ಬೆಂಗಳೂರು: ನಗರದ ಟ್ರಾಫಿಕ್ ದಟ್ಟಣೆಯನ್ನು (Bangalore Traffic congestion) ನಿವಾರಿಸುವ ಪ್ರಯತ್ನದಲ್ಲಿ, ಬೆಂಗಳೂರಿನ 17 ಸ್ಥಳಗಳಲ್ಲಿ ಸುಮಾರು 100 ಕಿಲೋಮೀಟರ್‌ನಷ್ಟು ಉದ್ದದ ಸಿಗ್ನಲ್-ಮುಕ್ತ ಕಾರಿಡಾರ್ (Signal-Free Corridor) ಅಭಿವೃದ್ಧಿಪಡಿಸುವ ಯೋಜನೆಯನ್ನು ಕರ್ನಾಟಕ ಸರ್ಕಾರ (Karnataka Govt) ಪ್ರಕಟಿಸಿದೆ.
ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar), ನಗರದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಎಲ್ಲಾ ರಾಜಕೀಯ ಪಕ್ಷಗಳ ಶಾಸಕರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು. ನಾವು ಸುಮಾರು 17 ಸ್ಥಳಗಳನ್ನು ಗುರುತಿಸಿದ್ದೇವೆ. ಇವುಗಳನ್ನು ಯಶಸ್ವಿ ರಾಜಾಜಿನಗರ- ಕೆಆರ್ ಸರ್ಕಲ್ ಸಿಗ್ನಲ್-ಮುಕ್ತ ಕಾರಿಡಾರ್ (Signal-Free Corridor) ಮಾದರಿಯಲ್ಲಿ ರೂಪಿಸಲಾಗುವುದು ಎಂದು ಅವರು ಹೇಳಿದರು.
ನಗರದ ಸಂಪೂರ್ಣ ಸಂಚಾರ ವಿಶ್ಲೇಷಣೆ, ಮುಂದಿನ ಕೆಲವು ವರ್ಷಗಳ ಯೋಜಿತ ಬೆಳವಣಿಗೆಯ ಮಾದರಿಗಳನ್ನು ಆಧರಿಸಿ ಈ ಸ್ಥಳಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಆಯ್ಕೆ ಮಾಡಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ 12,000 ಕೋಟಿ ರೂ. ವೆಚ್ಚವಾಗಲಿದೆ.
“ಇವುಗಳ ಅಗತ್ಯವನ್ನು ನಿರ್ಧರಿಸಲು ಟ್ರಾಫಿಕ್ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಲಾಗಿದೆ. ವಿಶ್ಲೇಷಕರು 2044ರವರೆಗೆ ನಿರೀಕ್ಷಿತ ಲೇನ್ ಅವಶ್ಯಕತೆಗಳನ್ನು ಸೂಚಿಸಿದ್ದಾರೆ. ನಿರ್ಣಾಯಕ ಜಂಕ್ಷನ್‌ಗಳಲ್ಲಿ ಸಿಗ್ನಲ್-ಮುಕ್ತ ಕಾರಿಡಾರ್‌ಗಳನ್ನು ಸೂಚಿಸಿದ್ದಾರೆ. ಅದನ್ನು ಈಗ ಜಾರಿಗೆ ಪ್ರಸ್ತಾಪಿಸಲಾಗಿದೆ” ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಟ್ರಾಫಿಕ್ ಅಧ್ಯಯನದ ಮೂಲಕ ಕಂಡುಬಂದ ವಿಚಾರ ಎಂದರೆ, ಆಯ್ದ ಕಾರಿಡಾರ್‌ಗಳಲ್ಲಿ ಹೆಚ್ಚಿನ ಟ್ರಾಫಿಕ್ ಹರಿವು ಕಂಡುಬರುತ್ತದೆ. ಈ ಮಾರ್ಗಗಳಲ್ಲಿ ವೇಗ ಗಂಟೆಗೆ 15-20 ಕಿಲೋಮೀಟರ್‌ಗಳಷ್ಟು ಕಡಿಮೆಯಾಗಿದೆ. ಇದರಿಂದ ಇಂಧನ ವ್ಯರ್ಥವಾಗುತ್ತಿದೆ ಹಾಗೂ ಉತ್ಪಾದಕತೆ ನಷ್ಟವಾಗುತ್ತಿದೆ.
“ಪ್ರಸ್ತುತ ಈ ಕಾರಿಡಾರ್‌ಗಳಲ್ಲಿ ಹಲವು ನಾಲ್ಕು ಅಥವಾ ಆರು ಲೇನ್‌ಗಳಿವೆ. ಪ್ರಸ್ತುತ ಟ್ರಾಫಿಕ್ ಸಾಂದ್ರತೆಯ ಪ್ರಕಾರ ಇಲ್ಲಿ ಕನಿಷ್ಠ ಎಂಟು ಲೇನ್‌ಗಳ ಅವಶ್ಯಕತೆಯಿದೆ. 2044ರ ವೇಳೆಗೆ 12 ಲೇನ್‌ಗಳಿಗೆ ಹೆಚ್ಚಿಸುವ ಅವಶ್ಯಕತೆಯಿದೆ. ರಸ್ತೆ ಅಗಲೀಕರಣ, ಎಲಿವೇಟೆಡ್ ಕಾರಿಡಾರ್‌ಗಳು ಅಥವಾ ಅಂಡರ್‌ಪಾಸ್‌ಗಳ ನಿರ್ಮಾಣದ ಅವಶ್ಯಕತೆಯಿದೆ” ಎಂದು ವರದಿ ಬಹಿರಂಗಪಡಿಸಿದೆ.
ಯೋಜಿಸಲಾದ ಕೆಲವು ಪ್ರಮುಖ ಸಿಗ್ನಲ್-ಮುಕ್ತ ಕಾರಿಡಾರ್‌ಗಳು ಹೀಗಿವೆ:
1) ಕೆ.ಆರ್ ಪುರದಿಂದ ಯಶವಂತಪುರ- ಗೊರಗುಂಟೆಪಾಳ್ಯವರೆಗಿನ 23 ಕಿಲೋಮೀಟರ್ ವ್ಯಾಪ್ತಿಯ ಕಾರಿಡಾರ್.
2) ಆನೆಪಾಳ್ಯದಿಂದ ಸಿಲ್ಕ್ ಬೋರ್ಡ್‌ವರೆಗಿನ 5.5 ಕಿಲೋಮೀಟರ್ ಹೊಸೂರು ರಸ್ತೆ ಕಾರಿಡಾರ್
3) ಮಾರೇನಹಳ್ಳಿಯಿಂದ ಕನಕಪುರ ರಸ್ತೆ-ತಲಘಟ್ಟಪುರ ನೈಸ್ ರಸ್ತೆವರೆಗೆ 10 ಕಿಲೋಮೀಟರ್ ಎಲಿವೇಟೆಡ್ ಕಾರಿಡಾರ್
4) ಮಿನರ್ವದಿಂದ ಕಬ್ಬನ್ ಪಾರ್ಕ್‌ವರೆಗೆ 2.7 ಕಿಲೋಮೀಟರ್ ಎತ್ತರದ ರಸ್ತೆಯನ್ನು ಪ್ರಸ್ತಾಪಿಸಲಾಗಿದೆ.
ಟ್ರಾಫಿಕ್ ಪೊಲೀಸರಿಂದ ಬೆಂಗಳೂರಿನ ರಸ್ತೆಗಳಲ್ಲಿ ಮೊಳೆಗಳ ಸಂಗ್ರಹ
ಬೆಂಗಳೂರು: ಬೆಂಗಳೂರಿನ ಬೀದಿ ಬೀದಿಗಳಲ್ಲಿ ರಾಶಿಗಟ್ಟಲೆ ಮೊಳೆ (Nails) ಬಿಸಾಡಿ ವಾಹನಗಳ ಟಯರ್ ಪಂಕ್ಚರ್ (Puncture) ಆಗುವಂತೆ ಮಾಡಿ ದುಡ್ಡ ಮಾಡುವ ಮಾಫಿಯಾ (Mafia) ಕಾರ್ಯಪ್ರವೃತ್ತವಾಗಿದೆಯಾ ಎಂಬ ಅನುಮಾನ ಹೆಡೆಯೆತ್ತಿದೆ. ಜಾಲಹಳ್ಳಿಯ ಕುವೆಂಪು ವೃತ್ತದ (Kuvempu Circle) ಕೆಳಸೇತುವೆಯಲ್ಲಿ ಮುಷ್ಟಿಗಟ್ಟಲೆ ಮೊಳೆಗಳು ಒಂದೆಡೆಯೇ ಪತ್ತೆಯಾಗಿದ್ದು, ಸ್ವತಃ ಟ್ರಾಫಿಕ್ ಪೊಲೀಸರೇ (Traffic Police) ಇವುಗಳನ್ನು ಸ್ಥಳದಿಂದ ತೆಗೆದು ಕ್ಲೀನ್ ಮಾಡುವ ಅಭಿಯಾನ ನಡೆಸಿದ್ದಾರೆ. ಅದೀಗ ವೈರಲ್ (Viral Video) ಆಗಿದೆ.
ರಸ್ತೆ ಮಧ್ಯದಲ್ಲಿ ಮೊಳೆಗಳನ್ನು ಎಸೆದು ವಾಹನಗಳ ಪಂಕ್ಚರ್ ಮಾಡಿಸಲಾಗುತ್ತಿದೆ ಎಂಬ ವದಂತಿ ಮೊದಲಿನಿಂದಲೂ ಇದೆ. ಇದೀಗ ಸ್ವತಃ ಟ್ರಾಫಿಕ್ ಪೊಲೀಸರಿಂದಲೇ ರಾಶಿಗಟ್ಟಲೆ ಮೊಳೆಗಳ ಸಂಗ್ರಹ ನಡೆದಿದ್ದು, ಅನುಮಾನ ರುಜುವಾತು ಆದಂತಾಗಿದೆ. ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳು ಪಂಕ್ಚರ್ ಆಗುತ್ತಿದ್ದು, ಸಮೀಪದಲ್ಲಿರುವ ಪಂಕ್ಚರ್ ಅಂಗಡಿಗಳಿಗೆ ಸಾಕಷ್ಟು ವ್ಯಾಪಾರವಂತೂ ಆಗುತ್ತಿದೆ.
ನಿನ್ನೆ ಕುವೆಂಪು ವೃತ್ತದ ಅಂಡರ್‌ಪಾಸ್‌ನಲ್ಲಿ ರಾಶಿಗಟ್ಟಲೆ ಲೋಹದ ಮೊಳೆಗಳನ್ನು ಪತ್ತೆಹಚ್ಚಿದ ಬೆಂಗಳೂರು ಟ್ರಾಫಿಕ್ ಪೊಲೀಸರು ಅವುಗಳನ್ನು ಸ್ವಚ್ಛಗೊಳಿಸಿದರು. ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಕುವೆಂಪು ಸರ್ಕಲ್ ಅಂಡರ್‌ಪಾಸ್‌ನಲ್ಲಿ ರಸ್ತೆಯನ್ನು ಗುಡಿಸುವ ವೀಡಿಯೊವನ್ನು ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅದೀಗ ವೈರಲ್ ಆಗಿದೆ.
ಇದನ್ನೂ ಓದಿ: DK Shivakumar: ಬೆಂಗಳೂರಿನ ನೈಸ್ ರಸ್ತೆ ಬಳಿ ದೇಶದ ಅತಿ ಎತ್ತರದ ಸ್ಕೈಡೆಕ್!