹೂಡಿಕೆದಾರರು 6,669.10 ಕೋಟಿ ರೂ.ಗಳ ಈಕ್ವಿಟಿಗಳನ್ನು ಹಿಂತೆಗೆದುಕೊಂಡಿದ್ದಾರೆ. ವಿದೇಶಿ ಬಂಡವಾಳ ಹೂಡಿಕೆದಾರರು 2025ರ ಹಣಕಾಸು ವರ್ಷದಲ್ಲಿ ಇದುವರೆಗೆ 13,747 ಕೋಟಿ ರೂ.ಗಳ ಈಕ್ವಿಟಿಗಳನ್ನು ಹಿಂತೆಗೆದುಕೊಂಡಿದ್ದಾರೆ.
ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ (ಡಿಐಐ) ಕಡಿಮೆ ಖರೀದಿ ಚಟುವಟಿಕೆಯು ಮಾರುಕಟ್ಟೆಯ ಚಂಚಲತೆಗೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಕಳೆದ ಒಂದು ತಿಂಗಳಲ್ಲಿ, ನಿಫ್ಟಿ ಶೇಕಡಾ 1.5 ರಷ್ಟು ಕುಸಿದರೆ, ಶಾಂಘೈ ಕಾಂಪೊಸಿಟ್ ಶೇಕಡಾ 2.62 ಮತ್ತು ಹ್ಯಾಂಗ್ ಸೆಂಗ್ ಶೇಕಡಾ 8.8 ರಷ್ಟು ಏರಿಕೆಯಾಗಿದೆ. ಚೀನಾ ಮತ್ತು ಹಾಂಗ್ ಕಾಂಗ್ ಮಾರುಕಟ್ಟೆಗಳು ಸುಮಾರು 10 ಪಿಇಗಳೊಂದಿಗೆ ಇಳಿಕೆ ಕಂಡಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಲೋಕ ಸಭಾ ಚುನಾವಣೆಯ ಆರಂಭಿಕ ಮೂರು ಹಂತಗಳಲ್ಲಿ ಕಂಡುಬಂದ ಕಡಿಮೆ ಮತದಾನವು ಮಾರುಕಟ್ಟೆಗಳ ಆತಂಕ ಹೆಚ್ಚಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.