Site icon Vistara News

ತತ್ತ್ವ ಶಂಕರ : ಭಾರತದ ಮಣ್ಣನ್ನು ಪಾವನಗೊಳಿಸಿದ ಶಂಕರರು

Adi Shankaracharya

500 ವರ್ಷಗಳ ಹೋರಾಟದ ಫಲವಾಗಿ ಅಯೋಧ್ಯೆಗೆ ಶ್ರೀರಾಮನ ಪುನರಾಗಮನ ಆಗಿದೆ. ಭಾರತದ ಮಣ್ಣಿಗೆ ರಾಮತ್ವದ ಕಳೆ ಬಂದಿದೆ. ರಾಮನು ಭಾರತೀಯರ ಹೃದಯ ಪೀಠದಲ್ಲಿ ಬೆಳಗುವ ಜ್ಯೋತಿಯಾಗಿದ್ದಾನೆ. ಅವನು ಉತ್ತರದಲ್ಲಿ ಜನಿಸಿ ದಕ್ಷಿಣದ ಕಡೆಗೆ ಪ್ರಯಾಣ ಮಾಡಿ ಭಾರತದ ಭೂಮಿಯನ್ನು ಬೆಳಗಿಸಿದವನು. ಆದಿ ಶಂಕರರು (Sri Adi Shankaracharya) ದಕ್ಷಿಣದಲ್ಲಿ ಹುಟ್ಟಿ ಉತ್ತರಕ್ಕೆ ಪ್ರಯಾಣ ಬೆಳೆಸಿ ಭಾರತದ ಮಣ್ಣನ್ನು ಪಾವನಗೊಳಿಸಿದವರು. ತ್ರೇತಾಯುಗದಲ್ಲಿ ಅಂದು ರಾಮಾವತಾರವಾದರೆ ಕಲಿಯುಗದಲ್ಲಿ ಇಂದು ಶಂಕರಾವತಾರ. ಅಂದು ಚೈತ್ರ ಶುದ್ಧ ನವಮಿಯಂದು ಶ್ರೀ ರಾಮನ ದಿವ್ಯ ಅವತಾರ. ಯುಧಿಷ್ಠಿರ ಶಕ 2063ನೇ ವೈಶಾಖ ಶುದ್ಧ ಪಂಚಮಿಯಂದು ಶಂಕರಾವಾತಾರ.

ರಾಮನ ಆದರ್ಶ, ಶೌರ್ಯ ಗುಣಗಳು ಪ್ರಸಿದ್ಧವಾದವು. ರಾಮನು ಕರುಣೆಯಿಂದ ಹಾಸ್ಯದವರೆಗೆ, ಶೃಂಗಾರದಿಂದ ಕ್ರೋಧದವರೆಗೆ ನವರಸಗಳ ನಾಯಕ. ಅವನ ಜೀವನವೇ ಒಂದು ತಪಸ್ಸು.ಅವನ ಜೀವನವು, ಅವನ ನಡೆಯು ಆದರ್ಶದ ಆದರ್ಶ. ಮಾತೃಭಕ್ತಿ, ಗುರುನಿಷ್ಠೆ, ಆತ್ಮಗುಣ, ದೇಶಭಕ್ತಿ, ಪ್ರಜಾ ಪರಿಪಾಲನೆ, ಕರುಣೆ, ಸರಳತೆ, ಉತ್ತಮ ನಾಯಕತ್ವ ಹೀಗೆ 71 ಗುಣಗಳ ಪಟ್ಟಿಯನ್ನು ರಾಮಾಯಣದಲ್ಲಿ ಉಲ್ಲೇಖಿಸಿದ್ದಾರೆ.

ಹಾಗೆಯೇ ಆದಿ ಶಂಕರರು ಮಹಾದೇವನ ಅವತಾರ. ಮಹಾತಾಯಿ ಆರ್ಯಾಂಬೇ ಮತ್ತು ಶಿವಗುರುವಿನ ಸುಪುತ್ರರಾಗಿ ಈ ಭಾರತ ಭೂಮಿಯ ಮಣ್ಣನ್ನು ಮೂರು ಬಾರಿ ಪಾವನಗೊಳಿಸಿದ್ದಾರೆ. ಅವರ ಜೀವನವೂ ಆದರ್ಶಕ್ಕೆ ಆದರ್ಶ. ವೈರಾಗ್ಯದ ನಿಧಿಯಾಗಿದ್ದ ಅವರು ದೇಶದ ಜನರಿಗೆ ಧರ್ಮ ಪ್ರಜ್ಞೆಯನ್ನು ಮೂಡಿಸಿದರು. ಬ್ರಾಹ್ಮಣರಿಂದ ದಲಿತರವರೆಗೆ ಬ್ರಹ್ಮಚರ್ಯದಿಂದ ಸನ್ಯಾಸದವರೆಗೆ, ಎಲ್ಲಾ ವರ್ಣಾಶ್ರಮದ ಜನರಿಗೂ ಸರಳವಾಗಿ ಆತ್ಮಜ್ಞಾನವನ್ನು ನೀಡಿದ ಜಗದ್ಗುರುಗಳು. ಆಚಾರ್ಯರು ಸಾಮಾನ್ಯರಿಗೆ ಸಾಮಾನ್ಯರಂತೆ ಜ್ಞಾನಿಗಳಿಗೆ ಮೇರು ಜ್ಞಾನಿಗಳಂತೆ ಎಲ್ಲರಿಗೂ ಅರ್ಥವಾಗುವಂತಹ ಧರ್ಮ ಸಂದೇಶಗಳನ್ನು ನೀಡಿದ್ದಾರೆ. 32 ವರ್ಷ ಬದುಕಿದರೂ ಅವರ ಸಾಧನೆಯು ಅಜರಾಮರ.

ಅವರು ಬರೆಯದ ಶಾಸ್ತ್ರವಿಲ್ಲ ತಿಳಿಯದ ವಿಷಯವಿಲ್ಲ. ಈ ಮನುಷ್ಯ ಜನ್ಮವು ಸಿಗುವುದು ವಿರಳ. ಅದರಲ್ಲೂ ಉತ್ತಮ ಕುಲವು ಇನ್ನೂ ವಿರಳ. ಅದರಲ್ಲೂ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುವುದು ಇನ್ನೂ ವಿರಳ. ಹೀಗಿರುವಾಗ ಇಂತಹ ಗುರುಗಳ ಪರಂಪರೆಗೆ ಸೇರಿದ ನಾವು ಉತ್ತಮ ಕುಲದಲ್ಲಿ ಹುಟ್ಟಿದರೂ ಇಂದ್ರಿಯ ಸುಖದ ಹಿಂದೆ ಬಿದ್ದು ಈ ಲೋಕದಲ್ಲಿ ಅಲೆಯುತ್ತಿದ್ದೇವೆ. ಆಚಾರ್ಯರ ಗ್ರಂಥಗಳ ಅಧ್ಯಯನ ಮಾಡಿ ಇನ್ನಷ್ಟು ಜನರಿಗೆ ಅದನ್ನು ತಿಳಿಸಿ ಈ ಜನ್ಮದ ಮಹತ್ವವನ್ನು ತಿಳಿಸಬೇಕಾಗಿದೆ.

ಇದನ್ನೂ ಓದಿ : ತತ್ತ್ವ ಶಂಕರ: ಲೋಕಕ್ಕೆ ಜ್ಞಾನದ ಮಹತಿಯನ್ನು ಹೊತ್ತಿಸಿದ ಮಹಾತ್ಮರು…

ನಾವು ಯುವಪೀಳಿಗೆಯ ಜನರು ಈ ಕಾರ್ಯವನ್ನು ಮಾಡಬೇಕಿದೆ. ನಾವು ದೇಶಾದ್ಯಂತ ಆಚಾರ್ಯರು ಹಚ್ಚಿದ ದೀಪವನ್ನು ಮುಟ್ಟಿಸಬೇಕು. ಈ ರಾಮೋತ್ಸವದ ಶುಭ ಸಂದರ್ಭದಲ್ಲಿ ಆಚಾರ್ಯರು ನೀಡಿದ, ರಾಮನನ್ನು ಮನಸ್ಸಿನಲ್ಲಿ ಪೂಜಿಸುವ ರಾಮ ಮಾನಸ ಪೂಜಾ ಶ್ಲೋಕವನ್ನು, ರಾಮ ಭುಜಂಗ ಪ್ರಯಾತ ಸ್ತೋತ್ರವನ್ನು ಅನುಸಂಧಾನ ಮಾಡಿ ಲೋಕಕ್ಕೆ ಅವುಗಳ ತತ್ತ್ವಗಳನ್ನು ಸಾರಬೇಕು. ರಾಮನೆಂಬ ಅಮೃತ ಸಾಗರದಲ್ಲಿ ಶಂಕರರೆಂಬ ನೌಕೆಯನ್ನು ಏರಿ ಆತ್ಮಜ್ಞಾನವೆಂಬ ದಡವನ್ನು ಮುಟ್ಟಬೇಕಾಗಿದೆ ಮತ್ತು ಉಳಿದವರಿಗೂ ಆ ಮಾರ್ಗವನ್ನು ನಾವೆಲ್ಲರೂ ಹೇಳುವಂತೆ ಆಗಲಿ ಎಂದು ಆ ರಾಮ ಶಂಕರರಲ್ಲಿ ಬೇಡಿಕೊಳ್ಳೋಣ.

Exit mobile version