Site icon Vistara News

Shravan 2024: ಶ್ರಾವಣ ಶುಕ್ರವಾರದ ವಿಶೇಷವೇನು? ಅಂದು ಏನು ಮಾಡಬೇಕು? ಏನು ಮಾಡಬಾರದು?

Shravan 2024

ಆಗಸ್ಟ್ 5ರಿಂದ ಶ್ರಾವಣ ಮಾಸ (Shravan 2024) ಪ್ರಾರಂಭವಾಗಿದೆ. ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಶ್ರಾವಣ ಮಾಸ ಕೊನೆಗೊಳ್ಳುತ್ತದೆ. ಈ ಮಾಸ ಹಿಂದೂಗಳಿಗೆ ಬಹಳ ಪವಿತ್ರವಾದ ಮಾಸವಾಗಿದೆ. ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಹಾಗಾಗಿ ಈ ಮಾಸದಲ್ಲಿ ಶಿವನ ಆರಾಧನೆಯ ಜೊತೆಗೆ ವಿಷ್ಣು, ಲಕ್ಷ್ಮಿ, ಪಾರ್ವತಿ ಮುಂತಾದ ದೇವರುಗಳ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದಕಾರಣ ಈ ಮಾಸದ ಪ್ರತಿದಿನವೂ ಹಬ್ಬವೇ ಇರುತ್ತದೆ. ಅದರಲ್ಲೂ ಶ್ರಾವಣ ಶುಕ್ರವಾರ ಬಹಳ ವಿಶೇಷವಾದದ್ದು.

ಈ ಮಾಸದಲ್ಲಿ ಜಪ-ತಪ, ವ್ರತ-ನಿಯಮ, ಪೂಜೆ-ಪುರಾಣಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಾಂಗ, ಪುಣ್ಯ ಕ್ಷೇತ್ರಗಳ ದರ್ಶನ, ಯಜ್ಞ-ಯಾಗ, ಹೋಮ-ಹವನ ಮುಂತಾದವುಗಳನ್ನು ಹೆಚ್ಚು ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿವಾರಗಳಿಗೆ ವಿಶೇಷ ಮಹತ್ವವಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶುಕ್ರವಾರವನ್ನು ಶ್ರಾವಣ ಶುಕ್ರವಾರವೆಂದು ಕರೆಯುತ್ತಾರೆ. ಈ ದಿನ ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ. ಹಾಗಾಗಿ ಶ್ರಾವಣ ಶುಕ್ರವಾರದ ಪೂಜಾ ವಿಧಾನಗಳನ್ನು ತಿಳಿದುಕೊಳ್ಳಿ.

Shravan 2024

ಶ್ರಾವಣ ಶುಕ್ರವಾರದ ಮಹತ್ವ :

ಶ್ರಾವಣ ಮಾಸದ ಶುಕ್ರವಾರದಂದು ಲಕ್ಷ್ಮಿ ಪೂಜೆ ಮಾಡುವುದರಿಂದ ಸಕಲ ಇಷ್ಟಾರ್ಥಗಳು ನೇರವೇರುತ್ತದೆ. ಯಾವುದೇ ಆರ್ಥಿಕ ಸಮಸ್ಯೆಗಳಿದ್ದರೂ ಅದು ನಿವಾರಣೆಯಾಗುತ್ತದೆ. ಸಾಲದ ಹೊರೆ, ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ಮನೆಗೆ ಧನಲಕ್ಷ್ಮಿಯ ಆಗಮನವಾಗುತ್ತದೆ. ಹಾಗಾಗಿ ಶ್ರಾವಣ ಮಾಸದ ಪ್ರತಿ ಶುಕ್ರವಾರಲಕ್ಷ್ಮಿದೇವಿಯ ಆರಾಧನೆ ಮಾಡಿ.

ಶ್ರಾವಣ ಶುಕ್ರವಾರದ ಆಚರಣೆಗಳು :

ಈ ವರ್ಷದ ಶ್ರಾವಣ ಮಾಸದಲ್ಲಿ ಆಗಸ್ಟ್ 9, 16, 23, 30 ರಂದು ಶ್ರಾವಣ ಶುಕ್ರವಾರ ಬರುತ್ತದೆ. ಹಾಗಾಗಿ ಪ್ರತಿ ಶ್ರಾವಣ ಶುಕ್ರವಾರದಂದು ನಿಮ್ಮ ಮನೆಯನ್ನು ಗೋಮೂತ್ರ ಮತ್ತು ಕಲ್ಲುಪ್ಪನ್ನು ಸೇರಿಸಿದ ನೀರಿನಿಂದ ಮನೆಯನ್ನು ಸ್ವಚ್ಛಗೊಳಿಸಿ. ಮನೆಯ ಬಾಗಿಲಿಗೆ ಮಾವಿನ ತೋರಣಗಳನ್ನು ಕಟ್ಟಿ. ಮನೆಯ ಮುಂದೆ ರಂಗೋಲಿ ಹಾಕಿ. ಮನೆಯ ಹೊಸ್ತಿಲನ್ನು ಲಕ್ಷ್ಮಿಯ ವಾಸಸ್ಥಾನ ಎಂದು ಕರೆಯುತ್ತಾರೆ. ಹಾಗಾಗಿ ಈ ದಿನ ಮನೆಯ ಹೊಸ್ತಿಲನ್ನು ತೊಳೆದು ಅರಿಶಿನ ಕುಂಕುಮ ಹಚ್ಚಿ ಹೂಗಳಿಂದ ಅಲಂಕರಿಸಿ ದೀಪ ಬೆಳಗಿಸಿ ಪೂಜೆ ಮಾಡಿ.

Shravan 2024

ಹಾಗೇ ಮನೆಯಲ್ಲಿರುವ ಗೃಹಿಣಿಯರು ಸ್ನಾನಾಧಿಗಳನ್ನು ಮಾಡಿ ಸೀರೆಯುಟ್ಟು ಅರಿಶಿನ, ಕುಂಕುಮ, ಹೂ, ಬಳೆಗಳನ್ನು ತೊಟ್ಟು ಅಲಂಕರಿಸಿಕೊಳ್ಳಿ. ನಂತರ ಲಕ್ಷ್ಮಿದೇವಿಯ ಪೋಟೊ ಅಥವಾ ವಿಗ್ರಹ ಅಥವಾ ಕಳಶಕ್ಕೆ ಅರಿಶಿನ ಕುಂಕುಮ ಹಚ್ಚಿ, ಚಿನ್ನ ತೊಡಿಸಿ ಹೂಗಳನ್ನಿಟ್ಟು ಅಲಂಕಾರ ಮಾಡಿ, ದೇವಿಗೆ ತುಪ್ಪದ ದೀಪ ಹಚ್ಚಿದರೆ ಒಳ್ಳೆಯದು. ಹಾಗೇ ಬೆಲ್ಲದನ್ನ, ಬೆಲ್ಲದ ಪಾಯಸ, ಲಕ್ಷ್ಮಿಗೆ ಪ್ರಿಯವಾದ ಬೆಲ್ಲದಿಂದ ತಯಾರಿಸಿದ ನೈವೇದ್ಯವನ್ನು ಅರ್ಪಿಸಿ. ಈ ದಿನ ಲಕ್ಷ್ಮಿ ಅಷ್ಟೋತ್ತರವನ್ನು ಪಠಿಸಿದರೆ ಶುಭ.

Shravan 2024

ಹಾಗೇ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ, ಈ ದಿನ ಲಕ್ಷ್ಮಿದೇವಿಯನ್ನು ಬಹಳ ವೈಭವದಿಂದ ಪೂಜಿಸಲಾಗುತ್ತದೆ, ದೇವಿಗೆ ಹಣದಿಂದ ಅಲಂಕರಿಸಲಾಗುತ್ತದೆ. ಹಾಗೇ ಈ ದಿನ ಮುತ್ತೈದೆಯರಿಗೆ ತಾಂಬೂಲ ನೀಡಬೇಕು. ಇದರಿಂದ ಲಕ್ಷ್ಮಿದೇವಿಯ ವರದಿಂದ ಪತಿಗೆ ದೀರ್ಘಾವಾಯುಷ್ಯದ ಜೊತೆಗೆ ಸಂಪತ್ತು ನಿಮ್ಮ ಮನೆಯಲ್ಲಿ ನೆಲೆಸುತ್ತದೆ ಎಂದು ನಂಬಲಾಗುತ್ತದೆ.

ಶ್ರಾವಣ ಶುಕ್ರವಾರ ಈ ಕೆಲಸಗಳನ್ನು ಮಾಡಬೇಡಿ:
ಶಾಸ್ತ್ರದ ಪ್ರಕಾರ ಶುಕ್ರವಾರದಂದು ಹಣದ ವ್ಯವಹಾರ ಮಾಡಬಾರದು. ಈ ದಿನ ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬಾರದು, ಈ ಕೆಲಸಗಳನ್ನು ಮಾಡಿದರೆ ನಷ್ಟವನ್ನು ಎದುರಿಸಬೇಕಾಗಬಹುದು ಎಂಬ ನಂಬಿಕೆಯಿದೆ. ಶುಕ್ರವಾರ ಉಪ್ಪು, ಹಣ, ಸಕ್ಕರೆಯನ್ನು ಸಾಲವಾಗಿ ಹೊರಗೆ ನೀಡಬೇಡಿ.

ಶ್ರಾವಣ ಶುಕ್ರವಾರ ಈ ಕೆಲಸಗಳನ್ನು ಮಾಡಿ:
ಶ್ರಾವಣ ಶುಕ್ರವಾರದಂದು ಪೊರಕೆ, ಉಪ್ಪು, ಚಿನ್ನ, ಬೆಳ್ಳಿ, ಗೋಮತಿ ಚಕ್ರ, ಶಂಖ, ಕವಡೆಗಳನ್ನು ಖರೀದಿಸಿ ಮನೆಗೆ ತಂದರೆ ಒಳ್ಳೆಯದು. ಈ ವಸ್ತುಗಳನ್ನು ಮನೆಗೆ ತಂದರೆ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುವುದು.

ಇದನ್ನೂ ಓದಿ: Nagara Panchami : ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ; ಏನಿದರ ಹಿನ್ನೆಲೆ, ವಿಶೇಷ?

ಈ ರೀತಿಯಲ್ಲಿ ಈ ವರ್ಷದ ಶ್ರಾವಣ ಮಾಸದ ಪ್ರತಿ ಶ್ರಾವಣ ಶುಕ್ರವಾರದಂದು ಲಕ್ಷ್ಮಿದೇವಿಯ ಪೂಜೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಿ. ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗಿ ನಿಮ್ಮ ಜೀವನದಲ್ಲಿ ನೆಮ್ಮದಿ ದೊರೆಯುವಂತಾಗಲಿ.

Exit mobile version