Site icon Vistara News

Lok Sabha Election: ವಿಜಯೇಂದ್ರ ಪರ ಶಾಮನೂರು ಬ್ಯಾಟಿಂಗ್; ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿದ್ರಾ?

Shamanuru Shivashankarappa

ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (Lok Sabha Election) ಬಿಜೆಪಿಯ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಹೇಳುವ ಮೂಲಕ ಇತ್ತೀಚೆಗೆ ಸುದ್ದಿಯಾಗಿದ್ದ ಕಾಂಗ್ರೆಸ್‌ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು (Shamanuru Shivashankarappa) ಇದೀಗ, ಬಿ.ವೈ.ವಿಜಯೇಂದ್ರ ಅವರ ಪರ ಬ್ಯಾಟ್‌ ಬೀಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ವೀರಶೈವ ಲಿಂಗಾಯತರಿಗೆ ನೀಡಿರುವುದಕ್ಕೆ ಬಿಜೆಪಿ ಹೈಕಮಾಂಡ್‌ಗೆ ಶಾಮನೂರು ಅವರು ಅಭಿನಂದನೆ ಸಲ್ಲಿಸಿದ್ದು, ಮತ್ತೊಂದೆಡೆ ಸ್ವಪಕ್ಷದಲ್ಲಿ ಸಮುದಾಯದ ನಾಯಕರ ಕಡೆಗಣನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಸ್ವಪಕ್ಷದ ಹಿರಿಯ ನಾಯಕನ ಈ ನಡೆ ಕಾಂಗ್ರೆಸ್‌ಗೆ ಮುಜುಗರ ಉಂಟುಮಾಡಿದೆ.

ಈ ಬಾರಿಯ ರಾಜ್ಯಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಕುರಿತು ಕಾಂಗ್ರೆಸ್‌ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆಯುವ ಮೂಲಕ ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಚರ್ಚೆಗೆ ಗ್ರಾಸವಾಗಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು, ಕಾಂಗ್ರೆಸ್‌ನಲ್ಲಿ ವೀರಶೈವ ಲಿಂಗಾಯತ ನಾಯಕತ್ವ ಕಡೆಗಣಿಸಲಾಗಿದೆ ಎಂದು ಪರೋಕ್ಷವಾಗಿ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದು, ಬಿಜೆಪಿಯಲ್ಲಿ ವೀರಶೈವ ಲಿಂಗಾಯತ ನಾಯಕರಿಗೆ ಪ್ರಾಮುಖ್ಯತೆ ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Karnataka Budget Session 2024: ನೀರು ಕೊಡಿ ಎಂದರೆ ನೀರಿನ ದರ ಏರಿಸಿಲ್ಲ ಎಂದ ಡಿಕೆಶಿ! ಕೊನೆಗೆ ಸಮಸ್ಯೆ ಬಗೆಹರಿಯಿತಾ?

ವೀರಶೈವ ಲಿಂಗಾಯತ ನಾಯಕರನ್ನು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಕಡೆಗಣಿಸುತ್ತಾ ಬರಲಾಗಿದೆ ಎಂದು ಎಐಸಿಸಿ‌ ಅಧ್ಯಕ್ಷರಿಗೆ ಪತ್ರದಲ್ಲಿ ಸಂದೇಶ ರವಾನಿಸಿರುವ ಅವರು, ಮತ್ತೊಂದೆಡೆ ಬಿ.ವೈ. ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಮೂಲಕ ಲಿಂಗಾಯತ ನಾಯಕರಿಗೆ ಪ್ರಾಮುಖ್ಯತೆ ನೀಡಿರುವುದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಗೆ ಬರೆದ ಪತ್ರದ ಸಾರಾಂಶ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆಸಿರುವ ಪತ್ರದಲ್ಲಿ ಲಿಂಗಾಯತರ ನಾಯಕರಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಶಾಮನೂರು ಶಿವಶಂಕರಪ್ಪ ಕೋರಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನಗಳು ಕಾಂಗ್ರೆಸ್‌ಗೆ ದೊರೆಯಲಿವೆ. ಮೂರು ಸ್ಥಾನಗಳಲ್ಲಿ ಒಂದು ಸ್ಥಾನ ವೀರಶೈವ ಲಿಂಗಾಯತ ಸಮುದಾಯದವರಿಗೆ ನೀಡಬೇಕು. ಲೋಕಸಭೆ ಚುನಾವಣೆಯಲ್ಲಿ ಸಮುದಾಯದ ಜನಸಂಖ್ಯೆ ಅನುಗುಣವಾಗಿ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವೀರಶೈವ ಲಿಂಗಾಯತರು 1999 ರವರೆಗೆ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಬೆಂಬಲಿಗರಾಗಿದ್ದರು. ಎಸ್. ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ವಿರೇಂದ್ರ ಪಾಟೀಲ್ ಸೇರಿದಂತೆ ಅನೇಕ ನಾಯಕರು ಇದ್ದರು. ಅವರು ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ನಮ್ಮ ಸಮಾಜದ ಪ್ರತಿನಿಧಿಗಳಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ವೀರಶೈವ- ಲಿಂಗಾಯತರ ನಾಯಕತ್ವವನ್ನು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಕಡೆಗಣಿಸುತ್ತಾ ಬರಲಾಗಿದೆ. ಅದರ ಫಲವಾಗಿ ಕಾಂಗ್ರೆಸ್ ಪಕ್ಷವು ತನ್ನ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಘಟನೆಗಳಾಗಿವೆ ಎಂದರೆ ತಪ್ಪಿಲ್ಲ. ಈಗಲೂ ಕಾಲಮಿಂಚಿಲ್ಲ ಇನ್ನಾದರೂ ನಮ್ಮ ಸಮುದಾಯದವರಿಗೆ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ನಾಯಕತ್ವ ಕಲ್ಪಿಸುವ ಮೂಲಕ ಪ್ರಾತಿನಿಧ್ಯ ನೀಡುತ್ತಿರೆಂದು ನಂಬಿರುತ್ತೇವೆ ಎಂದು ತಿಳಿಸಿದ್ದಾರೆ.

ನಮ್ಮ ರಾಜ್ಯದವರೇ ಆದ ನಿಮಗೆ ಸಮುದಾಯದ ಬಗ್ಗೆ ಪ್ರತ್ಯೇಕವಾಗಿ ಹೇಳುವುದು ಏನಿಲ್ಲ. ಏಳು ದಶಕಗಳಿಂದ ಹತ್ತಿರದಿಂದ ಸಮುದಾಯ ಬಲ್ಲವರಾಗಿದ್ದೀರಿ. ಇದನ್ನು ಸರಿಪಡಿಸುವ ಶಕ್ತಿ ನಿಮಗಿದೆ. ಹಾಗಾಗಿ‌ ಮುಂದಿನ ದಿನಗಳಲ್ಲಿ ನಮ್ಮ‌ ಸಮಾಜಕ್ಕೆ ಆದ್ಯತೆ ನೀಡಬೇಕು ಎಂದು ಪತ್ರದಲ್ಲಿ ಶಾಮನೂರು ಉಲ್ಲೇಖಿಸಿದ್ದಾರೆ.

ಜೆ.ಪಿ. ನಡ್ಡಾಗೆ ಬರೆದ ಪತ್ರದಲ್ಲಿ ಏನಿದೆ?

ಸಮುದಾಯದ‌ ಯುವ ಮುಖಂಡ ಬಿ.ವೈ. ವಿಜಯೇಂದ್ರಗೆ ಅವಕಾಶ ನೀಡಿದ್ದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಶಾಮನೂರು ಶಿವಶಂಕರಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ಸಮುದಾಯದ‌ ಯುವ ಮುಖಂಡ ಬಿ.ವೈ. ವಿಜಯೇಂದ್ರಗೆ ಅವಕಾಶ ನೀಡಿ, ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಅಭಿನಂದನೆಗಳು. ಬಿಜೆಪಿಯಲ್ಲಿ ವೀರಶೈವ ಲಿಂಗಾಯತ ನಾಯಕರಿಗೆ ಪ್ರಾಮುಖ್ಯತೆ ನೀಡಲಾಗಿದೆ. ದಿವಂಗತ ಬಿ.ಬಿ. ಶಿವಪ್ಪ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂಗಳಾದ ಜಗದೀಶ್ ಶೆಟ್ಟರ್ ಹಾಗೂ ಬಸವರಾಜ್ ಬೊಮ್ಮಾಯಿ ಸೇರಿ ಹಲವರಿಗೆ ಬಿಜೆಪಿ ಪ್ರಾಮುಖ್ಯತೆ ನೀಡಿದೆ. ನಮ್ಮ ಸಮುದಾಯದ ನಾಯಕರು ರಾಜ್ಯದಲ್ಲಿ ಬಿಜೆಪಿ ಸಂಘಟಿಸಿ, ಬಲಪಡಿಸುವಲ್ಲಿ ಪ್ರಮುಖ ಪತ್ರವಹಿಸಿದ್ದಾರೆ. ಹಾಗಾಗಿ ರಾಜ್ಯಸಭೆಯಲ್ಲಿ ಪ್ರಾಧಾನ್ಯತೆ ನೀಡಬೇಕು. ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಜನಸಂಖ್ಯೆ ಅನುಗುಣವಾಗಿ ಸಮುದಾಯದವರಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಶಾಮನೂರು ಬೇಡಿಕೆಯನ್ನು ಸ್ವಾಗತಿಸಿದ ಎಂ.ಬಿ.ಪಾಟೀಲ್‌, ವಿಜಯಾನಂದ ಕಾಶಪ್ಪನವರ್

ಚುನಾವಣೆಯಲ್ಲಿ ವೀರಶೈವ ಲಿಂಗಾಯತ ನಾಯಕರಿಗೆ ಪ್ರಾಮುಖ್ಯತೆ ನೀಡಬೇಕು ಎಂಬ ಶಾಮನೂರು ಶಿವಶಂಕರಪ್ಪ ಅವರ ಬೇಡಿಕೆಯನ್ನು ಸಚಿವ ಎಂ.ಬಿ. ಪಾಟೀಲ್‌ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ್ ಸ್ವಾಗತಿಸಿದ್ದಾರೆ.

ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಆ ವಿಚಾರದ ಬಗ್ಗೆ ಮಾಹಿತಿಯಿಲ್ಲ, ತಿಳಿದುಕೊಂಡು ಮಾತನಾಡುತ್ತೇನೆ., ಶಾಮನೂರು ಅವರು ಹಿರಿಯರು, ಮಹಾಸಭಾ ಅಧ್ಯಕ್ಷರು. ಹಾಗಾಗಿ ಎರಡೂ ಪಕ್ಷಗಳನ್ನು ಕೇಳುವ ಹಕ್ಕಿದೆ. ರಾಜ್ಯಸಭೆ ಸ್ಥಾನ ಕೇಳಿದ್ದು ನ್ಯಾಯಯುತವಾಗಿದೆ ಎಂದ ತಿಳಿಸಿದ್ದಾರೆ.

ಸಚಿವ ಶರಣುಬಸಪ್ಪ ದರ್ಶನಾಪುರ್ ಪ್ರತಿಕ್ರಿಯಿಸಿ, ಶಾಮನೂರು ಶಿವಶಂಕರಪ್ಪ ಅವರು ಪತ್ರ ಬರೆದಿದ್ದು ಗೊತ್ತಿದೆ. ಚುನಾವಣೆಯಲ್ಲಿ ಸಮಾಜಕ್ಕೆ ಹೆಚ್ಚಿನ ಸ್ಥಾನ ಕೇಳುವುದರಲ್ಲಿ ತಪ್ಪೇನೂ ಇಲ್ಲ. ಸಮುದಾಯದ ಪರವಾಗಿ ಮಾತನಾಡಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಲಿಂಗಾಯತ ಮತಗಳು ಬಂದಿವೆ. ಎಲ್ಲಾ ಸಮಾಜದವರನ್ನು ತೆಗೆದುಕೊಂಡ ಹೋಗುವ ಕೆಲಸ ಕಾಂಗ್ರೆಸ್ ಮಾಡಿದೆ.

6 ಲಿಂಗಾಯತ ಶಾಸಕರನ್ನು ಮಂತ್ರಿ ಮಾಡಲಾಗಿದೆ. ಒಂದು ಸರ್ಕಾರ, ಪಕ್ಷ, ಸಿಎಂ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡ ಹೋಗಬೇಕು ಎಂದರೆ ಸ್ಪಲ್ಪ ಕಷ್ಟ ಆಗಲಿದೆ. ಬಹಳ ಅನ್ಯಾಯ ಆದಾಗ ನಾವು ಬೇಡಿಕೆ ಇಡುವ ಕೆಲಸ ಆಗುತ್ತದೆ ಎಂದು ಹೇಳಿದ್ದಾರೆ.

ಸಚಿವ ಆರ್. ಬಿ ತಿಮ್ಮಾಪುರ ಮಾತನಾಡಿ, ಸಮುದಾಯದ ‌ನಾಯಕರು, ಸಮುದಾಯದ ಪರವಾಗಿ ಮಾತಡಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಲಿಂಗಾಯತ ನಾಯಕತ್ವಕ್ಕೆ ಕೊರತೆ ಇಲ್ಲ, ತುಂಬ ಜನ ಇದ್ದಾರೆ. ಹಿರಿಯರಾಗಿ ಅವರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Budget Session 2024: ಖಾಸಗಿ ಒಡೆತನದ ʼಮೈಸೂರು ಲ್ಯಾಂಪ್ಸ್‌ʼ ಷೇರು ಖರೀದಿಗೆ ಕ್ರಮ: ಎಂ.ಬಿ. ಪಾಟೀಲ್

ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಕಾಂಗ್ರೆಸ್‌ನಲ್ಲಿ ಯಾರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ಗೆ ಅಧಿಕಾರ ಕೊಡುವುದರಲ್ಲಿ ಲಿಂಗಾಯತರು ಪ್ರಮುಖ ಪಾತ್ರವಹಿಸಿದ್ದಾರೆ. ಕೇಂದ್ರ ಮಟ್ಟದಲ್ಲಿ ನಾಯಕತ್ವ ಗುರುತಿಸಿಕೊಳ್ಳಲು, ಬೆಳೆಯಲು ಅವಕಾಶ ಕೊಡಿ ಎಂದು ಕೇಳಿದ್ದಾರೆ. ಆದರೆ ಸಮುದಾಯ ಕಡೆಗಣಿಸಿಲ್ಲ. ಒಂದು ಸಮುದಾಯವನ್ನ ಪ್ರತಿನಿಧಿಸಿ ಯಾರು ಏನು‌ ಮಾಡಲು ಆಗುವುದಿಲ್ಲ. ಎಲ್ಲರನ್ನೂ ಕರೆದುಕೊಂಡು ಹೋಗಬೇಕು. ಒಂದು ಸಮುದಾಯವನ್ನು ಪ್ರತಿನಿಧಿಸಿ ಬಿಜೆಪಿ ಏನು‌‌ ಮಾಡಿದೆ. ಯಡಿಯೂರಪ್ಪ ಅವರಿಗೆ ಅವಕಾಶ ಕೊಟ್ಟರೂ ಒಂದು ಬಾರಿಯಾದರೂ ಬಿಜೆಪಿಗೆ ಬಹುಮತ ಬಂತಾ? ವಿಜಯೇಂದ್ರ ಅವರಿಗೆ ಕೊಟ್ಟ ತಕ್ಷಣ ರಾಜ್ಯವೆಲ್ಲ ಒಂದು ಕಡೆ ಆಗಿ ಬಿಡುತ್ತಾ? ಕೇಂದ್ರ ಮಟ್ಟದಲ್ಲಿ ನಾಯಕತ್ವ ಗುರುತಿಸಬೇಕು, ಅದಕ್ಕೆ ನನ್ನ ಸ್ಪಂದನೆ ಇದೆ ಎಂದು ತಿಳಿಸಿದರು.

Exit mobile version