Site icon Vistara News

Shiradi Landslide: ಹಳಿ ಮೇಲೆ ಭೂಕುಸಿತ, ಬೆಂಗಳೂರು- ಮಂಗಳೂರು ರೈಲುಗಳು 15 ದಿನ ಬಂದ್, 400 ಕಾರ್ಮಿಕರಿಂದ ತೆರವು ಕಾರ್ಯಾಚರಣೆ

shiradi landslide railway track

ಬೆಂಗಳೂರು: ಶಿರಾಡಿ ಘಾಟಿಯಲ್ಲಿ (Shiradi Ghat) ರೈಲ್ವೇ ಹಳಿ (Railway Track) ಮೇಲೆ ಭಾರಿ ಭೂಕುಸಿತ (Shiradi Landslide) ಆಗಿರುವ ಪರಿಣಾಮ, ಬೆಂಗಳೂರು- ಮಂಗಳೂರು (Bengaluru Mangaluru Trains) ನಡುವೆ ಸಂಚರಿಸುವ ರೈಲುಗಳನ್ನು 15 ದಿನಗಳ ಕಾಲ ಬಂದ್ ಮಾಡಲಾಗಿದೆ. ಆಗಸ್ಟ್‌ 10ರವರೆಗೆ ಇಲ್ಲಿ ರೈಲು ಸಂಚಾರ (Trains Cancelled) ಇರುವುದಿಲ್ಲ.

ಶಿರಾಡಿ ಘಾಟಿಯ ಎಡಕುಮೇರಿ- ಕಡಗರವಳ್ಳಿ ಮಧ್ಯೆ ಭೂಕುಸಿತವಾಗಿ ರೈಲ್ವೆ ಹಳಿ ಮುಚ್ಚಿಹೋಗಿದೆ. ಆಗಸ್ಟ್ 10ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಇಲಾಖೆ ಹೇಳಿದೆ. 14 ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. 400 ಮಂದಿಯಿಂದ ರೈಲು ಹಳಿ ತೆರವು ಕಾಮಗಾರಿ ನಡೆಯುತ್ತಿದೆ. ಅದರೆ ಕಾಮಗಾರಿಗೆ ಭಾರಿ ಮಳೆ ಅಡ್ಡಿಯಾಗಿದೆ.

ರೈಲು ಸಂಚಾರ ರದ್ದಾದ ಬೆನ್ನಲ್ಲೇ ಬೆಂಗಳೂರು – ಮಂಗಳೂರು ನಡುವಿನ ಫ್ಲೈಟ್ ಟಿಕೇಟ್ ದರ ದುಪ್ಪಟ್ಟಾಗಿದೆ. ಸಾಮಾನ್ಯವಾಗಿ ಇರುತ್ತಿದ್ದ 3000- 3500 ರೂ. ದರ ಇದೀಗ 6604 ರೂಪಾಯಿಗೆ ಏರಿಕೆಯಾಗಿದೆ.

ಎಡಕುಮೇರಿ– ಕಡಗರವಳ್ಳಿ ನಡುವಿನ ದೋಣಿಗಲ್‌ನಲ್ಲಿ ಉಂಟಾಗಿರುವ ಗಂಭೀರ ಸ್ವರೂಪದ ಭೂಕುಸಿತದಿಂದ ಹಾನಿಗೀಡಾಗಿರುವ ರೈಲು ಮಾರ್ಗದ ದುರಸ್ತಿ ಕಾರ್ಯ ಹಗಲು ರಾತ್ರಿ ಸಮರೋಪಾದಿಯಲ್ಲಿ ನಡೆಯುತ್ತಿದೆ. ನಿರಂತರ ಮಳೆಯ ಸವಾಲಿನ ನಡುವೆಯೂ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಅಗತ್ಯ ಸಲಕರಣೆಗಳೊಂದಿಗೆ ಕಾರ್ಮಿಕರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಹಗಲು ಪಾಳಿಯಲ್ಲಿ 200, ರಾತ್ರಿ ಪಾಳಿಯಲ್ಲಿ 120 ಹಾಗೂ ಇತರ 110 ಸಿಬಂದಿಯನ್ನು ನಿಯೋಜಿಸಲಾಗಿದೆ. ಸುರಕ್ಷೆಗೆ ಆದ್ಯತೆ ನೀಡಿ ಕಾಮಗಾರಿ ನಿರ್ವಹಿಸಲಾಗುತ್ತಿದೆ.

ಶುಕ್ರವಾರ ಸಂಜೆ ವೇಳೆ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿ ರೈಲು ಹಳಿಗೆ ಅಪಾಯ ಉಂಟಾಗಿತ್ತು. ಆರು ಹಿಟಾಚಿ ಯಂತ್ರಗಳು, ಐದು ಪೋಕ್ಲೈನ್‌ ಯಂತ್ರಗಳೂ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಭೂಕುಸಿತವಾದ ಜಾಗದಲ್ಲಿ ಮಣ್ಣನ್ನು ತಡೆದಿಡುವ ಕೆಲಸ ನಡೆಯುತ್ತಿದ್ದು, ಕಲ್ಲು ಬಂಡೆ, ಮರಳಿನ ಚೀಲ ಜೋಡಿಸಲಾಗುತ್ತಿದೆ. ಅದಕ್ಕೆ ಕಬ್ಬಿಣದ ನೆಟ್‌ (ಗೇಬಿಯನ್‌ ಮೆಷ್‌) ಮೂಲಕ ತಡೆಗೋಡೆ ನಿರ್ಮಿಸಲಾಗುತ್ತಿದೆ.

ಆಹಾರ ತಯಾರಿ, ಪೂರೈಕೆ ಹಾಗೂ ವೈದ್ಯಕೀಯ ತಂಡಗಳೂ ಸ್ಥಳದಲ್ಲಿವೆ. ಸುಬ್ರಹ್ಮಣ್ಯ ನಿಲ್ದಾಣದಿಂದ ಆಹಾರ, ನೀರು ಸರಬರಾಜು ಮಾಡಲಾಗುತ್ತಿದೆ. ದುರಸ್ತಿಗೆ ಬೇಕಾಗಿರುವ 8 ಜನರೇಟರ್‌ಗಳು, ಸಮರ್ಪಕ ಬೆಳಕಿನ ವ್ಯವಸ್ಥೆಯೊಂದಿಗೆ ಸಂಪರ್ಕ ನೆಟ್‌ವರ್ಕ್‌, ಇಂಟರ್‌ನೆಟ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಂವಹನ ವ್ಯವಸ್ಥೆಗಳಾದ ಆಟೋ ಫೋನ್‌ಗಳು, ಕಂಟ್ರೋಲ್‌ ಫೋನ್‌, ಸ್ಯಾಟಲೈಟ್‌ ಫೋನ್‌, ವಿಎಸ್‌ಟಿಎ ಸಂವಹನ (ಲೈವ್‌ ಸ್ಟ್ರೀಮಿಂಗ್‌ಗಾಗಿ) ವ್ಯವಸ್ಥೆಗಳನ್ನು ಬಳಸಲಾಗುತ್ತಿದ್ದು, ಹುಬ್ಬಳ್ಳಿಯ ಕೇಂದ್ರ ಕಚೇರಿಯ ವಾರ್‌ ರೂಮ್‌ನಿಂದ ಸಂವಹನ ನಡೆಸಲಾಗುತ್ತಿದೆ.

ಯಾವ್ಯಾವ ರೈಲು ರದ್ದು?

ಮಂಗಳೂರು: ನಂ.16511 ಕೆಎಸ್‌ಆರ್‌ ಬೆಂಗಳೂರು- ಕಣ್ಣೂರು ಎಕ್ಸ್‌ಪ್ರೆಸ್‌ ರೈಲನ್ನು ಜು.29ರಿಂದ ಆ.3ರ ವರೆಗೆ ಸಂರ್ಪೂವಾಗಿ ರದ್ದು ಮಾಡಲಾಗಿದೆ.
ನಂ.16512 ಕಣ್ಣೂರು- ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲನ್ನು ಜು.30ರಿಂದ ಆ.4ರ ವರೆಗೆ ರದ್ದುಪಡಿಸಲಾಗಿದೆ.
ನಂ.07378 ಮಂಗಳೂರು ಸೆಂಟ್ರಲ್‌- ವಿಜಯಪುರ ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು ಜು.30ರಿಂದ ಆ.4 ವರೆಗೆ ಸಂಪೂರ್ಣ ರದ್ದುಪಡಿಸಲಾಗಿದೆ.
ನಂ.07377 ವಿಜಯಪುರ- ಮಂಗಳೂರು ಸೆಂಟ್ರಲ್‌ ರೈಲನ್ನು ಜು. 29ರಿಂದ ಆ. 3ರ ವರೆಗೆ ಸಂಪೂರ್ಣ ರದ್ದುಪಡಿಸಲಾಗಿದೆ.
ನಂ.16585 ಎಸ್‌ಎಂವಿಟಿ ಬೆಂಗಳೂರು – ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲು ಜು. 29ರಿಂದ ಆ. 3ರ ವರೆಗೆ ಸಂಪೂರ್ಣ ರದ್ದಾಗಿದೆ.
ನಂ.16586 ಮುರುಡೇಶ್ವರ – ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಜು.30ರಿಂದ ಆ. 4ರ ವರೆಗೆ ಸಂಪೂರ್ಣ ರದ್ದಾಗಿದೆ.
ನಂ.16595 ಕೆಎಸ್‌ಆರ್‌ ಬೆಂಗಳೂರು – ಕಾರವಾರ ವಿಶೇಷ ಎಕ್ಸ್‌ಪ್ರೆಸ್‌ ರೈಲು ಜು. 29 ರಿಂದ ಆ. 3ರ ವರೆಗೆ ರದ್ದಾಗಿದೆ.
ನಂ.16596 ಕಾರವಾರ -ಕೆಎಸ್‌ಆರ್‌ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು ಜು.30ರಿಂದ ಆ.4ರ ವರೆಗೆ ಸಂಪೂರ್ಣ ರದ್ದಾಗಿದೆ.
ನಂ.16576 ಮಂಗಳೂರು ಜಂಕ್ಷನ್‌ – ಯಶವಂತಪುರ ಜಂಕ್ಷನ್‌ ಎಕ್ಸ್‌ಪ್ರಸ್‌ ರೈಲನ್ನು ಜು. 30 ಮತ್ತು ಆ. 1ರಂದು ರದ್ದುಗೊಳಿಸಿದೆ.
ನಂ.16575 ಯಶವಂತಪುರ ಜಂಕ್ಷನ್‌-ಮಂಗಳೂರು ಜಂಕ್ಷನ್‌ ಆ. 31 ಮತ್ತು ಜು. 2ರಂದು ರದ್ದುಪಡಿಸಲಾಗಿದೆ.
ನಂ.16539 ಯಶವಂತಪುರ ಜಂಕ್ಷನ್‌ – ಮಂಗಳೂರು ಜಂಕ್ಷನ್‌ ಎಕ್ಸ್‌ ಪ್ರಸ್‌ ರೈಲನ್ನು ಆ.3ರಂದು ರದ್ದುಪಡಿಸಿದೆ.
ನಂ.16540 ಮಂಗಳೂರು ಜಂಕ್ಷನ್‌ – ಯಶವಂತಪುರ ಜಂಕ್ಷನ್‌ ರೈಲನ್ನು ಆ.4ರಂದು ರದ್ದುಪಡಿಸಲಾಗಿದೆ.
ನಂ.16515 ಯಶವಂತಪುರ ಜಂಕ್ಷನ್‌- ಕಾರವಾರ ಎಕ್ಸ್‌ಪ್ರೆಸ್‌ ರೈಲನ್ನು ಜು. 29, 31 ಮತ್ತು ಆ.2ರಂದು ರದ್ದುಪಡಿಸಲಾಗಿದೆ.
ನಂ.16516 ಕಾರವಾರ -ಯಶವಂತಪುರ ಜಂಕ್ಷನ್‌ ರೈಲನ್ನು ಜು. 30, ಆ. 1 ಮತ್ತು ಆ.3ರಂದು ಸಂಪೂರ್ಣ ರದ್ದುಪಡಿಸಲಾಗಿದೆ.

ಇದನ್ನೂ ಓದಿ: Shiradi Ghat: ಭೂಕುಸಿತ; ಶಿರಾಡಿ ಘಾಟ್​ನಲ್ಲಿ ಸಂಚಾರ ನಿಷೇಧ ​; ಬೆಂಗಳೂರು- ಮಂಗಳೂರು ಸಂಪರ್ಕ ಬಹುತೇಕ ಕಟ್​

Exit mobile version