ಉಡುಪಿ: ರಾಜ್ಯದಲ್ಲಿ ಎಳೇ ಜೀವಗಳನ್ನು ಬಲಿ ಪಡೆಯುತ್ತಿರುವ ಹೃದಯಾಘಾತಗಳ (Heart Attack Death) ಸಂಖ್ಯೆ ಹೆಚ್ಚುತ್ತಿದ್ದು, ಹೃದಯಾಘಾತದಿಂದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು (SSLC Student Death) ಸಾವನ್ನಪ್ಪಿರುವ ಘಟನೆ ಉಡುಪಿ (Udupi news) ಜಿಲ್ಲೆಯ ಮೂಡುಬೆಳ್ಳೆಯಲ್ಲಿ ನಡೆದಿದೆ. ಮೂಡುಬೆಳ್ಳೆ ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಭಾಗ್ಯಶ್ರೀ (16) ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.
ಪಳ್ಳಿ ದಾದಬೆಟ್ಟು ನಿವಾಸಿ ಜಯರಾಮ ಆಚಾರ್ಯ- ಚಂದ್ರಿಕಾ ದಂಪತಿ ಪುತ್ರಿ ಭಾಗ್ಯಶ್ರೀ ಬೆಳಿಗ್ಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಇತ್ತೀಚೆಗೆ ಕೊಡಗಿನಲ್ಲಿ ಯುವತಿಯೊಬ್ಬಳು ಹೀಗೇ ಹೃದಯಾಘಾತಕ್ಕೆ ಬಲಿಯಾಗಿದ್ದಳು. ಮಡಿಕೇರಿ ತಾಲೂಕಿನ ನೆಲಜಿ ಗ್ರಾಮದ ಮಣವಟ್ಟಿರ ಪೊನ್ನಪ್ಪ ಅವರ ಮಗಳು ನಿಲಿಕ ಪೊನ್ನಪ್ಪ (24) ಮೃತ ದುರ್ದೈವಿ. ಕರ್ತವ್ಯಕ್ಕೆಂದು ಮನೆಯಿಂದ ಹೊರಟಾಗ ಹೃದಯ ಬಡಿತವೇ ನಿಂತು ಹೋಗಿದೆ. ಎದೆ ನೋವೆಂದು ಒದ್ದಾಡಿದ ನಿಲಿಕ ಕುಸಿದು ಬಿದ್ದಿದ್ದಳು. ಕೂಡಲೇ ಅಲ್ಲಿದ್ದವರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ದೃಢಪಡಿಸಿದ್ದರು.
ಶ್ರೀಶೈಲ ಪಾದಯಾತ್ರೆಗೆ (Srisailam Padayatra) ಹೊರಟ್ಟಿದ್ದ ಯುವಕನೊಬ್ಬ ದಾರಿ ಮಧ್ಯೆ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದು ಕೂಡ ಇತ್ತೀಚೆಗೆ ವರದಿಯಾಗಿತ್ತು. ರಾಯಚೂರಿನ ಮಾನ್ವಿ ತಾಲೂಕಿನ ಚಿಕ್ಕ ಕೊಟ್ನೆಕಲ್ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಬಾಗಲಕೋಟೆ ಮೂಲದ 22 ವರ್ಷದ ಪಾದಯಾತ್ರಾರ್ಥಿ ವಿಶ್ರಾಂತಿಗಾಗಿ ತಂಗಿದ್ದಾಗ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಮ್ಮಡ ಗ್ರಾಮದ ಶ್ರೀಶೈಲ ದಡೂತಿ ಮೃತ ದುರ್ದೈವಿ.
ಇತ್ತೀಚೆಗೆ ಯುವಜನತೆಯಲ್ಲೇ ಇಂಥ ಹಾರ್ಟ್ ಅಟ್ಯಾಕ್ ಹೆಚ್ಚಾಗುತ್ತಿದ್ದು, ಆತಂಕ ಮೂಡಿಸಿದೆ. ಹೃದಯವು ಯಾವ ಕ್ಷಣದಲ್ಲಿ ಆಘಾತಕ್ಕೆ (Heart Attack) ಒಳಗಾಗುತ್ತದೆ ಎಂದು ಅಂದಾಜಿಸಲೂ ಸಾಧ್ಯವಿಲ್ಲದಾಗಿದೆ. ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ಶಕ್ತಿಯನ್ನು ಅದು ಹೊಂದಿದೆ. ಕುಳಿತಲ್ಲೇ ಕುಸಿಯುವುದು, ನಿಂತಲ್ಲೇ ಉರುಳಿ ಬೀಳುವುದು, ಮಲಗಿದಲ್ಲೇ ಮರಣಿಸುವುದು, ನೃತ್ಯ ಮಾಡುತ್ತಲೇ ಹೃದಯ ಸ್ತಬ್ಧವಾಗುವುದು. ಹೀಗೆ ಸಾವಿನ ಹತ್ತಾರು ಭಯಾನಕ ಸನ್ನಿವೇಶಗಳನ್ನು ಕಾಣಲಾಗುತ್ತಿದೆ. ಕೊರೊನಾ ವೈರಸ್ ದಾಳಿಯ ಬಳಿಕ ಇಂಥ ಪ್ರಕರಣಗಳು ಹೆಚ್ಚಿವೆ ಎಂಬುದನ್ನು ವೈದ್ಯಲೋಕ ಕೂಡ ದೃಢಪಡಿಸಿದೆ.
ಇದನ್ನೂ ಓದಿ: Silent Heart Attack: ಏನಿದು ಸೈಲೆಂಟ್ ಹಾರ್ಟ್ ಅಟ್ಯಾಕ್? ಇದರ ಲಕ್ಷಣಗಳೇನು?