Site icon Vistara News

BS Yediyurappa : ಲೈಂಗಿಕ ಕಿರುಕುಳ ಕೇಸ್; ಹೈಕೋರ್ಟ್​ನಲ್ಲಿ ಇಂದು ಯಡಿಯೂರಪ್ಪಗೆ ಜಾಮೀನು ಸಿಗದಿದ್ದರೆ ಬಂಧನ

B S yediyurappa

ಬೆಂಗಳೂರು: ಪೋಕ್ಸೋ ಪ್ರಕರಣಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ (BS Yediyurappa) ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ಶುಕ್ರವಾರ (ಇಂದು) ವಿಚಾರಣೆಗೆ ಬರಲಿದೆ. ಒಂದು ವೇಳೆ ಅವರು ಸಲ್ಲಿಸಿರುವ ಅರ್ಜಿ ತಿರಸ್ಕೃತಗೊಂಡರೆ ಯಡಿಯೂರಪ್ಪ ಅವರು ಬಂಧನಕ್ಕೆ ಒಳಗಾಗುವುದು ಖಚಿತ. ಯಾಕೆಂದರೆ ಗುರುವಾರ ಅವರ ಬಂಧನಕ್ಕೆ ಜಾಮೀನು ರಹಿತ ವಾರಂಟ್​ ಅನ್ನು ಬೆಂಗಳೂರಿನ ನ್ಯಾಯಾಲಯ ಹೊರಡಿಸಿದೆ. ಹೀಗಾಗಿ ಸಿಐಡಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆಯಲು ಕಾಯುತ್ತಿದ್ದಾರೆ. ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯೂ ಶುಕ್ರವಾರ ವಿಚಾರಣೆಗೆ ಬರಲಿದೆ. ಇದು ಕೂಡ ಪ್ರಕರಣದ ಭವಿಷ್ಯವನ್ನು ನಿರ್ಧರಿಸಲಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ತಾಯಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರ ಬಂಧನಕ್ಕೆ ಕಾಯುತ್ತಿದ್ದಾರೆ. ಹೀಗಾಗಿ ಅವರು ಪೋಸ್ಕೋ ಪ್ರಕರಣದಡಿ ಬಂಧನದ ಆತಂಕ ಎದುರಿಸುತ್ತಿದ್ದಾರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. ಅವರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ನ್ಯಾಯಾಲಯದಿಂದ ಬಂಧನ ವಾರಂಟ್​ ಪಡೆದುಕೊಂಡಿದ್ದಾರೆ. ಹೀಗಾಗಿ ಪೊಲೀಸರು ಯಡಿಯೂರಪ್ಪ ಅವರನ್ನು ಯಾವುದೇ ಕ್ಷಣದಲ್ಲಾದರೂ ಬಂಧಿಸುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಗಳು ಶುಕ್ರವಾರ ವಿಚಾರಣೆಗೆ ಬರಲಿರುವ ಕಾರಣ ಪ್ರಕರಣ ಕುತೂಹಲ ಮೂಡಿಸಿದೆ. ಅರ್ಜಿ ತಿರಸ್ಕೃತಗೊಂಡರೆ ಮಾಜಿ ಸಿಎಂಗೆ ಮತ್ತೆ ಸಂಕಷ್ಟ ಎದುರಾಗಲಿದೆ.

ಸಾಕ್ಷ್ಯ ನಾಶದ ಆರೋಪವೂ ಇದೆ

ಈ ಪ್ರಕರಣದಲ್ಲಿ ಬಿ.ಎಸ್​ ಯಡಿಯೂರಪ್ಪ ಅವರ ಆಪ್ತರ ಮೇಲೆ ಸಾಕ್ಷಿಗಳನ್ನು ನಾಶಪಡಿಸಿದ ಆರೋಪವೂ ಇದೆ. ಅರುಣ್ ಹಾಗೂ ರುದ್ರೇಶ್​ ಹಾಗೂ ಮರಿಸ್ವಾಮಿ ಎಂಬುವರನ್ನೂ ಪ್ರಕರಣದ ಆರೋಪಿಗಳನ್ನಾಗಿ ತನಿಖಾ ತಂಡ ಗುರುತಿಸಿದೆ. ಸಾಕ್ಷಿಗಳನ್ನು ನಾಶ ಮಾಡಿರುವುದು, ಪ್ರಭಾವ ಬೀರಿದ ಹಿನ್ನೆಲೆಯಲ್ಲಿ ಅವರನ್ನು ಸಿಆರ್​ಪಿಸಿ 41 ರ ಅಡಿಯಲ್ಲಿ ಆರೋಪಿಗಳನ್ನಾಗಿ ಪರಿಗಣಿಸಿ ನೋಟಿಸ್ ನೀಡಲಾಗಿದೆ.

ದೂರು ನೀಡಿದ ತಕ್ಷಣ ಬಾಲಕಿಯ ತಾಯಿಯನ್ನು ಕರೆಸಿಕೊಂಡಿದ್ದ ಯಡಿಯೂರಪ್ಪ ಅವರು ಹಣದ ಆಮಿಷ ಒಡ್ಡಿದ್ದರು. ಈ ದೃಶ್ಯಗಳನ್ನು ತಾಯಿ ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದರು. ಅದನ್ನು ಗಮನಿಸಿದ್ದ ಬಿಎಸ್​​ವೈ ಆಪ್ತರು ಮೊಬೈಲ್ ಕಸಿದು ದೃಶ್ಯಗಳನ್ನು ಡಿಲೀಟ್ ಮಾಡಿದ್ದರು. ಅದೇ ರೀತಿ ತಾಯಿ ಮಗಳನ್ನು ಕಾರಿನಲ್ಲಿ ಕೂರಿಸಿ ಅವರ ಮನೆಗೆ ಬಿಟ್ಟಿದ್ದರು. ಈ ನಡುವೆ ಅವರು ಹಣದ ಆಮಿಷ, ಜೀವ ಬೆದರಿಕೆ ಒಡ್ಡಿದ್ದರು. ಇವೆಲ್ಲರೂ ದೂರಿನಲ್ಲಿ ದಾಖಲಾಗಿರುವ ಕಾರಣ ಎಲ್ಲರಿಗೂ ಸಮಸ್ಯೆ ಉಂಟಾಗಿದೆ.

ಇದನ್ನೂ ಓದಿ: 7th pay commission : ಸಂಪುಟದಲ್ಲಿ ಚರ್ಚೆಯಾಗದ 7ನೇ ವೇತನ ಆಯೋಗ ಶಿಫಾರಸು; ಸರ್ಕಾರಿ ನೌಕರರ ಸಂಘಗಳ ಆಕ್ರೋಶ

ನ್ಯಾಯಾಲಯದಿಂದ ವಾರಂಟ್ ಪಡೆದ ತಕ್ಷಣ ಸಿಐಡಿ ಡಿಜಿಪಿ ಎಂ ಎ ಸಲೀಮ್ ಅವರು ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಹೈಕೋರ್ಟ್​ನಲ್ಲಿ ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯ ಭವಿಷ್ಯವನ್ನು ಪರಿಗಣಿಸಿ ಮುಂದಿನ ಪ್ರಕ್ರಿಯೆ ನಡೆಸಲು ಮುಂದಾಗಿದ್ದಾರೆ. ಒಂದು ವೇಳೆ ಅರ್ಜಿ ತಿರಸ್ಕೃತಗೊಂಡರೆ ಮಾಜಿ ಸಿಎಂ ಬಂಧನಕ್ಕಾಗಿ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಕುರಿತು ಸಿದ್ಧತೆ ನಡೆಸಿಕೊಂಡಿದ್ದಾರೆ.

ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ

ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯವು ಮಾಜಿ ಸಿಎಂ ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿತ್ತು. ಹೀಗಾಗಿ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತು. ಗುರುವಾರ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಅವರು ಬಂದಿರಲಿಲ್ಲ. ಅಲ್ಲದೆ ಸಿಐಡಿ ನೋಟಿಸ್​ಗೆ ಪ್ರತಿಕ್ರಿಯಿಸಿ 17ಕ್ಕೆ ಬರುವುದಾಗಿ ಹೇಳಿದ್ದರು.

ಕಳೆದ ವರ್ಷ ಮಾರ್ಚ್ ನಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಬಿಎಸ್ ವೈಗೆ ಬಂಧನ ಭೀತಿ ಎದುರಾಗಿದೆ. ಬಿಎಸ್ ವೈ ಅವರ ಬಂಧನವನ್ನು ಯಾವುದೇ ಕ್ಷಣದಲ್ಲಿಯಾದರೂ ಮಾಡಬಹುದು ಎನ್ನಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಮಾರ್ಚ್‌ 14ರಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದರು. ನಮ್ಮ 17 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ನೀಡಿದ್ದರು. ಫೆಬ್ರವರಿ 2ರಂದು ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪ ಮನೆಗೆ ಜತೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿ ಜತೆ ಯಡಿಯೂರಪ್ಪ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಪ್ರಕರಣವನ್ನು ಸಿಐಡಿ ತನಿಖೆ ಮಾಡಲು ಡಿಜಿಪಿ ಅಲೋಕ್‌ ಮೋಹನ್‌ ಆದೇಶಿಸಿದ್ದರು.

ದೂರು ನೀಡಿದ ಮಹಿಳೆ ಸುಮಾರು 53 ಗಣ್ಯರ ವಿರುದ್ಧ ದೂರು ನೀಡಿದ್ದರು. ಹೀಗಾಗಿ, ಇದು ಸುಳ್ಳು ದೂರು ಆಗಿರಬಹುದು ಎಂಬ ವಾದಗಳು ಕೇಳಿಬಂದಿದ್ದವು. ಇದೇ ಕಾರಣಕ್ಕೆ ಈ ಪ್ರಕರಣವನ್ನು ಬಿಎಸ್‌ ಯಡಿಯೂರಪ್ಪ ಕಡೆಗಣಿಸಿದ್ದರು.

Exit mobile version