ಕರ್ನಾಟಕಕ್ಕೆ ಸೋಮವಾರ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿವಮೊಗ್ಗದಲ್ಲಿ ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ, ಶಿಮೂಲ್ ನೂತನ ಪ್ಯಾಕಿಂಗ್ ಘಟಕ, ಮಲೆನಾಡು ಅಡಕೆ ಮಾರುಕಟ್ಟೆ ಸಹಕಾರಿ ಸಂಸ್ಥೆಯ ಹೊಸ ಕೇಂದ್ರ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲ್ವೆ ಲೇನ್, ರಾಷ್ಟ್ರೀಯ ಹೆದ್ದಾರಿ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನೂ ಉದ್ಘಾಟಿಸಿದ್ದಾರೆ. ಹಾಗೆಯೇ ಬೆಳಗಾವಿಯಲ್ಲಿ ನವೀಕೃತ ರೇಲ್ವೆ ನಿಲ್ದಾಣ ಉದ್ಘಾಟನೆ, ಬೆಳಗಾವಿ ಕಿತ್ತೂರು ಧಾರವಾಡ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ, ಬೆಳಗಾವಿ ಲೋಂಡಾ ರೈಲು ಮಾರ್ಗ ಡಬ್ಲಿಂಗ್ ಮುಂತಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕಳೆದ ಕೆಲವು ದಿನಗಳಿಂದ ಹಲವು ಮೆಗಾ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ಹಾಗೂ ಅದಕ್ಕೆ ಕೇಂದ್ರದ ಕೊಡುಗೆ ಎಷ್ಟಿದ್ದರೂ ಅದನ್ನು ರಾಜ್ಯ ಸ್ವಾಗತಿಸುತ್ತದೆ.
ಬರಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಯೋಜನೆಗಳ ಉದ್ಘಾಟನೆಯನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದೆ ಎಂಬ ಟೀಕೆ ಇದೆ. ಚುನಾವಣೆ ಸಂದರ್ಭದಲ್ಲಿ ಹೊಸ ಯೋಜನೆಗಳ ಘೋಷಣೆ, ಭರವಸೆಗಳು, ಪ್ರಧಾನಮಂತ್ರಿ ಭೇಟಿ ಸಾಮಾನ್ಯ ಎಂಬಂತಾಗಿದೆ. ಇದನ್ನು ಬಿಟ್ಟು ನೋಡಿದರೂ ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ಧಿ ಪರ್ವವನ್ನು ಅಲ್ಲಗಳೆಯುವಂತಿಲ್ಲ. ಉದಾಹರಣೆಗೆ, ಶಿವಮೊಗ್ಗದ ವಿಮಾನ ನಿಲ್ದಾಣ ಹಾಗೂ ಮೈಸೂರು- ಬೆಂಗಳೂರು ದಶಪಥ ಯೋಜನೆಗಳನ್ನೇ ಗಮನಿಸಬಹುದು. ಶಿವಮೊಗ್ಗ ಏರ್‌ಪೋರ್ಟ್ ಕಾರ್ಯಾರಂಭಿಸಿದೆ. ದಶಪಥ ಕೂಡ ಪೂರ್ಣವಾಗಿದ್ದು, ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ. ವಿಮಾನ ನಿಲ್ದಾಣಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳು ಹೊಸ ಕಾಲದ ಅಭಿವೃದ್ಧಿಯ ಸೂಚಕಗಳಾಗಿವೆ. ಯಾವ ರಾಜ್ಯ ಇವುಗಳನ್ನು ಹೆಚ್ಚು ಸಂಖ್ಯೆಯಲ್ಲಿ, ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆಯೋ ಅದು ಅಭಿವೃದ್ಧಿ ಪಥದಲ್ಲಿ ಮುಂದೆ ಮುಂದೆ ಸಾಗುತ್ತದೆ. ಉದಾಹರಣೆಗೆ ಉತ್ತರ ಪ್ರದೇಶವನ್ನು ನೋಡಬಹುದು. ಅಲ್ಲಿ ಕಳೆದ ಐದು ವರ್ಷಗಳಲ್ಲಿ ಕನಿಷ್ಠ ನಾಲ್ಕು ಹೊಸ ಎಕ್ಸ್‌ಪ್ರೆಸ್‌ವೇಗಳು ಬಂದಿವೆ; ನಾಲ್ಕಾರು ಹೈವೇಗಳು ಉನ್ನತೀಕರಣಗೊಂಡಿವೆ. ಇನ್ನು ಒಟ್ಟಾರೆ ದೇಶದ ಲೆಕ್ಕ ಹಿಡಿದರೆ, ಕಳೆದ ಅರುವತ್ತು ವರ್ಷಗಳಲ್ಲಿ ದೇಶದಲ್ಲಿದ್ದ ವಿಮಾನ ನಿಲ್ದಾಣಗಳ ಸಂಖ್ಯೆ 74. ಕಳೆದ ಹತ್ತು ವರ್ಷಗಳಲ್ಲಿ ಏರ್‌ಪೋರ್ಟ್‌ಗಳ ಸಂಖ್ಯೆ ದ್ವಿಗುಣಗೊಂಡಿದೆ. ಅತ್ಯುತ್ತಮ ಸಂಪರ್ಕ ವ್ಯವಸ್ಥೆ ಎಂದರೆ ಚಟುವಟಿಕೆ ಚುರುಕಾಗುವುದು, ವಾಣಿಜ್ಯ ಬೆಳೆಯುವುದು, ಉದ್ಯೋಗ ಹೆಚ್ಚುವುದು ಹಾಗೂ ಜಿಡಿಪಿಗೆ ಹೆಚ್ಚಿನ ಕೊಡುಗೆ ದೊರೆಯುವುದು ಎಂದರ್ಥ. ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಅಭೂತಪೂರ್ವ ಕಾಮಗಾರಿಗಳು ನೆರವೇರಿವೆ.
ಬರಿಯ ಸಂಪರ್ಕ ಮಾತ್ರವಲ್ಲದೆ, ಇನ್ನಿತರ ಹಲವು ವಲಯಗಳಲ್ಲಿ ಪುರೋಗಾಮಿ ನಡೆಯನ್ನು ಗಮನಿಸಬಹುದು. ಜಲಜೀವನ ಮಿಷನ್, ಮನೆಮನೆಗೂ ವಿದ್ಯುತ್, ಅನಿಲ ಸಂಪರ್ಕ ಮುಂತಾದ ಕಾರ್ಯಗಳಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಿದೆ. ಕರ್ನಾಟಕ ತಂತ್ರಜ್ಞಾನ- ವೈಮಾನಿಕ ಕ್ಷೇತ್ರದಲ್ಲಿ ಹೊಂದಿರುವ ಪಾರಮ್ಯಕ್ಕೆ ಕೇಂದ್ರ ಇನ್ನಷ್ಟು ಒತ್ತು ಕೊಟ್ಟಿದೆ. ತುಮಕೂರಿನ ಗುಬ್ಬಿಯಲ್ಲಿ ಇತ್ತೀಚೆಗೆ ದೇಸಿ ಹಗುರ ಹೆಲಿಕಾಪ್ಟರ್ ಘಟಕ ಕಾರ್ಯಾರಂಭಿಸಿದೆ. ಇದು ಭಾರತೀಯ ಸೈನ್ಯಕ್ಕೆ ಹೆಲಿಕಾಪ್ಟರ್ ಸ್ವಾವಲಂಬನೆ ನೀಡಲಿದೆ. ಕಳೆದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ 5300 ಕೋಟಿ ರೂ.ಗಳನ್ನು ಸರ್ಕಾರ ನೀಡಿದ್ದುದನ್ನು ನೆನಪಿಸಿಕೊಳ್ಳಬಹುದು. ಧಾರವಾಡದಲ್ಲಿ ನಿರ್ಮಾಣಗೊಂಡಿರುವ ನೂತನ ಐಐಟಿಯನ್ನೂ ಮಾರ್ಚ್ 11ರಂದು ಮೋದಿಯವರೇ ಉದ್ಘಾಟಿಸಲಿದ್ದಾರೆ. ಈಗಾಗಲೇ ಹಲವು ಕಾಮಗಾರಿಗಳನ್ನು ಕೊನೆಗೊಳಿಸಲಾಗಿದ್ದು, ಇನ್ನೂ ಅನೇಕ ಯೋಜನೆಗಳ ಘೋಷಣೆ, ಲೋಕಾರ್ಪಣೆಯಾಗಬಹುದು. ಈ ಹಿಂದೆ ಉತ್ತರ ಪ್ರದೇಶ ಚುನಾವಣೆಗೂ ಮೊದಲು ಹಲವಾರು ಬೃಹತ್ ಯೋಜನೆಗಳಿಗೆ ಚಾಲನೆ ನೀಡಲಾಗಿತ್ತು. ಈಗ ಕರ್ನಾಟಕದಲ್ಲೂ ಇದು ಮುಂದುವರಿದಿದೆ. ಮೋದಿಯವರು ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಆಗಾಗ ʼಡಬಲ್ ಎಂಜಿನ್ ಸರ್ಕಾರʼದ ಮಂತ್ರವನ್ನು ಪಠಿಸುತ್ತಿರುತ್ತಾರೆ. ಡಬಲ್ ಎಂಜಿನ್ ರಾಜ್ಯದ ಅಭಿವೃದ್ಧಿಗೆ ದುಪ್ಪಟ್ಟು ವೇಗ ನೀಡುವುದಾದರೆ ಆಗಲಿ. ಬಾಧಕವಾಗದಂತಿರಲಿ. ಅದೇ ರೀತಿ, ಉಭಯ ಕಡೆಗಳಲ್ಲಿ ಆಡಳಿತ ಪಕ್ಷ ಯಾವುದೇ ಇದ್ದರೂ ಅಭಿವೃದ್ಧಿಯ ವಿಚಾರದಲ್ಲಿ ಡಬಲ್ ಎಂಜಿನ್ ಆಗಿಯೇ ಇರಲಿ ಎಂಬ ಬುದ್ಧಿಯೂ ರಾಜಕಾರಣಿಗಳಿಗೆ ಇರಬೇಕು. ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ಹಾಕಬೇಕು ಎನ್ನುವುದನ್ನು ಜನ ತೀರ್ಮಾನಿಸುತ್ತಾರೆ. ಆದರೆ ಅಭಿವೃದ್ಧಿ ಕಾರ್ಯಗಳನ್ನು ಸ್ವಾಗತಿಸೋಣ.